ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳುಕೊಂಪೆಯಾದ ಪುನರ್ವಸತಿ ಕೇಂದ್ರ

1986ರಲ್ಲಿ ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅಡಿಗಲ್ಲು ಹಾಕಿದ್ದ ಕಟ್ಟಡ
Last Updated 22 ಮಾರ್ಚ್ 2017, 9:04 IST
ಅಕ್ಷರ ಗಾತ್ರ

ಕಾರವಾರ: ಸೀಬರ್ಡ್‌ ಯೋಜನೆಗೆ ಭೂಮಿ ಕಳೆದುಕೊಂಡವರಿಗಾಗಿ ತಾಲ್ಲೂಕಿನ ಮುಡಗೇರಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಪುನರ್ವಸತಿ ಕೇಂದ್ರದ ಕಟ್ಟಡ ನಿರ್ವಹಣೆ ಇಲ್ಲದೇ ಪಾಳುಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಇಲ್ಲಿನ ಸೀಬರ್ಡ್‌ ನೌಕಾನೆಲೆ ಯೋಜನೆಗೆ ಅಕ್ಟೋಬರ್‌ 24, 1986ರಂದು ಆಗಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿ ಅಡಿಗಲ್ಲು ಹಾಕಿದರು. ಯೋಜನೆಗೆ ಜಮೀನು ಹಾಗೂ ಮನೆ ಕಳೆದುಕೊಂಡು ಸಾವಿರಾರು ಮಂದಿ ನಿರಾಶ್ರಿತರಿಗೆ 1995–2005ರ ನಡುವೆ ತಾಲ್ಲೂಕಿನ ತೋಡೂರು, ಅಮದಳ್ಳಿ, ಮುದಗಾ, ಚಿತ್ತಾಕುಲ ಹಾಗೂ ಮುಡಗೇರಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಭಾಗಗಳಲ್ಲಿ ವಸತಿಗೃಹಗಳ ಜತೆಗೆ ಶಾಲೆ, ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿದೆ.

ಮುಖ ಮಾಡದ ನಿರಾಶ್ರಿತರು: ಕರ್ನಾಟಕ– ಗೋವಾ ಗಡಿಭಾಗ ದಲ್ಲಿರುವ ಮುಡಗೇರಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಪುನರ್ವಸತಿ ಕೇಂದ್ರಕ್ಕೆ ಬಹುತೇಕ ಸೀಬರ್ಡ್‌ ನಿರಾಶ್ರಿತರು ಮುಖ ಮಾಡಲಿಲ್ಲ.

ಈ ಭಾಗದಲ್ಲಿ 900ಕ್ಕೂ ಅಧಿಕ ನಿರಾಶ್ರಿತರಿಗೆ ವಸತಿಗೃಹಗಳನ್ನು ನೀಡಲಾಗಿತ್ತು. ಕೇವಲ ಹತ್ತಾರು ಕುಟುಂಬಗಳು ಮಾತ್ರ ಇಲ್ಲಿ ನೆಲೆಸಿವೆ. ಉಳಿದವು ಖಾಲಿ ಬಿದ್ದಿವೆ.

ಆರೋಗ್ಯ ಕೇಂದ್ರ ಹಾಗೂ ಶಾಲೆ ಕಟ್ಟಡಗಳು ಪಾಳುಬಿದ್ದಿದ್ದು, ಅಲ್ಲಿನ ಕಿಟಕಿ, ಬಾಗಿಲುಗಳು ಮುರಿದು ಬಿದ್ದಿವೆ. ಕಟ್ಟಡ ಸುತ್ತ ಆಳೆತ್ತರದ ಗಿಡಗಂಟಿಗಳು ಬೆಳೆದುನಿಂತಿವೆ. ಕಟ್ಟಡ ಕೆಲ ಕೊಠಡಿಯಲ್ಲಿ ದನಕರುಗಳ ಕಳೇಬರವಿದೆ.

‘ಮುಡಗೇರಿ ಗ್ರಾಮದಲ್ಲಿ ನೌಕಾನೆಲೆ ವತಿಯಿಂದಲೇ ಪುನರ್ವಸತಿ ಕೇಂದ್ರವನ್ನು ನಿರ್ಮಿಸಲಾಗಿದೆ. ವಸತಿಗೃಹವನ್ನು ಪಡೆದ ನಿರಾಶ್ರಿತರು ದೂರ ಎಂಬ ಕಾರಣಕ್ಕೆ ಇಲ್ಲಿಗೆ ಬಂದಿಲ್ಲ. ಹೀಗಾಗಿ ಇಲ್ಲಿನ ಕಟ್ಟಡಗಳು ಅನೇಕ ವರ್ಷಗಳಿಂದ ಅನುಪಯುಕ್ತವಾಗಿ ಬಿದ್ದಿದೆ. ಆದರೆ ಇಲ್ಲಿನ ಕಟ್ಟಡವಾಗಲಿ ಅಥವಾ ಜಾಗವನ್ನಾಗಲಿ ಸ್ಥಳೀಯ ಗ್ರಾಮಪಂಚಾಯ್ತಿಯ ಸುಪರ್ದಿಗೆ ನೀಡಿಲ್ಲ’ ಎನ್ನುತ್ತಾರೆ ಮುಡಗೇರಿ ಗ್ರಾಮ ಪಂಚಾಯ್ತಿ ಪಿಡಿಓ ಸಂದೀಪ ದೇವರಾಯ ಕೊಠಾರಕರ.

ಪಂಚಾಯ್ತಿಯಿಂದ ಸೌಕರ್ಯ: ‘ಸೀಬರ್ಡ್‌ ನಿರಾಶ್ರಿತರಿಗೆ ಈ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಪ್ರತಿಯೊಬ್ಬರಿಗೂ 2 ಗುಂಟೆ ಜಾಗದಲ್ಲಿ ವಸತಿ ಗೃಹವನ್ನು ನಿರ್ಮಿಸಲಾಗಿದೆ. ಹೆಚ್ಚಿನ ನಿರಾಶ್ರಿತರು ಇಲ್ಲಿಗೆ ಬರದ ಕಾರಣ ಎಲ್ಲ ಕಟ್ಟಡಗಳು ಬಳಕೆಯಾಗದೇ ಪಾಳುಬಿದ್ದಿದೆ. ಕೆಲ ನಿರಾಶ್ರಿತರು ಇರುವ ವಸತಿಗೃಹಗಳಿಗೆ ಪಂಚಾಯ್ತಿ ವತಿಯಿಂದ ಸೌಕರ್ಯ ಕಲ್ಪಿಸಿಕೊಟ್ಟಿದ್ದೇವೆ’ ಎಂದು ಮುಡಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ ಯೇಸು ನಾಯ್ಕ ಹೇಳಿದರು.

ಸದ್ಬಳಕೆಗೆ ಚಿಂತನೆ: ‘ಮುಡಗೇರಿಯಲ್ಲಿ ಖಾಲಿ ಬಿದ್ದಿರುವ ಕಟ್ಟಡ ಹಾಗೂ ಜಾಗವನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ಕೂಡ ಮಾಡಲಾಗಿದೆ. ಸರ್ಕಾರದ ಯೋಜನೆಗಳಿಗೆ ಈ ಭೂಮಿಯನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ಮಾಡಿದ್ದೇವೆ’ ಎಂದು ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ ‘ಪ್ರಜಾವಾಣಿ’ ತಿಳಿಸಿದರು.

*
ಪಾಳುಬಿದ್ದಿರುವ ಮುಡಗೇರಿ ಪುನರ್ವಸತಿ ಕೇಂದ್ರದ ಕಟ್ಟಡ ಹಾಗೂ ಖಾಲಿ ಜಾಗವನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ.
-ಶಿವಾನಂದ ಕರಾಳೆ,
ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT