ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರ್ಜಲವೇ ಬೇರೆ, ಮೇಲ್ಮೈ ಜಲರಾಶಿಯೇ ಬೇರೆ’

ನೀರು ಉಳಿಸಿ
Last Updated 22 ಮಾರ್ಚ್ 2017, 6:16 IST
ಅಕ್ಷರ ಗಾತ್ರ

ಚಿತ್ರದುರ್ಗ:  ‘ಸಮುದ್ರದ ನಂಟಿದ್ದರೂ, ಉಪ್ಪಿಗೆ ಬಡತನ’ ಎಂಬ ಲೋಕಾರೂಢಿ ಮಾತನ್ನು ಈ ಎರಡು ವರ್ಷಗಳ ಬರಗಾಲ ಮತ್ತಷ್ಟು ನಿಜಮಾಡಿದೆ. ‘ಪಕ್ಕದಲ್ಲೇ ನಾಲೆ ಇದೆ. ನನಗೆ ಐದು ಇಂಚು ನೀರು ಸಿಕ್ಕಿದೆ’ ಎಂದು ನಿರುಮ್ಮಳವಾಗಿದ್ದವರಿಗೂ ಬರ ಪಾಠ ಕಲಿಸಿದೆ.

ಅಂತರ್ಜಲ ಎನ್ನುವುದೇ ಶಾಶ್ವತ, ಮೇಲ್ಮೈ ನೀರು ತಾತ್ಕಾಲಿಕ’ ಎಂಬುದನ್ನು ಅರ್ಥ ಮಾಡಿಸಿದೆ. ಇಂಥ ‘ಜಲಸಾಕ್ಷರತೆ’ ಪಾಠದ ನಡುವೆ ಮತ್ತೊಂದು ‘ವಿಶ್ವ ಜಲ ದಿನ’ ಬಂದಿದೆ. ಈ ಹಿನ್ನೆಲೆಯಲ್ಲಿ  ನದಿ ಪಾತ್ರಗಳಲ್ಲಿ ಉಂಟಾಗಿರುವ ಅಂತರ್ಜಲ ಕೊರತೆ ಬಗ್ಗೆ ಜಲತಜ್ಞ ಎನ್.ದೇವರಾಜರೆಡ್ಡಿ. ‘ಪ್ರಜಾವಾಣಿ’ ಯೊಂದಿಗೆ  ಮಾತನಾಡಿದ್ದಾರೆ. ಮಳೆಗಾಲದ ಸಿದ್ಧತೆ ಕುರಿತು ಮಾಹಿತಿ ನೀಡಿದ್ದಾರೆ.

*ನಾಲೆ ಪಕ್ಕದ ಜಮೀನಿನಲ್ಲೂ ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ.  ಕಾರಣ ಏನು ?
ನಾಲೆಯಲ್ಲಿ ಹರಿಯುವ ಎಲ್ಲ ನೀರು ಭೂಮಿಯ ಅಂತರಾಳಕ್ಕೆ ಇಳಿಯುವುದಿಲ್ಲ. ನೀರು ಹರಿಯುಷ್ಟು ದಿನ ಮಾತ್ರ 10 ರಿಂದ 15 ಅಡಿಗಳವರೆಗೂ ಹರಡಿಕೊಳ್ಳುತ್ತದೆ. ನಾಲೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ  ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ. ಆಗ, 80, 100 ಅಡಿಗೆ 5, 6 ಇಂಚು ನೀರು ಕೊಡುತ್ತಿದ್ದ ಕೊಳವೆಬಾವಿ, ತಕ್ಷಣ ನಿಂತು ಹೋಗುತ್ತದೆ.

*ನದಿ ಪಾತ್ರದಲ್ಲೇ ಅಂತರ್ಜಲ ಕೊರತೆ ಎನ್ನುತ್ತೀರಿ. ಹೇಗೆ? ಸ್ವಲ್ಪ ವಿಸ್ತರಿಸಿ ?
ದಾವಣಗೆರೆ ತಾಲ್ಲೂಕಿನ ಭದ್ರಾ ನಾಲಾ ವ್ಯಾಪ್ತಿಯಲ್ಲಿ ನಾಲ್ಕು ದಶಕಗಳ ಹಿಂದೆ ಭತ್ತ ಬೆಳೆಯುತ್ತಿದ್ದರು. ಒಂದು ಹಂತದಲ್ಲಿ ಅಲ್ಲಿನ ರೈತರಿಗೆ ಭತ್ತ ಬೇಡವೆನಿಸಿತು, ಅಡಿಕೆ ಬೆಳೆಗೆ ವಲಸೆ ಹೋದರು. ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯುತ್ತಿದ್ದಾಗ, ನಾಲೆ ನೀರು ಸಾಕಾಗುತ್ತಿತ್ತು. ಈಗ ಅಡಿಕೆಗೆ ವರ್ಷ ಪೂರ್ತಿ ನೀರು ಬೇಕು. ಅದಕ್ಕಾಗಿ ನಾಲೆ ನೀರಿನ ಜತೆಗೆ ಕೊಳವೆಬಾವಿ ಕೊರೆಸಿದ್ದಾರೆ.

ನಾಲೆಯಲ್ಲಿ ನೀರು ಇರುವವರೆಗೆ ಕೊಳವೆಬಾವಿಗಳು 100 ಅಡಿಗೆ 5ಇಂಚು ನೀರು ಕೊಟ್ಟವು. ಈ ವರ್ಷ ನವೆಂಬರ್‌ನಲ್ಲಿ ನಾಲೆ ಬಂದ್ ಆಯಿತು. 500 ಅಡಿ ಕೊರೆದರೂ ನೀರಿಲ್ಲ. ಕೊಳವೆಬಾವಿ ಸಂಖ್ಯೆ ಹೆಚ್ಚಾಗಿದೆ. ಮೇಲ್ಮೈನಲ್ಲಿ ಹರಿಯುವ ನೀರು ಕಡಿಮೆಯಾದರೆ, ನಾಲೆ ಪಕ್ಕದ ಕೊಳವೆಬಾವಿಯಲ್ಲೂ ನೀರು ಖಾಲಿಯಾಗುತ್ತದೆ.

*ಈ ಸಮಸ್ಯೆ ಭದ್ರಾ ವ್ಯಾಪ್ತಿಯಲ್ಲಿ ಮಾತ್ರವೋ ಅಥವಾ…?
ರಾಜ್ಯದ ಎಲ್ಲ ನದಿ ಪಾತ್ರಗಳಲ್ಲೂ ಕೊಳವೆಬಾವಿಗಳ ಪರಿಸ್ಥಿತಿ ಹೀಗೇ ಇದೆ. ಕಾವೇರಿ ನದಿ ಪಾತ್ರದಲ್ಲಿರುವ ಮದ್ದೂರು ಪಕ್ಕ ಶಿಂಶಾ ನದಿ ಹರಿಯುತ್ತದೆ. ಈಗ ಒಣಗಿದೆ. ಕಳೆದ ವರ್ಷ ಪಕ್ಕದ ಹೊಳೆ ಆಂಜನೇಯ ದೇವಸ್ಥಾನದಲ್ಲಿ 500 ಅಡಿಯಂತೆ ಮೂರು ಕೊಳವೆಬಾವಿ ಕೊರೆಸಿದ್ದರು. ಮೂರರಲ್ಲೂ ನೀರು ಸಿಗಲಿಲ್ಲ. ಕಾವೇರಿ ನದಿ ಹರಿಯುತ್ತಿದ್ದಾಗ, 5 ಇಂಚು ನೀರು ಕೊಡುತ್ತಿದ್ದ ಕೊಳವೆಬಾವಿಗಳು, ನದಿ ಬತ್ತುತ್ತಿದ್ದಂತೆ, ಬರಿದಾಗುತ್ತವೆ.

ಈಗ ದೇಗುಲದವರು ಆ ಕೊಳವೆ ಬಾವಿಗಳಿಗೆ  ಜಲಮರುಪೂರಣ ಮಾಡಿಸಿದ್ದಾರೆ. ಸಮಸ್ಯೆ ಬಗೆಹರಿದಿದೆ. ಆದರೆ ಅಕ್ಕಪಕ್ಕದ ರೈತರ ಸ್ಥಿತಿ ಶೋಚನೀಯವಾಗಿ ಉಳಿದಿದೆ. ತುಂಗಭದ್ರಾ ಜಲಾನಯನ ಪ್ರದೇಶ ಸಿರುಗುಪ್ಪ, ಸಿಂಧನೂರು, ಕಾರಟಗಿಯಲ್ಲೂ ಇದೇ ಪರಿಸ್ಥಿತಿ. ವೀರೇಶ್ ಎಂಬ ರೈತರು ನದಿ ನೀರು ನಂಬಿ, 3 ಎಕರೆಗೆ, 16 ಬೋರ್ ಹಾಕಿಸಿದ್ದರು. ನದಿಯಲ್ಲಿ ನೀರು ಕಡಿಮೆಯಾದಂತೆ, ಕೊಳವೆಬಾವಿ ಬತ್ತಿ ಹೋಗಿದೆ.

*ದಕ್ಷಿಣ ಕನ್ನಡ, ಉತ್ತರ ಕನ್ನಡ, ಕರಾವಳಿಯಲ್ಲಿ ಪರಿಸ್ಥಿತಿ ಹೇಗಿದೆ ?
ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಹರಿಯುತ್ತದೆ. ಅದರ ಪಕ್ಕದಲ್ಲಿರುವ ಪವಿತ್ರವನ ಮತ್ತು ಅಕ್ಕಪಕ್ಕದ ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿರುವ ಕೊಳವೆಬಾವಿಗಳಲ್ಲಿ ನೀರಿಲ್ಲ. ಮಳೆಗಾಲದಲ್ಲಿ ಮಾತ್ರ ಚಾಲನೆಯಲ್ಲಿರುವ ಕೊಳವೆಬಾವಿಗಳು  ಬೇಸಿಗೆಯಲ್ಲಿ ಬಂದ್ ಆಗುತ್ತವೆ. ಈ ಬಾರಿಯಂತೂ ಎಲ್ಲ ಕಾಲದಲ್ಲೂ ಬಂದ್ ಆಗಿವೆ. ಉಡುಪಿಯಲ್ಲಿ ಬೋರ್ ಪಾಯಿಂಟ್ ಮಾಡಲು ಅಂತರ್ಜಲವೇ ಸಿಕ್ಕಿಲ್ಲ. ಪಕ್ಕದಲ್ಲಿ ಸಮುದ್ರ, ಮತ್ತೊಂದು ಭಾಗದಲ್ಲಿ ನದಿ ಹರಿಯುವ ಈ ಜಿಲ್ಲೆಗಳಲ್ಲೂ ಅಂತರ್ಜಲ 500 ಅಡಿಗೆ ಇಳಿದಿದೆ.

*ಹಾಗಾದರೆ ಮೇಲ್ಮೈ ನೀರನ್ನು ಎಷ್ಟು ನಂಬಬಹುದು ?
ಕೆರೆ, ಜಲಾಶಯ, ನಾಲೆ, ನದಿಗಳಲ್ಲಿ ಮಳೆಗಾಲದಲ್ಲಿ ಕಾಣುವ ಜಲರಾಶಿ ನಂಬಿ ಬೆಳೆಗಳನ್ನು ನಿರ್ಧರಿಸುವುದು ಸೂಕ್ತವಲ್ಲ. ‘ನಾಲೆಯಲ್ಲಿ ನೀರಿದೆ, ನಮ್ಮ ಬಾವಿಯಲ್ಲಿ ನೀರು ಮೇಲಗಡೆಯೇ ಕಾಣುತ್ತಿದೆ’ ಎಂದು  ಮೋಟಾರ್ ಹಾಕಿ ನೀರು ತೆಗೆದು ಬೆಳೆ ಬೆಳೆದರೆ, ಫಸಲು ನೀಡುವ ವೇಳೆಗೆ, ಮೇಲ್ಮೈ ನೀರು ಬತ್ತಬಹುದು. ಹಾಗಾಗಿ, ಮೇಲ್ಮೈ ನೀರಿಗಿಂತ, ಅಂತರ್ಜಲದ ಲಭ್ಯತೆ ಮೇಲೆ ವಿಶ್ವಾಸವಿಡುವುದು ಒಳ್ಳೆಯದು.

*ಮಳೆನೀರು ಇಂಗಿಸುವುದು, ನದಿ ಪಾತ್ರದ ರೈತರಿಗೂ ಅನಿವಾರ್ಯವೇ ?
‘ನದಿ, ನಾಲೆಯಲ್ಲಿ ನೀರಿದೆ. ನಾವೇನು ಬೇಕಾದರೂ ಬೆಳೆಯಬಹುದು’ - ಇದು ಎಲ್ಲರಿಗೂ ಇಲ್ಲಿವರೆಗಿದ್ದ ನಂಬಿಕೆ. ಈ ಬಾರಿ ಅದು ಸುಳ್ಳಾಗಿದೆ.
ನದಿ ಪಾತ್ರದವರಷ್ಟೇ ಅಲ್ಲ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶದವರೂ, ಆಯಾ ಕಾಲದಲ್ಲಿ ಜೋರಾಗಿ ಸುರಿದು ಓಡುವ  ಮಳೆ ನೀರನ್ನು ನಿಲ್ಲಿಸಿ, ಭೂಮಿಗೆ ಇಂಗಿಸಲೇಬೇಕು. ಅಂತರ್ಜಲದ ಮೂಲಕ ಸಿಗುವ ಒರತೆ ನೀರೇ ಶಾಶ್ವತ.

*ಈ ಮಳೆಗಾಲಕ್ಕೆ ತಕ್ಷಣ ಏನು ಸಿದ್ಧತೆ ಮಾಡಿಕೊಳ್ಳಬೇಕು ?
ಹೊಸ ಕೊಳವೆಬಾವಿಗಳನ್ನು ಕೊರೆಸುವ ಆಲೋಚನೆ ಬದಿಗಿಟ್ಟು, ಇರುವ ಕೊಳವೆಬಾವಿಗಳ ಸಮೀಪದ ಜಲಸಂಗ್ರಹ ರಚನೆಗಳಿಗೆ ಮಳೆ ನೀರು ಹಿಡಿಯಲು ಬೇಕಾದ ವ್ಯವಸ್ಥೆ ಮಾಡಿ. ಜಮೀನಿನಲ್ಲಿ ಯೋಗ್ಯ ಜಾಗದಲ್ಲಿ ಕೃಷಿ ಹೊಂಡ ಮಾಡಿ, ಮಳೆ ನೀರು ಸಂಗ್ರಹಕ್ಕೆ ಸಿದ್ಧತೆ ಅಗತ್ಯ.

ಟ್ಯಾಂಕರ್ ನೀರಿಗೆ ಸುರಿಯುವ ಹಣದಲ್ಲಿ ಜಮೀನಿನಲ್ಲಿ ಬದು ನಿರ್ಮಿಸಿ, ಬದುಗಳ ಮೇಲೆ ಗಿಡಗಳನ್ನು ಹಾಕಿ. ಈ ಮಳೆಗಾಲದಿಂದಲಾದರೂ, ನಮ್ಮ ಜಮೀನಿನ ಮೇಲೆ ಸುರಿಯುವ ಹನಿ ಹನಿ ಮಳೆ ನೀರನ್ನೂ ಬೇರೆ ಜಮೀನಿಗೆ ಹರಿಯದಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT