ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಜಾರಿ: ಪ್ರಮುಖ ತೊಡಕು, ಅಡ್ಡಿಗಳು ದೂರ

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಸಂಬಂಧಿಸಿದ ನಾಲ್ಕು ಪೂರಕ ಕರಡು ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟವು ಸೋಮವಾರ ಅನುಮೋದನೆ ನೀಡಿದೆ. ಹೊಸ ತೆರಿಗೆ ವ್ಯವಸ್ಥೆ ಜಾರಿ ನಿಟ್ಟಿನಲ್ಲಿ ಈಗ ಇನ್ನೊಂದು ಮಹತ್ವದ ಘಟ್ಟ ದಾಟಿದಂತಾಗಿದೆ.  

ಸದ್ಯಕ್ಕೆ ನಡೆಯುತ್ತಿರುವ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿಯೇ ಈ ನಾಲ್ಕೂ ಕರಡು ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಸರ್ಕಾರ ಉದ್ದೇಶಿಸಿರುವುದೂ ಸಕಾಲಿಕವಾಗಿದೆ. ಅಲ್ಲಿಗೆ ಜಿಎಸ್‌ಟಿ ಜಾರಿಯ ಪೂರ್ವಸಿದ್ಧತೆಗಳೆಲ್ಲ ಸಮರ್ಪಕವಾಗಿ ನಡೆಯುತ್ತಿದ್ದು, ಗಡುವಿನೊಳಗೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವ ವಿಶ್ವಾಸ ಮೂಡಿಸಿದೆ.
 
ಕಳೆದ ವಾರ ನಡೆದಿದ್ದ ಜಿಎಸ್‌ಟಿ ಮಂಡಳಿಯ ಹನ್ನೆರಡನೆಯ ಸಭೆಯಲ್ಲಿ ವಿಸ್ತೃತ ಚರ್ಚೆಯ ನಂತರ ಈ ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಕೇಂದ್ರ ಸರ್ಕಾರದ ಜಿಎಸ್‌ಟಿ, ಸಮಗ್ರ ಜಿಎಸ್‌ಟಿ,  ಕೇಂದ್ರಾಡಳಿತ ಪ್ರದೇಶ ಜಿಎಸ್‌ಟಿ, ರಾಜ್ಯಗಳ ಜಿಎಸ್‌ಟಿ ಮತ್ತು ರಾಜ್ಯಗಳಿಗೆ ಪರಿಹಾರ ನೀಡುವ ಕರಡು ಮಸೂದೆಗಳಿಗೆ ಜಿಎಸ್‌ಟಿ ಮಂಡಳಿಯ ಅನುಮೋದನೆ ದೊರೆತಿದೆ.
 
‘ಒಂದು ದೇಶ, ಒಂದು ತೆರಿಗೆ’ ವ್ಯವಸ್ಥೆ ಜಾರಿಗೆ ತರಲು ಈಗ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳು ಈ ಪೂರಕ ಮಸೂದೆಗಳನ್ನು ಅಂಗೀಕರಿಸುವುದೊಂದೇ ಬಾಕಿ ಉಳಿದಂತಾಗಲಿದೆ.

ಕೇಂದ್ರದ ಅಬಕಾರಿ ಸುಂಕ, ಸೇವಾ ತೆರಿಗೆ ಮತ್ತು ರಾಜ್ಯಗಳ ಮೌಲ್ಯವರ್ಧಿತ ತೆರಿಗೆಗಳನ್ನು (ವ್ಯಾಟ್‌) ವಿಲೀನಗೊಳಿಸಿ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಎಲ್ಲ ರಾಜಕೀಯ ಪಕ್ಷಗಳು ಒಮ್ಮತಕ್ಕೆ ಬಂದಿರುವುದರಿಂದ ಸಂಸತ್‌ನಲ್ಲಿ ಈ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲಿರುವುದರಲ್ಲಿ ಅನುಮಾನ ಇಲ್ಲ.

ವಿಧಾನಸಭೆಗಳೂ ಎಸ್‌ಜಿಎಸ್‌ಟಿ ಮಸೂದೆಯನ್ನು ಅಂಗೀಕರಿಸುವಲ್ಲಿಯೂ ಯಾವುದೇ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ. ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ವಿವಿಧ ರಾಜಕೀಯ ಪಕ್ಷಗಳು ಕೇಂದ್ರದ ಆಡಳಿತಾರೂಢ ಬಿಜೆಪಿ ಜತೆಗಿನ ತಮ್ಮೆಲ್ಲ ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು, ಜಿಎಸ್‌ಟಿ ಜಾರಿಗೆ ಕೈಜೋಡಿಸಿವೆ.
 
ಮಂಡಳಿ ಸಭೆಯಲ್ಲಿಯೂ ತಮ್ಮೆಲ್ಲ ಅನುಮಾನಗಳನ್ನು ಬಗೆಹರಿಸಿಕೊಂಡಿರುವುದು ಒಕ್ಕೂಟ ವ್ಯವಸ್ಥೆಯಲ್ಲಿನ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರ ಒಕ್ಕೂಟ ವ್ಯವಸ್ಥೆ ಆಶಯಕ್ಕೂ ಪೂರಕವಾಗಿದೆ. 
 
ಜಿಎಸ್‌ಟಿಯು ದೇಶಿ ಆರ್ಥಿಕ ವೃದ್ಧಿ ದರವನ್ನು ಕನಿಷ್ಠ ಶೇ 0.5ರಷ್ಟು ಹೆಚ್ಚಿಸಲಿದೆ, ವರಮಾನ ಸಂಗ್ರಹ ವ್ಯಾಪ್ತಿಯನ್ನು ಹಿಗ್ಗಿಸಲಿದೆ ಎಂದೂ ನಿರೀಕ್ಷಿಸಲಾಗಿದೆ. ನೋಟು ರದ್ದತಿಯು ಜಿಡಿಪಿ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮಗಳು ಇದರಿಂದ ಕೆಲಮಟ್ಟಿಗೆ ತಹಬಂದಿಗೆ ಬರಲೂಬಹುದು.

ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯು  ಒಂಬತ್ತು ಬಗೆಯ ನಿಯಮ ಮತ್ತು ನಿಯಂತ್ರಣ ಕ್ರಮಗಳನ್ನು ಒಳಗೊಂಡಿದೆ. ಐದು ನಿಯಮಗಳಾದ ನೋಂದಣಿ, ಪಾವತಿ, ಮರು ಪಾವತಿ, ಬೆಲೆ ಪಟ್ಟಿ ಮತ್ತು ಲಾಭಾಂಶಕ್ಕೆ ಅನುಮೋದನೆ ದೊರೆತಂತಾಗಿದೆ.

ಹೊಸ ವ್ಯವಸ್ಥೆಯಡಿ ತೆರಿಗೆದಾರರು ಪಾಲಿಸಬೇಕಾದ ನಿಯಮಗಳು ಮತ್ತು ಆಡಳಿತಾತ್ಮಕ ಕ್ರಮಗಳಿಗೆ ಸಂಬಂಧಿಸಿದ ಇನ್ನೂ ನಾಲ್ಕು ನಿಯಂತ್ರಣ ಕ್ರಮಗಳಿಗೆ ಮಂಡಳಿಯು ಸಮ್ಮತಿ ನೀಡುವುದಷ್ಟೇ ಬಾಕಿ ಉಳಿದಿದೆ.  ಇವು ವಿವಾದಾತ್ಮಕವಾಗಿಲ್ಲದ ಕಾರಣಕ್ಕೆ ಅನುಮತಿ ದೊರೆಯುವುದು ಸಮಸ್ಯೆಯಾಗದು.
 
ಇದೇ 31ರಂದು ನಡೆಯಲಿರುವ ಸಭೆಯಲ್ಲಿ ಈ ಕರಡು ನಿಯಮಗಳಿಗೂ ಸಮ್ಮತಿ ದೊರೆಯುವುದು ಬಹುತೇಕ ನಿಶ್ಚಿತವಾಗಿದೆ. ಇದರಿಂದ ಹೊಸ ತೆರಿಗೆ ವ್ಯವಸ್ಥೆಗೆ ಬದಲಾಗುವುದಕ್ಕೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಸಮಯಾವಕಾಶವೂ ದೊರೆಯಲಿದೆ.

ಸಾವಿರಾರು ಉತ್ಪನ್ನ ಮತ್ತು ಸೇವೆಗಳನ್ನು ಐದು ತೆರಿಗೆ ಹಂತಗಳಲ್ಲಿ  (ಶೇ 0, 5, 12, 18 ಮತ್ತು 28) ಸೇರ್ಪಡೆ ಮಾಡುವುದು ಈಗ ಮಂಡಳಿ ಮುಂದಿರುವ ಕ್ಲಿಷ್ಟಕರ ಸಮಸ್ಯೆಯಾಗಿದೆ.   ರಾಜ್ಯಗಳ ಮತ್ತು ಬಳಕೆದಾರರ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲು ಮಂಡಳಿ ಸಫಲವಾಗಲಿದೆ ಎಂದೂ ಆಶಿಸಬಹುದಾಗಿದೆ. 
 
ಹೊಸ ವ್ಯವಸ್ಥೆ ಜಾರಿಗೆ ತರುವಾಗ ಸರಕುಗಳ ಪೂರೈಕೆ ಸರಣಿ, ಬೆಲೆ ಕಾರ್ಯತಂತ್ರ ಮತ್ತು ಲೆಕ್ಕಪತ್ರ ವ್ಯವಸ್ಥೆ ಏರುಪೇರಾಗಲಿರುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಜಾರಿ ದಿನವನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡುವ ಹಕ್ಕೊತ್ತಾಯ ಏನಾದರೂ ಕೈಗಾರಿಕಾ ವಲಯದಿಂದ ಕೇಳಿ ಬಂದರೆ, ಕೇಂದ್ರ ಸರ್ಕಾರ ಅದನ್ನು ಪರಿಗಣಿಸಲು ಮುಕ್ತ ಮನಸ್ಸಿನಿಂದ ಇರಬೇಕು ಎನ್ನುವುದು ಹೆಚ್ಚು ಅಪೇಕ್ಷಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT