ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ವಿವಾದ ಪರಿಹಾರಕ್ಕೆ ಸಂಧಾನ: ‘ಸುಪ್ರೀಂ’ ಸಲಹೆ

ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದ
Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ:  ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.
 
ಇದು ಭಾವನೆ ಮತ್ತು ಧರ್ಮಕ್ಕೆ ಸಂಬಂಧಿಸಿದ ವಿಚಾರ. ಹಾಗಾಗಿ ಇದನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದೇ ಉತ್ತಮ. ಸೌಹಾರ್ದಯುತವಾದ ಪರಿಹಾರ ಸಾಧ್ಯವಾಗದಿದ್ದರೆ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್‌ ಅವರ ನೇತೃತ್ವದ ಪೀಠ ಹೇಳಿದೆ.
 
ಅಯೋಧ್ಯೆಯ ಚಾರಿತ್ರಿಕ ನಿವೇಶನ ವಿವಾದದ ಮಾತುಕತೆಯಲ್ಲಿ ಎರಡೂ ಬಣಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದೂ ಪೀಠ ತಿಳಿಸಿದೆ. ಎರಡೂ ಧರ್ಮಗಳಿಗೆ ಸೇರಿದ ಜನರು ಆಯ್ಕೆ ಮಾಡಿದ ಸಂಧಾನಕಾರರ ಚರ್ಚೆಯ ಸಂದರ್ಭದಲ್ಲಿ ಅವರೊಂದಿಗೆ ಕುಳಿತುಕೊಳ್ಳಲು ಸಿದ್ಧ ಎಂದೂ ಖೇಹರ್‌ ತಿಳಿಸಿದ್ದಾರೆ.
 
‘ಚರ್ಚೆಯ ಸಂದರ್ಭದಲ್ಲಿ ನಾನು ಬೇಕು ಎಂದು ನೀವು ಬಯಸಿದರೆ ಬರಲು ಸಿದ್ಧ. ನಾನು ಬೇಡ ಎಂದಾದರೆ ಬರುವುದಿಲ್ಲ. ಸುಪ್ರೀಂ ಕೋರ್ಟ್‌ನ ಬೇರೆ ನ್ಯಾಯಮೂರ್ತಿಗಳು ಬೇಕಿದ್ದರೆ ಅವರನ್ನು ನಿಯೋಜಿಸಲಾಗುವುದು. ಆದರೆ ಎರಡೂ ಬಣದವರು ಒಟ್ಟಿಗೆ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯ’ ಎಂದು ನ್ಯಾಯಮೂರ್ತಿ ಖೇಹರ್‌ ಹೇಳಿದ್ದಾರೆ.
 
ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
 
ಕಳೆದ ಆರು ವರ್ಷಗಳಿಂದ ವಿವಾದಕ್ಕೆ ಸಂಬಂಧಿಸಿದ ಮೇಲ್ಮನವಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. ಹೇಳಿಕೆಗಳನ್ನು ದಾಖಲಿಸುವುದು ಪೂರ್ಣಗೊಂಡಿದ್ದರೂ  ಅಂತಿಮ ವಿಚಾರಣೆಗೆ ದಿನಾಂಕ ನಿಗದಿಯಾಗಿಲ್ಲ. ಹಾಗಾಗಿ ಈ ಅರ್ಜಿಗಳ ತ್ವರಿತ ವಿಚಾರಣೆ ನಡೆಸಬೇಕು ಎಂದು ಸ್ವಾಮಿ ಕೋರಿದ್ದರು. ಇದೇ 31ರಂದು ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಸ್ವಾಮಿ ಅವರಿಗೆ ಪೀಠ ಸೂಚಿಸಿದೆ. 
 
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುದೀರ್ಘವಾದ ಕಾನೂನು ಸಮರ ನಡೆದಿದೆ. ಅಲಹಾಬಾದ್‌ ಹೈಕೋರ್ಟ್‌ 2010ರ ಸೆ.20ರಂದು ನಿವೇಶನವನ್ನು ಮೂರು ಬಣಗಳಿಗೆ ಹಂಚಿತ್ತು. ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ್‌ಲಲ್ಲಾ ಪರ ಬಣಕ್ಕೆ ತಲಾ ಸುಮಾರು 15 ಸಾವಿರ ಚದರ ಅಡಿಯಷ್ಟು ಜಾಗವನ್ನು ನೀಡಿತ್ತು. ಆದರೆ ಈ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. 
 
ಅಯೋಧ್ಯೆಯಲ್ಲಿ ಮಂದಿರ ಮಾತ್ರ: ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಮತ್ತು ಸರಯೂ ನದಿಯ ಇನ್ನೊಂದು ಭಾಗದಲ್ಲಿ ಮಸೀದಿ ನಿರ್ಮಿಸುವ ಮೂಲಕ ಅಯೋಧ್ಯೆ ವಿವಾದ ಪರಿಹರಿಸಬಹುದು ಎಂದು ಸ್ವಾಮಿ ಸಲಹೆ ನೀಡಿದ್ದಾರೆ. ‘ಇಂತಹ ಪರಿಹಾರಕ್ಕೆ ನಾವು ಯಾವಾಗಲೂ ಸಿದ್ಧವಿದ್ದೆವು. ರಾಮ ಜನ್ಮಭೂಮಿ ರಾಮ ಮಂದಿರಕ್ಕೆ ದೊರೆಯಬೇಕು’ ಎಂದು ಸ್ವಾಮಿ ಹೇಳಿದ್ದಾರೆ. 
 
ಯಶಸ್ಸಿನ ಬಗ್ಗೆ ಅನುಮಾನ
ನವದೆಹಲಿ/ಲಖನೌ:ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನ ಯಶಸ್ವಿಯಾಗುವ ಬಗ್ಗೆ ಬಾಬರಿ ಮಸೀದಿ ಕ್ರಿಯಾ ಸಮಿತಿ ಸೇರಿದಂತೆ ಮುಸ್ಲಿಂ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿವೆ.

‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮಧ್ಯಸ್ಥಿಕೆ ವಹಿಸಿಕೊಳ್ಳುವುದಕ್ಕೆ ನಮ್ಮ ಒಪ್ಪಿಗೆ ಇದೆ. ಆದರೆ ವಿವಾದ ನ್ಯಾಯಾಲಯದ ಹೊರಗೆ ಇತ್ಯರ್ಥವಾಗದು. ನ್ಯಾಯಾಲಯ ನಮ್ಮ ವಾದ ಆಲಿಸಲಿ. ವಾದ ಮಂಡಿಸಲು ಸಿದ್ಧರಿದ್ದೇವೆ.

ಆದರೆ ಪ್ರಕರಣವನ್ನು ಹೊರಗಡೆ ಇತ್ಯರ್ಥಪಡಿಸಿಕೊಳ್ಳಲು ನಾವು ಸಿದ್ಧರಿಲ್ಲ’ ಎಂದು ಸಮಿತಿ ಸಂಚಾಲಕ ಜಫರ್ಯಾಬ್ ಜಿಲಾನಿ ಹೇಳಿದರು. ‘1986ರಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಅಲಿ ಮಿಯಾನ್ ನದ್ವಿ ಹಾಗೂ ಕಂಚಿ ಕಾಮಕೋಟಿ ಶ್ರೀಗಳ ನಡುವೆ ಮಾತುಕತೆ ನಡೆಯಿತು. ಅದು ಫಲ ನೀಡಲಿಲ್ಲ.

1990ರಲ್ಲಿ ಪ್ರಧಾನಿ ಚಂದ್ರಶೇಖರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಹಾಗೂ ಭೈರೋನ್ ಸಿಂಗ್ ಶೇಖಾವತ್ ನಡುವೆ ನಡೆದ ಮಾತುಕತೆಯೂ ವಿಫಲವಾಯಿತು’ ಎಂದು ಜಿಲಾನಿ ನೆನಪಿಸಿದರು.

‘ನಮಗೆ ನ್ಯಾಯಮೂರ್ತಿ ಖೇಹರ್ ಅವರಲ್ಲಿ ನಂಬಿಕೆ ಇದೆ. ಅವರು ಇರುತ್ತಾರೆ ಎಂದಾದರೆ ಮಾತುಕತೆಗೆ ನಾವು ಸಿದ್ಧರಿದ್ದೇವೆ. ಮೊದಲೂ ಮಾತುಕತೆಗಳು ನಡೆದಿದ್ದವು. ಅವುಗಳನ್ನು ಪುನರಾರಂಭಿಸಬಹುದು. ಆದರೆ ಮಾತುಕತೆ ಪ್ರಕ್ರಿಯೆ ದೀರ್ಘ ಆಗಬಾರದು’ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರೆಹಮಾನಿ ಹೇಳಿದರು. 

9 ವಿಫಲ ಯತ್ನಗಳು: ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸುವ ಒಂಬತ್ತು ಪ್ರಯತ್ನಗಳು ಹಿಂದೆ ನಡೆದಿವೆ. ಅವು  ಯಶಸ್ವಿಯಾಗಿಲ್ಲ. ಚಂದ್ರಶೇಖರ್‌, ಪಿ.ವಿ. ನರಸಿಂಹ ರಾವ್‌ ಮತ್ತು ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವರು ನಡೆಸಿದ ಮೂರು ಪ್ರಯತ್ನಗಳೂ ಇದರಲ್ಲಿ ಸೇರಿವೆ.
 
ಮಂದಿರ – ಮಸೀದಿ ಹೋರಾಟದ ಕಥನ...
- 1528:
ಅಯೋಧ್ಯೆಯಲ್ಲಿ ಈಗ ವಿವಾದಕ್ಕೆ ಒಳಗಾಗಿರುವ ಸ್ಥಳದಲ್ಲಿ ಬಾಬರಿ ಮಸೀದಿ ನಿರ್ಮಾಣ.
- 1853: ವಿವಾದಿತ ಸ್ಥಳದ ಮೇಲಿನ ಹಕ್ಕಿಗಾಗಿ ಮೊದಲ ಕೋಮು ಘರ್ಷಣೆ.
-1859: ಬೇಲಿ ನಿರ್ಮಾಣ ಮಾಡಿದ ಬ್ರಿಟಿಷ್ ಸರ್ಕಾರ, ಮುಸ್ಲಿಮರು–ಹಿಂದೂಗಳಿಗೆ ಪ್ರತ್ಯೇಕ ಸ್ಥಳ ನಿಗದಿಪಡಿಸಿತು.
- 1949: ಮಸೀದಿಯಲ್ಲಿ ಕಾಣಿಸಿಕೊಂಡ ರಾಮನ ವಿಗ್ರಹ. ಇದು ತಕರಾರು ಇರುವ ಸ್ಥಳ ಎಂದು ಘೋಷಿಸಿ, ಸ್ಥಳದ ಗೇಟು ಮುಚ್ಚಿದ ಸರ್ಕಾರ. ಹಿಂದೂಗಳು ಹಾಗೂ ಮುಸ್ಲಿಮರಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ.
- 1950: ರಾಮನ ಮೂರ್ತಿ ಪೂಜಿಸಲು ಅವಕಾಶ ಕೊಡುವಂತೆ ರಾಮಜನ್ಮಭೂಮಿ ನ್ಯಾಸದ ಮುಖಂಡ ಮಹಂತ ಪರಮಹಂಸ ರಾಮಚಂದ್ರ ದಾಸ್‌ ಅರ್ಜಿ. ಪೂಜೆಗೆ ಕೋರ್ಟ್‌ ಅವಕಾಶ. ಆದರೆ ಒಳಾಂಗಣಕ್ಕೆ ಪ್ರವೇಶಕ್ಕೆ ಅವಕಾಶ ನಿರಾಕರಣೆ.
- 1984: ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಸಮಿತಿ ರಚನೆ, ರಾಮಜನ್ಮಭೂಮಿ ಚಳವಳಿಯ ನೇತೃತ್ವ ವಹಿಸಿಕೊಂಡ ವಿಎಚ್‌ಪಿ.
- 1989: ಮಸೀದಿಗೆ ಸಮೀಪದ ವಿವಾದಿತವಲ್ಲದ ಜಾಗದಲ್ಲಿ ಶಿಲಾನ್ಯಾಸ ನಡೆಸಲು ವಿಎಚ್‌ಪಿಗೆ ಅನುಮತಿ ನೀಡಿದ ಪ್ರಧಾನಿ ರಾಜೀವ್ ಗಾಂಧಿ.
- 1990: ರಾಮ ಮಂದಿರ ನಿರ್ಮಾಣಕ್ಕೆ ಜನಬೆಂಬಲ ಒಗ್ಗೂಡಿಸಲು ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಆರಂಭಿಸಿದ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ.
- 1992, ಡಿಸೆಂಬರ್ 6: ಅಯೋಧ್ಯೆಯಲ್ಲಿ ಸೇರಿದ್ದ ಲಕ್ಷಾಂತರ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ. ದೇಶದ ಹಲವೆಡೆ ಕೋಮುಗಲಭೆ.
- 2003: ವಿವಾದಿತ ಸ್ಥಳದಲ್ಲಿ ದೇವಸ್ಥಾನ ಇತ್ತೇ ಎಂಬುದನ್ನು ಪರಿಶೀಲಿಸಲು ಉತ್ಖನನ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಅಲಹಾಬಾದ್ ಹೈಕೋರ್ಟ್‌ ಆದೇಶ.
- ಆ ಜಾಗದಲ್ಲಿ 10ನೇ ಶತಮಾನಕ್ಕೆ ಸೇರಿದ ದೇವಸ್ಥಾನದ ಕುರುಹುಗಳು ಪತ್ತೆಯಾಗಿವೆ ಎಂದು ಕೋರ್ಟ್‌ಗೆ ತಿಳಿಸಿದ ಇಲಾಖೆ.
- 2010: ವಿವಾದಿತ ಸ್ಥಳವನ್ನು ಮೂರು ಭಾಗಗಳನ್ನಾಗಿ ವಿಭಜಿಸಿ ಆದೇಶ ಹೊರಡಿಸಿದ ಕೋರ್ಟ್‌. ನಿರ್ಮೋಹಿ ಅಖಾರ, ವಕ್ಫ್‌ ಮಂಡಳಿ ಹಾಗೂ ರಾಮ್‌ ಲಲ್ಲಾ ಪರ ಇರುವವರಿಗೆ ತಲಾ ಒಂದು ಭಾಗ.
- 2011: ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್‌. ಯಥಾಸ್ಥಿತಿ ಪಾಲಿಸಲು ಆದೇಶ.
 
**
ರಾಮ ಮಂದಿರ ವಿಚಾರವನ್ನು ಧರ್ಮ ಸಂಸತ್ತು ತೀರ್ಮಾನಿಸಬೇಕು. ರಾಮ ಜನ್ಮಭೂಮಿ ಚಳವಳಿ ನಡೆಸಿದವರು ಅವರು. ಆ ತೀರ್ಮಾನವನ್ನು ಆರ್‌ಎಸ್‌ಎಸ್‌ ಒಪ್ಪುತ್ತದೆ
ದತ್ತಾತ್ರೇಯ ಹೊಸಬಾಳೆ, ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ
**
ಎರಡೂ ಧರ್ಮಗಳ ಮುಖಂಡರು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ, ವಿವಾದವನ್ನು ಸುಪ್ರೀಂ ಕೋರ್ಟ್‌ ತೀರ್ಮಾನಿಸಬೇಕಾಗುತ್ತದೆ
ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ
**
ಸುಪ್ರೀಂ ಕೋರ್ಟ್‌ ಸಲಹೆ ಸ್ವಾಗತಾರ್ಹ. ನ್ಯಾಯಾಲಯದ ಹೊರಗೆ ಮಾತುಕತೆ ನಡೆಸುವುದೇ ಉತ್ತಮ.
ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT