ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥ

ಅಹೋರಾತ್ರಿ ಧರಣಿ ಮುಂದುವರಿಕೆ
Last Updated 21 ಮಾರ್ಚ್ 2017, 20:33 IST
ಅಕ್ಷರ ಗಾತ್ರ
ಬೆಂಗಳೂರು: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರವೂ ಮುಂದುವರಿಯಿತು.
 
ಧರಣಿಯಲ್ಲಿ ಪಾಲ್ಗೊಂಡ ಗುಂಡಮ್ಮ (54), ಜಯಂತಿ (32), ಮಂಜುಳಾ ರಾಜ್‌ (50), ರತ್ನ ರಾಮಕೆರೆ (38), ಕವಿತಾ (28), ರತ್ನಮ್ಮ (35), ಗೀತಾ (30), ಸರೋಜಮ್ಮ, ಭಾರತಿ ಹಾಗೂ ರೇಣುಕಾ ಎಂಬುವರು ಅಸ್ವಸ್ಥಗೊಂಡರು. ಅವರನ್ನು ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು.
 
‘ನಿದ್ರಾಹೀನತೆ ಹಾಗೂ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದ ಕಾರಣ ಮಹಿಳೆಯರು ನಿತ್ರಾಣಗೊಂಡಿದ್ದಾರೆ. ಹೀಗಾಗಿ ತಲೆನೋವು, ತಲೆಸುತ್ತು ಹಾಗೂ ತೀವ್ರತರಹದ ಬಳಲಿಕೆ ಉಂಟಾಗಿದೆ. ಅವರಿಗೆ ತುರ್ತು ಚಿಕಿತ್ಸೆ  ನೀಡಿದ್ದೇವೆ.

ಈ ಪೈಕಿ ಕೆಲವರನ್ನು ಮಧ್ಯಾಹ್ನದ ವೇಳೆಗೆ ಮನೆಗೆ ಕಳುಹಿಸಲಾಗಿದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಎಚ್‌. ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.ರಾಮನಗರ ಜಿಲ್ಲೆಯ ಗೀತಾ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.
 
‘ಅವರು ಮಧ್ಯಾಹ್ನ ಊಟ ಮಾಡಿರಲಿಲ್ಲ. ಹೀಗಾಗಿ ನಿತ್ರಾಣಗೊಂಡಿದ್ದರು. ಕಡಿಮೆ ರಕ್ತದೊತ್ತಡದಿಂದಾಗಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದೆವು. ಮಹಿಳೆಯರು ಅಸ್ವಸ್ಥಗೊಳ್ಳುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ’ ಎಂದು ಗೀತಾ ಅವರ ಸಂಬಂಧಿ ಭಾಗ್ಯಮ್ಮ ದೂರಿದರು.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತಾಳೂರು ಗ್ರಾಮದ ಸರೋಜಮ್ಮ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
 
‘ಮಧ್ಯಾಹ್ನ ಊಟ ಸಿಕ್ಕಿರಲಿಲ್ಲ. ಉರಿ ಬಿಸಿಲಿನ ಝಳಕ್ಕೆ  ತಲೆ ಸುತ್ತು ಬಂತು. ಕೆಳಗೆ ಬಿದ್ದೆ.  ಗ್ಲುಕೋಸ್‌ ನೀಡಿದ ಬಳಿಕ ಸುಧಾರಿಸಿಕೊಂಡಿದ್ದೇನೆ’ ಎಂದರು.
ನಿತ್ಯ ಕರ್ಮಕ್ಕೆ ಪಡಿಪಾಟಲು: ಸೋಮವಾರ ಬೆಳಿಗ್ಗೆ ಧರಣಿ ಆರಂಭಿಸಿದ್ದ ಸಾವಿರಾರು ಮಹಿಳೆಯರು, ಬಳಿಕ ರಾತ್ರಿಯಿಡೀ ರಸ್ತೆಯಲ್ಲೇ ಮಲಗಿದ್ದರು.
 
ಸೂರ್ಯೋದಯಕ್ಕೆ ಮುನ್ನವೇ ಎದ್ದ ಮಹಿಳೆಯರು, ಸ್ವಾತಂತ್ರ್ಯ ಉದ್ಯಾನದ ಆಸುಪಾಸಿನಲ್ಲಿರುವ ಸಾರ್ವಜನಿಕ ಶೌಚಾಲಯಗಳತ್ತ ಮುಖ ಮಾಡಿದ್ದರು.  ಅವುಗಳು ಭರ್ತಿ ಆಗಿದ್ದರಿಂದ ಕೆಲವರು ಕೆಂಪೇಗೌಡ ಬಸ್‌ ನಿಲ್ದಾಣದ ಶೌಚಾಲಯಗಳಲ್ಲಿ ನಿತ್ಯ ಕರ್ಮ ಮುಗಿಸಿ ಬಂದರು.
 
‘ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡಲಿಲ್ಲ. ಬೆಳಿಗ್ಗೆ ಬಹಿರ್ದೆಸೆಗೆ ಪರದಾಡಿದೆವು. ಇಲ್ಲಿನ  ಶೌಚಾಲಯಗಳಲ್ಲಿ ಉದ್ದುದ್ದ ಸಾಲುಗಳಿದ್ದವು. ಹಾಗಾಗಿ ಶೌಚಾಲಯ ಹುಡುಕಿಕೊಂಡು ಮೆಜೆಸ್ಟಿಕ್‌ ಸುತ್ತಲಿನ ಇಡೀ ಪ್ರದೇಶ ಸುತ್ತಾಡಿದೆವು’ ಎಂದು ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮದ   ಮಂಜುಳಾ ತಿಳಿಸಿದರು.

ಅಂಗನವಾಡಿ ನೌಕರರ ಸಂಘದ ನಾಗಮಂಗಲ ತಾಲ್ಲೂಕು ಘಟಕದ ಖಜಾಂಚಿ ಜಯಲಕ್ಷ್ಮಿ ಮಾತನಾಡಿ, ‘ಮಲ ವಿಸರ್ಜನೆಗೆ ₹20 ವಸೂಲಿ ಮಾಡಿದರು.  ಮುಖ ತೊಳೆಯಲು ನೀರು ಕೂಡ ಸಿಗಲಿಲ್ಲ. ಹಾಗಾಗಿ ಹಲ್ಲು ಉಜ್ಜುವ ಹಾಗೂ ಮುಖ ತೊಳೆಯುವ ಉಸಾಬರಿಗೆ ಹೋಗಲಿಲ್ಲ. ಈಗ ಜಲಮಂಡಳಿಯವರು ನೀರಿನ ವ್ಯವಸ್ಥೆ ಮಾಡಿದ್ದಾರೆ’ ಎಂದರು.
 
ರಾತ್ರಿಯಿಡೀ ಜಾಗರಣೆ: ಅನೇಕ ಮಂದಿ ಅಹೋರಾತ್ರಿ ಧರಣಿಗೆ ಪೂರ್ವಸಿದ್ಧತೆ ಮಾಡಿಕೊಂಡು ಬಂದಿರಲಿಲ್ಲ. ಹೊದಿಕೆ ತಾರದವರು  ರಾತ್ರಿಯಿಡೀ ಜಾಗರಣೆ ಮಾಡಬೇಕಾಯಿತು.
 
‘ಪ್ರತಿಭಟನೆ ಒಂದು ದಿನಕ್ಕೆ ಮುಗಿಯುತ್ತದೆ ಎಂದು ಭಾವಿಸಿ ಬರಿಗೈಯಲ್ಲಿ ಬಂದಿದ್ದೆವು.  ಧರಣಿ  ರಾತ್ರಿಯೂ ಮುಂದುವರಿದ ಕಾರಣ  ಸಮಸ್ಯೆಯಾಯಿತು. ಹೊದಿಕೆ ಇಲ್ಲದೆ ನಿದ್ದೆ ಬರಲಿಲ್ಲ’ ಎಂದು ಹಾಸನದ ಭಾರತಿ, ಆಶಾ ಹಾಗೂ ಕಮಲಾ ಸಂಕಷ್ಟ  ತೋಡಿಕೊಂಡರು.
 
2 ಬೈಕ್‌ ಆಂಬುಲೆನ್ಸ್‌, 3 ಆಂಬುಲೆನ್ಸ್‌: ಧರಣಿಯ ಸ್ಥಳದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮೂರು ಆಂಬುಲೆನ್ಸ್‌ಗಳು,  ಎರಡು ಬೈಕ್‌ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು.
 
ವ್ಯಾಪಾರ– ವಹಿವಾಟು ಜೋರು: ಶೇಷಾದ್ರಿ ರಸ್ತೆ ಹಾಗೂ ಸ್ವಾತಂತ್ರ್ಯ ಉದ್ಯಾನದ ರಸ್ತೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಧರಣಿ ವ್ಯಾಪಾರಿಗಳ ಪಾಲಿಗೆ ಹಬ್ಬವಾಗಿತ್ತು. ಈ ಸ್ಥಳವು ಪುಟ್ಟ ಮಾರುಕಟ್ಟೆಯಂತಾಗಿತ್ತು. ವಿವಿಧ ಉಡುಪುಗಳಿಂದ ಹಿಡಿದು ಫ್ಯಾನ್ಸಿ ವಸ್ತುಗಳ ಮಾರಾಟಗಾರರು ಅಲ್ಲಿ ಠಳಾಯಿಸಿದ್ದರು. ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರಿಂದ ಕೆಲ ಮಹಿಳೆಯರು ಮುಗಿಬಿದ್ದು ವಸ್ತು ಖರೀದಿಸಿದರು.
 
ಕಲ್ಲಂಗಡಿ, ಪಪ್ಪಾಯ, ಸೀಬೆ ಹಣ್ಣಿನ ವ್ಯಾಪಾರವೂ ಜೋರಾಗಿತ್ತು. ಬಿಸಿಲಿನ ತಾಪದಿಂದ ಬಳಲಿದ್ದವರು, ಕಲ್ಲಂಗಡಿ ಹಣ್ಣು ತಿಂದು ದಣಿವಾರಿಸಿಕೊಂಡರು.
 
ಸವಾರರಿಗೆ ಸಮಸ್ಯೆ: ಪ್ರತಿಭಟನಾಕಾರರು ಶೇಷಾದ್ರಿ ರಸ್ತೆಯ ಮುಕ್ಕಾಲು ಭಾಗವನ್ನು ಆವರಿಸಿಕೊಂಡಿದ್ದರು. ರಸ್ತೆಯ ಒಂದು ಪಥದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕೆ.ಆರ್‌. ವೃತ್ತದ ಕಡೆಗೆ ಹೋಗುವ ವಾಹನಗಳು ಮಂದಗತಿಯಲ್ಲಿ ಸಂಚರಿಸಬೇಕಾಯಿತು. ಇದರಿಂದ ಗುಬ್ಬಿ ತೋಟದಪ್ಪ ರಸ್ತೆಯಲ್ಲೂ  ವಾಹನಗಳ ದಟ್ಟಣೆ ಉಂಟಾಗಿತ್ತು. ವಾಹನಗಳು ಆನಂದರಾವ್‌ ವೃತ್ತದ ಕಡೆಯಿಂದ ರೇಸ್‌ಕೋರ್ಸ್‌ ಮಾರ್ಗವಾಗಿ ಚಾಲುಕ್ಯ ವೃತ್ತದಲ್ಲಿ ಬಲ ತಿರುವು ಪಡೆದು ಕೆ.ಆರ್. ವೃತ್ತ ತಲುಪಿದವು.
 
ಪೊಲೀಸ್‌ ಭದ್ರತೆ: ‘ಪ್ರತಿಭಟನಾ ಸ್ಥಳದಲ್ಲಿ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಡಿಸಿಪಿ, 10 ಎಸಿಪಿ, 20 ಇನ್‌ಸ್ಪೆಕ್ಟರ್ ಸೇರಿ 500 ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಅಲ್ಲದೆ, ಏಳು ಕೆಎಸ್‌ಆರ್‌ಪಿ ತುಕಡಿ, ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ. ಬೆಂಗಳೂರು ವಿಭಾಗದ ಎಲ್ಲಾ ಡಿಸಿಪಿಗಳು ಪಾಳಿ ಆಧಾರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.
 
‘ಹೆಚ್ಚಳ ಮಾಡದ ಕಾರಣ ಹಿಂಪಡೆದಿಲ್ಲ’
‘ಬೆಳಿಗ್ಗೆ ಪ್ರತಿಭಟನಾ ಸ್ಥಳಕ್ಕೆ ಬಂದ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸಾಹಿತಿ ಕೆ.ಮರುಳಸಿದ್ದಪ್ಪ, ‘ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿವೆ.
 
ಈ ಸಂಬಂಧ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸೋಣ ಬನ್ನಿ’ ಎಂದು ಕರೆದರು. ಹಿರಿಯರಿಗೆ ಗೌರವ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಅವರ ಬಳಿ ಹೋದೆವು’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ತಿಳಿಸಿದರು.

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಈಗ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಪ್ರಿಲ್‌ 19ಕ್ಕೆ ಸಭೆ ಕರೆಯಲಾಗಿದೆ. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆಯಿರಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.’

‘ಸಭೆಯ ವಿವರಗಳನ್ನು ಕಾರ್ಯಕರ್ತೆಯರಿಗೆ ತಿಳಿಸಿ ಅವರ ಅಭಿಪ್ರಾಯ ಕೋರಿದೆವು. ಗೌರವಧನ ಹೆಚ್ಚಳದ ಘೋಷಣೆ ಮಾಡುವವರೆಗೂ ಧರಣಿಯನ್ನು ಹಿಂಪಡೆಯುವುದು ಬೇಡ ಎಂದು ಎಲ್ಲರೂ ಒಕ್ಕೊರಲಿನಿಂದ ತಿಳಿಸಿದರು. ಹೀಗಾಗಿ ಧರಣಿಯನ್ನು ಮುಂದುವರಿಸಿದ್ದೇವೆ’ ಎಂದರು.
 
ಜನಪ್ರತಿನಿಧಿಗಳ ಭೇಟಿ: ಮಾತುಕತೆ
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ,  ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ, ಕಾಂಗ್ರೆಸ್‌ ಮುಖಂಡರಾದ ಮೋಟಮ್ಮ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.

‘ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ವಿಧಾನಮಂಡಲ ಅಧಿವೇಶನ ನಡೆಸಲು ಬಿಡುವುದಿಲ್ಲ. ಈ ವಿಷಯದ ಬಗ್ಗೆ ಚರ್ಚೆ ಆಗಲೇ ಬೇಕೆಂದು ಪಟ್ಟು ಹಿಡಿಯುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು. ‘ಸರ್ಕಾರ ನಿಮ್ಮ ಪರವಾಗಿದೆ. ಧರಣಿಯನ್ನು ಹಿಂಪಡೆಯಿರಿ’ ಎಂದು ಉಗ್ರಪ್ಪ  ಮನವಿ ಮಾಡಿದರು.

40 ಕಾರ್ಯಕರ್ತೆಯರ ಬಂಧನ: ‘ಧರಣಿಯಲ್ಲಿ ಪಾಲ್ಗೊಳ್ಳಲು ಕೋಲಾರ ಜಿಲ್ಲೆಯಿಂದ ಬರುತ್ತಿದ್ದ 40 ಕಾರ್ಯಕರ್ತೆಯರನ್ನು ಹೊಸಕೋಟೆ ಬಳಿ ಬಂಧಿಸಲಾಗಿದೆ. ನೂರಾರು ವಾಹನಗಳನ್ನು ಪೊಲೀಸರು ತಡೆದಿದ್ದಾರೆ. ಮಾಲೂರಿನ ರೈಲು ನಿಲ್ದಾಣದಲ್ಲಿ ಕಾರ್ಯಕರ್ತೆಯರಿಗೆ ಟಿಕೆಟ್‌ ನೀಡಿಲ್ಲ’ ಎಂದು ವರಲಕ್ಷ್ಮಿ ದೂರಿದರು.
 
‘80 ಸಂಚಾರಿ ಶೌಚಾಲಯ ವ್ಯವಸ್ಥೆ’
‘ಅಂಗನವಾಡಿ ಕಾರ್ಯಕರ್ತೆಯರ ಅನುಕೂಲಕ್ಕಾಗಿ ಸ್ವಾತಂತ್ರ್ಯ  ಉದ್ಯಾನದ ಬಳಿ 80 ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಮಲಗಲು ಸೂಕ್ತವಾಗುವಂತೆ ರಸ್ತೆಯನ್ನು ಗುಡಿಸಿ,  ಫಾಗಿಂಗ್‌   ಮಾಡಲಾಗಿದೆ. ಜತೆಗೆ ಜಮಕಾನದ ವ್ಯವಸ್ಥೆ ಮಾಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT