ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವೀಯ ಮೌಲ್ಯ ಕುಸಿತದಿಂದ ದೌರ್ಜನ್ಯ ಹೆಚ್ಚಳ’

ಮಕ್ಕಳ ಹಕ್ಕುಗಳಿಗಾಗಿ ಜಾರಿಯಲ್ಲಿರುವ ಕಾಯ್ದೆ ಕುರಿತು ಉಪನ್ಯಾಸ
Last Updated 22 ಮಾರ್ಚ್ 2017, 9:39 IST
ಅಕ್ಷರ ಗಾತ್ರ

ರಾಮನಗರ: ‘ಜನರಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಕಾರಣ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ’ ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪ್ರಕಾಶ್ ಎಲ್.ನಾಡಿಗೇರ್ ವಿಷಾದಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿ ವರ್ಗದವರಿಗಾಗಿ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳಿಗಾಗಿ ಜಾರಿಯಲ್ಲಿರುವ ವಿವಿಧ ಕಾಯ್ದೆಗಳು, ನಿಯಮಗಳು’ ಕುರಿತ ಸಂವೇದನಾಶೀಲ ಕಾರ್ಯಾಗಾರ  ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ರಕ್ಷಣೆಗೆ ಇರುವ ಕಾನೂನಿನ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಅಧ್ಯಯನ ನಡೆಸಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಬಿ.ಆರ್.ಮಮತಾ ಮಾತನಾಡಿ ‘ಸರ್ಕಾರದ ಸೌಲಭ್ಯಗಳು ಹಕ್ಕು, ಕರ್ತವ್ಯಗಳು ನಗರ ಪ್ರದೇಶದ ಮಕ್ಕಳಿಗೆ ಮಾತ್ರವೇ ಸೀಮಿತಗೊಂಡಿವೆ,ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಾವು ವಿಫಲರಾಗಿದ್ದೇವೆ’ ಎಂದರು.

‘ಶಾಲೆ–-ಕಾಲೇಜು ಹಂತದಲ್ಲಿ ಮಕ್ಕಳಿಗೆ ಜಗೃತಿ ಮೂಡಿಸುವ ನಿಟ್ಟಿನಲ್ಲಿ  ಖಾಸಗಿ ಸಹಭಾಗಿತ್ವದಲ್ಲಿ ಪುಸ್ತಕಗಳ ಹಿಂಭಾಗ ಬಾಲ್ಯವಿವಾಹ ಕುರಿತು ಜಾಗೃತಿ ಮೂಡಿಸುವ ಸಂದೇಶ ಮುದ್ರಿಸಲಾಗುತ್ತಿದೆ’ ಎಂದರು.

‘ಮಕ್ಕಳ ಮೇಲೆ ದೌರ್ಜನ್ಯ ನಡೆದರೆ 1098 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ. ದೂರು ನೀಡಿದವರ ಮಾಹಿತಿ ಗೌಪ್ಯವಾಗಿಡಲಾಗುವುದು’ ಎಂದು ಮನವಿ ಮಾಡಿದರು.

ಮಕ್ಕಳ ಹಕ್ಕುಗಳ ಕುರಿತು ಹೊರತಂದಿರುವ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಂಬರೀಶ್ ಪೋಕ್ಸೊ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಸ್.ಹೊನ್ನಸ್ವಾಮಿ ಬಾಲನ್ಯಾಯ ಕಾಯ್ದೆ ಬಗ್ಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಅಧಿಕಾರಿ ತಾಜುದ್ದೀನ್ ಖಾನ್ ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ವಿಷಯ ಮಂಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಸಿ.ಪಿ. ಶೈಲಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಕೆ. ರೇವಣೇಶ್, ರಾಜ್ಯ ಮಕ್ಕಳ ಹಕ್ಕುಗಳ ಸದಸ್ಯ ಚಂದ್ರಶೇಖರ್ ಅಲ್ಲಿಪೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ನಾಗವೇಣಿ ಇತರರಿದ್ದರು.

*
ಮಕ್ಕಳನ್ನು ಕೇವಲ ಅಂಕ ಗಳಿಕೆಯ ಯಂತ್ರಗಳನ್ನಾಗಿ ನೋಡಲಾಗುತ್ತಿದೆ. ಇದರಿಂದ ಅವರಲ್ಲಿ ಇನ್ನೊಬ್ಬರ ನೋವಿಗೆ ಮಿಡಿಯುವ ನೆರವಿನ ಭಾವ ಮರೆಯಾಗುತ್ತಿದೆ.
-ಪ್ರಕಾಶ್ ಎಲ್.ನಾಡಿಗೇರ್,
ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT