ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿಗೂ ದೇಹಕ್ಕೂ ಯೋಗ

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜಾನಕಿಯ ವಯಸ್ಸು 30. ಅವಳ ಸ್ವಭಾವ ತುಸು ಆಲಸ್ಯತನದ್ದು. ಬಾಹ್ಯ ಅಲಂಕಾರಕ್ಕೆ ಅವಳು ಪ್ರಾಮುಖ್ಯ ಕೊಡುವವಳಲ್ಲ. ಇಸ್ತ್ರಿ ಇಲ್ಲದ ಸುಕ್ಕಾದ ಬಟ್ಟೆಯನ್ನು ಧರಿಸುತ್ತಿದ್ದಳು. ಅದು ಸಮಾಜದಲ್ಲಿ ಸರೀಕರಿಗೆ, ನೆಂಟರಿಷ್ಟರಿಗೆ ಸರಿ ಬರುತ್ತಿರಲಿಲ್ಲ. ಪದೇಪದೇ ಮಾತಿನ ಘರ್ಷಣೆ ನಡೆಯುತ್ತಿತ್ತು. ಇದರಿಂದ ಜಾನಕಿ ವ್ಯಂಗ್ಯಮಾತು ಕೇಳಬೇಕಾಗಿ ಬರುತ್ತಿತ್ತು. ಅವಳು ಒರಟಾಗಿ ಪ್ರತ್ಯುತ್ತರ ಕೊಡುತ್ತಿದ್ದಳು. ಹೀಗೆ ಮಾತು ಮಾತಿಗೂ ಜಗಳ, ಅಸಹನೆ, ಸಿಟ್ಟು ಹೆಚ್ಚಾಗುತ್ತಿತ್ತು. ಪ್ರಪಂಚದಲ್ಲಿ ಯಾರೂ ಸರಿ ಇಲ್ಲ. ಜಾನಕಿಯೊಬ್ಬಳೇ ಸರಿಯಾಗಿರುವುದು ಎಂಬ ಭಾವ ಅವಳಿಗೆ ಇತ್ತು. ಬೇರೆಯವರ ಕಷ್ಟಸುಖಗಳಿಗೆ ಕಿವಿಗೊಡುತ್ತಿರಲಿಲ್ಲ. ತನ್ನದೇ ಪ್ರಪಂಚದಲ್ಲಿ ಸುಖಿಯಾಗಿರುವಂಥ ಭಾವದಲ್ಲಿದ್ದಳು.

ಹೀಗಿರುವಾಗ ಜಾನಕಿ ತನ್ನ ಗೆಳತಿ ಯಮುನಾಳ ಕಿವಿಮಾತಿನಿಂದ ಅರೆಮನಸ್ಸಿನಿಂದಲೇ ಒಂದು ತಿಂಗಳ ಯೋಗಾಭ್ಯಾಸ ತರಬೇತಿ ಪಡೆದುಕೊಂಡಳು. ತರಬೇತಿ ತರುವಾಯ ಜಾನಕಿ ಪ್ರತಿ ದಿನ ಬೆಳಗ್ಗೆ ಒಂದು ಗಂಟೆ ತಪ್ಪದೆ ಯೋಗಾಭ್ಯಾಸ ನಡೆಸುತ್ತಿದ್ದಳು. ಆಶ್ಚರ್ಯವೆಂದರೆ ಕೇವಲ ಒಂದು ವರ್ಷದಲ್ಲಿ ಅವಳಲ್ಲಿ ಮಹತ್ತರ ಬದಲಾವಣೆ ಗೋಚರಿಸಿತು. ಜಾನಕಿಗೆ ಸಿಟ್ಟು ಮೂಗಿನ ತುದಿಯಲ್ಲೇ ಇತ್ತು. ಮನೆಯವರ ಬಳಿ ಮಾತಾಡುವಾಗ ಸಿಡುಕಿನಿಂದಲೇ ಮಾತಾಡುತ್ತಿದ್ದಳು. ಬೇರೆಯವರ ಮಾತನ್ನು ಕೇಳಲು ಅವಳಿಗೆ ತಾಳ್ಮೆ ಎಂಬುದಿರುತ್ತಿರಲಿಲ್ಲ. ಅವಳಿಗೆ ಅರಿಯದಂತೆ ಈಗ ಅವಳ ಮಾತಿನಲ್ಲಿ ನಯವಿನಯ ಬೆರೆತಿದೆ. ಪರರ ಮಾತನ್ನು ಕೇಳುವ ತಾಳ್ಮೆಯ ಗುಣ ಬಂದಿದೆ. ತನಗಿಂತ ವಯಸ್ಸಿನಲ್ಲಿ ದೊಡ್ಡವರು ಜಾನಕಿಯನ್ನು ‘ಆಂಟಿ’ ಎಂದು ಕರೆದರೆ ಮೊದಲೆಲ್ಲ ಸಿಟ್ಟುಗೊಳ್ಳುತ್ತಿದ್ದವಳು ಈಗ ‘ಅಜ್ಜಿ’ ಎಂದರೂ ಖುಷಿ ಪಡುತ್ತಾಳೆ – ಅಷ್ಟು ಗೌರವ ತನಗೆ ತೋರಿಸುತ್ತಾರಲ್ಲ ಎಂದು!

ಇದೆಲ್ಲ ಸಾಧ್ಯವಾಗಿದ್ದು ಹೇಗೆ? ನಿರಂತರ ಯೋಗಾಭ್ಯಾಸದಿಂದಲೇ ಈ ಪವಾಡ ನಡೆಯಲು ಸಾಧ್ಯವಾಗಿರುವುದು ಎಂದು ಜಾನಕಿ ಮುಕ್ತಮನದಿಂದ ಹೇಳುತ್ತಾಳೆ. ನಾವು ಮಾಡುವ ಯೋಗಾಸನಗಳಿಂದ ಶರೀರದ ಬಾಹ್ಯ ಅವಯವಗಳ ಗೊತ್ತಾದ ಚಲನವಲನಗಳಿಂದ ಶರೀರದ ವಿವಿಧ ಆಂತರಿಕ ಅವಯವಗಳ ಮೇಲೆ ನಿರ್ದಿಷ್ಟ ಒತ್ತಡ ಬೀಳುವುದರಿಂದ ಒಳಗಿನ ಅವಯವಗಳು ಚುರುಕುಗೊಂಡು ಪರಿಶುದ್ಧವಾಗಿ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಇದರಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಲಭಿಸುತ್ತದೆ. ಅದರಲ್ಲಿ ಸಂಶಯವೇ ಇಲ್ಲ.

ಜಾನಕಿಗೆ ಮೊದಲು ಹತ್ತು ಮೆಟ್ಟಲು ಹತ್ತಿದರೆ ಏದುಸಿರು ಬರುತ್ತಿತ್ತು. ಈಗ ನೂರು ಮೆಟ್ಟಲು ಹತ್ತಿ ಇಳಿದರೂ ಸುಸ್ತು ಎಂಬ ಮಾತು ಬರುವುದಿಲ್ಲ. ನಿರಂತರ ಯೋಗಾಭ್ಯಾಸದಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ ಎಂಬುದು ಅವಳ ಬಾಳಿನಲ್ಲಿ ಆದ ಅನುಭವವೇ ಸಾರಿ ಹೇಳುತ್ತದೆ. ಪರರಲ್ಲಿ ದಯೆ, ಕರುಣೆ, ಕ್ಷಮೆ, ಪ್ರೀತಿ ಇತ್ಯಾದಿ ಗುಣಗಳು ಮೊದಲೇ ಇದ್ದದ್ದು ಇನ್ನಷ್ಟು ಜಾಗೃತಾವಸ್ಥೆಯಲ್ಲಿರಲು ಯೋಗಾಭ್ಯಾಸ ಸಹಾಯ ಮಾಡುತ್ತದೆ. ಶರೀರದಲ್ಲಿ ಹೊಕ್ಕ ದ್ವೇಷ, ಅಸೂಯೆ, ಸಣ್ಣತನ, ಇತ್ಯಾದಿ ದುರ್ಗುಣಗಳು ಇದ್ದರೆ ಅವನ್ನು ಮೇಲೆ ಬರಲು ಬಿಡುವುದಿಲ್ಲ. ಅಲ್ಲೇ ಹೊಸಕಿ ಹಾಕುತ್ತದೆ. ಇದರಿಂದ ಮನೆಯವರೆಲ್ಲರ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಪ್ರತಿಯೊಂದು ಶಾಲೆಯಲ್ಲಿ ಪ್ರತಿ ನಿತ್ಯ ಅರ್ಧ ಗಂಟೆ ಮಕ್ಕಳಿಗೆ ಯೋಗಾಭ್ಯಾಸ ತರಗತಿ ಕಡ್ಡಾಯವಾಗಿ ಇರಲೇಬೇಕು. ಈ ಕಾಲದ ಸ್ಪರ್ಧಾಯುಗದಲ್ಲಿ ಮಕ್ಕಳಿಗೆ ಕಲಿಕೆಯ ಒತ್ತಡ ತುಂಬ ಇರುತ್ತದೆ.  ಅದನ್ನು ಮಾನಸಿಕವಾಗಿ ಎದುರಿಸಲು ಯೋಗ, ಪ್ರಾಣಾಯಾಮ ಅತ್ಯಗತ್ಯ. ಅವರ ಮನಸ್ಸೂ ಇದರಿಂದ ಸದೃಢಗೊಳ್ಳುತ್ತದೆ.  ಶಾಲೆಯ ಪರೀಕ್ಷೆಯಲ್ಲಿ ಅಂಕ ಕಡಿಮೆಯಾಯಿತೆಂದೋ ಅಥವಾ ನಪಾಸಾದೆವೆಂದೋ ಮಕ್ಕಳ ಆತ್ಮಹತ್ಯೆ, ಮನೆಬಿಟ್ಟು ತೆರಳುವಿಕೆ ಮುಂತಾದ ಅನಿಷ್ಟ ಯೋಚನೆಗಳು ಸುಳಿಯಲು ಆಗ ಅವಕಾಶವಿರುವುದಿಲ್ಲ. ಪ್ರತಿ ದಿನದ ಯೋಗಾಭ್ಯಾಸದಿಂದ ಅವರ ಮನಸ್ಸು ಪ್ರಫುಲ್ಲಗೊಂಡಿರುತ್ತದೆ. ಪಾಠದ ಕಡೆ ಗಮನ ಕೊಡಲು ಸಹಕಾರಿಯಾಗುತ್ತದೆ.  ಚಿಕ್ಕಂದಿನಲ್ಲೇ ಯೋಗಾಭ್ಯಾಸ ಮಾಡಿದರೆ ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವೂ ಉತ್ತಮಗೊಳ್ಳುವುದರಲ್ಲಿ ಸಂಶಯವಿಲ್ಲ. ಇದರಿಂದ ಬಾಲಕರು ಸಂಸ್ಕಾರ ಕಲಿತು ಮುಂದೆ ಈಗ ನಮ್ಮ ಸಮಾಜದಲ್ಲಿ ನಡೆಯುತ್ತಿರುವ  ವಿಕೃತ   ಮನೋಭಾವಗಳು ಬೆಳೆಯದಂತೆ ಮನಸ್ಸು ನಿಗ್ರಹಗೊಂಡೀತು.

ಹೇಗೆ ತಾಯಿ ತನ್ನ ಮಗುವಿನ ಬೇಕು–ಬೇಡಗಳನ್ನು ತಾನೇ ಅರಿತು ಪೂರೈಸುತ್ತಾಳೆಯೋ ಹಾಗೆಯೇ ಸಕಲ ಜೀವರಾಶಿಗಳಿಗೂ ತಾಯಿಯಾಗಿರುವ ಪ್ರಕೃತಿಮಾತೆ ಎಲ್ಲವನ್ನೂ ನಮಗೆ ನೀಡುತ್ತಾಳೆ. ಎಲ್ಲ ಜೀವಿಗಳಿಗೂ ಮಿಗಿಲಾಗಿ ಮನುಜನಿಗೆ ಮಾತಾಡುವ, ಯೋಚನೆ ಮಾಡುವ ಶಕ್ತಿಯನ್ನು ನೀಡಿದ್ದಾಳೆ. ಜೀವನ ಒಂದು ಸುಂದರ ಸರಳ ಬದುಕು. ಸುಲಭ ಸರಳವಾದ ನಮ್ಮ ಜೀವನಗಾಥೆಗೆ ಆಲಸ್ಯ, ಗುರಿ ಇಲ್ಲದ ದುಡಿಮೆ, ಅಸೂಯೆ, ದ್ವೇಷ, ಅತಿ ಆಸೆ ಎಲ್ಲ ಸೇರಿಸಿ ಅದನ್ನು ನಾವು ಜಟಿಲಗೊಳಿಸಿದ್ದೇವೆ. ಹೀಗೆ ನಾವೇ ಹಾಕಿದ ಈ ಸಂಕೋಲೆಗಳಿಂದ ಬಿಡುಗಡೆ ಪಡೆಯಲು ಸಂತೃಪ್ತಿಯಿಂದ ಬಾಳಲು ಆಧ್ಯಾತ್ಮಿಕತೆ  ನಮಗೆ ದಾರಿ ತೋರಿಸುತ್ತದೆ.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು |

ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ||

ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |

ಹೊರಡು ಕರೆ ಬರಲಳದೆ – ಮಂಕುತಿಮ್ಮ ||

-ರುಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT