ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

-ರಾಮ ಪ್ರಸಾದ್, ಮೈಸೂರು
* ಸುಮಾರು ₹ 35 ಲಕ್ಷ ರೂಪಾಯಿಗಳನ್ನು ವಿಂಗಡಿಸಿ ಬ್ಯಾಂಕ್ ಠೇವಣಿ ಮಾಡಿ, ನನ್ನ ಮಗಳ ಹಾಗೂ ಹೆಂಡತಿ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿದ್ದೇನೆ. ನನ್ನ ವಯಸ್ಸು 80. ನನ್ನ ಮರಣಾನಂತರ ನನ್ನ ಮಕ್ಕಳು ಹಾಗೂ ಹೆಂಡತಿ, ಠೇವಣಿ ಪಡೆಯುವಾಗ ಆದಾಯ ತೆರಿಗೆ ಸಲ್ಲಿಸಬೇಕಾಗುತ್ತದೆಯೇ ಹಾಗೂ ತೆರಿಗೆಯಿಂದ ಹೊರಗುಳಿಯಲು ಏನಾದರೂ ಮಾರ್ಗಗಳಿವೆಯೇ ದಯಮಾಡಿ ತಿಳಿಸಿ.

ಉತ್ತರ: ನಾಮನಿರ್ದೇಶನದಿಂದ ರಕ್ತ ಸಂಬಂಧಿಗಳಿಂದ ಪಡೆಯುವ ಠೇವಣಿ ಮೊತ್ತ ಅನುವಂಶಿಕವಾಗಿ ಪಡೆಯುವ ಆಸ್ತಿ ಹಾಗೂ ಚರಸೊತ್ತು, ವಿಲ್ ಮತ್ತು ಗಿಫ್ಟ್ ಆಗಿ ಬಂದ ಹಣ ಹಾಗೂ ಸ್ಥಿರ ಆಸ್ತಿಗೆ, ಪ್ರಯೋಜನ ಹೊಂದಿರುವವರು ಅಥವಾ ಪ್ರಾಯೋಜಿಸಿದವರು, ಯಾವುದೇ ತರಹದ ತೆರಿಗೆ ಕೊಡುವ ಅವಶ್ಯವಿಲ್ಲ. ಬಹಳಷ್ಟು ಠೇವಣಿದಾರರು, ತಾವು ಇರಿಸಿದ ಠೇವಣಿಗೆ ನಾಮನಿರ್ದೇಶನ ಮಾಡುವುದಿಲ್ಲ. ಇದರಿಂದ ಮುಂದೆ ಹಣ ಬ್ಯಾಂಕಿನಿಂದ ಪಡೆಯಲು,  ಕೋರ್ಟಿನಿಂದ ಸರ್ಟಿಫಿಕೇಟು  ಪಡೆಯಬೇಕಾಗುತ್ತದೆ. ನೀವು ಇದುವರೆಗೆ ಕೈಗೊಂಡಿರುವ ವಿಚಾರ ಸರಿ ಇದೆ. ನಿಜವಾಗಿ ನಿಮ್ಮ ಮಾರ್ಗ ನಮ್ಮ ಓದುಗರು ಅನುಸರಿಸುವಂತಿದೆ.

**

-ಹೆಸರು ಬೇಡ, ಊರು ಬೇಡ

* ನಾನು ಪ್ರೌಢಶಾಲಾ ಶಿಕ್ಷಕ. ತಿಂಗಳ ಸಂಬಳ ₹ 31,160  ಇನ್ನೂ19 ವರ್ಷ ಸೇವಾವಧಿ ಇದೆ. ಸಂಬಳದಲ್ಲಿ ಕಡಿತ, ಜಿಡಿಎಫ್ 5000, ಕೆಜಿಐಡಿ 2620, ಎಲ್.ಐ.ಸಿ. 622, ಪಿ.ಎಲ್.ಐ. 1300, ಆರ್.ಡಿ. 5000. ನನಗೆ ಒಂದು ವರ್ಷದ ಮಗಳಿದ್ದಾಳೆ. ಅವಳಿಗೆ ₹ 1000 ಸುಕನ್ಯಾ ಖಾತೆ ತೆರೆಯಬೇಕೆಂದಿದ್ದೇನೆ. ಪಿತ್ರಾರ್ಜಿತ ಆಸ್ತಿಯಿಂದಲೂ ಸ್ವಲ್ಪ ಹಣ ಬರುತ್ತದೆ. ನನ್ನೊಡನೆ ಒಂದು ನಿವೇಶನ ಹಾಗೂ ನಗದು ₹ 5 ಲಕ್ಷವಿದೆ. ಗೃಹ ನಿರ್ಮಾಣದವರೆಗೆ ಮ್ಯೂಚುವಲ್ ಫಂಡ್ ಅಥವಾ ಚಿಟ್‌ಫಂಡಿನಲ್ಲಿ ಇರಿಸಬಹುದೇ?

ಉತ್ತರ: ನಿಮ್ಮ  ಉಳಿತಾಯದ ಇಲ್ಲಿನವರೆಗೆ ಯೋಜನೆ ಚೆನ್ನಾಗಿದೆ. ನಿಮ್ಮೊಡನಿರುವ ₹ 5 ಲಕ್ಷದ ಮೊತ್ತವನ್ನು ಸಂಬಳ ಪಡೆಯುವ ಬ್ಯಾಂಕಿನಲ್ಲಿ 5 ವರ್ಷಗಳ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ ನಿಶ್ಚಿಂತರಾಗಿರಿ. ಸದ್ಯಕ್ಕೆ ಕಂಟಕರಹಿತವಲ್ಲದ ಹೂಡಿಕೆಗೆ ಮನಸ್ಸು ಮಾಡಿ. 5 ವರ್ಷಗಳ ನಂತರ ನಿವೇಶನದಲ್ಲಿ ಸ್ವಲ್ಪ ಸಾಲ ಪಡೆದು ಮನೆ ಕಟ್ಟಿಸಿ ಸುಖವಾಗಿ ಬಾಳಿರಿ. ತೆರಿಗೆ ಉಳಿಸಲು ಪಿ.ಪಿ.ಎಫ್. ಖಾತೆ ತೆರೆದು ಎಷ್ಟಾದರಷ್ಟೂ ಹಣ ಪ್ರತೀ ವರ್ಷ ತುಂಬಿರಿ. ಇಲ್ಲಿ ಇರಿಸಿದ ಮೊತ್ತ ಸೆಕ್ಷನ್ 80ಸಿ ಆಧಾರದ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಅನುಕೂಲವಾಗುತ್ತದೆ.

ಪಿ.ಪಿ.ಎಫ್.ನಲ್ಲಿ ಬರುವ ಬಡ್ಡಿ ಸಹಾ ಸೆಕ್ಷನ್ 10 (11) ಆಧಾರದ ಮೇಲೆ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಹೊಂದಿದೆ. ಸಾಧ್ಯವಾದರೆ ಚಿಕ್ಕ ಮಗಳ ಸಲುವಾಗಿ ಕನಿಷ್ಠ ₹ 2,000 ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತೀ ತಿಂಗಳೂ ತುಂಬಿರಿ.

**

-ರಾಜಶೇಖರ್, ಶಿವಮೊಗ್ಗ

* ಗ್ಯಾಸ್ ವೆಲ್ಡಿಂಗ್ ಅಂಗಡಿ ಇದೆ. ವಾರ್ಷಿಕವಾಗಿ ಸುಮಾರು ₹ 50,000 ಉಳಿಸುತ್ತೇನೆ. ನಮಗೆ ಒಳ್ಳೆಯ ಕೆಲಸ ಬಂದಾಗ ಆ ದಿವಸ ₹ 200 ಪಿಗ್ಮಿ ಕಟ್ಟುತ್ತೇನೆ. ನನ್ನ ಉಳಿತಾಯ ಕರ್ಣಾಟಕ ಬ್ಯಾಂಕ್ ₹60,000, ವಿಜಯಾ ಬ್ಯಾಂಕ್ ₹ 60,000 ಹಾಗೂ  ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ₹ 1.21 ಲಕ್ಷ. ನನಗೆ ತೆರಿಗೆ ಬಾರದಿರಲು ಯಾವ ರೀತಿ ಹಣ ಠೇವಣಿ ರೂಪದಲ್ಲಿ ಇಟ್ಟರೆ ಉತ್ತಮ ತಿಳಿಸಿ. ಎಸ್.ಬಿ.ಯಲ್ಲಿ ₹ 50,000 ಇದೆ. ಚೀಟಿಯಿಂದ ಬಂದ ಹಣ ನನ್ನ ಬಳಿ ಇದೆ.

ಉತ್ತರ: ನಿಮಗೆ ವಾರ್ಷಿಕ ಆದಾಯ ಎಷ್ಟು ಎನ್ನುವುದನ್ನು ಪ್ರಶ್ನೆಯಲ್ಲಿ ತಿಳಿಸಿಲ್ಲ. ಇಂದಿನ ತೆರಿಗೆ ಕಾನೂನಿನಂತೆ ವಾರ್ಷಿಕ ₹ 2.50 ಲಕ್ಷ ದೊಳಗೆ ನಿಮ್ಮ ಆದಾಯವಿರುವಲ್ಲಿ ನಿಮಗೆ ತೆರಿಗೆ ಬರುವುದಿಲ್ಲ. ಈ ಕಾನೂನು 31–3–2017 ತನಕ ಹಾಗೂ ನಿಮ್ಮ ವ್ಯವಹಾರದಲ್ಲಿ ನಿಮ್ಮ ಹೆಂಡತಿಯನ್ನೂ ಪಾಲುದಾರರಾಗಿ ತೆಗೆದುಕೊಳ್ಳಿ. ಹೀಗೆ ಮಾಡಿದಲ್ಲಿ ನಿಮ್ಮಿಬ್ಬರಿಂದ ₹ 5 ಲಕ್ಷ ವಾರ್ಷಿಕ ಆದಾಯ ಬಂದರೂ ತೆರಿಗೆಗೆ ಒಳಗಾಗುವುದಿಲ್ಲ. ವಾರ್ಷಿಕ ಆದಾಯವೆಂದರೆ, ವೆಲ್ಡಿಂಗ್ ಆದಾಯ ಹಾಗೂ ಬ್ಯಾಂಕ್ ಠೇವಣಿ ಬಡ್ಡಿ ಸೇರುತ್ತದೆ. ಮುಂದೆ ನಿಮ್ಮ ವ್ಯವಹಾರ ಹೆಚ್ಚಾಗಿ, ಗೃಹ ಸಾಲ ಪಡೆಯಲು, ತೆರಿಗೆ ಪಾವತಿಸಿದ ಪುರಾವೆ ಕೇಳುತ್ತಾರೆ. ತೆರಿಗೆ ಉಳಿಸಲು ಪಿ.ಪಿ.ಎಫ್. ಠೇವಣಿ ಮಾಡಿ. ಇಲ್ಲಿ ಕನಿಷ್ಠ ₹ 500 ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ತುಂಬಬಹುದು. ಇಲ್ಲಿ ಹೂಡಿದ ಹಣ ಹಾಗೂ ಬಡ್ಡಿ ಎರಡಕ್ಕೂ ತೆರಿಗೆ ವಿನಾಯಿತಿ ಇದೆ. ಈ ಎಲ್ಲಾ ವಿಚಾರ ಮನಸ್ಸಿನಲ್ಲಿಟ್ಟುಕೊಂಡು ಶಿವಮೊಗ್ಗದ ಯಾರಾದರೂ ತೆರಿಗೆ ಸಲಹೆಗಾರರನ್ನು ವಿಚಾರಿಸಿ.

**

-ವಿಜಯಾನಂದ ನಾಯ್ಕ, ಬೆಂಗಳೂರು

* ನಾನು ಲಗತ್ತಿಸಿರುವ  ಎಲ್.ಐ.ಸಿ. (Endoment Assurance Po* icy) ಹೊಂದಿದ್ದೇನೆ. ವಾರ್ಷಿಕವಾಗಿ ₹ 23,520 ಪ್ರಿಮಿಯಂ ಕಟ್ಟುತ್ತೇನೆ. ಪಾಲಿಸಿ ಮೊತ್ತ ₹ 2 ಲಕ್ಷ. ಒಟ್ಟಿಗೆ ಕಟ್ಟುವ ಹಣ ₹ 2,82,240. ಅಂದರೆ ₹ 82240 ಹೆಚ್ಚಿಗೆ ಕಟ್ಟಿದಂತಾಗುತ್ತದೆ. ನನಗೆ ಪಾಲಿಸಿ ಮುಗಿಯುವಾಗ ಸಿಗುವ ಮೊತ್ತ  ₹ 2 ಲಕ್ಷ ಅಥವಾ  ₹ 282240 ಎನ್ನುವುದು ತಿಳಿದಿರಲಿಲ್ಲ.

ಉತ್ತರ: ವಿಮೆಯ ತತ್ವದಲ್ಲಿ ಉಳಿತಾಯಕ್ಕೆ ಮಹತ್ವ ಕಡಿಮೆ. ಪಾಲಿಸಿಯಲ್ಲಿ (Sum Assured + Vested Bonues) ಸಿಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ವಾರ್ಷಿಕ ₹ 40 ಬೋನಸ್ ಒಂದು ಸಾವಿರಕ್ಕೆ ಕೊಟ್ಟರೂ, ₹ 2 ಲಕ್ಷಕ್ಕೆ ₹ 8000 ಬರುತ್ತದೆ. ಪಾಲಿಸಿ ಅವಧಿ 11 ವರ್ಷವಾದ್ದರಿಂದ ₹ 88000 ಕನಿಷ್ಠ ಬೋನಸ್ ಬರಬಹುದು. ಒಟ್ಟಿನಲ್ಲಿ ಕಟ್ಟಿದ ಹಣ ಬರುತ್ತದೆ. ಜೊತೆಗೆ * ife Cover ಇರುತ್ತದೆ.

**

-ಜಯರಾಮ್, ಬೆಂಗಳೂರು

* 3 ವರ್ಷಗಳ ಹಿಂದೆ ನಮ್ಮ ಊರಿನಲ್ಲಿ 30X40 ಅಳತೆ ನಿವೇಶನ ನಿಮ್ಮ ಸಲಹೆಯಂತೆ ಕೊಂಡಿದ್ದೇನೆ. ಆಗ ₹ 2 ಲಕ್ಷ ಕೊಟ್ಟಿದ್ದೆ. ಈಗ ಅದರ ಬೆಲೆ ₹ 4 ಲಕ್ಷವಾಗಿದೆ. ಈ ವಿಚಾರದಲ್ಲಿ ನಾನು ನಿಮಗೆ ಕೃತಜ್ಞತೆ ತಿಳಿಸಿರುತ್ತೇನೆ. ಈ ನಿವೇಶನದ ಸಮೀಪ ಇನ್ನೊಂದು ಕೊಳ್ಳಲೇ. ಕಡಿಮೆ ದರಕ್ಕೆ ಸಿಗುವುದಿದೆ. ನಾನು ಇನ್ನೊಂದು ನಿವೇಶನ ಕೊಳ್ಳಲೇ ಅಥವಾ ಬೆಂಗಳೂರಿನಲ್ಲಿ ಕೊಳ್ಳಲೇ? ನಮಗೆ 3 ಜನ ಹೆಣ್ಣು ಮಕ್ಕಳು ಒಂದು ಗಂಡು ಮಗು ಇದೆ. ತಿಂಗಳಿಗೆ ಖರ್ಚು ಹೋಗಿ  ₹ 10,000 ಉಳಿಸುತ್ತೇನೆ. ₹ 1000 ಆರ್.ಡಿ. ಮಾಡಿದರೆ 5 ವರ್ಷಗಳಲ್ಲಿ ಎಷ್ಟು ಹಣ ಪಡೆಯಬಹುದು?

ಉತ್ತರ: ನೀವು ನಿಮ್ಮ ಊರಿನಲ್ಲಿ ಹಿಂದೆ ಖರೀದಿಸಿದ ನಿವೇಶನದ ಸಮೀಪ ಇರುವ ನಿವೇಶನ ತಕ್ಷಣ ಕೊಂಡುಕೊಳ್ಳಿ. ಸ್ಥಿರ ಆಸ್ತಿಯು, ಬ್ಯಾಂಕ್ ಠೇವಣಿಗಿಂತ ವೇಗವಾಗಿ ವೃದ್ಧಿಯಾಗುತ್ತದೆ. ನಿಮ್ಮೊಡನಿರುವ ಹಣದಿಂದ ಎಂದಿಗೂ ಬೆಂಗಳೂರಿನಲ್ಲಿ ನಿವೇಶನ ಕೊಳ್ಳಲು ಸಾಧ್ಯವಿಲ್ಲ. ನಿಮ್ಮೊಡನಿರುವ ಅಲ್ಪಸ್ವಲ್ಪ ಹಣ ಅಥವಾ ಅಲ್ಲಿ ಬರುವ ಬಡ್ಡಿಗೆ ಆದಾಯ ತೆರಿಗೆ ಬರುವುದಿಲ್ಲ. ಹೆಚ್ಚಿನ ಬಡ್ಡಿ ಆಸೆಯಿಂದ ಬಂಧು ಮಿತ್ರರಿಗೆ ಸಾಲಕೊಟ್ಟು ಹಣ ವಿಶ್ವಾಸ ಎರಡನ್ನೂ ಕಳೆದುಕೊಳ್ಳಬೇಡಿ. ₹ 1000 ಆರ್.ಡಿ. ಶೇ. 7.5 ಬಡ್ಡಿ ದರದಲ್ಲಿ 5 ವರ್ಷಗಳಲ್ಲಿ  ₹ 72,880  ಆಗುತ್ತದೆ.

**

-ಕಿರಣ್, ಹೊಳೆ ಹೊನ್ನೂರು

* ನಾವು ಮನೆ ಕಟ್ಟುವಾಗ ₹ 4 ಲಕ್ಷ ವೈಯಕ್ತಿಕ ಸಾಲ, ಶೇ 2 ಬಡ್ಡಿ ದರದಲ್ಲಿ ಪಡೆದಿದ್ದೇವೆ. ನನ್ನ ತಾಯಿಯ ಹೆಸರಿನಲ್ಲಿ 30X40 ಜಾಗದಲ್ಲಿ ಒಂದು ಹೆಂಚಿನ ಮನೆ ಜೊತೆಗೆ ಹೊಸತಾಗಿ ನಿರ್ಮಿಸಿದ 10 ಚದರದ ₹ 15.40  ಲಕ್ಷ ವೆಚ್ಚ ಮಾಡಿದ ಆರ್.ಸಿ.ಸಿ. ಮನೆ ಇದೆ. ನಾನು ವ್ಯಾಪಾರ ಮಾಡುತ್ತೇನೆ. ನಿರ್ದಿಷ್ಟ ಆದಾಯಎಂಬುದಿಲ್ಲ. ಮಾಸಿಕ ₹ 8000  ಹಾಗೂ ಬಡ್ಡಿ ಕಟ್ಟುತ್ತೇನೆ. ಯಾವುದಾದರೂ ಬ್ಯಾಂಕಿನಲ್ಲಿ ಸಾಲ ಸಿಗಬಹುದೇ ತಿಳಿಸಿರಿ. ಎಚ್.ಡಿ.ಎಫ್.ಸಿ. ಬ್ಯಾಂಕ್ ಉತ್ತಮವೇ ತಿಳಿಸಿ.

ಉತ್ತರ: ತಾಯಿಯ ವಯಸ್ಸಿಗನುಗುಣವಾಗಿ ಬ್ಯಾಂಕಿನಲ್ಲಿ ಸಾಲ ಸಿಗುವುದಿಲ್ಲ. ನೀವು  ಸಹ ಸಾಲಗಾರರಾಗಿ, ಸ್ಥಿರ ಆಸ್ತಿ ಅಡಮಾನ ಮಾಡಿ ಸಾಲ ಪಡೆಯಬಹುದು. ಇಲ್ಲಿ ಕೂಡಾ ಸಾಲಕ್ಕೆ ಭದ್ರತೆ ಒದಗಿಸಿದರೂ, ಸಾಲ ಮರುಪಾವತಿಸುವ ಸಾಮರ್ಥ್ಯ ಪರಿಶೀಲಿಸುತ್ತಾರೆ. ನೀವು ಯಾರಾದರೂ ತೆರಿಗೆ ಸಲಹೆಗಾರರನ್ನು ಹಿಡಿದು, ನಿಮ್ಮ ಆದಾಯ ವಿವರಣೆ ನೀಡಿ, ತೆರಿಗೆ ರಿಟರ್ನ್ ತುಂಬಲು ಸಾಧ್ಯವೇ ವಿಚಾರಿಸಿ. ಈ ಆಧಾರ ಬ್ಯಾಂಕಿಗೆ ಒದಗಿಸಬಹುದು. ಎಚ್.ಡಿ.ಎಫ್.ಸಿ. ಬ್ಯಾಂಕ್ ಉತ್ತಮ ಬ್ಯಾಂಕ್ ಆಗಿದೆ.

**

-ರವಿಕುಮಾರ್, ಬೆಂಗಳೂರು

* ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿದರ ಎಷ್ಟಿದೆ? ಬಡ್ಡಿ ತಿಂಗಳು, ವಾರ್ಷಿಕ ಹೇಗೆ ವಿಧಿಸುತ್ತಾರೆ.

ಉತ್ತರ: ಬಡ್ಡಿದರ ಅಂಚೆ ಕಚೇರಿಯಲ್ಲಿ ಆಗಾಗ ಬದಲಾಗುತ್ತಿರುತ್ತದೆ. ಸದ್ಯದ ಬಡ್ಡಿದರ  ಶೇ 8.6 ಇರುತ್ತದೆ. ಬಡ್ಡಿ ವಿಧಿಸುವಾಗ ಉಳಿತಾಯ ಖಾತೆಗೆ ಅನ್ವಯವಾಗ ರೀತಿಯಲ್ಲಿ ಪ್ರಾಡಕ್ಟ್ ಹಾಕಿ, ಪ್ರತೀ ತಿಂಗಳೂ ಬಡ್ಡಿ ಲೆಕ್ಕ ಹಾಕಿ, ಆರು ತಿಂಗಳಿಗೊಮ್ಮೆ ಅಸಲಿಗೆ ಸೇರಿಸುತ್ತಾರೆ.

**

ಹೆಸರು– ಊರು ಬೇಡ

* ತಾ: 20–7–2016ರ ಪ್ರಶ್ನೋತ್ತರದಲ್ಲಿ ಒಂದು ಪ್ರಶ್ನೆಗೆ ಉತ್ತರಿಸುತ್ತಾ ಉಳಿತಾಯ ಖಾತೆಯಲ್ಲಿ ವಾರ್ಷಿಕ ₹ 1000 ತನಕ ಬರುವ ಬಡ್ಡಿಗೆ ಸೆಕ್ಷನ್ 80 ಟಿಟಿಎ ಅಡಿಯಲ್ಲಿ ತೆರಿಗೆ ಸಂಪೂರ್ಣ ವಿನಾಯಿತಿ ಇದೆ ಎಂಬುದಾಗಿ ಉತ್ತರಿಸಿದ್ದೀರಿ. ನಾನು ರಾಜ್ಯ ಸರ್ಕಾರದ ನಿವೃತ್ತ ನೌಕರ. 30–6–2016ಕ್ಕೆ ₹ 8800  ಬಡ್ಡಿ ಬಂದಿದೆ. ನಾನು ತೆರಿಗೆಗೆ ಒಳಪಡುವುದಿಲ್ಲ ತಾನೆ? 31–7–2016ಕ್ಕೆ ಐಟಿಆರ್ ಸಲ್ಲಿಸಿಲ್ಲ.ಮಾಹಿತಿ ನೀಡಿ.

ಉತ್ತರ: ಆದಾಯ ತೆರಿಗೆ ಸೆಕ್ಷನ್ 80ಟಿಟಿಎ ಪ್ರಕಾರ, ಉಳಿತಾಯ ಖಾತೆಯಲ್ಲಿ ವಾರ್ಷಿಕ ಗರಿಷ್ಠ ₹ 10,000 ತನಕ ಆದಾಯ ತೆರಿಗೆ ಬರುವುದಿಲ್ಲ. ನಿಮ್ಮ ಪ್ರಶ್ನೆ ನನಗೆ ಸರಿಯಾಗಿ ತಿಳಿಯಲಿಲ್ಲ. ನೀವು ಹಿರಿಯ ನಾಗರಿಕರಾದ್ದರಿಂದ ₹ 3ಲಕ್ಷಗಳ ತನಕ, ನೀವು ಪಡೆಯುವ ಪಿಂಚಣಿ ಹಾಗೂ ಠೇವಣಿ ಮೇಲಿನ ಬಡ್ಡಿ (ಉಳಿತಾಯ ಖಾತೆಯಲ್ಲಿ ಪಡೆಯುವ ₹ 10000 ಹೊರತುಪಡಿಸಿ) ಆದಾಯಕ್ಕೆ ಆದಾಯ ತೆರಿಗೆ ಸಂಪೂರ್ಣ ವಿನಾಯಿತಿ ಇದೆ. ಈ ಮೊತ್ತ ದಾಟಿದಲ್ಲಿ ತೆರಿಗೆಗೆ ಒಳಗಾಗುತ್ತೀರಿ ಹಾಗೂ ಐಟಿಆರ್‌ಐ ತುಂಬಲೇ ಬೇಕು.

**

–ದಿಲೀಪ್ ಮಂಠಾಳೆ, ಬಸವ ಕಲ್ಯಾಣ

* ಗ್ರೂಪ್ ಸಿ–ಡಿ ನೌಕರರು ಸ್ಥಿರ ಆಸ್ತಿ ಹಾಗೂ ಚರ ಆಸ್ತಿ ಖರೀದಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವ ಅವಶ್ಯವಿದೆಯೇ? ಪ್ರಾಥಮಿಕ ಶಾಲಾ ಶಿಕ್ಷಕರು ದ್ವಿತೀಯ ದರ್ಜೆ ಸಹಾಯಕರಿಗೆ ಆಸ್ತಿ ಖರೀದಿಸಲು ಅನುಮತಿ ನೀಡುವ ಅಧಿಕಾರಿಗಳು ಯಾರು? ದಯವಿಟ್ಟು ತಿಳಿಸಿ.

ಉತ್ತರ: ಸರ್ಕಾರಿ ನೌಕರರು ಸ್ಥಿರಾಸ್ತಿ ಮಾಡುವ ಮುನ್ನ ಸರ್ಕಾರದ ಪರವಾನಿಗೆ ಪಡೆಯುವ ಅವಶ್ಯವಿದೆ. ಇದೊಂದು ನಿಯಮ ಪಾಲನೆ  (Formality) ಮಾತ್ರ. ಆದರೆ ಖರೀದಿಸುವ ಮುನ್ನ ಬೇಕಾಗುವ ಹಣದ ಮೂಲದ ವಿವರಣೆ ತಿಳಿಸಬೇಕು. ಯಾವುದೇ ಸರ್ಕಾರಿ ನೌಕರರಿರಲಿ ಅವರು ಅವರ ಮೇಲಾಧಿಕಾರಿಗಳಿಂದ ಪರವಾನಿಗೆ ಪಡೆಯಬಹುದು.

**

–ಹೆಸರು ಬೇಡ, ಬ್ಯಾಡಗಿ

* ನಾನು ಖಾಸಗಿ ಕೆಲಸದಲ್ಲಿದ್ದೇನೆ. ತಿಂಗಳ ಸಂಬಳ ₹ 15,000. ನನ್ನ ಪತಿ ಬಿಸಿನೆಸ್ ಮಾಡುತ್ತಾರೆ. ಒಬ್ಬ ಮಗನಿದ್ದಾನೆ. ಎಲ್.ಐ.ಸಿ. ಜೀವನಶ್ರೀ ಹೊರತುಪಡಿಸಿ ಬೇರಾವ ಉಳಿತಾಯವಿಲ್ಲ. ಬಿಸಿನೆಸ್ ಚೆನ್ನಾಗಿಲ್ಲ. ಮಗನ ವಿದ್ಯಾಭ್ಯಾಸದ ಖರ್ಚು, ಮನೆ ಖರ್ಚು ನಾನೇ ನಿಭಾಯಿಸುತ್ತೇನೆ. ನಮ್ಮ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶನ ಮಾಡಿ.

ಉತ್ತರ: ನಿಮ್ಮ ಸದ್ಯದ ಪರಿಸ್ಥಿತಿಯಲ್ಲಿ ನೀವು ಉಳಿತಾಯ ಮಾಡುವುದು ಕಷ್ಟ. ಆದರೆ ಬಿಸಿನೆಸ್ ಮಾಡುವ ನಿಮ್ಮ ಪತಿ, ಪ್ರತೀ ದಿವಸ ಸಣ್ಣ ಮೊತ್ತ ಕಡ್ಡಾಯವಾಗಿ ಉಳಿಸಿ ಬ್ಯಾಂಕಿಗೆ ಜಮಾ ಮಾಡಲು ಒತ್ತಾಯಿಸಿ. ಹೇಗಾದರೂ ಮಾಡಿ ನಿಮ್ಮ ಮಗನಿಗೆ ಉತ್ತಮ ವಿದ್ಯೆ ಕೊಡಲು ಪ್ರಯತ್ನಿಸಿ. ಆತ ಪಿಯುಸಿಯಲ್ಲಿ ಸಿಇಟಿಯಲ್ಲಿ ಉತ್ತಮ ಅಂಕ ಪಡೆದು, ಬಿಇ ಅಂತಹ ವೃತ್ತಿಪರ ಶಿಕ್ಷಣ ಪಡೆಯುವಲ್ಲಿ ಭಾರತ ಸರ್ಕಾರದ Model Education Scheme ನಲ್ಲಿ, ಬ್ಯಾಂಕುಗಳು ಗರಿಷ್ಠ ₹ 10 ಲಕ್ಷ ಬಡ್ಡಿ ಅನುದಾನಿತ ಸಾಲ ಕೊಡುತ್ತವೆ. ಈ ಸಾಲ ಓದಿನ ಅವಧಿಯಲ್ಲಿ  ಮರುಪಾವತಿ ಅವಶ್ಯವಿಲ್ಲ.

**

–ಡಿ.ಎನ್. ಮೂರ್ತಿ, ಊರು: ಹೊನ್ನಾಳಿ

* ನನ್ನ ವಯಸ್ಸು 70. ಸರ್ಕಾರಿ ನೌಕರಿಯಿಂದ ಸ್ವಯಂ ನಿವೃತ್ತಿಯಾಗಿದ್ದೇನೆ. ನಿವೃತ್ತಿ ವೇತನ ₹ 20,000. ನಾನು ನನ್ನ ಹೆಂಡತಿ ಹೆಸರಿಗೆ ಗರಿಷ್ಠ ಎಷ್ಟು ಹಣ ಠೇವಣಿ ಮಾಡಿದರೆ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರಿಗೆ ತೆರಿಗೆಯಿಂದ ಮುಕ್ತಿ ಇಲ್ಲವೇ ತಿಳಿಸಿ.

ಉತ್ತರ: ಹಿರಿಯ ನಾಗರಿಕರು ಅಂದರೆ 60–79 ವರ್ಷಗಳ ಮಿತಿಯಲ್ಲಿರುವವರ ವಾರ್ಷಿಕ ಆದಾಯ, ತಾ. 31–3–2017ರ ತನಕ ₹ 3 ಲಕ್ಷ ಗಳೊಳಗಿರುವಲ್ಲಿ ಅವರು ತೆರಿಗೆಯಿಂದ ಮುಕ್ತರಾಗಬಹುದು. ನಿಮ್ಮ ಹೆಂಡತಿ ಕೂಡಾ ಹಿರಿಯ ನಾಗರಿಕರಿರಬಹುದು. ಒಟ್ಟು ಆದಾಯ ಪರಿಗಣಿಸುವಾಗ, ಪಿಂಚಣಿ, ಬ್ಯಾಂಕ್ ಠೇವಣಿ ಬಡ್ಡಿ ಹಾಗೂ ಬಾಡಿಗೆ ಬರುತ್ತಿದ್ದರೆ ಇವೆಲ್ಲವನ್ನೂ ಸೇರಿಸಬೇಕಾಗುತ್ತದೆ. ಈ ಕಾನೂನು ಪ್ರತಿಯೋರ್ವ ವ್ಯಕ್ತಿಗೂ ಅನ್ವಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT