ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಂ ಸ್ವಾಯತ್ತೆ – ಸಾಮಾಜಿಕ ವೈವಿಧ್ಯ

‘ಸಾಮಾಜಿಕ ಒಳಗೊಳ್ಳುವಿಕೆ’ಗಾಗಿ ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕಾದ ಹೊಣೆ, ಅಭೂತಪೂರ್ವ ಸ್ವಾಯತ್ತೆ ಪಡೆಯಲಿರುವ ಐಐಎಂಗಳ ಮೇಲಿದೆ
Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
- ಸಿದ್ಧಾರ್ಥ ಜೋಷಿ, ದೀಪಕ ಮಲಘಾಣ್
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಫೆಬ್ರುವರಿ 9ರಂದು ಸಂಸತ್ತಿನಲ್ಲಿ ‘ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ ಮಸೂದೆ 2017’ನ್ನು ಮಂಡಿಸಿದರು. ಡಿಪ್ಲೊಮಾ ಬದಲು ಪದವಿ ಹಾಗೂ ಸ್ನಾತಕೋತ್ತರ ಪದವಿ ನೀಡುವ ಅಧಿಕಾರವನ್ನು ಈ ಮಸೂದೆ ಐಐಎಂಗಳಿಗೆ ನೀಡುತ್ತದೆ.

ಐಐಎಂಗಳ ಆಡಳಿತದಲ್ಲಿ ಸರ್ಕಾರ ಎಷ್ಟರಮಟ್ಟಿಗೆ ಭಾಗಿಯಾಗಬಹುದು ಎಂಬ ವಿಚಾರವಾಗಿ ಐಐಎಂಗಳು ಹಾಗೂ ಸಚಿವಾಲಯದ ನಡುವೆ ನಡೆದ ವಿಸ್ತೃತ ಚರ್ಚೆಯ ಫಲ ಈ ಮಸೂದೆ. ಇದು ಐಐಎಂಗಳಿಗೆ ಅಭೂತಪೂರ್ವ ಎನ್ನುವಂತಹ ಸ್ವಾಯತ್ತೆಯನ್ನು ನೀಡುತ್ತದೆ. ಆದರೆ ಐಐಎಂಗಳು ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ತೊಡಗಬೇಕು ಎನ್ನುವ ಅಂಶ ಮಸೂದೆಯಲ್ಲಿ ಇಲ್ಲ.
 
ಐಐಎಂಗಳ ಬೋಧಕ ಸಿಬ್ಬಂದಿಯ ಜಾತಿ ಹಾಗೂ ವರ್ಗಗಳ ಹಿನ್ನೆಲೆ ಏನು ಎಂಬ ಬಗ್ಗೆ ನಾವು ಮಾಹಿತಿ ಹಕ್ಕು ಕಾಯ್ದೆಯ ಅಡಿ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರವು, ಐಐಎಂಗಳಲ್ಲಿ ಸಾಮಾಜಿಕ ವೈವಿಧ್ಯ ಇಲ್ಲವೆಂಬುದನ್ನು ತೋರಿಸಿಕೊಟ್ಟಿದೆ.

ಈ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ (2016ರ ಜೂನ್‌ನಿಂದ 2017ರ ಫೆಬ್ರುವರಿ  ನಡುವಣ ಅವಧಿ) ಹದಿಮೂರು ಐಐಎಂಗಳಲ್ಲಿ ಮಾತ್ರ ಬೋಧಕ ಸಿಬ್ಬಂದಿಗೆ ಸಂಬಂಧಿಸಿದ ಶಾಶ್ವತ ಸಂಘಗಳು ಇದ್ದವು. ಈ ಪೈಕಿ ಆರು ಐಐಎಂಗಳು ಮಾತ್ರ (ಇಂದೋರ್, ಕೋಯಿಕ್ಕೋಡ್, ರೋಹ್ಟಕ್, ರಾಯಪುರ, ರಾಂಚಿ ಮತ್ತು ಕಾಶಿಪುರ) ನಾವು ಕೇಳಿದ ಮಾಹಿತಿ ನೀಡಿದವು.

ಇನ್ನುಳಿದವು ‘ನಮ್ಮ ಬಳಿ ಈ ಮಾಹಿತಿ ಇಲ್ಲ’ ಎಂದವು ಅಥವಾ ಉತ್ತರವನ್ನೇ ನೀಡಲಿಲ್ಲ. ಉತ್ತರ ನೀಡಿದ ಆರು ಐಐಎಂಗಳಲ್ಲಿನ 233 ಬೋಧಕ ಸಿಬ್ಬಂದಿ ಪೈಕಿ ಇಬ್ಬರು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರು, ಐದು ಜನ ಮಾತ್ರ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರು.

ಆರೂ ಐಐಎಂಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಸೇರಿದ ಒಬ್ಬ ಬೋಧಕ ಸಿಬ್ಬಂದಿಯೂ ಇಲ್ಲ. ನಮಗೆ ಉತ್ತರ ಕೊಡದ ಇತರ ಐಐಎಂಗಳಿಂದ ಅನೌಪಚಾರಿಕವಾಗಿ ಪಡೆದ ಮಾಹಿತಿ ಅನ್ವಯ, ಅವುಗಳಲ್ಲಿ ಕೂಡ ಸಾಮಾಜಿಕ ವೈವಿಧ್ಯ ತೀರಾ ಕಡಿಮೆ ಎಂಬುದು ಗೊತ್ತಾಯಿತು.
 
ಐಐಎಂಗಳು ಮತ್ತು ಸಚಿವಾಲಯದ ನಡುವೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ, ಬೋಧಕ ಹುದ್ದೆಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರದ ಪ್ರಸ್ತಾಪ ಆದಾಗಲೆಲ್ಲ ಐಐಎಂಗಳು ‘ನಾವು ನಿಸ್ಸಹಾಯಕರು, ಬೋಧಕ ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳು ದುರ್ಬಲ ವರ್ಗಗಳಲ್ಲಿ ಸಿಗುತ್ತಿಲ್ಲ, ಹಾಗಾಗಿ ಮೀಸಲಾತಿ ಕಲ್ಪಿಸಲು ಆಗದು’ ಎನ್ನುತ್ತಿದ್ದವು.

ಐಐಎಂಗಳ ಈ ಮಾತನ್ನು ಮಸೂದೆ ಒಪ್ಪಿರುವಂತೆ ಭಾಸವಾಗುತ್ತದೆ. ಏಕೆಂದರೆ ಮೀಸಲಾತಿಗೆ ಸಂಬಂಧಿಸಿದ ಅವಕಾಶಗಳು ಏನಿರಬೇಕು ಎಂಬುದನ್ನು ಆಯಾ ಐಐಎಂಗಳಿಗೇ ಬಿಟ್ಟುಬಿಡುವ ಅಂಶ ಮಾತ್ರ ಮಸೂದೆಯಲ್ಲಿ ಇದೆ.

ಸಾಮಾಜಿಕ ವೈವಿಧ್ಯವನ್ನು ಸಾಧಿಸಲು ಐಐಎಂಗಳು ಈ ಹಿಂದೆ ವಿಫಲವಾಗಿರುವ ಕಾರಣ, ಈಗಿನ ಮಸೂದೆಯಲ್ಲಿ ಇರುವ ಅಂಶ ವಿವಿಧ ವರ್ಗಗಳಿಗೆ ಸೇರಿದವರನ್ನು ಬೋಧಕ ಹುದ್ದೆಗಳಿಗೆ ನೇಮಿಸಲು ಸಾಕಾಗದು ಎಂಬುದು ನಮ್ಮ ಭಾವನೆ.
 
ಅಹಮದಾಬಾದ್, ಬೆಂಗಳೂರು ಮತ್ತು ಕಲ್ಕತ್ತಾ ಐಐಎಂಗಳು ಕಳೆದ ಮೂರು ದಶಕಗಳಿಂದ ಪಿಎಚ್‌.ಡಿ ಪದವಿ ನೀಡುತ್ತಿವೆ. ಬೋಧಕರಿಗೆ ಸಂಬಂಧಿಸಿದ ಶಾಶ್ವತ ಸಂಘಗಳನ್ನು ಹೊಂದಿರುವ 13 ಐಐಎಂಗಳಲ್ಲಿನ ಶೇಕಡ 31ರಷ್ಟು ಬೋಧಕರು ಐಐಎಂಗಳಿಂದಲೇ ಪಿಎಚ್‌.ಡಿ ಪದವಿ ಪಡೆದಿದ್ದಾರೆ.
 
ಬೋಧಕ ಸಿಬ್ಬಂದಿ ಸಮಾಜದ ವಿವಿಧ ವರ್ಗಗಳಿಂದ ಬಂದವರಾಗಿರಬೇಕು ಎಂಬ ವಿಚಾರದಲ್ಲಿ ಐಐಎಂಗಳು ಗಂಭೀರವಾಗಿದ್ದಿದ್ದರೆ, ಪಿಎಚ್‌.ಡಿ ಪದವಿಗೆ ಅವು ಸಮಾಜದ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದವು. ಆಗ ಬೋಧಕ ಹುದ್ದೆಗಳಿಗೆ ವಿವಿಧ ವರ್ಗಗಳ ಅಭ್ಯರ್ಥಿಗಳು ಲಭ್ಯವಾಗುತ್ತಿದ್ದರು. 
 
ಐಐಎಂಗಳ ಒಟ್ಟು ಬೋಧಕ ಸಿಬ್ಬಂದಿಯಲ್ಲಿ ಶೇಕಡ 26ರಷ್ಟಕ್ಕಿಂತ ಹೆಚ್ಚಿನವರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿದವರು ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಇವರಲ್ಲಿ ಹಲವರು ವಿದೇಶಿ ವಿಶ್ವವಿದ್ಯಾಲಯಗಳು ಅನುಸರಿಸುವ ಮೀಸಲಾತಿ ಸೌಲಭ್ಯದ ಅವಕಾಶ ಪಡೆದವರು. ಬೋಧಕ ಸಿಬ್ಬಂದಿ ಸಮಾಜದ ವೈವಿಧ್ಯಮಯ ವರ್ಗಗಳಿಗೆ ಸೇರಿದವರಾಗಿರಬೇಕು ಎಂಬ ವಿಚಾರದಲ್ಲಿ ಇವರಿಗೆ ಹೆಚ್ಚಿನ ವಿವರಣೆ ಬೇಕಾಗಿಲ್ಲ.
 
ಸಾಮಾಜಿಕ ಒಳಗೊಳ್ಳುವಿಕೆಯ ವಿಚಾರದಲ್ಲಿ ಐತಿಹಾಸಿಕ ನಿರ್ಲಕ್ಷ್ಯ ಹಾಗೂ ಹೊಸ ಮಸೂದೆಯು ಸಂಸತ್ತಿನ ಅನುಮೋದನೆ ಪಡೆದ ನಂತರ ಐಐಎಂಗಳಿಗೆ ಸಿಗುವ ದೊಡ್ಡ ಮಟ್ಟದ ಸ್ವಾಯತ್ತೆಯ ಕಾರಣ, ಸಾಮಾಜಿಕ ಒಳಗೊಳ್ಳುವಿಕೆಯ ವಿಚಾರದಲ್ಲಿ ಎದ್ದುಕಾಣುವಂತಹ ಕ್ರಮಗಳನ್ನು ಕೈಗೊಳ್ಳುವ ಹೊಣೆ ಈಗ ಐಐಎಂಗಳ ಮೇಲೆಯೇ ಇದೆ.
 
ಐಐಎಂಗಳು ಭಾರತದಲ್ಲಿ ಆಡಳಿತ ನಿರ್ವಹಣೆಯ ಅತ್ಯುನ್ನತ ಕಲಿಕಾ ಕೇಂದ್ರಗಳು. ಅವುಗಳಿಗೆ ‘ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ’ಗಳು ಎಂಬ ಮಾನ್ಯತೆ ಸಿಗುವ ಸಾಧ್ಯತೆ ಇದೆ. ಸಾಮಾಜಿಕ ಒಳಗೊಳ್ಳುವಿಕೆಯನ್ನು ಪೋಷಿಸುವ ಮೂಲಕ ಈ ಸ್ಥಾನಕ್ಕೆ ತಕ್ಕಂತೆ ವರ್ತಿಸುವ ಹೊಣೆಯೂ ಇದೆ.
 
ಸಮಾನ ಪ್ರಾತಿನಿಧ್ಯ ಎಂಬ ಬೇಡಿಕೆ ಭಾರತೀಯ ಸಮಾಜದಲ್ಲಿ ಹೆಚ್ಚುತ್ತಿದೆ, ಬಲಗೊಳ್ಳುತ್ತಿದೆ. ಆದರೆ ಐಐಎಂಗಳು ಈ ವಿಚಾರದಲ್ಲಿ ಹಿಂದುಳಿದರೆ, ಯಥಾಸ್ಥಿತಿಯನ್ನು ಕಾಯ್ದುಕೊಂಡರೆ ಅವುಗಳ ಯುಕ್ತಾಯುಕ್ತತೆಯ ಬಗ್ಗೆಯೇ ಪ್ರಶ್ನೆಗಳು ಮೂಡುವ ಅಪಾಯ ಇದೆ.

ಐಐಎಂಗಳು ಎಲ್ಲ ವರ್ಗಗಳ ಜನರನ್ನು ಒಳಗೊಳ್ಳದಿದ್ದರೆ ಈ ಸಂಸ್ಥೆಗಳಿಗೆ ನೀಡಿರುವ ಉನ್ನತ ಸ್ಥಾನವನ್ನು ಪ್ರಶ್ನಿಸುವ ಪ್ರಮಾಣ ಹೆಚ್ಚುತ್ತದೆ. ಹಾಗಾಗಿ ಐಐಎಂಗಳು ಸಾಮಾಜಿಕ ಒಳಗೊಳ್ಳುವಿಕೆಗೆ ತೆರೆದುಕೊಳ್ಳಲೇಬೇಕು. ತಮ್ಮ ಬೋಧಕ ಸಿಬ್ಬಂದಿಯಲ್ಲಿ ಇರುವ ವೈವಿಧ್ಯದ ಕೊರತೆಯನ್ನು ನೀಗಿಸಲು ಅವು ಕ್ರಮ ಕೈಗೊಳ್ಳಬೇಕು.
 
ಬೋಧಕ ಸಿಬ್ಬಂದಿ ವರ್ಗದಲ್ಲಿ ಎಲ್ಲ ಹಿನ್ನೆಲೆಯವರೂ ಇರುವಂತೆ ಮಾಡುವುದಕ್ಕೆ ನಿರ್ದಿಷ್ಟ ಕ್ರಮಗಳು ಏನು ಎಂಬುದನ್ನು ಐಐಎಂಗಳ ತೀರ್ಮಾನಕ್ಕೆ ಬಿಡಬಹುದಾದರೂ, ಅಂಥದ್ದೊಂದು ಕ್ರಮ ಕೈಗೊಳ್ಳಬೇಕೇ ಬೇಡವೇ ಎಂಬ ಆಯ್ಕೆಯನ್ನು ಅವುಗಳಿಗೆ ಬಿಡಲಾಗದು.

ಹಾಗಾಗಿ ಈ ನಿಟ್ಟಿನಲ್ಲಿ ಐಐಎಂಗಳು ಪ್ರಗತಿ ತೋರಿಸಬೇಕು ಎಂಬ ಅಂಶವನ್ನು ಮಸೂದೆಯಲ್ಲಿ ಅಳವಡಿಸಬೇಕು. ಆ ಕೆಲಸ ಮಾಡದಿದ್ದರೆ ಐಐಎಂಗಳನ್ನು ಉತ್ತರದಾಯಿ ಆಗಿಸಬೇಕು.
 
ಲೇಖಕರು ಬೆಂಗಳೂರಿನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಯಲ್ಲಿ (ಐಐಎಂ–ಬಿ) ಕೆಲಸ ಮಾಡುತ್ತಾರೆ. ಇಲ್ಲಿ ವ್ಯಕ್ತವಾಗಿರುವುದು ಅವರ ವೈಯಕ್ತಿಕ ಅಭಿಪ್ರಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT