ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆ್ಯಪ್‌ಗಳು

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸ್ತನ ಕ್ಯಾನ್ಸರ್ ಜಾಗೃತಿ ಆ್ಯಪ್…

ಸ್ತನ ಕ್ಯಾನ್ಸರ್ ಜಾಗೃತಿಗಾಗಿ ‘ಎಬಿಸಿ ಬ್ರೆಸ್ಟ್ ಹೆಲ್ತ್ ಆ್ಯಪ್’ ಅಭಿವೃದ್ಧಿಪಡಿಸಲಾಗಿದೆ.  ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್ ಅವರು ಈ ಆ್ಯಪ್‌ಗೆ ಚಾಲನೆ ನೀಡಿದ್ದಾರೆ. ಸ್ತನ ಕ್ಯಾನ್ಸರ್ ಜಾಗೃತಿ ಅಭಿಯಾನದ ರಾಯಭಾರಿಯಾಗಿಯೂ  ಬಚ್ಚನ್  ಕೆಲಸ ಮಾಡುತ್ತಿದ್ದಾರೆ.

ಉಷಾ ಲಕ್ಷ್ಮಿ ಸ್ತನ ಕ್ಯಾನ್ಸರ್ ಫೌಂಡೇಷನ್ ಈ ಆ್ಯಪ್  ವಿನ್ಯಾಸಗೊಳಿಸಿದೆ. ಕನ್ನಡ ಸೇರಿದಂತೆ ದೇಶದ 12 ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಿದೆ. ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಎಬಿಸಿ ಬ್ರೆಸ್ಟ್ ಹೆಲ್ತ್ ಆ್ಯಪ್ ದೊರೆಯುತ್ತಿದ್ದು ಬಳಕೆದಾರರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ತನ ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಆ್ಯಪ್ ನ ಮುಖ್ಯ ಉದ್ದೇಶ ಎನ್ನುತ್ತಾರೆ ಉಷಾಲಕ್ಷ್ಮಿ ಸ್ತನ್ ಕ್ಯಾನ್ಸರ್ ಫೌಂಡೇಷನ್ ಮುಖ್ಯಸ್ಥರಾದ ಡಾ. ರಘುರಾಮ್. ಸ್ತನ ಕ್ಯಾನ್ಸರ್‌ನ ಪ್ರಾಥಮಿಕ ಲಕ್ಷಣಗಳು, ಚಿಕಿತ್ಸಾ ವಿಧಾನ, ಔಷಧ, ವ್ಯಾಯಾಮ, ಜೀವನ ಕ್ರಮ, ಆಹಾರ ಪದ್ಧತಿ, ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾಗಿರುವವರ ಮನದಾಳದ ಕಥೆಗಳು, ದೇಶದಲ್ಲಿನ ಕ್ಯಾನ್ಸರ್ ಆಸ್ಪತ್ರೆಗಳ ಮಾಹಿತಿ ಈ ಆ್ಯಪ್‌ನಲ್ಲಿ ದೊರೆಯುತ್ತದೆ.  ಸ್ತನ ಕ್ಯಾನ್ಸರ್ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ವಿನ್ಯಾಸ ಮಾಡಿರುವ ಈ ಆ್ಯಪ್ ವಿಶ್ವದಲ್ಲೇ ಮೊದಲನೆಯದು ಎಂದು ಡಾ.ರಘುರಾಮ್ ಹೇಳುತ್ತಾರೆ.

ಗೂಗಲ್ ಪ್ಲೇಸ್ಟೋರ್: ABC of Breast Health ap

***

ಮಕ್ಕಳಿಗಾಗಿ ಫ್ಯಾಮಿಲಿ ಲಿಂಕ್ ಆ್ಯಪ್…

ಮನೆಯಲ್ಲಿ ಮಕ್ಕಳು ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ ಗಳಿಗಾಗಿ ರಚ್ಚೆ ಹಿಡಿಯುವುದು ಸಹಜ. ಪೋಷಕರು ಮನಸ್ಸಿಲ್ಲದೆ ಕೆಲವೊಂದು ಆ್ಯಪ್ ಗಳನ್ನು ಲಾಕ್ ಮಾಡಿ ಅವುಗಳನ್ನು ತಮ್ಮ ಮುದ್ದು ಮಕ್ಕಳಿಗೆ ಕೊಡುತ್ತಾರೆ. ಇನ್ನು ಮುಂದೆ ಮಕ್ಕಳ ಕೈಗೆ ಲಾಕ್ ಮಾಡಿ ಫೋನ್ ಅಥವಾ ಟ್ಯಾಬ್ ಕೊಡುವ ಪ್ರಮೇಯವೆ ಬರುವುದಿಲ್ಲ! ಯಾಕೆಂದರೆ ಗೂಗಲ್ ಕಂಪೆನಿಯವರು ಮಕ್ಕಳಿಗಾಗಿ ‘ಫ್ಯಾಮಿಲಿ ಲಿಂಕ್’ ಎಂಬ ಆಂಡ್ರಾಯ್ಡ್‌  ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಫ್ಯಾಮಿಲಿ ಲಿಂಕ್ ಆ್ಯಪ್ 13 ವರ್ಷದೊಳಗಿನ ಮಕ್ಕಳಿಗಾಗಿ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ. ಮೊದಲು, ಪೋಷಕರು ತಮ್ಮ ಮೊಬೈಲ್ ಅಥವಾ ಟ್ಯಾಬ್ ಗಳಿಗೆ ಫ್ಯಾಮಿಲಿ ಲಿಂಕ್ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆ್ಯಪ್‌ ಜತೆ ಮಾಹಿತಿಯನ್ನು ನೋಂದಣಿ ಮಾಡಿದ ನಂತರ  ಸಾಧನವನ್ನು ಮಕ್ಕಳ ಕೈಗೆ ನೀಡಬಹುದು. ಮಕ್ಕಳು ಮೊಬೈಲ್‌ನಲ್ಲಿ ಯಾವ ಗೇಮ್ ಆಡುತ್ತಿದ್ದಾರೆ, ಅದರಲ್ಲಿ ಏನು ಮಾಡುತ್ತಿದ್ದಾರೆ, ಎಷ್ಟು ಸಮಯ ಮೊಬೈಲ್ ಅಥವಾ ಟ್ಯಾಬ್‌ನಲ್ಲಿ ಕಳೆದಿದ್ದಾರೆ ಎಂಬುದು ದಾಖಲಾಗಿರುತ್ತದೆ. ಭಯಾನಕ, ಹಾರರ್ ವಿಡಿಯೊಗಳು, ಚಿತ್ರಗಳನ್ನು ಮಕ್ಕಳಿಗೆ ಕಾಣದಂತೆ ಲಾಕ್ ಮಾಡುವ ಸೌಲಭ್ಯವನ್ನು ಆ್ಯಪ್ ಸೆಟ್ಟಿಂಗ್ಸ್‌ನಲ್ಲಿ ನೀಡಲಾಗಿದೆ. ನೀವು ಅಮೆರಿಕದಲ್ಲಿ ಇದ್ದರೂ ಭಾರತದಲ್ಲಿರುವ ನಿಮ್ಮ ಮಗುವಿನ ಮೇಲೆ ಫ್ಯಾಮಿಲಿ ಲಿಂಕ್ ಆ್ಯಪ್ ಮೂಲಕ ನಿಗಾವಹಿಸಬಹುದು.

ಮೊಬೈಲ್ ಅಥವಾ ಟ್ಯಾಬ್‌ಗಳನ್ನು ಕೊಡದೇ ಮಕ್ಕಳ ಮನಸನ್ನು ನೋಯಿಸುವುದಕ್ಕಿಂತ ಫ್ಯಾಮಿಲಿ ಲಿಂಕ್ ಮೂಲಕ ಮಕ್ಕಳನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಗೂಗಲ್ ಕಂಪೆನಿಯ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪಾನಿ ಡಿವಾಜಿ ಹೇಳುತ್ತಾರೆ.

ಗೂಗಲ್ ಪ್ಲೇಸ್ಟೋರ್: family link app

**

ಫೇಸ್‌ಜಾಮ್‌ ಆ್ಯಪ್

ಒಬ್ಬ ಮನುಷ್ಯನಂತೆ ಏಳು ಜನರು ಈ ಭೂಮಿಯ ಮೇಲೆ ಹುಟ್ಟಿರುತ್ತಾರೆ ಎಂದು ಭಾರತೀಯ ಪುರಾಣಗಳು ಹೇಳುತ್ತವೆ. ಈ ಪುರಾಣಗಳ ಮಾತಿನ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಇಂದಿನ ಸಾಮಾಜಿಕ ಜಾಲತಾಣಗಳು ಮುಂದಾಗಿವೆ. ಹೌದು, ಫೇಸ್‌ಬುಕ್‌ನವರು ಒಂದೇ ಮುಖಚಹರೆ ಹೋಲುವವರನ್ನು ಒಂದು ಕಡೆ ಸೇರಿಸುವ ಅಥವಾ ಅವರನ್ನು ಗೆಳೆಯರನ್ನಾಗಿಸುವ ಪ್ರಯತ್ನವನ್ನು ‘ಫೇಸ್‌ಬುಕ್‌ ಜಾಮ್’ ಎಂಬ ಆ್ಯಪ್ ಮೂಲಕ ಮಾಡುತ್ತಿದ್ದಾರೆ.

ಪ್ರಸ್ತುತ ಈ ಆ್ಯಪ್  ಐಒಎಸ್ ಮಾದರಿಯಲ್ಲಿ ಮಾತ್ರ ಲಭ್ಯವಿದೆ. ಐಫೋನ್ ಬಳಕೆದಾರರು ಫೇಸ್‌ಬುಕ್‌ ಜಾಮ್’ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮಂತೆ ಇರುವವರನ್ನು ತಲಾಶ್ ಮಾಡಿ, ಸಿಕ್ಕವರನ್ನು ಗೆಳೆಯರನ್ನಾಗಿ ಸ್ವೀಕರಿಸಬಹುದು. ಈ ಆ್ಯಪ್ ಅನ್ನು ಕಾನೂನು ಬಾಹಿರ ಕೆಲಸಗಳಿಗೆ ಉಪಯೋಗಿಸುವಂತಿಲ್ಲ ಎಂದು ಫೇಸ್‌ಬುಕ್‌ ತಂಡ ಕರಾರು ಹಾಕಿದೆ. ಒಂದು ವೇಳೆ ಈ ಆ್ಯಪ್‌ನ ನೀತಿ ನಿಯಮಗಳನ್ನು ಮೀರಿದರೆ ಅಂತಹವರ ಫೇಸ್‌ಬುಕ್‌ ಖಾತೆ ನಿಷೇಧಿಸಲಾಗುವುದು ಎಂದು ಕಂಪೆನಿ ತಿಳಿಸಿದೆ.

ಹಾಗಾದರೆ ತಡವೇಕೆ, ನಿಮ್ಮ ಬಳಿ ಐಫೋನ್ ಇದ್ದರೆ, ಕೂಡಲೇ ನಿಮ್ಮಂತೆ ಹೋಲಿಕೆ ಇರುವವರನ್ನು ಹುಡುಕಿ ಫ್ರೆಂಡ್ಸ್ ಮಾಡಿಕೊಳ್ಳಿ! ಯಾರಿಗೆ ಗೊತ್ತು, ಹಾಲಿವುಡ್ ಸಿನಿಮಾದ ನಾಯಕನೋ, ನಾಯಕಿಯೋ ನಿಮ್ಮಂತೆಯೇ ಇರಬಹುದು!!

ಗೂಗಲ್ ಪ್ಲೇಸ್ಟೋರ್: facezam app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT