ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯಾಪಾರಿ ದುರಾಸೆಗೆ ಬೀಳಬಾರದು’

ಅಮರಗೋಳದ ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾಂಗಣದಲ್ಲಿ ಸಿದ್ಧೇಶ್ವರ ಶ್ರೀಗಳಿಂದ ಪ್ರವಚನ
Last Updated 22 ಮಾರ್ಚ್ 2017, 7:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರೈತರು ಬೆಳೆದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಧ್ಯವರ್ತಿ ಕೆಲಸ ಮಾಡುವ ವ್ಯಾಪಾರಿಯ ಕಾರ್ಯ ಶ್ಲಾಘನೀಯ. ಗ್ರಾಹಕರಿಗೆ ಸರಿಯಾಗಿ ತೂಕ ಮಾಡಿಯೇ ವಸ್ತುಗಳನ್ನು ಕೊಡಬೇಕು. ದುರಾಸೆಗೆ ಬೀಳಬಾರದು. ಆಗ ವೃತ್ತಿಗೆ ಶ್ರೇಷ್ಠತೆ ಲಭಿಸುತ್ತದೆ’ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಮಂಗಳವಾರ ಇಲ್ಲಿನ ಅಮರಗೋಳ ಎಪಿಎಂಸಿಯಲ್ಲಿರುವ ವ್ಯಾಪಾರಸ್ಥರ ಸಂಘದ ಸಭಾಂಗಣದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ‘ವ್ಯಾಪಾರಿ ಒಂದು ಮರವಿದ್ದಂತೆ. ಬೇರಿಗೆ ಬಿದ್ದ ನೀರನ್ನು ಮರ ಮೇಲ್ಭಾಗದಲ್ಲಿರುವ ಎಲೆಗಳಿಗೆ ತಲುಪಿಸುತ್ತದೆ.

ಈ ಕೆಲಸವನ್ನು ವ್ಯಾಪಾರಿ ನಿಸ್ಪೃಹತೆಯಿಂದ ಹೃದಯಪೂರ್ವಕವಾಗಿ ಮಾಡಬೇಕು. ರೈತರು ನೂರು ಚೀಲ ಆಹಾರ ಧಾನ್ಯಗಳನ್ನು ಬೆಳೆದರೂ ಅವರು ಬೇರೆಡೆ ಕೊಂಡೊಯ್ಯುವುದಿಲ್ಲ.

ವ್ಯಾಪಾರಿ ಆ ಧಾನ್ಯವನ್ನು ಪಡೆದುಕೊಂಡು ಬಹುದೂರದವರೆಗೆ ಹೋಗುತ್ತಾನೆ. ಈ ಪ್ರಯಾಣದ ಸಂದರ್ಭದಲ್ಲಿ ಧಾನ್ಯಗಳು ಲೂಟಿಯಾಗುವ ಸಂಭವವೂ ಇರುತ್ತದೆ. ಅಂತಹ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಗ್ರಾಹಕರಿಗೆ ತಲುಪಿಸುತ್ತಾನೆ. ಪರಮಾತ್ಮನೂ ಒಂದು ರೀತಿ ವ್ಯಾಪಾರಿಯೇ. ಆತ ನೀರು, ಪ್ರಕೃತಿಯನ್ನು ನೀಡಿದ್ದಾನೆ. ಅದನ್ನು ಪಡೆಯಲು ಶ್ರಮ ಹಾಕುವಂತೆಯೂ ಹೇಳಿದ್ದಾನೆ’ ಎಂದು ವಿಶ್ಲೇಷಿಸಿದರು.

‘ತೂಕ ಮತ್ತು ಅಳತೆಯಲ್ಲಿ ಮೋಸ ಮಾಡಿದರೆ ದೇವರು ಮೆಚ್ಚುವುದಿಲ್ಲ. ಕೊಡುವಾಗ ತೂಕಕ್ಕಿಂತ ಕೊಂಚ ಹೆಚ್ಚಿಗೆ ಕೊಟ್ಟರೂ ನಡೆಯುತ್ತದೆ. ಆದರೆ, ಕಡಿಮೆ ಕೊಡಬಾರದು. ಗ್ರಾಹಕರನ್ನು ಒಳ್ಳೆಯ ಮಾತು ಹಾಗೂ ಹಸನ್ಮುಖಿ ವರ್ತನೆಯಿಂದ ಗೆಲ್ಲಬೇಕು’ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ, ಗೌರವ ಕಾರ್ಯದರ್ಶಿ ಬಸವರಾಜ ಯಕಸಲಾಪುರ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಹಾಗೂ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು. ಇದಕ್ಕೂ ಮುನ್ನ ಜಾನಪದ ತಜ್ಞ ಡಾ. ರಾಮೂ ಮೂಲಗಿ ಜನಪದ ಹಾಗೂ ಗೀಗೀ ಪದಗಳನ್ನು ಪ್ರಸ್ತುತಪಡಿಸಿದರು.

‘ಭಕ್ತಿಯ ಬೀಜ ಮೊಳಕೆಯೊಡೆಯಲಿ’
ಹುಬ್ಬಳ್ಳಿ:
‘ಅಧ್ಯಾತ್ಮದ ಫಲ ಸಿಗಬೇಕಾದರೆ ವ್ಯಕ್ತಿಯಲ್ಲಿ ಭಕ್ತಿಯ ಬೀಜ ಮೂಡಬೇಕು. ಈ ಬೀಜಗಳು ಮೊಳಕೆಯೊಡೆಯಬೇಕಾದರೆ ಉತ್ತಮ ಕಾರ್ಯಕ್ರಮಗಳು ಎಂಬ ಮಳೆ ಸುರಿಯಬೇಕು’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಹೇಳಿದರು.

ನಗರದ ಉಣಕಲ್‌ನ ಸದ್ಗುರು ಸಿದ್ಧೇಶ್ವರ ಸ್ವಾಮಿಗಳ ಮಠದಲ್ಲಿ ನಡೆಯಲಿರುವ ಯುಗಾದಿ ಮಹೋತ್ಸವ ಮತ್ತು ರಥೋತ್ಸವದ ಅಂಗವಾಗಿ ಮಂಗಳವಾರ ನಡೆದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

‘ನೆಲದಲ್ಲಿ ಹಸಿರು ಮೂಡಬೇಕಾದರೆ ಕೇವಲ ಮಳೆ ಬಿದ್ದರೆ ಸಾಲದು. ಮೊಳಕೆಯೊಡೆಯುವ ಬೀಜವೂ ಬೇಕು. ಅಧ್ಯಾತ್ಮಕ್ಕೂ ಈ ಸತ್ಯ ಅನ್ವಯವಾಗುತ್ತದೆ. ಭಕ್ತಿಯ ಬೀಜ ಇಲ್ಲದವರು ಯಾವುದೇ ಅಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರೂ ಫಲ ಸಿಗದು. ಎಲ್ಲವೂ ಒಂದುಗೂಡಿದರೆ ಅಮೃತದ ಫಲ ಸಿಗುತ್ತದೆ’ ಎಂದು ಅವರು ಹೇಳಿದರು.

‘ಪ್ರತಿ ಬಾರಿ ಯುಗಾದಿ ಬರುತ್ತದೆ. ಆದರೆ ವ್ಯಕ್ತಿಯಲ್ಲಿ ಹೊಸತನ ಮೂಡದಿದ್ದರೆ ಈ ಹಬ್ಬಕ್ಕೆ ಮಹತ್ವ ಇಲ್ಲ. ಬದುಕಿನಲ್ಲಿ ಅನುಭವಿಸುವ ಸಿಹಿ ಮತ್ತು ಕಹಿ ಅನುಭವಗಳನ್ನೆಲ್ಲ  ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲು ಯುಗಾದಿ ಕಾರಣವಾಗಬೇಕು’ ಎಂದು ಸ್ವಾಮೀಜಿ ಹೇಳಿದರು.

ಮಹೇಶಾನಂದ ಸ್ವಾಮೀಜಿ, ಕೈವಲ್ಯಾನಂದ ಸ್ವಾಮೀಜಿ, ಮೂರುಸಾವಿರಪ್ಪ ಕೊರವಿ ಮತ್ತು ಸಿದ್ದಯ್ಯ ಹಿರೇಮಠ,  ಪಾಲಿಕೆ ಸದಸ್ಯ  ರಾಜಣ್ಣ ಕೊರವಿ ಹಾಜರಿದ್ದರು.

ಒಳ–ಹೊರಗಿನ ಬಗ್ಗೆ ತಿಳಿಯಿರಿ
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ‘ಪ್ರಪಂಚದಲ್ಲಿ ಜನರು ಹೊರಗೆ ಚಂದ ಕಾಣುತ್ತಾರೆ. ಆದರೆ ಒಳಗೆ ಗುಡುಸಾಗಿರುತ್ತಾರೆ. ದೇವರು ಹೊರಗೆ ಕಠಿಣವಾಗಿ ಕಾಣುತ್ತಾನೆ. ಆದರೆ ಒಳಗೆ ಮೃದುವಾಗಿರುತ್ತಾನೆ. ಒಳಗೂ ಹೊರಗೂ ಚೆನ್ನಾಗಿರುವವರು ಅಧ್ಯಾತ್ಮ ಜೀವಿಗಳು’ ಎಂದರು.

‘ನಮ್ಮ ನಡುವೆ ಶ್ರೀಮಂತರು ಸಾಕಷ್ಟು ಮಂದಿ ಇದ್ದಾರೆ. ಅವರು ಹಣ–ಆಸ್ತಿಯಲ್ಲಿ ಶ್ರೀಮಂತರು. ಆದರೆ ಧರ್ಮಕಾರ್ಯದಲ್ಲಿ ಬಡವರು. ಧಾರ್ಮಿಕತೆ ಬೆಳೆಸಿಕೊಳ್ಳುವ ಶ್ರೀಮಂತ ಮನಸ್ಸು ಇರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT