ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ... ಹಸಿರು ಕ್ಯಾಂಪಸ್‌ಗೆ

ಅರಣ್ಯ ದಿನ
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಗರದ ಸಾವಿರಾರು ಮರಗಳು ನಗರೀಕರಣದ ಕೊಡಲಿಗೆ ತುತ್ತಾಗಿ ಮರೆಗೆ ಸರಿದಿವೆ.  ಆದರೆ, ನಗರದ ಕೆಲವು ಕ್ಯಾಂಪಸ್‌ಗಳು ಮಾತ್ರ ನೂರಾರು ವರ್ಷಗಳಷ್ಟು ಹಳೆಯ ಮರಗಳ ನೆರಳಿನಲ್ಲಿ ತಂಪಾಗಿವೆ. ಅದರಲ್ಲೂ ಹೆಚ್ಚು ವಿಸ್ತೀರ್ಣದಲ್ಲಿರುವ ಕೇಂದ್ರ ಸರ್ಕಾರದ ಕ್ಯಾಂಪಸ್‌ಗಳಲ್ಲಿ ಮರಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅರಣ್ಯ ದಿನದ ನೆನಪಲ್ಲಿ ಅಂಥ ಕೆಲವು ಕ್ಯಾಂಪಸ್‌ಗಳ ಪರಿಚಯ ಇಲ್ಲಿದೆ.

ಬೆಂಗಳೂರು ವಿಶ್ವವಿದ್ಯಾಲಯ/ ಜ್ಞಾನಭಾರತಿ: ಮೈಸೂರು ರಸ್ತೆಯಿಂದ ಜ್ಞಾನಭಾರತಿಯ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಬೇರೆಯದೇ ಲೋಕಕ್ಕೆ ಪ್ರವೇಶಿಸಿದಂತಾಗುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಬೃಹತ್‌ ಮರಗಳಿದ್ದು   ಇಡೀ ಬೆಂಗಳೂರಿಗೆ ಆಮ್ಲಜನಕ ಪೂರೈಸುವ ಪ್ರಮುಖ ತಾಣ ಎಂಬ ಹೆಮ್ಮೆ ಈ ಕ್ಯಾಂಪಸ್‌ಗಿದೆ.

ಗಂಧದ ಮರಗಳಿಗೆ ಈ ಕ್ಯಾಂಪಸ್‌ ಪ್ರಸಿದ್ಧ. ಜೊತೆಗೆ ತೇಗ, ಬೀಟೆ, ಹೊನ್ನೆ ಸೇರಿದಂತೆ ಅನೇಕ ಬಗೆಯ ಬೆಲೆಬಾಳುವ ಮರಗಳು ಇಲ್ಲಿವೆ. ಇದರ ರಕ್ಷಣೆಗೆಂದೇ 100ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ.

1100 ಎಕರೆ ವಿಸ್ತೀರ್ಣದಲ್ಲಿರುವ ಜ್ಞಾನಭಾರತಿ  ಕ್ಯಾಂಪಸ್‌ನ ಸುಮಾರು 300 ಎಕರೆ ಪ್ರದೇಶದಲ್ಲಿ ಜೀವವೈವಿಧ್ಯ ವನವಿದೆ. ಸುಮಾರು 650 ಪ್ರಬೇಧದ ಮರಗಳನ್ನು ಬೆಳೆಸಲಾಗಿದೆ. ಶ್ರೀಗಂಧದ ಮರ, ಕಾಡುಜಾಲಿ, ಕರಿಜಾಲಿ, ಬಿಳಿಜಾಲಿ ಮುಂತಾದ  ನೈಸರ್ಗಿಕ ಮರಗಳನ್ನು  ಉಳಿಸಲಾಗಿದೆ.

‘ಜೀವವೈವಿಧ್ಯ ವನವಲ್ಲದೆ ಅತ್ತಿವನ, ಆಲದ ವನ, ಅರಳಿವನ, ಗೋಣೀವನ ಹೀಗೆ ವಿವಿಧ ಬಗೆಯ ವನ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಬೇರೆ ಕಡೆಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತಿವೆ. ಈ ವರ್ಷ 3ಲಕ್ಷ ಸಸಿಗಳನ್ನು ನೆಡುವ ಗುರಿಯಿದೆ’ ಎಂದು ಇಲ್ಲಿನ ಜೀವವೈವಿದ್ಯ ವನ ನಿರ್ವಹಣೆ ಮಾಡುತ್ತಿರುವ ರೇಣುಕಾ ಪ್ರಸಾದ್‌ ಹೇಳುತ್ತಾರೆ.

ಭಾರತೀಯ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ: ಮಲ್ಲೇಶ್ವರದ 18ನೇ ತಿರುವಿನ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿಯಿರುವ ಭಾರತೀಯ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ  1938ರಲ್ಲಿ ಆರಂಭಗೊಂಡಿದ್ದು.  ಕೇಂದ್ರ ಸರ್ಕಾರದ ಅಧೀನದಲ್ಲಿರುವ  ಈ ಸಂಸ್ಥೆ ಸ್ಥಾಪನೆಗೆಂದು  25 ಎಕರೆ ಜಾಗವನ್ನು ದಾನವಾಗಿ ನೀಡಿದವರು ಮೈಸೂರು ಮಹಾರಾಜರು. ಹಿಂದೆ ಇದು ನೈಸರ್ಗಿಕ ಅರಣ್ಯಪ್ರದೇಶವಾಗಿತ್ತು. ಸಂಸ್ಥೆ ಆರಂಭವಾದ ನಂತರವೂ ಆ ಮರಗಳನ್ನು ಹಾಗೆಯೇ ಉಳಿಸಿಕೊಂಡೇ  ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ನೂರಾರು ವರ್ಷ ಹಳೆಯ ಮರಗಳು ಈ ಕ್ಯಾಂಪಸ್‌ನಲ್ಲಿ ಉಳಿದಿವೆ.

 (ಭಾರತೀಯ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಆವರಣ.  ಚಿತ್ರ: ಸತೀಶ್‌ ಬಡಿಗೇರ್)

ಸಂಶೋಧನೆಯ ಉದ್ದೇಶದಿಂದ ಅನೇಕ ಬೆಲೆಬಾಳುವ, ಹೊಸತಳಿಯ ಮರಗಳನ್ನು ಬೆಳೆಸಲಾಗಿದೆ. ಗಂಧದ ಮರಗಳ ಸಂಶೋಧನೆ, ಮರವಿಜ್ಞಾನ  ಸಂಬಂಧಿಸಿದ ಅಧ್ಯಯನ, ತರಬೇತಿ, ಮುಂತಾದ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ): ಸಿ.ವಿ.ರಾಮನ್‌ ರಸ್ತೆಯಲ್ಲಿ 1911ರಲ್ಲಿ  ಸ್ಥಾಪನೆಯಾದ, 400 ಎಕರೆ ವಿಸ್ತೀರ್ಣದಲ್ಲಿರುವ ಭಾರತೀಯ ವಿಜ್ಞಾನ  ಸಂಸ್ಥೆಯ ಆವರಣ ಪ್ರವೇಶಿಸುತ್ತಿದ್ದಂತೆ 70 ವರ್ಷಗಳಷ್ಟು ಹಳೆಯ ಗುಲ್‌ಮೊಹರ್‌ ಮರಗಳ ತಣ್ಣನೆಯ ಸ್ವಾಗತ ಮುದ ನೀಡುತ್ತದೆ.
ನೂರು ವರ್ಷ ಹಳೆಯ ಅರಳಿ ಮರಗಳಿವೆ. ಸುಮಾರು 460ಕ್ಕೂ ಹೆಚ್ಚು ಪ್ರಭೇದದ ಮರಗಳನ್ನು ಇಲ್ಲಿ ಬೆಳೆಸಲಾಗಿದೆ. ಮರವನ್ನು ಹಬ್ಬುವ ಬಳ್ಳಿಗಳು, ಹೂಬಿಡುವ ಗಿಡಗಳು, ಬಗೆ ಬಗೆಯ ಹುಲ್ಲುಗಳನ್ನು ಇಲ್ಲಿ ಬೆಳೆಸಲಾಗಿದೆ.

(ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿರುವ ಹಳೆಯ ಮರಗಳು ಸಂಗ್ರಹ ಚಿತ್ರ)

‘ವಿವಿಧ ರಾಜ್ಯಗಳ ಸಸ್ಯಶಾಸ್ತ್ರದ ಸಂಶೋಧನಾ ವಿದ್ಯಾರ್ಥಿಗಳು ಸಸ್ಯಗಳನ್ನು ಹುಡುಕಿ ಇಲ್ಲಿಗೆ ಬರುತ್ತಿದ್ದಾರೆ’ ಎಂದು ಇಲ್ಲಿನ ತಾಂತ್ರಿಕ ಅಧಿಕಾರಿ ಬಿ. ಶ್ರೀಧರ್‌ ಹೇಳುತ್ತಾರೆ.

ಸೆಂಟ್ರಲ್‌ ಕಾಲೇಜು: ನಗರದ ಹೃದಯ ಭಾಗದಲ್ಲಿರುವ ಸೆಂಟ್ರಲ್‌ ಕಾಲೇಜು ಹಿಂದೆ ಹಸಿರಿನ ಪ್ರಮುಖ ತಾಣವಾಗಿತ್ತು. ಮೆಟ್ರೊ ರೈಲು ಮಾರ್ಗ, ಹೊಸ ಕಟ್ಟಡಗಳ ನಿರ್ಮಾಣ ಹೀಗೆ ಒಂದಷ್ಟು ಮರಗಳು ನಾಶವಾಗಿವೆ. ಆದರೆ, ಈಗಲೂ ಇಲ್ಲಿ 120 ಮರಗಳಿವೆ. ಬ್ರಿಟಿಷರ ಕಾಲದಲ್ಲಿ ನೆಟ್ಟ ಸುಮಾರು 80 ವರ್ಷದಷ್ಟು ಹಳೆಯ ಮೇಫ್ಲವರ್‌, ಆಲದ ಮರಗಳೇ ಹೆಚ್ಚು ಇವೆ. ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ಗೆ ಸ್ಥಳಾಂತರಗೊಂಡ ನಂತರ  ಹೊಸದಾಗಿ ಮರಗಳನ್ನು ಬೆಳೆಸಿಲ್ಲ. ಇರುವ ಮರಗಳನ್ನು ಉಳಿಸಿಕೊಳ್ಳಲಾಗಿದೆ.

(ಸೆಂಟ್ರಲ್ ಕಾಲೇಜು ಆವರಣದಲ್ಲಿಯೂ ಹಸಿರುರಾಶಿ ಕಂಗೊಳಿಸುತ್ತಿದೆ)

ಕ್ರೈಸ್ಟ್‌ ಯುನಿವರ್ಸಿಟಿ: ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳೂ ಹಸಿರು ಕ್ಯಾಂಪಸ್‌ಗೆ ಆದ್ಯತೆ ನೀಡಿವೆ. ಈ 

ಪೈಕಿ ಕೆಂಗೇರಿಯಲ್ಲಿ 75 ಎಕರೆ ಪ್ರದೇಶದಲ್ಲಿರುವ ಕ್ರೈಸ್ಟ್‌ ವಿಶ್ವವಿದ್ಯಾಲಯ ಮರಗಳ  ನೆರಳಿನಲ್ಲಿದೆ. ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್‌ ಕಾಲೇಜಿನಲ್ಲೂ ಮರಗಳನ್ನು ಬೆಳೆಸಲಾಗಿದೆ. ಕ್ಯಾಂಪಸ್‌ ರಸ್ತೆಗಳ ಬದಿಗಳಲ್ಲಿ ಬಿದಿರಿನ ಮರಗಳನ್ನು ಬೆಳೆಸಲಾಗಿದೆ. ಸುಂದರ ಉದ್ಯಾನಗಳನ್ನೂ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT