ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೋರೈಡ್‌ಯುಕ್ತ ಕುಡಿವ ನೀರು ಪೂರೈಕೆ

ಮೂಲಸೌಕರ್ಯವಿಲ್ಲದೆ ಪರದಾಟ; ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ
Last Updated 21 ಮಾರ್ಚ್ 2017, 12:35 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಟ್ಟಿ ಗ್ರಾಮ ಪಂಚಾಯಿತಿ ತಾಲ್ಲೂಕಿನಲ್ಲಿ ಅತಿ ದೊಡ್ಡ ಮತ್ತು ಹೆಚ್ಚು ಜನ ಸಂಖ್ಯೆ ಹೊಂದಿರುವ ಗ್ರಾಮ. 12 ವಾರ್ಡ್‌ಗಳಿಗೆ 42 ಸದಸ್ಯರಿದ್ದಾರೆ. ಸುಮಾರು 25 ಸಾವಿರ ಜನ ಸಂಖ್ಯೆಇದೆ. ಹೆಚ್ಚಿನ ಸಂಖ್ಯೆಯ ಗಣಿ ಕಾರ್ಮಿಕರು ವಾಸವಾಗಿದ್ದಾರೆ. 

ಗ್ರಾಮದ ಕೊಳವೆ ಬಾವಿಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಸಿಗುತ್ತದೆ. ಈ ನೀರು ಕುಡಿಯಲು ಯೋಗ್ಯವಿಲ್ಲ. ಈ ಸಮಸ್ಯೆ ಪರಿಹಾರ ಉದ್ದೇಶದಿಂದ ಜಲನಿರ್ಮಲ ಯೋಜನೆಯಡಿ ₹20 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲಾಯಿತು. ಆದರೆ ಅಸಮರ್ಪಕ ನಿರ್ವಹಣೆಯಿಂದ ಗ್ರಾಮಸ್ಥರ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.  ಈ ಯೋಜನೆ ಸಂಪೂರ್ಣ ವಿಫಲವಾಗಿದೆ. ಈ ಮೊದಲಿನಂತೆ 15ರಿಂದ 20 ದಿನಕ್ಕೆ ಒಮ್ಮೆ ಅಶುದ್ಧ ನೀರು ಪೂರೈಸಲಾಗುತ್ತಿದೆ. ಚರಂಡಿ ನೀರು ಸೇರಿ ಬಳಸಲು ಯೋಗ್ಯವಿಲ್ಲದಷ್ಟು ಕಲುಷಿತಗೊಂಡಿದೆ.

ಗ್ರಾಮದ ಒಳ ರಸ್ತೆಗಳು ಅಭಿವೃದ್ಧಿ ಹೊಂದಿಲ್ಲ. ವರ್ಷಕ್ಕೊಮ್ಮೆ ಮರಂ ಹಾಕಲಾಗುತ್ತದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ನಿಂತು ಗಲೀಜು ವಾತಾವರಣ ನಿರ್ಮಾಣವಾಗಿದೆ. ಸ್ವಚ್ಛತೆ ಕಡೆ ಪಂಚಾಯಿತಿ ಆಡಳಿತ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಹನುಮಂತ, ಸುರೇಶ, ಹುಲಗಮ್ಮ, ಗುಂಡಪ್ಪ, ಗಂಗಮ್ಮ, ಪಾರ್ವತಮ್ಮ, ಶಾಂತಮ್ಮ ಮತ್ತು ರಾಮಣ್ಣ, ಹೇಮಾದರಿ ಆರೋಪಿಸಿದರು.

ಪ್ರತಿ ಭಾನುವಾರ ನಡೆಯುವ ವಾರದ ಸಂತೆ ಮೈದಾನ ತಿಪ್ಪೆಗುಂಡಿಯಾಂತಾಗಿದೆ. ಸಂತೆ ಹರಾಜಿನಿಂದ ಪ್ರತಿ ವರ್ಷ ಆಡಳಿತಕ್ಕೆ  ₹9ರಿಂದ 10 ಲಕ್ಷ ಆದಾಯ ಬರುತ್ತದೆ. ಆದರೆ ಸಂತೆ ಮೈದಾನ ಅಭಿವೃದ್ಧಿ ಮಾಡುತ್ತಿಲ್ಲ. ತ್ಯಾಜ್ಯ ತರಕಾರಿ ಕೊಳೆತು ಗಬ್ಬು ನಾರುತ್ತದೆ. ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗಲೀಜಿನಲ್ಲಿ ಕುಳಿತು ವ್ಯಾಪಾರ ಮಾಡಬೇಕು.

ಈ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ಗಮನಕ್ಕೆ ತಂದರೂ ಕ್ರಮ ಜರುಗಿಸಿಲ್ಲ ಎಂದು ಎನ್‌.ಗುರಪಾದಪ್ಪ ಆರೋಪಿಸುತ್ತಾರೆ. 

ಕುಡಿಯುವ ನೀರಿನ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು. ಕಾಂಕ್ರಿಟ್‌ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

* ಕುಡಿಯುವ ನೀರಿಗೆ ಹಟ್ಟಿ ಚಿನ್ನದ ಗಣಿ ಕ್ಯಾಂಪ್‌ ನಲ್ಲಿಗಳೇ ಗತಿ. ಕಳಪೆ ಪೈಪ್‌ಗಳು ಒಡೆದು ಚರಂಡಿಯ ಕೊಳಚೆ ನೀರು ಸೇರಿ ನೀರು ಕಲುಷಿತ ಗೊಂಡಿದೆ. -ಅಮರೇಶ, ಗ್ರಾಮಸ್ಥ

-ಎಂ.ಖಾಸಿಂಅಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT