ಬೆಂಗಳೂರು: ಒಡಲು ಸೇರಿದ ರಾಸಾಯನಿಕ, ವಿಷಕಾರಿ ಅಂಶಗಳಿಂದಾಗಿ ಬೆಂಕಿ ಹಾಗೂ ದಟ್ಟ ಹೊಗೆ ಉಗುಳುವ, ನೊರೆ ಉಕ್ಕಿಸಿ ಆಗಾಗ ಸದ್ದು ಮಾಡುವ ಕೆರೆಗಳ ನಡುವೆ, ಆಹ್ಲಾದಕರ ವಾತಾವರಣ ಮತ್ತು ನೆಮ್ಮದಿ ಅರಸಿ ಬರುವವರಿಗೆ ‘ಅಕ್ಷಯಪಾತ್ರೆ’ಯಂತಿದೆ ಬೇಗೂರು–ಹುಳಿಮಾವು ಮುಖ್ಯರಸ್ತೆಯ ಬಳಿ ಇರುವ ಅಕ್ಷಯನಗರ ಕೆರೆ.

ಮೂರ್ನಾಲ್ಕು ವರ್ಷಗಳ ಹಿಂದೆ ಹಾಳುಕೊಂಪೆಯಂತಿದ್ದ ಕೆರೆ ಇಂದು ಎಲ್ಲರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಈ ಕೆರೆಯನ್ನು ಬಿಡಿಎ ಅಥವಾ ಬಿಬಿಎಂಪಿ ಅಭಿವೃದ್ಧಿ ಪಡಿಸಿದ್ದಲ್ಲ. ಅಕ್ಷಯನಗರ ಬಡಾವಣೆ ನಿವಾಸಿಗಳ ಸಂಘಟಿತ ಪ್ರಯತ್ನದಿಂದ ‘ಕಲುಷಿತ ಕೆರೆ’ ಎಂಬ ಹಣೆಪಟ್ಟಿ ಕಳಚಿಕೊಂಡು ‘ಸಮೃದ್ಧ ಕೆರೆ’ಯಾಗಿ ಮಾರ್ಪಟ್ಟಿದೆ.

ಈ ಕೆರೆ ಅಭಿವೃದ್ಧಿಯ ಪ್ರಮುಖ ಸೂತ್ರಧಾರಿ ಕೆನರಾ ಬ್ಯಾಂಕ್ನ ನಿವೃತ್ತ ಅಧಿಕಾರಿ ರಮೇಶ್ ಕುಮಾರ್ ಬನ್ನೂರ್. ಕೆರೆಯನ್ನು ಹೇಗಾದರೂ ಮಾಡಿ ಸ್ವಚ್ಛಗೊಳಿಸಬೇಕು ಎಂದು ನಿರ್ಧರಿಸಿದ ಅವರು, 2015ರ ಜೂನ್ನಲ್ಲಿ ಏಕಾಂಗಿಯಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

ಕೆರೆಯ ಆವರಣದಲ್ಲಿ ಬೆಳೆದಿದ್ದ ಕಳೆಯನ್ನು ತೆಗೆದು ಸ್ವಚ್ಛಗೊಳಿಸುತ್ತಿದ್ದರು. ಇದನ್ನು ಕಂಡ ನಾಲ್ವರು ಯುವಕರು, ‘ಏನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದರು. ‘ಕೆರೆಯನ್ನು ಉಳಿಸುವ ಕೆಲಸದಲ್ಲಿ ನಿರತನಾಗಿದ್ದೇನೆ’ ಎಂದು ರಮೇಶ್ ಉತ್ತರಿಸಿದ್ದರು.

ಇದರಿಂದ ಪ್ರೇರಿತರಾದ ಯುವಕರು, ‘ನಿಮ್ಮ ಜತೆ ನಾವೂ ಕೈ ಜೋಡಿಸುತ್ತೇವೆ. ಪ್ರತಿ ಶನಿವಾರ, ಭಾನುವಾರ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುತ್ತೇವೆ’ ಎಂದು ಹೇಳಿದ್ದರು. ಯುವಕರ ಉತ್ಸಾಹವನ್ನು ಕಂಡು ಮತ್ತಷ್ಟು ಚೈತನ್ಯಶೀಲರಾದ ರಮೇಶ್ ಅವರು ‘ಅಕ್ಷಯಕೆರೆ ಸುತ್ತಮುತ್ತ’ ಎಂಬ ಫೇಸ್ಬುಕ್ ಖಾತೆ ಹಾಗೂ ‘ಜಲನಿಧಿ’ ಎಂಬ ವಾಟ್ಸ್ಆ್ಯಪ್ ಗುಂಪು ರಚಿಸಿದರು. ಕೆಲವೇ ದಿನಗಳಲ್ಲಿ ಈ ತಂಡದೊಟ್ಟಿಗೆ 50 ಯುವಕರು ಸೇರಿಕೊಂಡರು.

ಕೆರೆಯ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದರು. ನೀರಿನಲ್ಲಿ ಬೆಳೆದಿದ್ದ ಪಾಚಿ ಹಾಗೂ ಜೊಂಡನ್ನು ತೆಗೆದು ಹೊರ ಹಾಕಿದರು. ವಾಯುವಿಹಾರಿಗಳಿಗಾಗಿ ಕಾಂಕ್ರೀಟ್ ಬ್ಲಾಕ್ಗಳನ್ನು ಬಳಸದೆ, ನೈಸರ್ಗಿಕ ನಡಿಗೆ ಪಥ ನಿರ್ಮಿಸಿದರು. ನೂರಾರು ಗಿಡಗಳನ್ನು ನೆಟ್ಟರು. ಜತೆಗೆ ಮಕ್ಕಳಿಗಾಗಿ ಯೋಗ ತರಗತಿ ಹಾಗೂ ವ್ಯಕ್ತಿತ್ವ ವಿಕಸನ ತರಗತಿಗಳನ್ನೂ ನಡೆಸಲಾಗುತ್ತಿದೆ.

2008ರಲ್ಲೇ ಸ್ವಚ್ಛತಾ ಕಾರ್ಯ: ‘ಎರಡು ದಶಕಗಳ ಹಿಂದೆ ಕೆರೆಯಲ್ಲಿ ಶುದ್ಧ ನೀರಿತ್ತು. ಕೆರೆಯ ಸುತ್ತಮುತ್ತಲೂ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು.
ದಿನ ಕಳೆದಂತೆ ಜನವಸತಿ ಪ್ರದೇಶವಾಗಿ ಬದಲಾಯಿತು.

ಇದರಿಂದ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ಕೊಳಚೆ ನೀರು ಕೆರೆಯ ಒಡಲು ಸೇರಿ ಕಲುಷಿತಗೊಂಡಿತ್ತು. ಹೀಗಾಗಿ 2008ರಲ್ಲಿ ಕೆಲ ಗೆಳೆಯರು ಸೇರಿಕೊಂಡು ಕೆರೆಯನ್ನು ಸ್ವಚ್ಛಗೊಳಿಸಿದ್ದೆವು. ಕೆಲ ವರ್ಷಗಳ ಬಳಿಕ ಮತ್ತೆ ಕೆರೆ ಕಲುಷಿತಗೊಂಡಿತು’ ಎಂದು ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು 2011ರಲ್ಲಿ ಕೆನರಾ ಬ್ಯಾಂಕ್ ಸೇವೆಯಿಂದ ನಿವೃತ್ತಿ ಹೊಂದಿದೆ. 2012ರಿಂದ 2014ರವರೆಗೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷನಾಗಿದ್ದೆ. ಈ ಅವಧಿಯಲ್ಲಿ ಕೆರೆಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಅಲ್ಲದೆ, ಕೆರೆಯನ್ನು ಸಂರಕ್ಷಿಸಬೇಕು ಎಂದು ಬಿಡಿಎಗೆ ಮನವಿ ಮಾಡಿದೆವು. ಬಿಡಿಎ ₹31 ಲಕ್ಷ ವೆಚ್ಚದಲ್ಲಿ ಕೆರೆಯ ಸುತ್ತಲೂ ತಂತಬೇಲಿ ಅಳವಡಿಸಿತು. ಇದರಿಂದ ನಮಗೆ ಮತ್ತಷ್ಟು ಚೈತನ್ಯ ಬಂತು’ ಎಂದರು.

₹15.5 ಲಕ್ಷ ಸಂಗ್ರಹ: ‘ಕೆರೆಗೆ ಹೋಗುತ್ತಿರುವ ಕೊಳಚೆ ನೀರನ್ನು ನಿಲ್ಲಿಸುವುದು ನಮ್ಮ ಉದ್ದೇಶವಾಗಿತ್ತು. ಇದಕ್ಕಾಗಿ ಒಂದೂವರೆ ಕಿ.ಮೀ. ಉದ್ದದ ಒಳಚರಂಡಿ ನಿರ್ಮಿಸಲು ₹30 ಲಕ್ಷ ಅಗತ್ಯವಿತ್ತು. ಬಡಾವಣೆಯ ಪ್ರತಿ ಮನೆಯಿಂದ ₹4 ಸಾವಿರದಂತೆ ಒಟ್ಟು ₹15.5 ಲಕ್ಷ ಸಂಗ್ರಹ ಮಾಡಿದೆವು. ಉಳಿದ ಹಣವನ್ನು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರು ಶಾಸಕರ ಅನುದಾನದಿಂದ ಭರಿಸಿದರು’ ಎಂದರು.

ಅಂತರ್ಜಲಮಟ್ಟ ವೃದ್ಧಿ: ‘ಅಕ್ಷಯನಗರ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಕಾವೇರಿ ನೀರು ಪೂರೈಕೆ ಮಾಡುತ್ತಿಲ್ಲ. ಕೊಳವೆ ಬಾವಿಗಳನ್ನೇ ಆಶ್ರಯಿಸಬೇಕಾಗಿದೆ. ಆದರೆ, ಅಂತರ್ಜಲಮಟ್ಟ ಕುಸಿಯುತ್ತಿರುವುದರಿಂದ ನೀರಿಗೆ ತತ್ವಾರ ಎದುರಾಗಲಿದೆ ಎಂಬುದನ್ನು ಮನಗಂಡೆವು.

ಹೀಗಾಗಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಿದೆವು. ಪ್ರತಿ ಬೀದಿಯಲ್ಲಿ ಸಣ್ಣ ಇಂಗುಗುಂಡಿಗಳನ್ನು ನಿರ್ಮಿಸಿದೆವು. ಇದರಿಂದ ಈ ಭಾಗದಲ್ಲಿ 1,200 ಅಡಿಗೆ ಇಳಿದಿದ್ದ ಅಂತರ್ಜಲಮಟ್ಟ ಈಗ 600–700 ಅಡಿಗೆ ಏರಿಕೆಯಾಗಿದೆ’ ಎಂದು ಹೇಳಿದರು.

25 ಜಾತಿಯ ಪಕ್ಷಿಗಳ ವಲಸೆ
‘25 ವಿವಿಧ ತಳಿಯ ಪಕ್ಷಿಗಳು ಕೆರೆಗೆ ವಲಸೆ ಬರುತ್ತವೆ. ಈ ಕೆರೆಯಲ್ಲಿ ಶುದ್ಧ ನೀರು, ತಿನ್ನಲು ಹಣ್ಣು–ಹಂಪಲು ಸಿಗುತ್ತದೆ. ಹೀಗಾಗಿ ವಲಸೆ ಬರುವ ಪಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ರಮೇಶ್ ಹೇಳಿದರು.

ಫಲ ನೀಡುವ ಮರಗಳು

‘2008ರಲ್ಲಿ ಪರಿಸರವಾದಿ ಯಲ್ಲಪ್ಪ ರೆಡ್ಡಿ ಮಾರ್ಗದರ್ಶನದಂತೆ ಕೆರೆಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟಿದ್ದೆವು. ಅವು ಈಗ ಫಲ ನೀಡುತ್ತಿವೆ. ಕೆರೆಯ ಆವರಣದಲ್ಲಿ ಒಟ್ಟು 150 ಮರಗಳಿವೆ. ಈ ಪೈಕಿ 20 ನೇರಳೆ ಮರಗಳಿವೆ. ಅಲ್ಲದೆ, ಚೆರ್ರಿ, ಸೀಬೆ, ಹತ್ತಿಹಣ್ಣು ಮರ, ಬಾದಾಮಿ, ಬೇವು ಮರಗಳಿವೆ. ಅಲ್ಲದೆ, ಬಡಾವಣೆಯಲ್ಲಿ ವಿವಿಧೆಡೆ ಮರಗಳನ್ನು ಬೆಳೆಸಲಾಗಿದೆ. ಇಲ್ಲಿನ ಮರ ಹಾಗೂ ವ್ಯಕ್ತಿಯ ಅನುಪಾತ 1:1 ಇದೆ. ಅಂದರೆ, ಬಡಾವಣೆಯ ಪ್ರತಿ ವ್ಯಕ್ತಿಗೆ ಒಂದು ಮರ ಇದೆ. ಆದರೆ, ರಾಜ್ಯದ ಮರ ಹಾಗೂ ವ್ಯಕ್ತಿಯ ಅನುಪಾತ 1:6 ಇದೆ’ ಎಂದು ರಮೇಶ್ ಹೇಳಿದರು.

ಆರ್.ಕೆ.ಪದ್ಮನಾಭ ಸಂಗೀತ ಕಛೇರಿ

‘ಕೆರೆಯ ಅಭಿವೃದ್ಧಿಗಾಗಿ 2008ರಲ್ಲಿ ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ ಅವರು ಸಂಗೀತ ಕಛೇರಿ ನಡೆಸಿಕೊಟ್ಟಿದ್ದರು. ಇದರಿಂದ ₹3.5 ಲಕ್ಷ ಸಂಗ್ರಹವಾಗಿತ್ತು. ಈ ಹಣವನ್ನು ಬ್ಯಾಂಕಿನಲ್ಲಿ ಇಡಲಾಗಿತ್ತು. ಇದರಿಂದ ವಾರ್ಷಿಕ ₹35 ಸಾವಿರ ಬಡ್ಡಿ ಬರುತ್ತಿದೆ. ಈ ಹಣದ ಜತೆಗೆ, ತಂಡದಲ್ಲಿರುವ ಪ್ರತಿ ಸದಸ್ಯರು ತಿಂಗಳಿಗೆ ₹100 ನೀಡುತ್ತಿದ್ದಾರೆ. ಈ ಹಣದಿಂದ ಕೆರೆಯ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ರಮೇಶ್ ತಿಳಿಸಿದರು.

ರಾಜನ ಉಪಪತ್ನಿ ಕಟ್ಟಿಸಿದ ಕೆರೆ

ಬೇಗೂರು ಸಂಸ್ಥಾನದ ಆಳ್ವಿಕೆ ಕಾಲದಲ್ಲಿ ಪ್ಲೇಗ್ ರೋಗ ಬಂದಿದ್ದರಿಂದ ಅಲ್ಲಿನ ಜನರು ಊರು ತೊರೆದು ಹೊರಗೆ ಹೋಗಿದ್ದರು. ಗುಡಿಸಿಲು ಕಟ್ಟಿಕೊಂಡು ವಾಸ ಮಾಡಲು ಆರಂಭಿಸಿದ್ದರು. ಆಗ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದರಿಂದ ರಾಜನ ಉಪಪತ್ನಿ ಈ ಕೆರೆಯನ್ನು ಕಟ್ಟಿಸಿದ್ದರು ಎಂಬ ಪ್ರತೀತಿ ಇದೆ. ಹೀಗಾಗಿ ಇದನ್ನು ಸೂಳೆಕೆರೆ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಕೆರೆಯ ಶೇ 80ರಷ್ಟು ನೀರು ಖಾಲಿ ಆಗಿದ್ದು, ಹೂಳು ತೆಗೆಯಲು ಇದು ಸಕಾಲ. ಬಿಬಿಎಂಪಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
ರಮೇಶ್ ಕುಮಾರ್ ಬನ್ನೂರ್

ದಶಕದ ಹಿಂದೆ ಅಕ್ಷಯನಗರ ಕೆರೆ ಕಾಡಿನಂತೆ ಭಾಸವಾಗುತ್ತಿತ್ತು. ಸ್ವಯಂ ಸೇವಕರು ಸೇರಿಕೊಂಡು ಕೆರೆಯನ್ನು ಸ್ವಚ್ಛಗೊಳಿಸಿದ್ದಾರೆ.
ಡಾ. ಕೆ. ಶ್ರೀನಿವಾಸ ವೈದ್ಯ

ಹಾಳಾಗಿರುವ ಕೆರೆಯನ್ನು ಸಂರಕ್ಷಿಸಲು ಕಟಿಬದ್ಧರಾದೆವು. ವಾರಾಂತ್ಯದಲ್ಲಿ ಕೆರೆಯ ನಿರ್ವಹಣೆಗಾಗಿ ನಮ್ಮ ಸಮಯವನ್ನು ಮೀಸಲಿಡುತ್ತಿದ್ದೇವೆ.
ಪೂರ್ಣಪ್ರಜ್ಞ, ಸಾಫ್ಟ್ವೇರ್ ಎಂಜಿನಿಯರ್

ಬಿಡಿಎ, ಬಿಬಿಎಂಪಿ ಸಹಾಯ ಇಲ್ಲದೆ ಬಡಾವಣೆ ನಿವಾಸಿಗಳು ಕೆರೆ ಅಭಿವೃದ್ಧಿ ಪಡಿಸಿದ್ದಾರೆ. ವಾಯುವಿಹಾರಕ್ಕೆ ಹೇಳಿ ಮಾಡಿಸಿದ ಜಾಗ.
ಡಾ.ಎಚ್.ಕೆ.ಪ್ರಕಾಶ್, ನಿವೃತ್ತ ವ್ಯವಸ್ಥಾಪಕ ನಿರ್ದೇಶಕ, ಕೆಎಂಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.