ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸ್ವಾವಲಂಬಿ ಕ್ಯಾಂಪ್ಕೊ

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ದೀರ್ಘ ಮಳೆ ಬೀಳುವ ಪ್ರದೇಶ ಎಂದು ಗುರುತಿಸಿಕೊಂಡಿರುವ ಕರಾವಳಿಯಲ್ಲಿ ಈ ಬಾರಿ ಎರಡು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ, ಪುತ್ತೂರು ತಾಲ್ಲೂಕಿನ ಕ್ಯಾಂಪ್ಕೊ ಚಾಕ್‌ಲೇಟ್‌ ಕಂಪೆನಿಯ ಆವರಣದಲ್ಲಿ ಈ ಬಾರಿ ಮಾರ್ಚ್‌ ಅಂತ್ಯದಲ್ಲೂ ಸಮೃದ್ಧ ನೀರಿದೆ. ಅದಕ್ಕೆ ಕಾರಣ  ಕಂಪೆನಿ ಅಳವಡಿಸಿಕೊಂಡಿರುವ ಮಳೆನೀರು ಸಂಗ್ರಹ ವಿಧಾನ.

ವರ್ಷಕ್ಕೆ ಸುಮಾರು 18 ಸಾವಿರ ಟನ್‌ ಚಾಕ್‌ಲೇಟ್‌ ತಯಾರಿಸುವ ಕಂಪೆನಿಗೆ ಪುರಸಭೆಯಿಂದಾಗಲೀ, ನೇತ್ರಾವತಿಯ ತುಂಬೆ ಅಣೆಕಟ್ಟೆಯಿಂದಾಗಲೀ ನೀರು ಸರಬರಾಜಿನ ವ್ಯವಸ್ಥೆ ಇಲ್ಲ.  ಸುಮಾರು 13 ಎಕರೆ ಪ್ರದೇಶದಲ್ಲಿ ಕಂಪೆನಿಯು ಕಾರ್ಯ  ನಿರ್ವಹಿಸುತ್ತಿದ್ದು, ದಿನಕ್ಕೆ 3 ಲಕ್ಷ ಲೀಟರ್‌ ನೀರಿನ ಅಗತ್ಯ ಇದೆ. ಇವೆಲ್ಲದಕ್ಕೂ ಕೊಳವೆಬಾವಿ ನೀರನ್ನೇ ಅವಲಂಬಿಸಿರುವ ಕಂಪೆನಿಗೆ, 2013–14ರಲ್ಲಿ ಫೆಬ್ರುವರಿ ವೇಳೆಗೇ ನೀರಿಗೆ ತತ್ವಾರ ಬಂತು. ಬೋರ್‌ವೆಲ್‌ನಿಂದ ಕೇವಲ ಕಲ್ಲು ಮಣ್ಣು ಮಿಶ್ರಿತ ಕೆಸರು ನೀರು ಬರಲಾರಂಭಿಸಿದಾಗ ಕಂಪೆನಿಯ ತಯಾರಿಕೆ, ವಹಿವಾಟು ಮತ್ತು ಸಿಬ್ಬಂದಿಯ ಬಳಕೆಗೂ  ನೀರು ಸಾಲದ ಪರಿಸ್ಥಿತಿ ಉದ್ಭವಿಸಿತು. 2015ರ ಬೇಸಿಗೆಯಲ್ಲಿಯೇ ಅಂದಿನ ಅಧ್ಯಕ್ಷ ರಾದ ಕೊಂಕೋಡಿ ಪದ್ಮನಾಭ ಅವರ ನೇತೃತ್ವದಲ್ಲಿ ನೀರಿನ ಸಂಪನ್ಮೂಲ ಸೃಷ್ಟಿಸುವ ಬಗೆ ಹೇಗೆ ಎಂಬ ಚಿಂತನೆ ನಡೆಯಿತು.

ಬೇಸಿಗೆಯಲ್ಲಿ ಕಂಪೆನಿಯ ಆವರಣದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲಾಯಿತು. ಹಾಗಾಗಿ 2015ರ ಜೂನ್‌ ಜುಲೈನಲ್ಲಿ ಬಂದ ಮಳೆಯ ಒಂದು ಹನಿ ನೀರನ್ನೂ ಹರಿದು ಹೋಗಲು ಕಂಪೆನಿಯು ಬಿಡಲಿಲ್ಲ.  ಜಲಮರುಪೂರಣದ ಈ ವ್ಯವಸ್ಥೆಯ ಮೊದಲನೇ ಹಂತಕ್ಕೆ ₹ 80 ಸಾವಿರ  ಖರ್ಚು ಮಾಡಲಾಗಿದೆ.

‘2016ರಲ್ಲಿ ಫೆಬ್ರುವರಿಯ ವೇಳೆಗೆ ನೀರು ಕಡಿಮೆಯಾಗುತ್ತಾ ಬಂದಿದೆ. 2016ರ ಬೇಸಿಗೆಯಲ್ಲಿ ಮತ್ತೆ ₹ 3 ಲಕ್ಷ ವೆಚ್ಚದಲ್ಲಿ ಮಳೆನೀರು ಸಂಗ್ರಹದ ಕೊಳವನ್ನು ನಿರ್ಮಿಸಲಾಗಿದೆ.  ಇಂಗು ಗುಂಡಿಗಳು ಮತ್ತು ಮಳೆ ಸಂಗ್ರಹದ ಕೊಳಗಳಲ್ಲಿ ನೀರು ತುಂಬಿದ ಬಳಿಕವೇ ನೀರು 13 ಎಕರೆ ಜಾಗವನ್ನು ದಾಟಿ ಹೋಗುವಂತೆ ವ್ಯವಸ್ಥೆ ಮಾಡಲಾಯಿತು. ಇದರಿಂದಾಗಿ ಈ ಬಾರಿ ಬೋರ್‌ವೆಲ್‌ನಲ್ಲಿ ಸ್ವಚ್ಛವಾದ ಭರಪೂರ ನೀರು ಬರುತ್ತಿದೆ’ ಎನ್ನುತ್ತಾರೆ ಕಂಪೆನಿಯ ಅಧಿಕಾರಿ ಲಕ್ಷ್ಮಣ ಎಸ್‌. ಡೋಂಗ್ರೆ.

ಜಲಮರುಪೂರಣದ ಈ ವ್ಯವಸ್ಥೆಯಲ್ಲಿ ಸಕ್ರಿಯರಾಗಿದ್ದವರು ಅಧಿಕಾರಿಗಳಾದ ಫ್ರಾನ್ಸಿಸ್‌ ಡಿಸೋಜ, ಅವಿನಾಶ್‌ ರೈ ಮತ್ತು ಕರುಣಾಕರ ಶೆಟ್ಟಿಗಾರ್‌. ಮಳೆನೀರು ಸಂಗ್ರಹದ ಈ ವ್ಯವಸ್ಥೆಗೆ ಒಟ್ಟು ₹ 4 ಲಕ್ಷ ಹೂಡಿಕೆ ಮಾಡಿರುವ ಕಂಪೆನಿಯ ಈ ಪ್ರಯತ್ನದಿಂದ ಇದೀಗ ಆಸುಪಾಸಿನ ಮನೆಗಳ ಬಾವಿಯಲ್ಲಿಯೂ ಉತ್ತಮ ನೀರಿದೆ.

ಕೈಗಾರಿಕೆಗಳಿಂದ ಆಸುಪಾಸಿನವರಿಗೆ ತೊಂದರೆಯಾಗುತ್ತದೆ ಎಂಬ ಆಕ್ಷೇಪಗಳು ಕೇಳುವುದುಂಟು. ಆದರೆ ಕ್ಯಾಂಪ್ಕೊದ ಈ ಪ್ರಯತ್ನದಿಂದ ಆಸುಪಾಸಿನಲ್ಲಿ ನೀರಿನ ಸಂಪನ್ಮೂಲ ವೃದ್ಧಿಯಾಗಿರುವುದು ಕಂಡು ನಮಗೂ ಸಂತೋಷವಾಗಿದೆ ಎನ್ನುತ್ತಾರೆ ಅಧಿಕಾರಿಗಳು. 

ಜಲಮರುಪೂರಣ ವ್ಯವಸ್ಥೆಯ ಬಗ್ಗೆ ಸುತ್ತಮುತ್ತಲಿನ ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ತಜ್ಞರಾದ ಶ್ರೀಪಡ್ರೆ ನೇತೃತ್ವದಲ್ಲಿ ಕಂಪೆನಿ ಆಯೋಜಿಸಿ, ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದೆ ಎನ್ನುತ್ತಾರೆ ಅವರು.

**

ಅನ್ಯರ ಅವಲಂಬನೆ ಬೇಡ

‘ದಿನಕ್ಕೆ ಸುಮಾರು 72 ಟನ್‌ ಚಾಕ್‌ಲೇಟ್‌  ತಯಾರಿಕೆಯ ಸಾಮರ್ಥ್ಯ ಇರುವ ಕಂಪೆನಿಗೆ ಒಂದು ದಿನ ನೀರು ಸರಬರಾಜು ನಿಂತರೂ ನಷ್ಟದ ಪ್ರಮಾಣ ದೊಡ್ಡದು. ಆದ್ದರಿಂದ ನೀರಿಗಾಗಿ ಮತ್ಯಾರನ್ನೋ ಅವಲಂಬಿಸುವ ಬದಲಾಗಿ, ಆದಷ್ಟು ಸ್ವಾವಲಂಬನೆ ಇದ್ದರೆ ಒಳ್ಳೆಯದು ಎಂಬ ದೃಷ್ಟಿಯಿಂದ ನಾವು ಈ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ಕಂಪೆನಿಯ ಅಧ್ಯಕ್ಷ ಎಸ್‌. ಆರ್‌. ಸತೀಶ್‌ಚಂದ್ರ.

*

8 ಲಕ್ಷ ಲೀಟರ್‌: ಪ್ರತಿ ದಿನದ ನೀರಿನ ಅವಶ್ಯಕತೆ

18 ಸಾವಿರ ಟನ್‌: ಸಂಸ್ಥೆಯ ವಾರ್ಷಿಕ   ಚಾಕ್‌ಲೇಟ್‌ ತಯಾರಿಸುವ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT