ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಂಕಾರಿಕ ಸಸ್ಯೋದ್ಯಮ; ವಿಧಾನ ಅರಿತು ಬೆಳೆಸಿ

Last Updated 22 ಮಾರ್ಚ್ 2017, 10:07 IST
ಅಕ್ಷರ ಗಾತ್ರ

ಮೈಸೂರು: ಅಲಂಕಾರಿಕ ಸಸ್ಯಗಳನ್ನು ಬೆಳೆಸುವುದು ಹವ್ಯಾಸ ಅಷ್ಟೇ ಅಲ್ಲ; ಇದು ಒಂದು ಉದ್ಯಮವಾಗಿದೆ. ಸಸ್ಯೋದ್ಯಮಕ್ಕೆ ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದು ಕೊಳ್ಳುವುದು ಬಹುಮುಖ್ಯ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಡಿ.ಮಂಜುನಾಥ್ ಹೇಳಿದರು.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಲಾಮಂಟಪದಲ್ಲಿ ಮಂಗಳವಾರ ಆರಂಭಗೊಂಡ ‘ಅಲಂಕಾರಿಕ ಸಸ್ಯಗಳ ವ್ಯಾಪ್ತಿ, ಅವಕಾಶ ಮತ್ತು ಸವಾಲುಗಳು’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಅಲಂಕಾರಿಕ ಸಸ್ಯೋದ್ಯಮಕ್ಕೆ ಹೆಚ್ಚು ಪ್ರೋತ್ಸಾಹವಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ, ವಿಧಾನಗಳನ್ನು ಅರಿತು ಆ ನಿಟ್ಟಿನಲ್ಲಿ ಬೆಳೆಸಬೇಕು. ಹೂವಿನ ಒಂದು ದಳ ಅಥವಾ ಎಲೆಗೆ ಕೀಟ ಬಾಧೆಯಾಗಿದ್ದರೂ ಅದನ್ನು ಯಾರೂ ಖರೀದಿಸುವುದಿಲ್ಲ. ಅದಕ್ಕಾಗಿ ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ.

ಉದಾಹರಣೆಗೆ ‘ಕಟ್‌ ರೋಸ್‌’ ನೋಡುವವರಿಗೆ ಸುಂದರವಾಗಿ ಕಾಣಬಹುದು. ಆದರೆ, ಹೂವು, ದಂಟು ಮತ್ತು ಎಲೆಯ ಲಕ್ಷಣ ಇಲ್ಲಿ ಮುಖ್ಯವಾಗಿರುತ್ತದೆ. ಇದರ ಅರಿವು ಇರಲೇಬೇಕು. ಇಲ್ಲದಿದ್ದರೆ ಉದ್ಯಮದಲ್ಲಿ ಹಾನಿ ಖಚಿತ ಎಂದು ಕಿವಿಮಾತು ಹೇಳಿದರು.

ಅಲಂಕಾರಿಕ ಸಸ್ಯಗಳನ್ನು ಬೀಜೋ ತ್ಪಾದನೆ, ಹಾರ್ಡ್‌ವುಡ್‌ ಕಟಿಂಗ್‌, ಲೀಪ್ ಕಟಿಂಗ್, ಪುಷ್ಪೋದ್ಯಮ, ಸಸ್ಯೋತ್ಪಾದನೆ ಉದ್ದೇಶಕ್ಕೂ ಬೆಳೆಸಬಹುದು. ಆಂಥೋರಿಯಂ ಸಸ್ಯಕ್ಕೆ ಬೇಡಿಕೆ ಬಹಳ. ಒಂದು ಸಸ್ಯದಿಂದ ಒಂದು ವರ್ಷದಲ್ಲಿ 25 ಸಸ್ಯಗಳನ್ನಾಗಿಸಿ ಉತ್ತಮ ಲಾಭ ಗಳಿಸಬಹುದು. ಆದರೆ, ಯಾವ ಹಂತದಲ್ಲಿ ಕತ್ತರಿಸಿ ಸಸಿಗಳನ್ನು ಬೆಳೆಸಬೇಕು. ಯಾವ ಯಾವ ಕ್ರಮ ಅನುಸರಿಬೇಕು ಎಂಬುದು ಇಲ್ಲಿ ಮುಖ್ಯ ಎಂದು ಮಂಜುನಾಥ್‌ ಹೇಳಿದರು.

ನಗರ ಪ್ರದೇಶದ ರಸ್ತೆಗಳ ಬದಿ ಫೈಕಸ್‌ ಮರಗಳನ್ನು ಹೆಚ್ಚು ಬೆಳೆಸುತ್ತಾರೆ. ಏಕೆಂದರೆ, ಈ ಮರಗಳು ಕಾರ್ಬನ್‌ ಡೈ–ಆಕ್ಸೈಡ್‌ ಅತಿ ಹೆಚ್ಚು ಹೀರಿಕೊಳ್ಳುತ್ತವೆ. ಜೊತೆಗೆ, ನೋಡಲು ಸುಂದರವಾಗಿ ಕಾಣುತ್ತವೆ ಎಂದು ಮಾಹಿತಿ ನೀಡಿದರು.

ಇಲವಾಲ ಎಲಚನಹಳ್ಳಿ ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್‌ ಪ್ರೊ.ಕೆ.ಎಂ.ಇಂದ್ರೇಶ್‌ ಮಾತನಾಡಿ, ಹಣ್ಣು, ತರಕಾರಿ, ಔಷಧಿ ಸಸ್ಯಗಳಿಗೆ ಇರುವಂತೆ ಅಲಂಕಾರಿಕ ಸಸ್ಯಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಕಮ್ಯುನಿಟಿ ಕಾಲೇಜಿನಲ್ಲಿ ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು, ತಜ್ಞರ ಸಲಹೆ ಪಡೆದು ಈ ಉದ್ಯಮದಲ್ಲಿ ಮುಂದುವರಿಯುವುದು ಸೂಕ್ತ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಸಸ್ಯವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಲ್‌. ವಿಜಯಲಕ್ಷ್ಮಿ, ಕಮ್ಯುನಿಟಿ ಕಾಲೇಜಿನ ನೋಡೆಲ್‌ ಅಧಿಕಾರಿ ಸಿ.ಆರ್.ವಿಜಯ್, ವಿಚಾರಸಂಕಿರಣದ ಆಯೋಜನಾ ಕಾರ್ಯದರ್ಶಿ ಬಿ.ಜಯಲಕ್ಷ್ಮಿ, ಖಜಾಂಚಿ ನಾರಾಯಣ ಹೊಸಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT