ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ–ಪಕ್ಷಿಗಳ ಬಾಯಾರಿಕೆಗೆ ‘ಬಾನಿ’

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಉಚಿತವಾಗಿ ವಿತರಣೆ; ನೆರವಿಗೆ ಬರಲು ದಾನಿಗಳಿಗೆ ಮನವಿ
Last Updated 22 ಮಾರ್ಚ್ 2017, 6:27 IST
ಅಕ್ಷರ ಗಾತ್ರ

ದಾವಣಗೆರೆ: ಈ ಬಿರು ಬೇಸಿಗೆಯಲ್ಲಿ ಹನಿ ನೀರಿಗೂ ತತ್ವಾರ. ಕೆರೆ–ಕಟ್ಟೆಗಳು ಬತ್ತಿ ಹೋಗಿವೆ. ನಲ್ಲಿಗಳು ತೊಟ್ಟಿಕ್ಕು ವುದನ್ನೂ ನಿಲ್ಲಿಸಿವೆ. ಇಡೀ ವಾತಾವರಣ ದಲ್ಲಿ ಹನಿ ನೀರು ಸಿಗದ ಸ್ಥಿತಿ ಇದೆ. ಮನುಷ್ಯನಿಗೆ ಬಾಯಾರಿಕೆಯಾದರೆ ಹೇಗೋ ದಾಹ ನೀಗಿಸಿಕೊಳ್ಳಬಹುದು. ಆದರೆ, ಪ್ರಾಣಿ–ಪಕ್ಷಿಗಳು?

ಇಂತಹದೊಂದು ಆಲೋಚನೆ ಮೂಡಿದಾಗಲೇ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಅವರಿಗೆ ಹೊಳೆದಿದ್ದು ಈ ‘ಬಾನಿ’ ಪ್ರಯೋಗ. ಅವರು ತಮ್ಮ ಮನೆಯ ಮುಂದೆ ನೀರು ತುಂಬಿದ ಬಾನಿ ಇಟ್ಟರು.

ಇಟ್ಟ ದಿವಸವೇ ಅದು ಪ್ರಾಣಿ–ಪಕ್ಷಿಗಳ ಬಾಯಾರಿಸುವ ಜೀವಜಲವಾಯಿತು. ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಈ ಬಾನಿ ಪ್ರಯೋಗ ಈಗ ಇಡೀ ದಾವಣಗೆರೆ ನಗರಕ್ಕೆ ಹಬ್ಬಿ, ಪಕ್ಕದ ಹರಿಹರಕ್ಕೂ ವ್ಯಾಪಿಸಿದೆ.

ಏನಿದು ಬಾನಿ?: ಇದು, ನೀರು ತುಂಬಿಸುವ ಸಿಮೆಂಟ್ ತೊಟ್ಟಿ. ಇದು ಎರಡು ಗಾತ್ರದಲ್ಲಿರುತ್ತದೆ. ಒಂದು ದೊಡ್ಡ ತೊಟ್ಟಿ. ಅದು ಜಾನುವಾರು, ನಾಯಿ, ಹಂದಿಗಳ ನೀರಡಿಕೆ ಈಡೇರಿಸುತ್ತದೆ. ಇನ್ನೊಂದು ಹಕ್ಕಿ–ಪಕ್ಷಿಗಳು ನೀರು ಕುಡಿಯಲು ಅನುಕೂಲ ವಾಗುವಂತೆ ರೂಪಿಸಿದ ಸಣ್ಣ ಬಾನಿ.

ಈ ಬಾನಿಗಳು ಬೇಕು ಎಂದವರ ಮನೆಗೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ ತಲುಪಿಸುವ ವ್ಯವಸ್ಥೆ ಮಾಡುತ್ತದೆ. ಬಾನಿ ಮೇಲೆ ‘ಪಶು, ಪಕ್ಷಿ ಪ್ರೀತಿಸೋಣ....’ ಎಂಬ ಬರಹ ಬರೆಯಲಾಗಿದೆ. ಅಲ್ಲದೇ, ಬಾನಿಯ ಕೊಡುಗೆ ನೀಡಿದ ದಾನಿಗಳ ಹೆಸರನ್ನೂ ನಮೂದಿಸಲಾಗುತ್ತದೆ.

‘ಪ್ರಾಣಿ, ಪಕ್ಷಿಗಳಿಗೆ ನೀರು ದಾನಕ್ಕೆ ಬಾನಿ ಪಡೆದವರ ಸಂಖ್ಯೆ 600ಕ್ಕೂ ಹೆಚ್ಚು. ನಗರದಲ್ಲಿ ಇದುವರೆಗೂ 400ಕ್ಕೂ ಹೆಚ್ಚು ದೊಡ್ಡ ಬಾನಿ, 200ಕ್ಕೂ ಹೆಚ್ಚು ಚಿಕ್ಕ ಬಾನಿಗಳನ್ನು ಟ್ರಸ್ಟ್‌  ನೀಡಿದೆ. ದೊಡ್ಡ ಬಾನಿಗೆ ₹600, ಸಣ್ಣ ಬಾನಿಗೆ ₹200 ವೆಚ್ಚವಾಗುತ್ತದೆ. ದಾನಿಗಳ ಮೂಲಕ ಈ ಖರ್ಚನ್ನು ಭರಿಸಲಾಗುತ್ತದೆ. ಆದರೆ, ಜನರಿಗೆ ಉಚಿತವಾಗಿ ನೀಡಲಾಗುತ್ತದೆ. ಬೇಡಿಕೆ ಹೆಚ್ಚಿದ್ದು ಪೂರೈಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಟ್ರಸ್ಟ್‌ ವ್ಯವಸ್ಥಾಪಕ ಆರ್‌.ಬಿ.ಪಾಟೀಲ್.

‘ಈ ವರ್ಷದ ಬೇಸಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಖರವಾಗುವು ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ–ಪಕ್ಷಿಗಳಿಗೆ ಹನಿ ನೀರು ಸಿಗುವುದು ಕಷ್ಟ. ಹಾಗಾಗಿ, ಪ್ರಾಯೋಗಿಕವಾಗಿ ದಾವಣಗೆರೆ ತರಳಬಾಳು ಬಡಾವಣೆಯ ರಸ್ತೆಯ ಪ್ರತಿ ತಿರುವಿನಲ್ಲೂ ಒಂದೊಂದು ಬಾನಿ ಇಡಲು ಆರಂಭಿಸಿದ್ದೇವೆ.

ಈ ತಿಂಗಳ ಕೊನೆಯ ಒಳಗೆ 100ಕ್ಕೂ ಹೆಚ್ಚು ಬಾನಿ ಇಡುವ ಗುರಿ ಇದೆ. ಹರಿಹರ ನಗರದಲ್ಲೂ ಬೇಡಿಕೆ ಇದ್ದು, ಅಲ್ಲಿಗೆ ಬಾನಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ’ ಎನ್ನುತ್ತಾರೆ ಶಿವನಕೆರೆ ಬಸವಲಿಂಗಪ್ಪ.

‘ಹಲವರು ಮನೆಯ ಮುಂದಿನ ಜಾಗದಲ್ಲಿ, ಮನೆಯ ಅಂತಸ್ತಿನ ಮೇಲೆ ಈ ಬಾನಿಗಳಿಗೆ ಸ್ಥಳ ನೀಡಿದ್ದಾರೆ. ಪಕ್ಷಿಗಳು, ಜಾನುವಾರು ಬಂದು ನೀರು ಕುಡಿದು ಹೋಗುತ್ತವೆ. ಕೆಲವರು ನೀರಿನ ಜತೆಗೆ ಜಾನುವಾರುಗೆ ತಿನ್ನಲು ತಿಂಡಿ ನೀಡುತ್ತಾರೆ. ಪಕ್ಷಿಗಳಿಗೆ ಅಕ್ಕಿ, ವಿವಿಧ ಕಾಳುಗಳನ್ನು ಇಡುತ್ತಾರೆ. ಅವು ನೀರು ಕುಡಿದು, ತಿಂಡಿಯನ್ನೂ ತಿಂದು ಸ್ವಚ್ಛಂದವಾಗಿ ಓಡಾಡಿಕೊಂಡಿವೆ’ ಎನ್ನುತ್ತಾರೆ ಅವರು. 

‘ಟ್ರಸ್ಟ್‌ನಿಂದ ಜನರಿಗೆ ಬಾನಿ ಕೊಡುತ್ತೇವೆ ನಿಜ. ಆದರೆ, ಬೇಸಿಗೆ ಕಾಲದಲ್ಲಿ ಬಾನಿಗೆ ನೀರು ಎಲ್ಲಿಂದ ತರುವುದು ಎಂಬ ಸಮಸ್ಯೆ ಎದುರಾಗು ವುದು ಸಹಜ. ಕೆಲವರು ಟ್ಯಾಂಕರ್ ನೀರು ತರಿಸಿ ಬಾನಿ ತುಂಬಿಸುತ್ತಿದ್ದಾರೆ. ಹಲವರು ಸ್ವಂತ ಬೋರ್‌ವೆಲ್ ಹೊಂದಿದ್ದಾರೆ. ಮನುಷ್ಯ ಎಂದರೆ ಹಂಚಿಕೊಳ್ಳ ಬೇಕು; ಇನ್ನೊಂದು ಜೀವಕ್ಕೆ ನೆರವಾಗ ಬೇಕು. ನಮಗೆ ಸಿಗುವ ನೀರನ್ನೇ ಸ್ವಲ್ಪ ಪ್ರಾಣಿ–ಪಕ್ಷಿಗಳಿಗೆ ಹಂಚಬೇಕು’ ಎನ್ನುತ್ತಾರೆ ಬಸವಲಿಂಗಪ್ಪ.

‘ತೃಪ್ತಿಯ ಕೆಲಸ’
‘ಮೂರು ವರ್ಷ ಆಯಿತು. ಮನೆ ಹತ್ತಿರ ಸುಮಾರು 100 ಲೀಟರ್‌ನ ದೊಡ್ಡ ಬಾನಿ ಇಟ್ಟಿದ್ದೇನೆ. ಮೂರು ದಿವಸ ಕ್ಕೊಮ್ಮೆ ನೀರು ಹಾಕುತ್ತೇನೆ. ಈ ವರ್ಷ ನೀರಿನ ಸಮಸ್ಯೆ ಸ್ವಲ್ಪ ಹೆಚ್ಚಾಗಿದೆ. ಬೋರ್‌ವೆಲ್ ಇದೆ. ನಮ್ಮ ಮನೆ ಹತ್ತಿರ ಜಾನುವಾರು ಗಳು ಚರಂಡಿ ನೀರು ಕುಡಿಯುತ್ತಿದ್ದವು, ಅದನ್ನು ನೋಡಲು ಆಗುತ್ತಿರಲಿಲ್ಲ.

ನಗರದ ಮಧ್ಯೆ ಯಾವುದೇ ಕೆರೆ–ಕಟ್ಟೆಗಳೂ ಇಲ್ಲದಿರುವುದರಿಂದ ಈ ಪ್ರಾಣಿ–ಪಕ್ಷಿಗಳ ಬಾಯಾರಿಕೆ ನೀಗಿಸಲು ಬಾನಿ ಇಟ್ಟಿದ್ದೇನೆ. ಇದು ನನಗೆ ತೃಪ್ತಿ ಕೊಡುವ ಕೆಲಸ’ ಎಂಬ ಅಭಿಪ್ರಾಯ ತರಳಬಾಳು ಬಡಾವಣೆ ನಿವಾಸಿ ಎಂ.ಎಂ ಬಿ.ಇಡಿ ಕಾಲೇಜು ಪ್ರಾಂಶುಪಾಲ ಡಾ.ಎಚ್‌.ವಿ. ವಾಮದೇವಪ್ಪ ಅವರದ್ದು.

*
ಬರಗಾಲದ ಈ ವೇಳೆ ಹನಿ ನೀರೂ ಮುಖ್ಯವಾಗಿರುವಾಗ ಪ್ರಾಣಿ–ಪಕ್ಷಿಗಳಿಗೆ ನೀರು ನೀಡುವ ಈ ಕಾಯಕ ಮಾದರಿಯಾದದ್ದು. ಇದು ಆಂದೋಲನದ ರೀತಿ ಆಗಬೇಕು.
-–ಡಾ.ಬಿ.ಎಂ.ವಿಶ್ವನಾಥ್ ಕಾರ್ಯಾಧ್ಯಕ್ಷರು, ಕರುಣಾ ಜೀವ ಕಲ್ಯಾಣ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT