ಅದು 80ರ ದಶಕ. ಮಂಡ್ಯದ ವಿ.ಸಿ.ಫಾರಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಡಾ.ಮುದುಕಪ್ಪ ಬಸಪ್ಪ ಗುಳೇದ, ಶೇಂಗಾ, ಜೋಳದ ಹೊಲಕ್ಕೆ ನೀರು ಹಾಯಿಸುವ ರೀತಿ 10 ದಿನಗಳಿಗೊಮ್ಮೆ ನೀರುಣಿಸಿ ಭತ್ತ ಬೆಳೆದಿದ್ದರು. ಅಲ್ಪ ನೀರಿನಲ್ಲಿ ನೆಲದ ತೇವಾಂಶ ಕಾಯ್ದುಕೊಂಡು ನಡೆಸಿದ್ದ ಈ ಯಶಸ್ವಿ ಪ್ರಯೋಗಕ್ಕೆ ಕೃಷಿ ತಜ್ಞ ಡಾ.ಎ.ಎಸ್.ಕುಮಾರಸ್ವಾಮಿ ಮಾರ್ಗದರ್ಶನ ನೀಡಿದ್ದರು.

ಭತ್ತದ ಸಸಿಗಳನ್ನು ಸದಾ ಗದ್ದೆಯ ನೀರಿನಲ್ಲಿ ತೇಲಿಸಬೇಕಿಲ್ಲ. ಲಭ್ಯ ನೀರಿನ ಸಮರ್ಪಕ ಬಳಕೆಯಾದರೆ ಒಣ ನೆಲದಲ್ಲೂ ಬೆಳೆಯಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದರು. ಈ ಬಗ್ಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಡಾ.ಗುಳೇದ ಅವರಿಗೆ ಪಿಎಚ್ಡಿ ಪದವಿ ನೀಡಿತು. ಡಾ.ಕುಮಾರಸ್ವಾಮಿ, ತಮಿಳುನಾಡು ಸರ್ಕಾರದಿಂದ ಉತ್ತಮ ಮಾರ್ಗದರ್ಶಕ ಗೌರವ ಪಡೆದರು.

ಇದು, ಡಾ.ಗುಳೇದ ಅವರಿಗೆ ತಮ್ಮ ಹಿರಿಯ ಸಹೋದ್ಯೋಗಿ ಡಾ.ಜಿ.ವಿ.ಹಾವಣಗಿ ಅವರೊಂದಿಗೆ ಸೇರಿ ನೀರಿನ ಸಮರ್ಪಕ ನಿರ್ವಹಣೆ ಬಗ್ಗೆ ಕಾವೇರಿ ಕೊಳ್ಳದಲ್ಲಿ ಪ್ರಯೋಗಗಳ ಕೈಗೊಳ್ಳಲು ಪ್ರೇರಣೆಯಾಯಿತು. ಹೇಮಾವತಿ, ಹಾರಂಗಿ, ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಯೋಗಾತ್ಮಕ ಸಂಶೋಧನೆ ಕೈಗೊಂಡರು. ಜಲಾಶಯದ ನೀರು, ನಾಲೆ ಮೂಲಕ ಹರಿದು ಗದ್ದೆಗೆ ಸೇರುವ ವೇಳೆಗೆ ಶೇ 15ರಷ್ಟು ಪೋಲಾಗುವುದನ್ನು ನೀರಾವರಿ ಇಲಾಖೆಗೆ ಅಂಕಗಣಿತದ ಲೆಕ್ಕದಲ್ಲಿ ಸಿದ್ಧಗೊಳಿಸಿ ಅದಕ್ಕೆ ಪರಿಹಾರ ಕೂಡ ಹೇಳಿಕೊಟ್ಟರು.

ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಯಲ್ಲಿ (ವಾಲ್ಮಿ) ಕಾರ್ಯನಿರ್ವಹಿಸಿ ರೈತರು, ನೀರುಗಂಟಿಗಳು, ಎಂಜಿನಿಯರ್ಗಳಿಗೆ ನೀರಿನ ಮಿತ ಬಳಕೆ ಬಗ್ಗೆ ಕೆಲಕಾಲ ಪಾಠ ಹೇಳಿದ ಡಾ.ಗುಳೇದ, ನಂತರದ ಎರಡೂವರೆ ದಶಕ ವಿಜಯಪುರದ ಅಖಿಲಭಾರತ ಒಣಬೇಸಾಯ ಸಂಶೋಧನಾ ಯೋಜನೆ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡಿದರು. ಮರಳು ಮುಚ್ಚಿಗೆ, ನಿಗದಿತ ಸಾಲು ಬೇಸಾಯ, ಅಗಲ ತಳದ ಬದುಗಳ ನಿರ್ಮಾಣ, ತಳ ಒಡ್ಡು ನಿರ್ಮಾಣ, ಗುಳಿ ಪದ್ಧತಿ, ಚೌಕಮಡಿ ಮೂಲಕ ಹರಿಯುವ ನೀರನ್ನು ಹಿಡಿದಿಟ್ಟು ಕೃಷಿ ಮಾಡುವ ರೀತಿಗೆ ಸಾಣೆ ಹಿಡಿದರು.

ಹುನಗುಂದದ ನಾಗರಾಳ ಕುಟುಂಬದ ಜಲಯಜ್ಞ ಕೈಂಕರ್ಯ ಕಂಡರು. ಘನಮಠ ಶಿವಯೋಗಿಗಳ ಪ್ರೇರಣೆಗೆ ಒಳಗಾಗಿ ಆ ಕುಟುಂಬ ತಲೆತಲಾಂತರವಾಗಿ ಕೈಗೊಂಡಿದ್ದ ಬರನಿರೋಧಕ ಜಾಣ್ಮೆಗೆ ಅಕ್ಷರ ರೂಪ ನೀಡಿದರು. ಅದರ ಫಲವಾಗಿ ನಾಗರಾಳದ ಮಲ್ಲಣ್ಣ ಅವರಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.

ನಿವೃತ್ತಿಯ ನಂತರ ಬಾಗಲಕೋಟೆಯಲ್ಲಿ ನೆಲೆಸಿರುವ ಡಾ.ಗುಳೇದ, ಈಗಲೂ ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ರೈತರಿಗೆ ಬರ ನಿರ್ವಹಣೆ ಕಲಿಸುತ್ತಾರೆ. ಅವರ ಪ್ರೇರಣೆಯಿಂದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ರೈತರು ಬ್ಯಾಂಕ್ನಲ್ಲಿ ಸಾಲ ಮಾಡಿ ಒಣನೆಲಕ್ಕೆ ಮರಳು ಮುಚ್ಚಿಗೆ ಮಾಡಿಸಿ ಬರದಲ್ಲೂ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ತಮ್ಮ ಸಾಧನೆಯ ಬಗ್ಗೆ ಡಾ.ಮುದುಕಪ್ಪ ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ...

- ಏನಿದು ಮರಳು ಮುಚ್ಚಿಗೆ, ನಿಗದಿತ ಸಾಲು ಬೇಸಾಯ?

ಕಟ್ಟಡ ನಿರ್ಮಾಣಕ್ಕೆ ಬಳಸುವ ಮರಳನ್ನು ಸೋಸಿದಾಗ, ಇಲ್ಲವೇ ಹಳ್ಳ–ಕೊಳ್ಳಗಳಲ್ಲಿ ಸಿಗುವ ಕಲ್ಲು ಮಿಶ್ರಿತ ದಪ್ಪ ಮರಳು ತಂದು ಜಮೀನುಗಳಲ್ಲಿ ಐದು ಇಂಚು ದಪ್ಪ ಹರಡಿದಲ್ಲಿ ಮರಳು ಮುಚ್ಚಿಗೆ ಸಿದ್ಧವಾಗುತ್ತದೆ. ಮರಳು, ಶಾಖ ನಿರೋಧಕ.

ಬಿಸಿಲಿಗೆ ಮೇಲಿನ ಪದರು ಕಾಯುತ್ತದೆ ಹೊರತು ಒಳಗೆ ಶಾಖ ಹಾಯಲು ಬಿಡುವುದಿಲ್ಲ. ಇದರಿಂದ ಮರಳಿನ ಪದರದ ಕೆಳಗಿನ ಮಣ್ಣಿನಲ್ಲಿ ಸದಾ ತೇವಾಂಶ ಇರುತ್ತದೆ. ಟ್ರ್ಯಾಕ್ಟರ್ನಿಂದ ಉಳುಮೆ ಮಾಡಿದಲ್ಲಿ ಮರಳು ಮಣ್ಣಿನೊಂದಿಗೆ ಮಿಶ್ರವಾಗುತ್ತದೆ. ಅದನ್ನು ತಪ್ಪಿಸಲು ಬಿತ್ತನೆಗೆ ಮುನ್ನ ಎತ್ತುಗಳನ್ನು ಬಳಸಿ ಕಿರುಗುಂಟೆಯಿಂದ ಹರಗಿದರೆ ಸಾಕು. ಸ್ವಲ್ಪ ಮಳೆಬಂದರೂ ಕಣ್ಮುಚ್ಚಿ ಒಂದು ಬೆಳೆ ತೆಗೆಯಬಹುದು. ಮರಳಿನ ಕೊರತೆ ಇದ್ದಲ್ಲಿ ಕೃತಕ ಮರಳನ್ನೂ ಬಳಸಬಹುದು.

- ನಿಗದಿತ ಸಾಲು ಬೇಸಾಯ ಹೇಗೆ?

ನಿಗದಿತ ಸಾಲು ಬೇಸಾಯ ಪದ್ಧತಿಯಲ್ಲಿ ಜಮೀನಿನ ಬದುಗಳಲ್ಲಿ ಮೊದಲು ಗ್ಲಿರಿಸೆಡಿಯಾ ಹಾಗೂ ಹೊಂಗೆ ಬೆಳೆಸಬೇಕು. ನಿರ್ದಿಷ್ಟ ಅಳತೆಯಲ್ಲಿ ಸಾಲು ಹೊಡೆದು ಅದರಲ್ಲಿ ಈ ಗಿಡಗಳ ಹಸಿರೆಲೆ ಗೊಬ್ಬರ ತುಂಬಿ ಮಣ್ಣು ಮುಚ್ಚಬೇಕು.

ನಂತರ ಆ ಸಾಲಿನ ಎರಡೂ ತುದಿಯಲ್ಲಿ ಬೀಜ ಬಿತ್ತನೆ ಮಾಡಬೇಕು. ಹಸಿರೆಲೆ ಗೊಬ್ಬರ ಕಳೆತು ಅದರೊಂದಿಗೆ ಮಳೆ ನೀರು ಸೇರಿಕೊಂಡರೆ ಭೂಮಿ ಸದಾ ಹಸಿಯಾಗಿರುತ್ತದೆ. ಜೊತೆಗೆ ಭೂಮಿಗೆ ಉತ್ಕೃಷ್ಟ ಪೋಷಕಾಂಶ ಲಭ್ಯವಾಗುತ್ತವೆ. ಈ ಪದ್ಧತಿಯಲ್ಲಿ ತೊಗರಿ ಸಮೃದ್ಧವಾಗಿ ಬೆಳೆಯುತ್ತದೆ.

- ಓಡುವ ನೀರು ಹಿಡಿದಿಡಲು ಇನ್ನಷ್ಟು ವಿಧಾನಗಳಿವೆಯೇ...?

ಹೌದು. ಗುಳಿ ಪದ್ಧತಿ, ಗುಂಡಾವರ್ತಿ ಪದ್ಧತಿ, ಬೆಣಚಕಲ್ಲು ಮುಚ್ಚಿಗೆ, ಕಲ್ಲು ಒಡ್ಡು, ಬದು, ಅಂತರ ಬೆಳೆ ಪದ್ಧತಿ, ಅಗಲ ತಳದ ಒಡ್ಡು, ಚೌಕಮಡಿ ಪದ್ಧತಿ ಮೂಲಕವೂ ಮಳೆ ನೀರು ಸಂರಕ್ಷಿಸಿಟ್ಟು ಒಣಬೇಸಾಯದಲ್ಲಿ ಬೆಳೆ ತೆಗೆಯಲು ಸಾಧ್ಯ.

- ರಾಜ್ಯದಲ್ಲಿ ಯಾವ ಪ್ರದೇಶದಲ್ಲಿ ಈ ತಾಂತ್ರಿಕತೆ ಬಳಕೆ ಸಾಧ್ಯ?

ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಧಾರವಾಡ, ಭಾಗಶಃ ಬೆಳಗಾವಿ, ಗದಗ, ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯ 35 ತಾಲ್ಲೂಕುಗಳಲ್ಲಿ ಬಹುತೇಕ ರಾಜಸ್ತಾನದ ವಾತಾವರಣವೇ ಇದೆ. ಇಲ್ಲಿ ಮಳೆ ಪ್ರಮಾಣ ವಾರ್ಷಿಕ 600 ಮಿ.ಮೀಗಿಂತಲೂ ಕಡಿಮೆ. ಅಲ್ಲಿನ 54 ಲಕ್ಷ ಹೆಕ್ಟೇರ್ ಪೈಕಿ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಒಣಬೇಸಾಯ ಇದೆ. ಅಲ್ಲೆಲ್ಲಾ ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.