ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಮಹತ್ವ ಅರಿಯೋಣ ಪೋಲಾಗುವುದನ್ನು ತಪ್ಪಿಸೋಣ

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬೇಸಿಗೆಯ ಬಿಸಿ ಏರುತ್ತಿರುವಂತೆ ನೀರಿನ ಸಮಸ್ಯೆಯ ತೀವ್ರತೆಯೂ ಹೆಚ್ಚಾಗುತ್ತಿದೆ. ರಾಜ್ಯದ ವಿವಿಧೆಡೆಗಳಲ್ಲಿ ನೀರಿಗಾಗಿ ಅನುಭವಿಸುತ್ತಿರುವ ಸಂಕಷ್ಟಗಳು ವರದಿಯಾಗುತ್ತಲೇ ಇವೆ.

ದೂರದಿಂದ ಕೊಡ ನೀರು ಹೊತ್ತುತರುವುದು, ತಳ್ಳುಗಾಡಿಗಳಲ್ಲಿ ನೀರನ್ನು ಒಯ್ಯುವುದು  ಅಥವಾ ನೀರಿಗಾಗಿ ಕೊಳವೆ ಬಾವಿ, ನೀರಿನ ಟ್ಯಾಂಕರ್ ಮುಂದೆ ಮಹಿಳೆಯರು ಸಾಲುಗಟ್ಟಿ ನಿಲ್ಲುವ ದೃಶ್ಯಗಳು  ಮಾಮೂಲಾಗಿವೆ. ಭಾರತದಲ್ಲಿ ಈಗಲೂ ಸುಮಾರು 7.6 ಕೋಟಿ ಜನರಿಗೆ ಸುರಕ್ಷಿತವಾದ ಕುಡಿಯುವ ನೀರಿನ ಲಭ್ಯತೆ ಇಲ್ಲ.  
 
ಕಾರ್ಖಾನೆಗಳು  ಹೊರಬಿಡುವ ತ್ಯಾಜ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ಮಲಿನಗೊಳ್ಳುತ್ತಿರುವ ನದಿಗಳಿಂದಾಗಿ ನೀರಿನ ಸಮಸ್ಯೆ  ಮತ್ತಷ್ಟು ದೊಡ್ಡದಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಂದು ಈ ಬಾರಿಯ ವಿಶ್ವ ಜಲ ದಿನವನ್ನು ನಾವು ಆಚರಿಸುತ್ತಿದ್ದೇವೆ.
 
‘ನೀರನ್ನು ಏಕೆ ಪೋಲು ಮಾಡಬೇಕು’ ಎಂಬುದು ಈ ಬಾರಿಯ ಜಲ ದಿನದ ಘೋಷವಾಕ್ಯ.  ಇಂದು ನಾವು ಅನುಭವಿಸುತ್ತಿರುವ ಜಲ ಬಿಕ್ಕಟ್ಟನ್ನು ಗಮನಿಸಿದರೆ ಈ ಘೋಷವಾಕ್ಯದ ಮಹತ್ವ ಅರಿವಾಗುತ್ತದೆ. ನಮ್ಮ ಮನೆ, ನಗರ, ಉದ್ಯಮ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಬಳಕೆಯಾಗಿ ಹರಿದು ಹೋಗುವ ತ್ಯಾಜ್ಯ ನೀರಿನ ಪ್ರಮಾಣ ದೊಡ್ಡದು.
 
ಈ ನೀರು ಸಂಸ್ಕರಣಗೊಂಡು ಮರುಬಳಕೆಯಾಗದೆ ವ್ಯರ್ಥವಾಗುತ್ತಿದೆ. ಜೊತೆಗೆ ಮಾಲಿನ್ಯವನ್ನೂ ಸೃಷ್ಟಿಸುತ್ತಿದೆ.  ಆದರೆ ತ್ಯಾಜ್ಯ ನೀರನ್ನು ಕಡಿಮೆ ಮಾಡುವುದಲ್ಲದೆ ಅದನ್ನು ಸುರಕ್ಷಿತವಾಗಿ ಸಂಸ್ಕರಿಸಿ ಮರುಬಳಕೆ ಮಾಡಲು ಅವಕಾಶವಿದೆ. ಈ ಬಗ್ಗೆ ಚಿಂತಿಸಲು ಇದು ಸಕಾಲ. 
 
ಭಾರತದ  ಆರ್ಥಿಕತೆ ಕೃಷಿಯನ್ನೇ ದೊಡ್ಡದಾಗಿ ಅವಲಂಬಿಸಿದೆ. ಆದರೆ ನೀರಿನ ಕೊರತೆ ಹಾಗೂ ಪದೇಪದೇ ರಾಷ್ಟ್ರವನ್ನು ಕಾಡುತ್ತಿರುವ ಬರದಿಂದ ಆರ್ಥಿಕ ಪ್ರಗತಿ ಮೇಲಾಗುವ ಪರಿಣಾಮ ದೊಡ್ಡದು. ಇಂತಹ ಸಂದರ್ಭದಲ್ಲಿ ನೀರಿನ ಪೋಲು ತಡೆಯುವ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯ.
 
ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರ ಜೀವನಶೈಲಿಯಿಂದ  ಆಗುತ್ತಿರುವ ನೀರಿನ ಪೋಲು ಈಗಾಗಲೇ ನಮಗೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಜನಜಾಗೃತಿಯಾಗಬೇಕು. ಮುಂದೊದಗಬಹುದಾದ ನೀರಿನ ಸಮಸ್ಯೆಯ ಅಗಾಧತೆಯ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು.
 
ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ 18ರಷ್ಟು  ಮಂದಿ ಭಾರತದಲ್ಲಿದ್ದಾರೆ. ಆದರೆ ಜಗತ್ತಿನಲ್ಲಿ ಒಟ್ಟು ಲಭ್ಯವಿರುವ ಜಲ ಸಂಪನ್ಮೂಲಗಳಲ್ಲಿ ಭಾರತ ಹೊಂದಿರುವ ಪಾಲು ಕೇವಲ ಶೇ 4.  ಇದನ್ನು ನಾವು ಅರಿತುಕೊಳ್ಳಬೇಕು.
 
ಹೀಗಾಗಿ  ನೀರಿನ ಪ್ರತಿ  ಹನಿಯೂ ಎಷ್ಟು ಮುಖ್ಯ ಎಂಬುದು ಅರಿವಾಗಬೇಕು. ಭಾರತದ ಬಹು ಭಾಗಗಳಲ್ಲಿ  2040ರೊಳಗೆ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಲಿದೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ.

2030 ಹಾಗೂ 2040ರ ನಡುವೆ ವಿಶ್ವದ ಅನೇಕ ಭಾಗಗಳು ನೀರಿನ ಅಭಾವ ಎದುರಿಸಲಿವೆ. ಈ ಪೈಕಿ ಭಾರತವೂ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. ಇದನ್ನು ನಿರ್ವಹಿಸಲು ನಾವು ಸಜ್ಜುಗೊಳ್ಳಬೇಕಿದೆ.
 
ಕಳೆದ ವರ್ಷ ತೀವ್ರ ಬೇಸಿಗೆಯಿಂದ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಷ್ಟ್ರದ 13 ರಾಜ್ಯಗಳ ಸುಮಾರು 300 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿತ್ತು. ಮಹಾರಾಷ್ಟ್ರದ ಲಾತೂರ್‌ಗೆ ಕುಡಿಯುವ ನೀರನ್ನು ರೈಲುಗಳ ಮೂಲಕ ಕಳಿಸಿದ ವಿದ್ಯಮಾನವೂ ನಡೆಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. 
 
ನದಿ ನೀರಿನ ಸೂಕ್ತ ಸಂಗ್ರಹ ಹಾಗೂ ಬಳಕೆಗೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದಲೂ  ಶುದ್ಧ ನೀರು ಪೋಲಾಗುತ್ತಿದೆ. ಇದನ್ನು ನಾವು  ಗಂಭೀರವಾಗಿ ಪರಿಗಣಿಸಬೇಕು.  ಭಾರತದಲ್ಲಿ ಅನೇಕ ಪ್ರಮುಖ ನದಿಗಳು ಹರಿಯುತ್ತವೆ.
 
ಜೊತೆಗೆ ಇಲ್ಲಿ  ವಾರ್ಷಿಕ ಸರಾಸರಿ 1,170 ಮಿಲಿಮೀಟರ್ ಮಳೆ ಬೀಳುತ್ತದೆ. ಹೀಗಿದ್ದೂ  ಈ ಮಳೆ ನೀರಿನ ಸಂಗ್ರಹ,  ಸಂರಕ್ಷಣೆ ಹಾಗೂ ಮರುಬಳಕೆಯ ಬಗ್ಗೆ ನಮ್ಮಲ್ಲಿ ಹೆಚ್ಚಿನ ಅರಿವು ಇಲ್ಲ. ಜೊತೆಗೆ ಈ ಕುರಿತಾದ ಸೂಕ್ಷ್ಮತೆಯೂ ಇಲ್ಲ.  
 
ಬೆಂಗಳೂರು ನಗರದಲ್ಲಿ ನಿರ್ದಿಷ್ಟ ಅಳತೆಯ ನಿವೇಶನದಲ್ಲಿ ಕಟ್ಟಿದ ಮನೆಗಳಲ್ಲಿ ಮಳೆ ನೀರು ಸಂಗ್ರಹಿಸಬೇಕೆಂದು ರಾಜ್ಯ ಸರ್ಕಾರ ನೀತಿ ರೂಪಿಸಿದೆ.  ಆದರೆ ಈ ನೀತಿ ಎಷ್ಟರಮಟ್ಟಿಗೆ ಅನುಷ್ಠಾನವಾಗಿದೆ ಎಂಬುದು ಪ್ರಶ್ನೆ.
 
ನೀರು  ಪೋಲಾಗದಂತೆ ಸಂಗ್ರಹಿಸಿಟ್ಟುಕೊಳ್ಳಲು ಮೂಲ ಸೌಕರ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು. ಇದಕ್ಕೆ ತಂತ್ರಜ್ಞಾನವನ್ನು, ಲಭ್ಯವಿರುವ ಸ್ಥಳೀಯ ಮಾದರಿಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಿಯಾಶೀಲರಾಗಲು ಸಂಕಲ್ಪ ತೊಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT