ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಿಬೈಲಲ್ಲಿ ವರ್ಷಪೂರ್ತಿ ನೀರಧಾರೆ...

Last Updated 22 ಮಾರ್ಚ್ 2017, 6:43 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಜಿಲ್ಲೆಯ ಗಾಂಧಿ ಗ್ರಾಮ ಎಂದು ಹೆಸರು ಪಡೆದ ಕೊಳ್ನಾಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದೆ ಸುರಿಬೈಲು  ಎಂಬ ಗ್ರಾಮ. ಇಲ್ಲಿರುವ ಸರ್ಕಾರಿ ಶಾಲೆಯೊಂದು ಇದೀಗ ರಾಜ್ಯಕ್ಕೇ ಮಾದರಿ. ಅದಕ್ಕೆ ಕಾರಣ, ಮಳೆನೀರು. ಮಳೆನೀರನ್ನು ಸಂಗ್ರಹ ಮಾಡುವ ಮೂಲಕ ಹೊಸದೊಂದು ಅಧ್ಯಾಯ ಪ್ರಾರಂಭಿಸಿದ ಕೀರ್ತಿ ಈ ಶಾಲೆಗೆ ಸಲ್ಲುತ್ತದೆ.

ಸುಮಾರು 10–12 ವರ್ಷಗಳ ಹಿಂದಿನ ಮಾತಿದು. ಇಡೀ ಗ್ರಾಮದಲ್ಲೇ ಹೆಚ್ಚು ಮಕ್ಕಳನ್ನು ಹೊಂದಿದ್ದ ಶಾಲೆ ಈ ಸುರಿಬೈಲು ಶಾಲೆ. ಈ ಶಾಲೆಯಲ್ಲಿ ಅನೇಕ ವರ್ಷ ಹಳತಾದ ಒಂದು ಬಾವಿ ಇತ್ತು. ಮುಂದೊಂದು ದಿನ ಬರಗಾಲ ಈ ಗ್ರಾಮಕ್ಕೂ ತಟ್ಟಬಹುದು ಎಂಬ ಮುಂಜಾಗರೂಕತಾ ಕ್ರಮವಾಗಿ ಗ್ರಾಮ ಪಂಚಾಯಿತಿ ಸಹಾಯದಿಂದ ಒಂದು ಕೊಳವೆ ಬಾವಿಯನ್ನೂ ಕೊರೆಯಿಸಲಾಗಿತ್ತು.

ಅವರಂದುಕೊಂಡಂತೆ ಬರ ಊರಿಗೆ ತಟ್ಟಿತು. ಬಾವಿಯ ನೀರೂ ಬತ್ತಿತು. ಕೊಳವೆಬಾವಿಯಲ್ಲೂ ನೀರಿನ ಸುಳಿವು ಸಿಗಲಿಲ್ಲ. ಸಾಲದು ಎಂಬುದಕ್ಕೆ ನೀರಿನ ಆಸೆಯಿಂದ ಪಂಚಾಯಿತಿ ಶಾಲೆಯ ಬದಿಯಲ್ಲೇ ಇನ್ನೊಂದು ಸಾರ್ವಜನಿಕ ಕೊಳವೆಬಾವಿ ಕೊರೆಸಿತು. ಅದರಲ್ಲೂ ಇದೇ ಗತಿಯಾಯಿತು.

ಹನಿ ನೀರಿಗೂ ತತ್ವಾರ ಉಂಟಾಯಿತು. ಶಾಲಾ ಮಕ್ಕಳಿಗೂ ನೀರಿನ ಅಭಾವ ಎದುರಾಯಿತು. ಇದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ   ಎಸ್‌.ಎಂ. ಅಬೂಬಕ್ಕರ್‌ ಸುರಿಬೈಲು ಇವರ ನಿದ್ದೆಗೆಡಿಸಿತು. ಏನು ಮಾಡಬೇಕು ಎಂಬ ಯೋಚನೆ ಮಾಡುತ್ತಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೀರಿನ ಕುರಿತು ಅರಿವು ಮೂಡಿಸುತ್ತಿದ್ದ ಜಲತಜ್ಞ ಶ್ರೀ ಪಡ್ರೆಯವರ ಪರಿಚಯವಾಗಿ ಅವರಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿದರು. ಅಲ್ಲಿಂದಲೇ ಪ್ರಾರಂಭವಾದದ್ದು ಹೊಸ ಅಧ್ಯಾಯ. ಅದು ಮಳೆ ನೀರು ಸಂಗ್ರಹ ಹಾಗೂ ಮರುಪೂರಣದ ಯೋಜನೆ. ಕೂಡಲೇ ಕಾರ್ಯಾರಂಭ ಮಾಡಿದರು.

(ಅಬೂಬಕ್ಕರ್‌)

ಶಾಲೆಯ ಮೇಲೆ ಬಿದ್ದ ಹನಿ ಮಳೆಯೂ ವ್ಯರ್ಥವಾಗಬಾರದು ಎಂಬ ಕಾರಣದಿಂದ ಮಳೆನೀರು ಸಂಗ್ರಹ ಆರಂಭಿಸಿದರು ಅಬೂಬಕ್ಕರ್‌ ಅವರು.  ಅದಾಗಲೇ ನೀರಿಲ್ಲದೇ ಪಾಳು ಬಿದ್ದಿದ್ದ ಬಾವಿಯನ್ನು ಮುಚ್ಚಲು ತಯಾರಿ ನಡೆದಿತ್ತು. ಆದರೆ ಅಬೂಬಕ್ಕರ್‌ ಅವರು ಹಾಗೆ ಮಾಡಲು ಕೊಡದೇ ಬಾವಿಗೆ ಜಲ ಮರುಪೂರಣ ಮಾಡಲು ಶುರುವಿಟ್ಟುಕೊಂಡರು. ಆ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದರು.

ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಮಳೆನೀರು ಅವರು ಪಟ್ಟ ಶ್ರಮದಿಂದಾಗಿ ಬಾವಿಯೊಳಕ್ಕೆ ಇಳಿಯತೊಡಗಿತು. ಶಾಲೆಯಲ್ಲಿರುವ ಎರಡು ಕಟ್ಟಡದ ಚಾವಣಿಯಲ್ಲಿ ಬೀಳುವ ನೀರು ನಿಧಾನವಾಗಿ ಆ ತೆರೆದ ಬಾವಿಯನ್ನು ಸೇರತೊಡಗಿತು. ಅಂದಿನಿಂದ ಅಲ್ಲಿ ನೀರಿನ ಸಮಸ್ಯೆ ಕಂಡಿದ್ದೇ ಇಲ್ಲ!

ನೀರು ಯಥೇಚ್ಚವಾಗಿ ಯಾವಾಗ ಸಿಗಲು ಶುರುವಾಯಿತೋ ಅಬೂಬಕ್ಕರ್‌ ಅವರು ಅಲ್ಲಿಗೇ ಸುಮ್ಮನಾಗಲಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಪ್ರಯೋಜನ ಪಡೆದು ಅಡಿಕೆ ತೋಟವನ್ನು ನಿರ್ಮಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಂಥದ್ದೊಂದು ಸಾಧನೆ ಮಾಡಿರುವ ಶ್ರೇಯಸ್ಸು ಇವರದ್ದು. ಅಂದು ಅವರು ಮಾಡಿದ ಕೆಲಸದಿಂದಾಗಿ ಇಂದು ಅಡಿಕೆಯಿಂದಾಗಿ ವರ್ಷಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಲಾಭ ಬರುತ್ತಿದೆ! ಇದರ ಜೊತೆಗೆ ಬಗೆಬಗೆಯ ಹಣ್ಣು ತರಕಾರಿ ಔಷಧಿಯ ವನವನ್ನು ತನ್ನ ಸ್ವಂತ ನಿಧಿ ಮೂಲಕ ನಿರ್ಮಿಸಿದ್ದಾರೆ.

ಇವರ ಸೇವೆ ಇಷ್ಟಕ್ಕೇ ಮುಗಿಯಲಿಲ್ಲ. ಶಾಲೆಯಲ್ಲಿ ಮಳೆನೀರು ಸಂಗ್ರಹವೇನೋ ಆಯಿತು. ಆದರೆ ಸುತ್ತಮುತ್ತ? ಹೌದು. ಶಾಲಾ ಸುತ್ತ ಮುತ್ತ ಇರುವ ಮನೆಗಳಿಗೆ ಇನ್ನೂ ಮಳೆನೀರಿನ ಮಹತ್ವವೇ ತಿಳಿದಿರಲಿಲ್ಲ. ಆದ್ದರಿಂದ ಅವರೆಲ್ಲಾ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಅಂಥ ಸಮಯದಲ್ಲಿ ಅಬೂಬಕ್ಕರ್‌ ಅವರೇ ಶಾಲೆಯ ಬಾವಿಯಿಂದ ನೀರು ಒದಗಿಸತೊಡಗಿದರು. ಅಂದು ಮಾತ್ರವಲ್ಲ. ಈಗ ಬಹುತೇಕ ಮನೆಗಳಿಗೆ ಮಾತ್ರವಲ್ಲದೇ ಪಂಚಾಯಿತಿಗೂ ಇದೇ ನೀರಿನ ಬಳಕೆಯಾಗುತ್ತಿದೆ!

ಇವರ ಜಲಸೇವೆ ಇಲ್ಲಿಗೇ ನಿಂತಿಲ್ಲ. ಜಿಲ್ಲಾ ಸಾಕ್ಷರತಾ ಸಮಿತಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಮೂಲಕ ಜಿಲ್ಲೆಯಲ್ಲಿ ಜಲಸಾಕ್ಷರತಾ ಆಂದೋಲನವನ್ನು ಪ್ರಾರಂಭಿಸಿದಾಗ ಅದರ ಮುಂಚೂಣಿ ಹೊತ್ತರು ಅಬೂಬಕ್ಕರ್‌ ಅವರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಮಾರು 5ಸಾವಿರ ಸದಸ್ಯರನ್ನು ಸೇರಿಸಿಕೊಂಡು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಜಲ ಪ್ರೀತಿಯನ್ನುಂಟುಮಾಡುವ ಕಾರ್ಯನಡೆಸಿದರು.

ಈಗಲೂ ಅವರ ಜಲಸಂರಕ್ಷಣೆ ಕಾರ್ಯ ಮುಂದುವರಿದಿದೆ. ಅಷ್ಟೇ ಅಲ್ಲದೇ ಅತೀ ಸರಳ ವಿಧಾನದ ಮೂಲಕ ಮಳೆನೀರನ್ನು ಸಂಗ್ರಹಿಸುವ ಸಂಬಂಧ ನೀರಿನ ಶುದ್ಧೀಕರಣ ಉಪಕರಣ ಕಂಡುಹಿಡಿದು ಜನರಿಗೆ ನೀಡಿ ಪ್ರೇರೇಪಿಸುತ್ತಿದ್ದಾರೆ. ಮಳೆನೀರು ಸಂಗ್ರಹಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಯಾರೇ ಕರೆದರೂ ಹಿಂದುಮುಂದು ನೋಡದೇ ಬೇಕಿದ್ದರೆ ಸ್ವಂತ ವೆಚ್ಚ ಭರಿಸಿಕೊಂಡೇ ಅಲ್ಲಿಗೆ ಹೋಗುತ್ತಾರೆ. ಶಾಲೆಯಲ್ಲಿ ನಿರ್ಮಿಸಿರುವ ಜಲ ಮರುಪೂರಣ ಯೋಜನೆಗೆ ರಾಷ್ಟ್ರಮಟ್ಟದ ಮನ್ನಣೆಯನ್ನೂ ಪಡೆದಿದ್ದಾರೆ.

ಹೀಗೆ, ಶಾಲಾಭಿವೃದ್ಧಿ ಸಮಿತಿ ರಾಜ್ಯ ಕಾರ್ಯದರ್ಶಿಯಾಗಿ, ಉತ್ತಮ ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸುರಿಬೈಲು ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣಕರ್ತರಾದ ಇವರ ಈ ಕಾರ್ಯಕ್ಕೆ 2016-17 ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ಈ ಶಾಲೆಗೆ ಉತ್ತಮ ಪರಿಸರ ಶಾಲಾ ಪ್ರಶಸ್ತಿ, ಉತ್ತಮ ಶಾಲಾಭಿವೃದ್ಧಿ ಸಮಿತಿ ರಾಜ್ಯ ಮಟ್ಟದ ಪ್ರಶಸ್ತಿ, ಸಮುದಾಯದೊಂದಿಗೆ ಉತ್ತಮ ಸಂಬಂಧ ಪುರಸ್ಕಾರ, ಹಸಿರು ಶಾಲೆ ಪ್ರಶಸ್ತಿ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯಿಂದ ಉತ್ತಮ ಗುಣಮಟ್ಟದ ಶಾಲಾ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

**

-ಸುಧಾಕರ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT