ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಿನ್ನೂ ಬದುಕಿದ್ದೇನೆ... ಉಳಿಸಿಕೊಳ್ಳಿ

ಮರದ ಮಾತು
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಹಿಂಡು-ಹಿಂಡು ದಟ್ಟ ಕಾರ್ಬನ್ ಮೋಡಗಳು ನನ್ನ ನೆತ್ತಿಯನ್ನು ಸವರಿ, ಅಂಗಾಂಗದೊಳಗೆ ಹೊಕ್ಕಿ, ನರ-ನಾಡಿಯೊಳಗೆ ಇಳಿಯುತ್ತಿದ್ದಾಗ ಅಸಾಧಾರಣ ಸಂಕಟ. ಮೈಕೊಡವಿಕೊಂಡು ದೀರ್ಘ ಉಸಿರು ಬಿಟ್ಟೆ. ಹಣ್ಣಾಗಲಾರಂಭಿಸಿದ್ದ ಕಾಟು ಮಾವಿನಹಣ್ಣುಗಳು ಉದುರಿ ಹೋದವು.  ಬೆಳಿಗ್ಗೆ ಸೂರ್ಯ ಕಣ್ಣು ಬಿಟ್ಟು ಬಹಳ ಹೊತ್ತು ಕಳೆದಿರಲಿಲ್ಲ. ಸಣ್ಣಗೆ ಗಾಳಿ ಬೀಸುತ್ತಿತ್ತು, ಹವೆ ತಂಪಾಗಿತ್ತು.

ಆ ಉಲ್ಲಾಸ ಬಹಳ ಹೊತ್ತು ಉಳಿಯಲಿಲ್ಲ. ಯಾವನೋ ಆಸಾಮಿ ಕೈಕೊಡಲಿಯಿಂದ ಬಲ ಬದಿಯ ರೆಂಬೆಗಳನ್ನು ಕಡಿಯಲಾರಂಭಿಸಿದ. ಅಸಾಧ್ಯ ನೋವು. ಮುಗಿಲು ಮುಟ್ಟುವಂತೆ ಕೂಗಿಕೊಂಡೆ. ಆ ನೋವು ಯಾರಿಗೂ ಕೇಳಿಸಲೇ ಇಲ್ಲವೇನೊ! ಆತ ತನ್ನ ಪಾಡಿಗೆ ಕೆಲಸ ಮುಂದುವರಿಸಿದ. ನನ್ನ ರಕ್ಷಣೆಗೆ ಯಾರೂ ಬರಲಿಲ್ಲ ಬಿಡಿ.

ಕೊಡಲಿಯೇಟಿನ ಅಬ್ಬರಕ್ಕೆ, ಮೈ ತುಂಬಾ ಕುಳಿತಿದ್ದ ಹಕ್ಕಿಗಳು ಪುರ್ರನೆ ಹಾರಿ ಹೋದವು. ಕೆಲವೇ ಕ್ಷಣಗಳಲ್ಲಿ ಒಂದಷ್ಟು ಭಾಗಗಳನ್ನು ಕತ್ತರಿಸಿಹಾಕಿದ್ದ. ಯಾರೂ ಹತ್ತಿರ ಬರಲಿಲ್ಲ. ಕಿಚಪಿಚ ಅಂತ ಜನರೇ ತುಂಬಿರುವ ಈ ನಗರದಲ್ಲಿ ನನ್ನದು ಅಕ್ಷರಶಃ ಅರಣ್ಯ ರೋದನ.
ನನಗೆ 70 ವಸಂತ ಕಂಡ ನೆನಪು. ಹೇಗಿದ್ದ ಕಾಡು ಮಲ್ಲೇಶ್ವರ ಹೇಗಾಗಿ ಹೋಯ್ತು. ಆಗಿನ್ನೂ ನನಗೆ ಸಣ್ಣ ಪ್ರಾಯ. ಎಷ್ಟೊಂದು ಬಂಧು-ಬಾಂಧವರು, ಗಂಧ, ಬೀಟೆ, ಹಲಸು, ಬೈನೆ ಹೀಗೆ ಎಲ್ಲೆಲ್ಲೂ ನಮ್ಮವರೇ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಹಸಿರಿನ ರತ್ನಗಂಬಳಿ. ನಾನು ಬೆಳೆಯುತ್ತಿದ್ದಂತೆ ನಮ್ಮವರ ಹನನವೂ ಹೆಚ್ಚಿತ್ತು. ಈ ಮನುಷ್ಯರು ತಮಗಾಗಿ ಮನೆ ಕಟ್ಟಿಕೊಳ್ಳಲು, ರಾಕ್ಷಸ ಗಾತ್ರದ ಕಟ್ಟಡಗಳನ್ನು ಎಬ್ಬಿಸಲು, ರಸ್ತೆ ಹಾಸಲು ನಿಷ್ಕರುಣೆಯಿಂದ ನಮ್ಮವರನ್ನು ಕತ್ತರಿಸಿದ್ದರು. ನಾನೊಬ್ಬ ಮಾತ್ರ ಅದು ಹೇಗೆ ಉಳಿದುಕೊಂಡೆನೊ? ನೆನಪಿಸಿಕೊಂಡರೆ ಅಚ್ಚರಿ ಆಗುತ್ತದೆ...

(2013ರಲ್ಲಿ ಸ್ಯಾಂಕಿ ರಸ್ತೆ ಹೀಗಿತ್ತು    -ಸಂಗ್ರಹ ಚಿತ್ರ)

ಮೈತುಂಬಾ ತುಂಬಿಕೊಂಡಿದ್ದ ಹಣ್ಣುಗಳನ್ನು ಕುಕ್ಕಿ ತಿನ್ನಲು ಮತ್ತೆ ಒಂದಷ್ಟು ಗಿಳಿಗಳು ಹಾರಿ ಬಂದು ಕುಳಿತಿದ್ದವು. ಅವು ಒಂದೊಂದೇ ಕಳಿತ ಹಣ್ಣುಗಳನ್ನು ಆಯ್ದು ಕುಕ್ಕಿ ಕುಕ್ಕಿ ತಿನ್ನುವಾಗ ಹಿತವಾದ ಆನಂದ. ಕೆಳಗೆ ರಸ್ತೆಯ ಮೇಲೆ ಅಸಂಖ್ಯ ವಾಹನಗಳು ಭುರ್ರೆಂದು ದೂಳೆಬ್ಬಿಸುತ್ತಾ ಹೋಗುತ್ತಿದ್ದವು. ಕೆಲವು ಮಕ್ಕಳು ಉದುರಿ ಬಿದ್ದಿದ್ದ ಹಣ್ಣುಗಳನ್ನು ಆಯ್ದು ತಿನ್ನುತ್ತಾ ಕುಳಿತಿದ್ದರು. ಅವೆರಲ್ಲರ ಬಾಯಿ ತುಂಬ ಹಳದಿ ರಸ ಮೆತ್ತಿಕೊಂಡಿತ್ತು. ನನ್ನ ಮನಸ್ಸು ಹಿಂದಕ್ಕೋಡಿತು.

ನನ್ನ ಹುಟ್ಟಿಗಿಂತಲೂ ಇನ್ನೂ ಹಲವು ವಸಂತಗಳಷ್ಟು ಹಿಂದೆಯಂತೆ, ಎಲ್ಲೆಲ್ಲೂ ಕಾಡು, ಹಸಿರು. ಸಣ್ಣ-ಪುಟ್ಟ ಪ್ರಾಣಿಗಳು ನಿರ್ಭೀತಿಯಿಂದ ಓಡಾಡುತ್ತಿದ್ದವು. ಎಲ್ಲೊ ಅಲ್ಲೊಬ್ಬ ಇಲ್ಲೊಬ್ಬ ಮನುಷ್ಯ ಕಾಡಿಗೆ ಕಾಲಿಟ್ಟರೆ ಬೆರಗುಗಣ್ಣುಗಳಿಂದಲೇ ತಗ್ಗಿ ಬಗ್ಗಿ ಓಡಾಡುತ್ತಿದ್ದನಂತೆ. ಎಷ್ಟು ಚೆನ್ನಾಗಿತ್ತಲ್ಲವೆ?

ಈಗ ಕಾಡಿನ ಮೈ ಸುಲಿದು ಮಾಡಿದ ಕಪ್ಪನೆ ಟಾರಿನ ರಸ್ತೆಗಳಲ್ಲಿ ಇರುವೆ ಹಿಂಡಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಬ್ಬರದಲ್ಲಿ ಸಾಗುವ ಮೋಟಾರು ವಾಹನಗಳು, ಅವುಗಳ ಕರ್ಕಶ, ರಕ್ಕಸ ಧ್ವನಿ, ಉಗುಳುವ ದಟ್ಟ ಹೊಗೆ ಹಗಲು ರಾತ್ರಿ ಎನ್ನದೇ ಬೆಚ್ಚಿ ಬೀಳಿಸುತ್ತೆ. ಇರುವೆಗಳಿಗಿರುವ ಶಿಸ್ತು ಈ ಮನುಷ್ಯರಿಗಿಲ್ಲವಲ್ಲ. ನನ್ನ ಆಯಸ್ಸು ಮುಗಿದೇ ಹೋಗುತ್ತಿದೆ ಎನ್ನಿಸಿತು. ಇಂದಿನ ಪತನ ಹಾದಿ ನೆನೆದು ಒಂದು ಕ್ಷಣ ಕಣ್ಣುಗಳು ತೇವಗೊಂಡವು.

ಒಂದು ದಿನ ಬೆಳಿಗ್ಗೆ ಕೆಲವು ಯುವಕ- ಯುವತಿಯರು, ಮಕ್ಕಳು, ಹಿರಿಯ ಜೀವಿಗಳು ಬಂದು ಪ್ರೀತಿಯಿಂದ ತಬ್ಬಿಕೊಂಡರು. ಸದಾ ಕೊಡಲಿ ಏಟು ತಿನ್ನುವ ನನಗೆ ಆ ಪ್ರೀತಿಯ ಅಪ್ಪುಗೆ ಹಿತವೆನಿಸಿತು. ಹೆಮ್ಮೆಯೂ ಆಯಿತು. ಅವರ ಕೈಯಲ್ಲಿ ಅದೇನೋ ಫಲಕಗಳೂ ಇದ್ದವು. ಅವರ ಮಾತನ್ನು ಕೇಳಿಸಿಕೊಂಡಾಗ ಗೊತ್ತಾಯ್ತು ಅದರಲ್ಲಿ ‘ಸೇವ್ ಟ್ರೀ’ (ಮರ ಉಳಿಸಿ) ಎಂದು ಬರೆದಿತ್ತಂತೆ. ಆಗಲೇ ನನಗೆ ಗೊತ್ತಾಗಿದ್ದು, ಇನ್ನೂ ಬದುಕಿರುವ ನನ್ನನ್ನು ಉಳಿಸಿಕೊಳ್ಳುವ ಹೋರಾಟ ಇದು ಎಂಬುದು.

ರಕ್ಕಸ ವಾಹನಗಳು ಓಡಾಡಲು ನನ್ನನ್ನೂ ಸೇರಿದಂತೆ ನೂರಾರು ಮರಗಳನ್ನು ಕತ್ತರಿಸಿ ಹಾಕಲು ಪ್ಲಾನ್ ಆಗಿತ್ತಂತೆ. ಅದನ್ನು ತಡೆಯಲು ನಮ್ಮನ್ನು ಪ್ರೀತಿಸುವ ಮಂದಿ ಸೇರಿಕೊಂಡಿದ್ದರು; ಗಲಾಟೆ ಎಬ್ಬಿಸಿದ್ದರು. ಈ ಸಣ್ಣ ಗುಂಪಿನ ಗಲಾಟೆಯಿಂದಲೇ ನನ್ನ ನಸೀಬು ಗಟ್ಟಿ ಆಗಿದ್ದು. ನನ್ನ ಪ್ರವರ ನಿಮಗೆ ಹೇಳಿಕೊಳ್ಳಲು ನಾನಿನ್ನೂ ಜೀವಂತ ಉಳಿದಿದ್ದು.

ನಿಮಗೆ ನನ್ನದೊಂದು ಪ್ರಶ್ನೆ; ವಿಶ್ವಚೈತನ್ಯದಿಂದ ಆದ ಈ ಸೃಷ್ಟಿಯನ್ನೇ ನಾಶ ಮಾಡಿ ಕೊನೆಗೆ ಏನು ಮಾಡುತ್ತೀರಿ? ನೀವೂ ಕೂಡ ಸೃಷ್ಟಿಯ ಭಾಗವಲ್ಲವೇ? ಈಗ ಉದ್ಯಾನ ನಗರಿ ಎಂದು ಹೇಳುತ್ತೀರಲ್ಲ; ಒಂದು ಕಾಲದಲ್ಲಿ ಇಲ್ಲಿ ನಮ್ಮ ಸಂಕುಲ ಎಷ್ಟಿತ್ತು ಗೊತ್ತೇ? ಈಗ ಎಷ್ಟು ಉಳಿದಿವೆ? ನಮ್ಮ ಸಂತತಿ ಅಳಿದ ಮೇಲೆ ನಿಮ್ಮ ಸಂತತಿಯಾದರೂ ಹೇಗೆ ಉಳಿಯುತ್ತೆ?

ಹಿಂದೆಲ್ಲಾ ಬನ್ನೇರುಘಟ್ಟ, ಮಾಕಳಿದುರ್ಗ, ದೇವರಬೆಟ್ಟ, ದೊಡ್ಡರಾಗಿಹಳ್ಳಿ ಬೆಟ್ಟ, ಚಿಕ್ಕರಾಗಿಹಳ್ಳಿ ಬೆಟ್ಟ, ಸುವರ್ಣಮುಖಿ, ನಂದಿ ಬೆಟ್ಟ, ತುರಹಳ್ಳಿ, ಸ್ಕಂದಗಿರಿ, ಮುತ್ಯಾಲಮಡುವು ಮುಂತಾದ ಕಡೆಗಳಿಂದ ಹಿಂಡುಹಿಂಡು ಪಕ್ಷಿಗಳು ಅಲ್ಲಿನ ವರ್ತಮಾನ ತಂದು ಕಿವಿಯಲ್ಲಿ ಉಸುರುತ್ತಿದ್ದವು. ಈಗ ಅಲ್ಲಿಯೂ ಮನುಷ್ಯರದ್ದೇ ಹಾವಳಿಯಂತೆ. ಹಳೇ ಬೆಂಗಳೂರಿನಲ್ಲಿ ಪ್ಲೇಗು ಕಾಣಿಸಿಕೊಂಡು ಜನ ನೊಣಗಳಂತೆ ಸತ್ತು ಬೀಳಲಾರಂಭಿಸಿದಾಗ  ಕಾಡು ಮಲ್ಲೇಶ್ವರ ಸುತ್ತಮುತ್ತಲಿನ ಕಾಡು, ಹೊಲ ಸವರಿ ವಸಾಹತು ನಿರ್ಮಿಸಿದರು.

ಅದಕ್ಕೂ ಮುನ್ನ ದೂರ ದೂರದಿಂದ ಎತ್ತಿನ ಗಾಡಿ ಕಟ್ಟಿಕೊಂಡು ಜನ ಹಿಂಡು ಹಿಂಡಾಗಿ ಮಲ್ಲೇಶ್ವರನ ದರ್ಶನಕ್ಕೆ ಬರುತ್ತಿದ್ದರು. ಕಾಡಿನಲ್ಲಿ ಇದ್ದ ಕಾರಣ ಕಾಡು ಮಲ್ಲೇಶ್ವರ ಎಂದು ಕರೆಯುತ್ತಿದ್ದರು. ಆ ನೆನಪು ಇನ್ನೂ ಮಾಸಿಲ್ಲ. ಸದಾ ತನ್ನ ಒಡಲಲ್ಲಿ ನೀರು ತುಂಬಿಕೊಂಡಿರುತ್ತಿದ್ದ ಸ್ಯಾಂಕಿ ಕೆರೆಯನ್ನು ಗಂಧದ ಪರಿಮಳ ಆವರಿಸಿಕೊಂಡಿರುತ್ತಿತ್ತು. ಅಗ ಅಲ್ಲೇ ಸಮೀಪದಲ್ಲೇ ಗಂಧಕೋಠಿ ಇತ್ತು. ಗಂಧದೆಣ್ಣೆ ಫ್ಯಾಕ್ಟರಿಯ ತ್ಯಾಜ್ಯದ ನೀರು ಬಂದು ಸೇರಿ ಪರಿಮಳ ಹೊಮ್ಮಿಸುತ್ತಿತ್ತು. ಹೀಗಾಗಿ ಗಂಧದ ಕೆರೆ ಎಂದೂ ಹೇಳುತ್ತಿದ್ದರು.

ಕೆರೆದಂಡೆ ಸುತ್ತ ದಟ್ಟವಾಗಿ ಔಷಧೀಯ ಸಸ್ಯಗಳೂ ಬೆಳೆಯುತ್ತಿದ್ದವು. ಜಾನುವಾರುಗಳು ಬಂದು ಮೇಯುತ್ತಿದ್ದವು. ಈಗ ಆ ಕೆರೆಯತ್ತ ಒಮ್ಮೆ ಕಣ್ಣು ಹಾಯಿಸಿದರೆ ನಗು ಬರುತ್ತದೆ. ಅಲ್ಲಿ ಬೆಳಿಗ್ಗೆ-ಸಂಜೆ ವಿವಿಧಾಕೃತಿಯ ಮನುಷ್ಯರು ಏದುಸಿರು ಬಿಡುತ್ತಾ, ಬೆವರು ಸುರಿಸುತ್ತಾ, ಚಿತ್ರ ವಿಚಿತ್ರ ಭಂಗಿಗಳಲ್ಲಿ ನಡೆಯುವುದು, ಓಡುವುದು, ಕುಪ್ಪಳಿಸುವುದು ನೋಡಿದಾಗ ನಗು ತಡೆಯುವುದಕ್ಕೆ ಆಗುವುದಿಲ್ಲ. ಮಜಾ ಅನ್ನಿಸುತ್ತದೆ. ಇವರಿಗೆ ಏಕೆ ಈ ಸ್ಥಿತಿ ಬಂದಿದೆ? ವರ್ಷ, ವರ್ಷವೂ ಅಸಂಖ್ಯ ಜನ ಕಾಯಿಲೆಯಿಂದ ಹಾಸಿಗೆ ಹಿಡಿಯುತ್ತಾರೆ. ಹೀಗೆ ಏಕಾಗುತ್ತದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳಬಾರದೆ? ಎಲ್ಲ ಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕಾದ ಮಾನವ ಉಳಿದ ಜೀವಿಗಳ ಪಾಲಿಗೆ ರಾಕ್ಷಸನಾಗಿರುವುದು ಕಂಡು ಮನಸ್ಸಿಗೆ ಪಿಚ್ಚೆನ್ನಿಸಿತು.

ದೂರದಲ್ಲಿ ನನ್ನ ಬಂಧುಗಳ ನೆತ್ತಿಯ ಮೇಲೆ ಮೆಟ್ರೊ ರೈಲು ವೇಗದಲ್ಲಿ ಹಾದು ಹೋಗುತ್ತಿತ್ತು. ಒಮ್ಮೆ ಕತ್ತು ಎತ್ತರಿಸಿ ಕಣ್ಣು ಹಾಯಿಸಿದಾಗ ದೂರ ದೂರದವರೆಗೆ ಬರೀ ಮನೆಗಳು, ಕಟ್ಟಡಗಳೇ ಹಬ್ಬಿದ್ದವು. ಆಗಸ ಕಪ್ಪಾಗಿತ್ತು. ನೆಲ ಬಿಸಿಯಿಂದ ಕಾವಲಿಯಂತಾಗಿತ್ತು.

**

ಮಲ್ಲೇಶ್ವರ ಮತ್ತು ಕಾಡು
ಮಲ್ಲೇಶ್ವರ, ಸದಾಶಿವನಗರದ ಬಳಿ ಓಡಾಡುವಾಗ ತುಂಬ ಹಳೆಯ, ಭಾರಿ ಗಾತ್ರದ ಮಾವಿನ ಮರಗಳು ಅಲ್ಲಲ್ಲಿ ಕಾಣಿಸುತ್ತವೆ. ಅವುಗಳಲ್ಲಿ ಕೆಲವು ವೃಕ್ಷಗಳ ವಯಸ್ಸು 75 ವರ್ಷ ದಾಟಿದೆ. ಇಂತಹ ಮಾವಿನಮರಗಳು ಪಶ್ಚಿಮಘಟ್ಟಗಳಲ್ಲಿ ಮಾತ್ರವೇ ಇರುತ್ತವೆ. ಪುಟ್ಟ ಗಾತ್ರದ ಸಿಹಿ-ಹುಳಿ ಮಿಶ್ರಿತ ದುಂಡಗಿನ ಹಣ್ಣುಗಳನ್ನು ಹೊಂದಿರುತ್ತವೆ. ಮಲ್ಲೇಶ್ವರಕ್ಕೆ ಕಾಡು ಮಲ್ಲೇಶ್ವರ ಎಂಬ ಹೆಸರು ಇದೆ. 100 ವರ್ಷಗಳ ಹಿಂದೆ ಇಲ್ಲಿ ಕಾಡು ಇತ್ತು. ಈಗ ಕಾಡಿನ ಕುರುಹು ಸಿಗುವುದೂ ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT