ಬೆಂಗಳೂರು: ಹತ್ತಿರದಲ್ಲೇ ಹರಿಯುವ ತೊರೆಯ ಸದ್ದು, ನೂರೆಂಟು ಬಗೆಯ ಹಕ್ಕಿಗಳ ಕಲರವ, ಅಲ್ಲಲ್ಲಿ ಆನೆಗಳ ಹೆಜ್ಜೆ ಗುರುತು, ಪಟ್ಟೆ ಹುಲಿರಾಯ ತಾನೂ ಬಂದಿದ್ದೇನೆ ಎಂದು ಸಾರಲು ಮರದ ಮೇಲೆ ಮಾಡಿದ್ದ ಉಗುರಿನ ಗುರುತು. ಇದು ಯಾವುದೋ ಕಾಡಿನ ಬಣ್ಣನೆಯಲ್ಲ; ಕೊಡಗಿನಲ್ಲೇ ಇರುವ ಖಾಸಗಿ ಕಾಡಿನ ಚಿತ್ರಣ.

ಕಾಡು ನಾಶ ವ್ಯಾಪಕವಾಗುತ್ತಿರುವ ದಿನಗಳಲ್ಲಿ, ತಲಕಾವೇರಿ ಬೆಟ್ಟಗಳ ತಪ್ಪಲಿಗೆ ಹೊಂದಿಕೊಂಡಿರುವ ಗೋಣಿಕೊಪ್ಪದ ದೇವನಾಣೆ ಗ್ರಾಮ ಪಂಚಾಯ್ತಿಗೆ ಸೇರುವ ತೆರಾಲು ಗ್ರಾಮದ ಬಳಿಯ 300 ಎಕರೆ ಖಾಸಗಿ ‘ಸಾಯ್ ಸ್ಯಾಂಚುರಿ’ (SAI- ಸೇವ್ ಅನಿಮಲ್ ಇನಿಷಿಯೇಟಿವ್) ಇದೀಗ ಭಾರತದ ಪ್ರಥಮ ಖಾಸಗಿ ಕಾಡು ಎನ್ನುವ ಹೆಗ್ಗಳಿಕೆ ಪಡೆದುಕೊಂಡಿದೆ.

1991ರಲ್ಲಿ ಕೊಡಗಿಗೆ ಬಂದ ಉತ್ತರ ಭಾರತೀಯ ಡಾ.ಅನಿಲ್ ಕುಮಾರ್ ಮಲ್ಹೋತ್ರ ಹಾಗೂ ಅಮೆರಿಕದ ನ್ಯೂಜೆರ್ಸಿಯ ಪಮೇಲಾ ಮಲ್ಹೋತ್ರ ದಂಪತಿ ಈ ಕಾಡಿನ ಸಂರಕ್ಷಕರು. ಆರಂಭದಲ್ಲಿ ಖರೀದಿಸಿದ್ದ 55 ಎಕರೆಯಷ್ಟು ಕಾಫಿ ತೋಟ ಮತ್ತು ಅರೆಬರೆ ಕಾಡಿನ ಜೊತೆಗೆ ವರ್ಷದಿಂದ ವರ್ಷಕ್ಕೆ ಒಂದಿಷ್ಟು ಜಾಗ ಖರೀದಿಸಿ 300 ಎಕರೆಯಷ್ಟು ವಿಸ್ತರಿಸಿದ್ದಾರೆ.

ಇದೀಗ ಸಂಪೂರ್ಣವಾಗಿ ಮರಗಿಡ ಬಳ್ಳಿಗಳೇ ಭೂಮಿಯನ್ನು ಆವರಿಸಿಕೊಂಡಿವೆ. ತಲಕಾವೇರಿ ಕಡೆಯಿಂದ ಬರುವ ಎರಡು ತೊರೆಗಳು ಇಲ್ಲಿಯ ಜೀವಿಗಳಿಗೆ ಅಮೃತವನ್ನು ಉಣಿಸುತ್ತಿವೆ. ತೊರೆಗಳಿಂದ ನಿಸರ್ಗ ನಿರ್ಮಿತ ಪುಟ್ಟ ಕೆರೆಯೊಂದು ತಲೆಯೆತ್ತಿದೆ. ಇಲ್ಲಿ ಬೇಸಿಗೆಯಲ್ಲೂ ನೀರು ಹರಿಯುತ್ತಿದೆ. ಇದು ರಾತ್ರಿ ನೀರು ಅರಸಿಬರುವ ಆನೆ, ಕಾಟಿ, ಜಿಂಕೆ, ಕಾಡುಹಂದಿಯಂತಹ ಪ್ರಾಣಿಗಳಿಗೆ ಜೀವನಾಧಾರವಾಗಿದೆ.

ಡಾ.ಅನಿಲ್ ಮತ್ತು ಪಮೇಲಾ ನಿಸರ್ಗ ಪ್ರೇಮಿಗಳು. ಹಿಮಾಲಯ ತಪ್ಪಲಿನ ಡೂನ್ ಶಾಲೆಯಲ್ಲಿ ಓದಿ ನಂತರ ಉನ್ನತ ವ್ಯಾಸಂಗಕ್ಕೆ ಜರ್ಮನಿಯ ಹ್ಯಾಂಬರ್ಗ್ಗೆ ತೆರಳಿದ್ದ ಅನಿಲ್ ನಂತರ ಅಮೆರಿಕದ ನ್ಯೂಜೆರ್ಸಿಗೆ ಹೋದರು.

1973ರಲ್ಲಿ ಪಮೇಲಾ ಅವರ ಪರಿಚಯವಾಯಿತು. ಬಾಲ್ಯದಿಂದಲೂ ಪಮೇಲಾ ಅವರಿಗೆ ಕಾಡು ಸುತ್ತುವ ಹವ್ಯಾಸ. ಇದು ಕಾಲೇಜು ದಿನಕ್ಕೂ ಮುಂದುವರೆಯಿತು. ಕೊಲರೆಡೊದಲ್ಲಿ ಅನಿಲ್ ಅವರನ್ನು ಭೇಟಿಯಾದ ನಂತರ ಜತೆಯಾಗಿ ಪಶ್ಚಿಮ ಅಮೆರಿಕದತ್ತ ತೆರಳಿದರು. ಅಲ್ಲಿ ಅಣುವಿಕಿರಣಕ್ಕೆ ತುತ್ತಾಗಿದ್ದ ಗುಡ್ಡಗಾಡಿನಲ್ಲಿ ನಿಸರ್ಗ ಉಳಿಸಲು ಅವರು ಕೆಲ ವರ್ಷ ಹೋರಾಡಿದರು.

ಅನಿಲ್ ಅವರ ತಂದೆಯ ನಿಧನದ ನಂತರ 1986ರಲ್ಲಿ ಭಾರತಕ್ಕೆ ಬಂದ ಇವರಿಬ್ಬರು ಕೆಲ ವರ್ಷ ಹಿಮಾಲಯದ ಬಳಿ ನೆಲೆಸಿದ್ದರು. ‘1991ರಲ್ಲಿ ಮೊದಲ ಬಾರಿಗೆ ನಾಗರಹೊಳೆಗೆ ಬಂದಾಗ ಅಂದು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕೆ.ಎಂ.ಚಿನ್ನಪ್ಪ ಅವರೇ ಈ ಜಾಗ ತೋರಿಸಿದರು. 93ರಲ್ಲಿ ಮೊದಲ ಬಾರಿಗೆ ಜಾಗ ತೆಗೆದುಕೊಂಡೆವು. 95ರಲ್ಲಿ ಕೊಡಗಿಗೆ ಸ್ಥಳಾಂತರವಾದೆವು. ಅಂದಿನಿಂದ ಕೊಡಗು ನಮ್ಮ ಕರ್ಮಭೂಮಿಯಾಯಿತು’ ಎಂದು ಪಮೇಲಾ ಹೇಳಿದರು.

‘ಭೂಮಿಯನ್ನು ಖರೀದಿಸಿದಾಗ ಕಾಡು, ಕುರುಚಲು ಕಾಡು, ಕಾಫಿ, ಏಲಕ್ಕಿ ತೋಟ ಇತ್ತು. ಇದೀಗ ಸಂಪೂರ್ಣ ಕಾಡು ಆವರಿಸಿದೆ. ನಾವು ಬಂದಾಗ ಇದ್ದ ಭೂಮಿಗೂ ಇಂದಿಗೂ ಹೋಲಿಸಿದರೆ ಕಾಡು ದಟ್ಟವಾಗಿದೆ. ಜೀವವೈವಿಧ್ಯ ಹೆಚ್ಚಾಗುತ್ತಿದೆ. ಹಲವಾರು ಕಾಡುಪ್ರಾಣಿಗಳು ನಮ್ಮ ಕಾಡಿಗೆ ಬರುತ್ತಿವೆ.

ಕೆಲ ವರ್ಷದ ಹಿಂದೆ ಇಲ್ಲಿಗೆ ಬಂದಿದ್ದ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕ ಡಾ.ಸುನಿಲ್ ಭಾಗವತ್ ಈ ಕಾಡನ್ನು ಮೆಚ್ಚಿ ಹೊಗಳಿದರು. ಜೀವವೈವಿಧ್ಯ ಹೆಚ್ಚಾಗಿದೆ ಎನ್ನುತ್ತಿದ್ದರು. ಕಾಡನ್ನು ಕತ್ತರಿಸದಿದ್ದರೆ ಅದು ತಾನೇ ತಾನಾಗಿ ಬೆಳೆಯುತ್ತದೆ.

ಪ್ರಾಣಿ ಪಕ್ಷಿಗಳು ಬಂದು ನೆಲೆಸುತ್ತವೆ. ನೀರು ಸಹ ಉಕ್ಕುತ್ತದೆ. ಇಲ್ಲಿ ಕಾಡುಕುರಿ, ನೀರು ನಾಯಿ, ಕಣ್ಮರೆಯಾಗುತ್ತಿರುವ ನೀಲಗಿರಿ ಮಾರ್ಟಿನ್ (ಒಂದು ಬಗೆಯ ಅಳಿಲು) ಸಹ ಮನೆಮಾಡಿವೆ’ ಎಂದು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿ ಅರಣ್ಯನಾಶದ ಬಗ್ಗೆ ಬೇಸರಪಟ್ಟ ಪಮೇಲಾ, ‘ನಮ್ಮ ಜಿಲ್ಲೆಯಲ್ಲಿ ಸುಮಾರು ಸಾವಿರ ಎಕರೆ ಕಾಡು ಕಬಳಿಕೆಯಾಗಿದೆ. ಕಾಡು ಕಡಿದರೆ ಮಳೆ ಕಡಿಮೆಯಾಗುತ್ತದೆ. ಹಿಂದೆ ನಾವು ಇಲ್ಲಿಗೆ ಬಂದಾಗ ವರ್ಷಕ್ಕೆ ಮೂರು ಋತುಗಳಲ್ಲಿ ಮಳೆಯಾಗುತ್ತಿತ್ತು.

ವರ್ಷಕ್ಕೆ ಸುಮಾರು 350 ಇಂಚು ಮಳೆ ಬೀಳುತ್ತಿತ್ತು. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗಿ ಈಗ 175 ಇಂಚಿಗೆ ಇಳಿದಿದೆ. ಈ ವರ್ಷ ನಾವು ನೋಡಿದಂತೆ ಮೊದಲ ಸಲ ಕೊಡಗಿಗೆ ಬರ ಬಡಿದಿದೆ. ಇದೇ ರೀತಿ ಕಾಡು ಕಡಿಯುವುದು ಮುಂದುವರಿಸಿದರೆ ಕಾವೇರಿ ನದಿ ಬತ್ತಿ ಹೋಗುತ್ತದೆ’ ಎಂದು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು.

‘ಕಾಡು ಬೆಳೆಸಿದ್ದೇವೆ, ತೊರೆ ಹರಿಯುತ್ತದೆ’ ಎಂದು ಇವರು ಮಳೆ ನೀರು ಸಂಗ್ರಹದಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ಕಾಡಿನಲ್ಲಿ ಕಟ್ಟಿರುವ ಐದು ಮನೆಗಳಲ್ಲೂ ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಿದ್ದಾರೆ. ಎರಡು ಇಕೋ-ಟೂರಿಸಂ ಕೊಠಡಿ ಮಾಡಿದ್ದಾರೆ. ಪ್ರವಾಸಿಗರ ಆಯ್ಕೆಯನ್ನು ಇವರೇ ಮಾಡುತ್ತಾರೆ. ಮೋಜಿಗಾಗಿ ಬರುವವರಿಗೆ ಪ್ರವೇಶವಿಲ್ಲ. ಪರಿಸರ ಸಂಶೋಧನೆಗಾಗಿ ಬರುವವರಿಗೆ ಆದ್ಯತೆ ನೀಡುತ್ತಾರೆ.

300 ಎಕರೆ ಕಾಡು ಬೆಳೆಸಿ ಉಳಿಸಿದ್ದರೂ ಇಂಗಾಲದ ಲೆಕ್ಕಾಚಾರ ಹಾಕಿಸಿದ್ದೀರಾ ಎನ್ನುವ ಪ್ರಶ್ನೆಗೆ, ‘ಕಾರ್ಬನ್ ಕ್ರೆಡಿಟ್ ಪಡೆಯಲು 25 ಸಾವಿರ ಅಮೆರಿಕನ್ ಡಾಲರ್ ಕಟ್ಟಬೇಕು. ಅದೆಲ್ಲಾ ನಮಗೆ ಆಗಲ್ಲ.

ಸಂಸ್ಥೆಗಳು ಮುಂದೆ ಬಂದು ಲೆಕ್ಕಾಚಾರ ಹಾಕಿದರೆ ಸಂತೋಷ. ಆದರೆ, ನಮಗೆ ಮರಗಳು ಉಳಿದಿದೆ ಎನ್ನುವುದೇ ಹೆಮ್ಮೆಯ ವಿಷಯ. ಕಾಡು ಮತ್ತು ಪ್ರಾಣಿಗಳನ್ನು ಉಳಿಸಲು ನಮ್ಮ ಜೀವನವನ್ನು ಮುಡಿಪಾಗಿ ಇಟ್ಟಿದ್ದೇವೆ. ಇದಕ್ಕಾಗಿಯೇ ನಾವು ಉದ್ದೇಶಪೂರ್ವಕವಾಗಿ ಮಕ್ಕಳನ್ನು ಪಡೆಯಲಿಲ್ಲ. ಕಾಡು– ಕಾಡುಪ್ರಾಣಿಗಳೇ ನಮ್ಮ ಮಕ್ಕಳು’ ಎಂದು ಮಾತು ಮುಗಿಸಿದರು.

ಕಾಡು ಬೆಳೆಸುವ ಜೊತೆಯಲ್ಲಿ ಒತ್ತುವರಿಯಾಗಿದ್ದ 30 ಎಕರೆಯನ್ನು ಖರೀದಿ ಮಾಡಿ ಸರ್ಕಾರಕ್ಕೆ ವಾಪಸ್ ನೀಡಿದ್ದೇವೆ.
ಡಾ.ಅನಿಲ್ ಕುಮಾರ್ ಮಲ್ಹೋತ್ರ , ಪಮೇಲಾ ಮಲ್ಹೋತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.