ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಗಳಿಗೆ ದಂಡ ಸಲ್ಲ

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಮಹಾನಗರಗಳಲ್ಲಿ ತಿಂಗಳಿಗೆ ₹ 5,000 ಕನಿಷ್ಠ ಠೇವಣಿ ಮೊತ್ತ ಕಾಯ್ದುಕೊಳ್ಳದೇ ಇರುವ ತನ್ನ ಉಳಿತಾಯ ಖಾತೆದಾರರಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ದಂಡ ವಿಧಿಸಲು ಮುಂದಾಗಿರುವುದು ಅಸಮಂಜಸ. ಅಲ್ಲದೆ ಇದು ಸಹ ಒಂದು ರೀತಿಯಲ್ಲಿ ನೋಟು ರದ್ದತಿಯಿಂದಾದ ಪರಿಣಾಮವನ್ನೇ ಉಂಟು ಮಾಡುತ್ತದೆ.

ಏಕೆಂದರೆ ಇಲ್ಲಿ ಸಂಪೂರ್ಣ ಐದು ಸಾವಿರ ರೂಪಾಯಿ ಮಾಲೀಕನ ಕಣ್ಣ ಮುಂದೆ ಇದ್ದರೂ ಆತ ಅದನ್ನು ಬಳಸುವಂತಿಲ್ಲ. ಇದರಿಂದ ಕೆಳ ಮಧ್ಯಮ ವರ್ಗದ ಜನರಿಗೆ ಭಾರೀ ಅನ್ಯಾಯವಾಗುತ್ತದೆ. ಮಹಾನಗರಗಳಲ್ಲಿ ಕೆಳ ಮಧ್ಯಮ ವರ್ಗದ ಜನರೂ ಇದ್ದಾರೆ ಎಂಬುದನ್ನು ಎಸ್‌ಬಿಐ ಮರೆತಂತಿದೆ. 
 
ಕೇಂದ್ರ ಸರ್ಕಾರದ ಸೂಚನೆಯಂತೆ, ನಗದುರಹಿತ ವ್ಯವಹಾರಕ್ಕೆ ಒಲ್ಲದ ಮನಸ್ಸಿನಿಂದಲೇ ಒಗ್ಗಿಕೊಳ್ಳುತ್ತಿರುವ ಜನಸಾಮಾನ್ಯರಿಗೆ ಬ್ಯಾಂಕುಗಳು ಸೇವಾ ಶುಲ್ಕ ವಿಧಿಸುವುದು ಒಂದು ಸಹಿಸಲಾಗದ ಬರೆ.
 
ಅಷ್ಟಕ್ಕೂ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದ ಖಾತೆಗಳನ್ನು ನಿರ್ವಹಿಸುವುದು ಸಣ್ಣ ಮೊತ್ತದ ಖಾತೆಗಳನ್ನು ನಿರ್ವಹಿಸುವುದಕ್ಕಿಂತ ಕಷ್ಟದ ಕೆಲಸ. ಆದರೆ ಇಲ್ಲಿ ತಿಮಿಂಗಿಲಗಳನ್ನು ಹಿಡಿಯದೆ ಸಣ್ಣ ಮೀನಿಗೆ ಬಲೆ ಬೀಸಿರುವುದು ಆಶ್ಚರ್ಯಕರವಾಗಿದೆ. 
 
ಮಹಾನಗರಗಳಲ್ಲಿ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವ ಸಾಕಷ್ಟು ಕುಟುಂಬಗಳಿವೆ. ಅಂತಹವರೆಲ್ಲರೂ 5 ಸಾವಿರ ರೂಪಾಯಿಯನ್ನು ‘ಸತ್ತ ಮೊತ್ತ’ವನ್ನಾಗಿ ಇಡಬೇಕಾಗಿರುವುದು ದುರದೃಷ್ಟಕರ. 
ಗೋಪಾಲ ನಾಯ್ಕ, ಬೆಂಗಳೂರು
 
ಮೋದಿ ತಂತ್ರಗಾರಿಕೆ
ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದತಿ ಕ್ರಮವು ಬಡವರ ವಿರೋಧಿ ಎಂಬಂತೆ ಬಿಂಬಿತವಾಗಿದ್ದರೂ ಇತ್ತೀಚಿನ ಉತ್ತರಪ್ರದೇಶ ಚುನಾವಣೆಯು ಬಿಜೆಪಿಗೆ ಯಾರೂ ಊಹಿಸಿರದಿದ್ದ ರೀತಿಯಲ್ಲಿ ಜನಬೆಂಬಲ ತಂದುಕೊಟ್ಟಿದೆ.

ಈಗ ಯೋಗಿ ಆದಿತ್ಯನಾಥ್‌ ಅವರನ್ನು ಅಲ್ಲಿನ ಮುಖ್ಯಮಂತ್ರಿಯನ್ನಾಗಿ ಮೋದಿ ನೇಮಕ ಮಾಡಿದ್ದಾರೆ. ತಮ್ಮ ಈವರೆಗಿನ ನಡೆನುಡಿಯಿಂದ ಪಕ್ಕಾ ಹಿಂದುತ್ವವಾದಿ ಎಂದೇ ಬಿಂಬಿತವಾಗಿರುವ ನಾಯಕನನ್ನು ಮುಖ್ಯಮಂತ್ರಿ ಮಾಡಿರುವುದರಿಂದ, ಜಾತಿ, ಧರ್ಮ, ಪ್ರದೇಶಗಳ ಸಂಕುಚಿತ ಭಾವನೆಯನ್ನು ಮೀರಿ ವೋಟು ನೀಡಿ ಗೆಲ್ಲಿಸಿದ ಜನರಿಗೆ ಮೋಸ ಮಾಡಿದಂತೆ, ಅಲ್ಲದೆ ‘ಎಲ್ಲರ ವಿಕಾಸವೇ ನಮ್ಮ ಗುರಿ’ ಎಂಬ ಚುನಾವಣಾ ಘೋಷಣೆಗೆ ತಿಲಾಂಜಲಿ ಇತ್ತಂತೆ ಎಂದೇ ಅನೇಕರು ಭಾವಿಸಿದ್ದಾರೆ. 
 
ಆದರೆ, 2019ರ ಸಾರ್ವತ್ರಿಕ ಚುನಾವಣೆಯನ್ನು ಗೆಲ್ಲುವತ್ತ ಗಮನ ಹರಿಸಿರುವ  ಮೋದಿ, ತಮ್ಮನ್ನು ಸೋಲಿಸುವ ಸಲುವಾಗಿ ಎಲ್ಲ ವಿರೋಧ ಪಕ್ಷಗಳೂ ಒಗ್ಗೂಡಿರುವಾಗ ಮತದಾರರರ ಧ್ರುವೀಕರಣಕ್ಕೆ ಕೈಹಾಕಿದ್ದಾರೆ. ಅವರ ಪ್ರತಿ ನಡೆಯಲ್ಲೂ ಒಂದು ಯುಕ್ತಿ ಇರುವಂತೆ ತೋರುತ್ತಿದೆ.
 
ಕಾವಿ ತೊಟ್ಟ ವ್ಯಕ್ತಿಗೆ ರಾಜ್ಯದ ಜನರ ಯೋಗಕ್ಷೇಮ ನೋಡಿಕೊಳ್ಳುವ ಹೊಣೆ ಹೊರಿಸಿರುವುದರಲ್ಲಿಯೇ ಕೋಮು ಧೋರಣೆಯಿಂದ ಪಕ್ಷವನ್ನು ಹೊರತರುವ ತಂತ್ರ ಅಡಗಿದೆ.

ಅಲ್ಪಸಂಖ್ಯಾತರನ್ನು ಓಲೈಸದೆ ಅವರನ್ನು ಮುಖ್ಯವಾಹಿನಿಗೆ ತಂದು, ಬ್ರಿಟಿಷರ ಒಡೆದು ಆಳುವ ನೀತಿ ಮತ್ತು ವೋಟಿಗಾಗಿ ಅದನ್ನೇ ಜಾರಿಯಲ್ಲಿರುವಂತೆ ನೋಡಿಕೊಂಡ ವಿರೋಧ ಪಕ್ಷದ ಯೋಜನೆಯನ್ನು ಉಲ್ಟಾ ಮಾಡುವ ತಂತ್ರವೂ ಇದಾಗಿರಬಹುದು.
ಸತ್ಯಬೋಧ, ಬೆಂಗಳೂರು
 
ಸ್ವಜನಪಕ್ಷಪಾತದ ನಿದರ್ಶನ
ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ನಾಲ್ವರು ಪುತ್ರಿಯರು ನಿಯಮ ಉಲ್ಲಂಘಿಸಿ ನಿವೇಶನ ಪಡೆದಿರುವುದು ವರದಿಯಾಗಿದೆ (ಪ್ರ.ವಾ., ಮಾರ್ಚ್‌ 20). ಇದು ಯಾವ ನೆಲೆಯಿಂದ ನೋಡಿದರೂ ಸ್ವಜನಪಕ್ಷಪಾತದ ನಿದರ್ಶನ.  ನೌಕರರಿಗಾಗಿ ಇರುವ ಸಹಕಾರ ಸಂಘವನ್ನು ನೌಕರರಲ್ಲದವರು ಬಳಸಿಕೊಂಡು ಪ್ರಯೋಜನ ಪಡೆಯುವುದು ಮತ್ತು ಅದನ್ನು ಸರಿ ಎಂದು ಸಮರ್ಥಿಸಿಕೊಳ್ಳುವುದು,  ಇದಕ್ಕಾಗಿ ನಿಯಮವನ್ನೇ ತಿದ್ದುಪಡಿ ಮಾಡುವುದು, ಆ ಸಂಘದ ಸದಸ್ಯರು ಗಾಢನಿದ್ರೆಯಲ್ಲಿರುವುದು ಎಲ್ಲವೂ ವಿವಾದಿತವೇ ಆಗಿವೆ.
ಸಾಮಗ ದತ್ತಾತ್ರಿ, ಬೆಂಗಳೂರು
 
ಕೊಳ್ಳುಬಾಕತನಕ್ಕೆ ಚಾಟಿ
‘ಅರಿವಿನ ಗುರು ಜುಂಜಪ್ಪನೆಂಬ ಹಸಿರುದೈವ’ ಎಂಬ ಪ್ರಸನ್ನ ಅವರ ಲೇಖನ (ಪ್ರ.ವಾ., ಮಾರ್ಚ್‌ 18), ಕೊಳ್ಳುಬಾಕತನದ ಪುರೋಹಿತವಾದಿಗಳು ಹಾಗೂ ಅಭಿವೃದ್ಧಿ ನೆಪದಲ್ಲಿ ಮಾನವ-ಪ್ರಕೃತಿ ಸಂಪತ್ತನ್ನು ಕೊಳ್ಳೆಹೊಡೆದು ಇಡೀ ಭೂಮಂಡಲವನ್ನೇ ಕಲುಷಿತ ಮಾಡುತ್ತಿರುವ ಆಧುನಿಕ ಅಭಿವೃದ್ಧಿಕಾರರಿಗೆ ಚಾಟಿ ಏಟು ನೀಡುವಂತಿದೆ.

ಪ್ರತಿವರ್ಷ ಶಿರಾ ಸೀಮೆಯಲ್ಲಿ ಕಳವೋರಹಳ್ಳಿ ಬಳಿ ಇರುವ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪನ ಗುಡ್ಡೆ (ಬೇವಿನಹಳ್ಳಿ) ಬಳಿ ಕೆಲವು ಯುವಮಿತ್ರರು ಸೇರಿ  ಶಿವರಾತ್ರಿಯ ದಿನ ‘ಜುಂಜಪ್ಪನ ಶಿವೋತ್ಸವ’ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ಆಧುನಿಕ ಪರಿಕರಗಳಿಲ್ಲದೆ ಶಿಷ್ಟ, ಬುಡಕಟ್ಟು ನೆಲೆಯಲ್ಲೇ ಸರಳವಾಗಿ ಅಚರಿಸಿಕೊಂಡು ಬರುತ್ತಿರುವ ಕಾರ್ಯಕ್ರಮ ಇದು.
 
ಜುಂಜಪ್ಪ ತನ್ನ ಮೂಲ ಸಮುದಾಯದವರಿಂದಲೇ ಅವಕೃಪೆಗೆ ಒಳಗಾಗುತ್ತಿರುವ ಈ ಹೊತ್ತಿನಲ್ಲಿ ಈ ಕಾರ್ಯಕ್ರಮ ಜುಂಜಪ್ಪನ ಪಶುಪಾಲನಾ ಹಸಿರುತತ್ವಕ್ಕೆ ಒಂದು ಮೆರುಗು ಕೊಟ್ಟಿದೆ. ಏಕೆಂದರೆ ಭಾರತದಲ್ಲಿ ವಿಭೂತಿ- ನಾಮ ಮತ್ತು ಶಿವ- ವಿಷ್ಣು (ಕೈಲಾಸ- ವೈಕುಂಠ) ಸಂಸ್ಕೃತಿಗಳ ಮಧ್ಯೆ ಶೀತಲ ಸಮರ ನಡೆಯುತ್ತಿರುವುದು ಪ್ರಜ್ಞಾವಂತರಿಗೆ ತಿಳಿಯದ ವಿಚಾರವೇನಲ್ಲ.
 
ಆದರೆ ಶಿಷ್ಟ ಪರಂಪರೆ ಯಾವುದೇ ಢೋಂಗಿತನ, ಅದ್ಧೂರಿತನಗಳಿಲ್ಲದೆ ಸರಳವಾಗಿದೆ. ವೈದಿಕ ಪರಂಪರೆ ವೈಕುಂಠಕ್ಕೂ ಭೂಮಂಡಲಕ್ಕೂ ನಡುವೆ ಸೇತುವೆಯಾಗಿ ಜನಸಾಮಾನ್ಯರಲ್ಲಿ ಭ್ರಾಂತಿಯನ್ನು ಉಂಟು ಮಾಡುತ್ತಿದೆ. ಮೇಲೆಲ್ಲೋ ವೈಕುಂಠ ಇದೆಯೋ ಇಲ್ಲವೋ. ಆದರೂ ಪ್ರತಿ ವರ್ಷ ‘ವೈಕುಂಠದ ದ್ವಾರಬಾಗಿಲು’ ತೆರೆದಿದೆ ಎಂದು ದೇವಾಲಯಗಳ ಮುಂದೆ ದರ್ಶನ ಪಡೆಯಲು ಲಕ್ಷಾಂತರ ಮಂದಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲುತ್ತಾರೆ. ಅಂದು ಮರಣವನ್ನಪ್ಪಿದರೆ ಸ್ವರ್ಗ ಪ್ರಾಪ್ತಿ ಎಂದು ಜನರಲ್ಲಿ ಭ್ರಾಂತಿಯನ್ನು ತುಂಬಲಾಗುತ್ತಿದೆ.
 
ಭಾರತದಲ್ಲಿ ಧಾರ್ಮಿಕ ವಿಚಾರದಲ್ಲಿನ ಅತಿಯಾದ ಅಂಧ ಶ್ರದ್ಧೆ, ವಾಮಮಾರ್ಗಗಳ ಮೂಲಕ ಹಣ ಸಂಪಾದಿಸಿದವರ ಭಕ್ತಿ, ಬಹುಬೇಗ ಶ್ರೀಮಂತರಾಗ ಬಯಸುವ ಮಧ್ಯಮ ವರ್ಗದ ಜನಸಮುದಾಯದ ಆಸೆ ಹೆಚ್ಚಾಗಿದೆ. ಇದರಿಂದ  ‘ಅಕ್ಷಯ ತೃತೀಯದ ದಿನ ಚಿನ್ನ ಕೊಂಡರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲಿರುವ ಹಣವನ್ನೆಲ್ಲ ಪೂಜೆ ಮಾಡಿದರೆ ದ್ವಿಗುಣವಾಗುತ್ತದೆ ಎಂಬಂತಹ ಭ್ರಾಂತಿಗಳನ್ನು ಹುಟ್ಟುಹಾಕುವಲ್ಲಿ ಆಧುನಿಕ ಮಾಧ್ಯಮಗಳು ಮತ್ತು ವೈದಿಕರು ಯಶಸ್ವಿಯಾಗಿದ್ದಾರೆ. 
 
ವಾಸ್ತವದಲ್ಲಿ, ಭೂಮಿಯ ಮೇಲಿನ ಕೈಲಾಸ ಪರ್ವತ ಚೀನಾದ ಅಧೀನದಲ್ಲಿದ್ದು ಅದನ್ನು ಅಭಿವೃದ್ಧಿ ಪಡಿಸುವುದು ಅಥವಾ ಬಹುಪಾಲು ಭಕ್ತರನ್ನು ಹೊಂದಿರುವ ಭಾರತ ಅದರ ಜವಾಬ್ದಾರಿ ವಹಿಸಿಕೊಳ್ಳುವ ಕುರಿತು ಮಾತ್ರ ಇವರ್‍ಯಾರೂ  ಸೊಲ್ಲೆತ್ತುವುದಿಲ್ಲ.
 
ಕರ್ನಾಟಕದ ಯಾವ ದೇವಾಲಯಕ್ಕೆ ಹೋದರೂ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬನ್ನಿ, ತಿರುಪತಿಗೆ ಹೋಗಿ ಮುಡಿಕೊಟ್ಟು ಬನ್ನಿ ಎಂದು ಹೇಳುವ ಪುರೋಹಿತ ವರ್ಗ, ಅಪ್ಪಟ ಭೂ ಸುಧಾರಣಾವಾದಿಯಾಗಿದ್ದ ಜುಂಜಪ್ಪ, ಹಾರನಕಣಿವೆ ರಂಗಪ್ಪನಂತಹ ಹಾವು-ಚೇಳುಗಳ ಒಡೆಯ, ಮಲೆಮಹದೇಶ್ವರ, ಮಂಟೇಸ್ವಾಮಿ, ಪಾಪನಾಯಕ, ತಿಪ್ಪೇರುದ್ರಸ್ವಾಮಿ ಇಂತಹವರಿಗೆ ಪೂಜೆ ಸಲ್ಲಿಸಿ ಎಂದು ಭಕ್ತರಿಗೆ ಹೇಳುವುದಿಲ್ಲ. ಆದರೂ ಇಂದಿಗೂ ಶಿಷ್ಟ ಸಮುದಾಯಗಳ ಪ್ರಜ್ಞಾವಂತರು ಎಚ್ಚರಗೊಳ್ಳದಿರುವುದು ದುರಂತವೇ ಸರಿ.
ಜಯರಾಮ ಕೆ., ಪೆನ್ನೋಬನಹಳ್ಳಿ, ಪಾವಗಡ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT