ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರು ಉಳಿಯಿತು...

ಅರಣ್ಯ ದಿನ
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬಸವೇಶ್ವರ ವೃತ್ತದಿಂದ ಹೆಬ್ಬಾಳ ಫ್ಲೈ ಓವರ್‌ವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ದಿನದಿಂದ ದಿನಕ್ಕೆ ನಗರದ ವಾತಾವರಣ ಹದಗೆಡುತ್ತಿರುವ ಈ ಸಂದರ್ಭದಲ್ಲಿ ಯೋಜನೆ ರದ್ದತಿ ಉತ್ತಮ ನಿರ್ಧಾರ ಎಂಬುದು ಪರಿಸರ ಸಂರಕ್ಷಣಾ ಹೋರಾಟಗಾರರ ವಾದ.

‘ಉಕ್ಕಿನ ಸೇತುವೆ ಯೋಜನೆಗಾಗಿ ಮರ ಕಡಿಯುವುದು ಎಂದರೆ ಏನು?  ಕೋಟಿಕೋಟಿ ಹಣದಿಂದ 800 ಮರಗಳನ್ನು ವರ್ಷದಲ್ಲಿ ಬೆಳೆಸಿಬಿಡಲು ಸಾಧ್ಯವೇ? ಪ್ರತಿನಿತ್ಯ ನಗರದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ 25 ಸಾವಿರ ಟನ್ ಉಕ್ಕು ಬಳಕೆಯಾಗುತ್ತಿದೆ. ಉಕ್ಕಿನಿಂದ ಬಿಡುಗಡೆಯಾಗುವ ಬಿಸಿ, ಕಬ್ಬಿಣದ ಅಂಶದಿಂದ ಹವಾಮಾನದಲ್ಲಿ ವ್ಯತ್ಯಯವಾಗಿದೆ. ಬೆಂಗಳೂರಿಗೆ ಜ್ವರ ಬರುತ್ತಿದೆ’ ಎನ್ನುತ್ತಾರೆ ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ.

‘ಅಭಿವೃದ್ಧಿಯ ನೆಪದಲ್ಲಿ ಅವೈಜ್ಞಾನಿಕ ಕಟ್ಟಡಗಳು, ನಿರ್ಮಾಣವಾಗುತ್ತಿದೆ ಇದರಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಹೊಡೆತವನ್ನು ಈಗಾಗಲೇ ನಾವು ಅನುಭವಿಸುತ್ತಿದ್ದೇವೆ. ಇನ್ನು ಉಳಿದ ಮರಗಳನ್ನಾದರೂ ನಾವು ರಕ್ಷಿಸಿಕೊಳ್ಳಬೇಕು ಎನ್ನುವುದು’ ಯಲ್ಲಪ್ಪ ರೆಡ್ಡಿ ಅವರ ಆಶಯ.

ಉಸಿರು ಉಳಿಸಿಕೊಂಡ ಸಹಸ್ರಾರು ಮರಗಳು

ಉಕ್ಕಿನ ಸೇತುವೆ ಯೋಜನೆಗೆ 71ಜಾತಿಯ  2,244 ಮರಗಳು ಬಲಿಯಾಗುತ್ತಿದ್ದವು ಎಂದು ಮರಗಳ ಗಣತಿ ಮಾಡಿದ್ದಾರೆ 
ವೃಕ್ಷ ಫೌಂಡೇಷನ್ ಅಧ್ಯಕ್ಷ ವಿಜಯ್ ನಿಶಾಂತ್ ಮತ್ತು ಅಜೀಂ ಪ್ರೇಮ್‌ಜಿ ಯುನಿವರ್ಸಿಟಿಯಲ್ಲಿ ರಿಸರ್ಚರ್ ಆಗಿರುವ ಸೀಮಾ ಮುನ್ದೋಳಿ. ಬಸವೇಶ್ವರ ವೃತ್ತದಿಂದ ಹೆಬ್ಬಾಳ ಫ್ಲೈ ಓವರ್‌ವರೆಗೆ ಓಡಾಡಿ ವೈಜ್ಞಾನಿಕವಾಗಿ ಮರಗಳ  ಲೆಕ್ಕಮಾಡಿದ್ದಾರೆ ವಿಜಯ್ ನಿಶಾಂತ್ ಮತ್ತು ಸೀಮಾ.

(ಯಲ್ಲಪ್ಪ ರೆಡ್ಡಿ)

‘ನಾವು ಮೂರು ವಿಭಾಗವಾಗಿ ವಿಂಗಡಿಸಿದ್ದೇವೆ. ಬಸವೇಶ್ವರ ವೃತ್ತದಿಂದ ಗುಟ್ಟಹಳ್ಳಿ ಫ್ಲೈಓವರ್‌ವರೆಗೆ ಒಂದು ವಿಭಾಗ. ಗುಟ್ಟಹಳ್ಳಿಯಿಂದ ಹೆಬ್ಬಾಳ ಫ್ಲೈಓವರ್‌ವರೆಗೆ ಎರಡನೇ ವಿಭಾಗ, ಹಾಗೂ ಮೂರನೇಯದಾಗಿ ಮೇಖ್ರಿವೃತ್ತ, ಕಂಟೋನ್ಮೆಂಟ್ ರೈಲು ನಿಲ್ದಾಣ, ಅರಮನೆ ರಸ್ತೆಯ ಕೆಲ ಭಾಗ. ಹೀಗೆ ಒಟ್ಟಾರೆ 2,244 ಮರಗಳು ಇವೆ. ಇದರಲ್ಲಿ 15 ಬೃಹತ್ ಮರಗಳು ಸೇರಿದಂತೆ ಉತ್ತಮ ಆಮ್ಲಜನಕ ನೀಡುವ, ಮಳೆ ತರಿಸುವ ಅರಳಿ, ಆಲ, ಅತ್ತಿಮರಗಳೂ ಇವೆ. ಜಯಮಹಲ್ ಮುಖ್ಯ ರಸ್ತೆಯಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಮಾವಿನ ಮರಗಳೇ ಇವೆ’ ಎನ್ನುತ್ತಾರೆ ವಿಜಯ್.

ವಾಯುಮಾಲಿನ್ಯ: ನಗರದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಸಲ್ಫರ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಿದೆ. ಮಾನವನ ಶ್ವಾಸಕೋಶದ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತಿದೆ.

(ವಿಜಯ್ ನಿಶಾಂತ್)

ಉಷ್ಣದ್ವೀಪವಾಗುತ್ತಿರುವ ನಗರ: ‘ಮಾಲಿನ್ಯದ ಜೊತೆ ನಗರದ ಉಷ್ಣಾಂಶವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ಬೇಸಿಗೆಯಲ್ಲೂ ಬೆಂಗಳೂರಿನ ತಾಪಮಾನ ಏರಿಕೆಯಾಗುತ್ತಿದೆ’ ಎನ್ನುತ್ತಾರೆ ವಿಜಯ್.

ಜೀವವೈವಿಧ್ಯದ ಮೇಲಾಗುವ ಪರಿಣಾಮ: ಉಕ್ಕಿನ ಸೇತುವೆ ನೆಪದಲ್ಲಿ ಒಂದೇ ಬಾರಿಗೆ ನೂರಾರು ಮರಗಳನ್ನು ಕಡಿದರೆ ದೊಡ್ಡ ಪ್ರಮಾಣದಲ್ಲಿ ಜೀವವೈವಿಧ್ಯಕ್ಕೆ ಅಡಚಣೆ ಉಂಟಾಗುತ್ತಿತ್ತು.

‘ಬಾವಲಿ, ಅಳಿಲು ಹಾಗೂ ಪಕ್ಷಿಗಳು ಆಲದ ಹಣ್ಣು, ಅತ್ತಿಹಣ್ಣನ್ನು ನೆಚ್ಚಿಕೊಂಡು ಬದುಕುತ್ತಿವೆ. ಹಾಗೂ ಅನೇಕ ವಲಸೆ ಹಕ್ಕಿಗಳಿಗೆ ಈ ಮರಗಳು ಆಶ್ರಯತಾಣ. ಇದರಿಂದ ಒಂದು ಜೀವಸರಪಳಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿತ್ತು. ಕಟ್ಟಡ ತುಂಬಿದ ನಗರದ ಪ್ರದೇಶದೊಳಗೆ ಪಕ್ಷಿಗಳಿಗೆ ಅಲ್ಲಲ್ಲಿ ‘ಗ್ರೀನ್ ಪ್ಯಾಚ್’ ಇರಬೇಕು’ ಎಂಬುದು ವಿಜಯ್‌ ವಾದ.

 ಮರಗಳ ಸಂಖ್ಯೆ ಕ್ಷೀಣಿಸುತ್ತಿರುವಂತೆ ನಗರದ ಕೆರೆಗಳಲ್ಲಿ ನೀರು ಕಡಿಮೆಯಾಗುತ್ತದೆ.

‘ಈ ಉಕ್ಕಿನ ಸೇತುವೆ ನಿರ್ಮಾಣವಾಗಿದ್ದರೆ ಹೆಬ್ಬಾಳ ಕೆರೆಗೂ ಇದು ತೀವ್ರವಾದ ಹೊಡೆತ ಬೀಳುತ್ತಿತ್ತು. ಹೆಬ್ಬಾಳ ಕೆರೆಗೆ ವಲಸೆ ಹಕ್ಕಿಗಳು ಬರುವುದರಿಂದ ಅವುಗಳಿಗೆ ವಿಶ್ರಾಂತ ನೆಲೆಯೇ ಇಲ್ಲದಂತಾಗುತ್ತಿತ್ತು. ಈ ಕೆರೆಗಳು ಅವುಗಳಿಗೆ ಈಗ ‘ವಿಶ್ರಾಂತಿತಾಣ’ಗಳಂತಿವೆ. ಜಲಚರಗಳು, ಕೆರೆ ಆಶ್ರಯಿಸಿದ ಗಿಡ–ಮರಗಳು ಒಂದು ಸರಪಳಿಯಂತೆ. ಉಕ್ಕಿನ ಸೇತುವೆ ಯೋಜನೆ ಕೈಬಿಟ್ಟಿರುವುದರಿಂದ ಈ ಎಲ್ಲಾ ಪ್ರಾಣಿ, ಪಕ್ಷಿಗಳು ಉಳಿದಿವೆ’ ಎನ್ನುತ್ತಾರೆ ವಿಜಯ್.

**

ಬೆಂಗಳೂರಿನಲ್ಲಿ ಇನ್ನೂ ಎಷ್ಟು ಮಾಲಿನ್ಯವಾಗಬೇಕು? ಈಗ ನಾವು ಉಳಿದಿರುವ ಮರಗಳನ್ನಾದರೂ ರಕ್ಷಿಸಿಕೊಳ್ಳಬೇಕು, ಉಕ್ಕಿನ ಸೇತುವೆ ಯೋಜನೆ ಕೈಬಿಟ್ಟಿರುವುದು ಸಮಾಧಾನ ತಂದಿದೆ

–ಸಂಯುಕ್ತ ಪುಲಿಗಲ್, (ಉಕ್ಕಿನ ಸೇತುವೆ ವಿರೋಧಿ ಚಳವಳಿಯ ಸದಸ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT