ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ ಮತ್ತದರ ಪರಿಭಾಷೆಗಳು

ಒಡಲಾಳ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಜೀವ–ಜಾತಿ ಸಂಕುಲಗಳೆಲ್ಲವುಗಳು ಸಹಸ್ರಾರು ವರ್ಷಗಳಿಂದ ಬೆಂಬಿಡದೆ ಶೋಧಿಸುತ್ತಿರುವುದು ಸುಖವನ್ನು, ಅದರಲ್ಲೂ ಮಾನವ ಜಾತಿ ಎಂದಿಗೂ ನಿರಂತರ ಅನ್ವೇಷಣೆ ಮಾಡುತ್ತಲೇ ಇರುವುದು ‘ಸುಖ’ದ ಕುರಿತು.

ಇಷ್ಟಕ್ಕೂ ‘ಸುಖ’ ಎಂದರೇನು? ಇದು ಹೇಗೆ, ಇದು ಇಷ್ಟೇ ಎಂದು ಹೇಳಲು ವ್ಯಾಖ್ಯಾನವಾದರೂ ಏನು? ಇದಮಿತ್ಥಮ್‌ ಎಂದು ಅರ್ಥೈಸಲು ಸಾಧ್ಯವೇ? ಸುಖವೆಂದರೆ ನೆಮ್ಮದಿಯ ಮತ್ತೊಂದು ಭಾವವೆ? ಅದು ಲೌಕಿಕವೇ–ಪಾರಮಾರ್ಥಿಕವೆ? ಏನು ಹಾಗೆಂದರೆ!

ಮಗುವೊಂದು ಹಸಿದು ಅಳುವಾಗ ತಾಯಾದವಳು ಅಮೃತವುಣಿಸಿ ಎದೆಗವುಚಿ ಮುದ್ದಿಸಿ ಜೋಗುಳ ಹಾಡಿ ತೂಗುವಾಗ ಮಗು ಮಲಗಿ ದೇವನಗೆ ನಗುವುದು ಸುಖವಲ್ಲವೇ? ನಾವೇ ಬೆಳೆಸಿದ ಗಿಡ–ಮರಗಳು ಮೈ ತುಂಬ ಹೂ–ಹಣ್ಣು ಅರಳಿಸಿ ಮೈತುಂಬಿ ತೊನೆವಾಗ ಸಿಗುವ ಆನಂದ ಸುಖವಲ್ಲವೆ? ಭೂ ಮಾತೆಯ ಒಡಲು ಉರಿದು ಕಾದು ಬಳಲಿ ಬೆಂಡಾದಾಗ ವರುಣನ ಬಾಯಿಂದ ಚಿಮ್ಮುವ ನೀರು ನೀಡುವ ತಂಪು, ಸಂಜೆಯ ತಂಗಾಳಿ, ಹೂಗಳ ಕಂಪು, ದುಂಬಿಗಳ ಗಾನ, ತೊನೆವ ಹಸಿರು, ನಮ್ಮಸಿರ ಬಸಿರಲ್ಲವೇ? ಎಂದೋ ಒಮ್ಮೆ ಕಂಡ ಮುಖ ಅಚಾನಕ್ಕಾಗಿ ಕಾಣುವುದು, ಎಂದೂ ಬಯಸದ ಸಂತಸದ ವಿಷಯವೊಂದು ತಾನಾಗಿ ಘಟಿಸುವುದು ಸುಖವಲ್ಲವೇ? ಮೈ ಮರೆತು ತಿರುಗಿಸಿದ ರೆಡಿಯೊದಲ್ಲಿ ಎಂದೋ ಕೇಳಿ ಮರೆತ ಸುಮಧುರ ಗಾನವೊಂದು ಕಿವಿಗೆ ಬಿದ್ದಾಗ ದೊರೆಯುವ ಅನಿರೀಕ್ಷಿತ ಖುಷಿಯೊಂದು ಸುಖದ ಪರಿಭಾವವಲ್ಲವೇ? ಬೇಕಾದ ಲೇಖಕರ ಪುಸ್ತಕಗಳನ್ನೋದುವುದು, ಚೆನ್ನಾಗಿದೆ ಎಂದು ತೀರ್ಮಾನಿಸಿದ ಉತ್ತಮ ಅತ್ಯುತ್ತಮ ಚಿತ್ರಗಳ ವೀಕ್ಷಣೆ ಎಲ್ಲವೂ ಸುಖವಲ್ಲವೆ?

ಭೂತಾಯಿಯ ಒಡಲಲ್ಲಿ ಬಿತ್ತಿದ ಬೀಜವೊಂದು ಸುರಿದ ಮಳೆಗೆ ಕುಡಿಯೊಡೆದು ಮೇಲೆ ತೂರಿ ನಗುವಾಗ ಮೂಡಿದ ನೆಮ್ಮದಿ ರೈತನಿಗೆ ಯಾವುದರಿಂದ ದೊರೆಯುವ ಸುಖಕ್ಕೆ ಸಮವಾದೀತು? ಅರ್ಧಂಬರ್ಧ ಬೆಳೆದ ಬೆಳೆಯನ್ನಿಟ್ಟುಕೊಂಡು ದಿನಾಲೂ ಆಕಾಶ ನೋಡುವ ರೈತನಿಗೆ ವರುಣ ಕೃಪೆ ತೋರಿದರೆ ಅದಕ್ಕಿಂತ ಸುಖವುಂಟೆ?

ಹಸಿದ– ಬಾಯಾರಿದ ಹೊಟ್ಟೆಗೆ ಸಿಗುವ ಆಸರಿಗೆ–ಅನ್ನ ನೀಡುವ ಸುಖಕ್ಕೆ ಎಣೆಯುಂಟೆ? ಬಹುದಿನಗಳಿಂದ ಮಕ್ಕಳಿಲ್ಲದ ದಂಪತಿಗೆ ದಿಢೀರನೇ ಅತಿಥಿಯಾಗಿ ಅವತರಿಸಿದ ಮಗುವೊಂದು ಪ್ರಾಣ ಸಮಾನ ಸುಖ ನೀಡುವುದಿಲ್ಲವೇ? ಬಂಧು–ಬಾಂಧವರೊಡಗೂಡಿ ನಗುವಾಗ, ಉಣುವಾಗ, ಒಡಗೂಡುವಾಗ, ನಾವು ಹಡೆದ ಮಕ್ಕಳು ಎದೆಯೆತ್ತರ ಮೀರಿ ಬೆಳೆದು ನಿಂತು ನಗುವಾಗ ಹೆತ್ತೊಡಲಿಗೆ ಆಗುವ ಆನಂದಕ್ಕೆ ಎಲ್ಲೆಯಿರದೇ ಕಣ್ಣಲ್ಲಿ ನೀರು ಬರುವುದೂ ಸುಖದ ವ್ಯಾಖ್ಯಾನವಲ್ಲವೇ? ಬಾಲ್ಯದಿಂದ ಕಂಡ ಕನಸು ನನಸಾಗಿಸಲು ಹರಸಾಹಸ ಮಾಡಿ ಗುರಿ ತಲುಪಿ ಗೆದ್ದಾಗ ಸಿಗುವ ನೆಮ್ಮದಿಯೂ ಸುಖವೇ ಅಲ್ಲವೆ? ಬೀದಿ ಬದಿಯಲ್ಲಿ ಕಾಣಸಿಗುವ ನಿರ್ಗತಿಕರಿಗೆ ಒಂದು ಹಿಡಿ ಅನ್ನ ನೀಡಿ ಮೈ ಮುಚ್ಚಲು ವಸ್ತ್ರ ನೀಡಿದರೆ ಅವರ ಮುಖದಲ್ಲಿ ಕಾಣುವ ಧನ್ಯತೆ, ಆಶೀರ್ವಾದಗಳೆರಡೂ ಸುಖವಲ್ಲವೇ?

ಗೇಣುದ್ದ ಹೊಟ್ಟೆ ಹೊರೆದುಕೊಳ್ಳಲು, ಮಾರುದ್ದ ಮೈ ಮುಚ್ಚಿಕೊಳ್ಳಲು ನಾವು ಮಾಡುವ ಕಸರತ್ತುಗಳೆಲ್ಲವೂ ಸುಖವೇ? ಹಾಗಾದರೆ ಯಾರನ್ನೋ ಯಾಮಾರಿಸಿ, ಕುತಂತ್ರದಿಂದಲೋ, ಒತ್ತಾಯದಿಂದಲೋ, ಮೋಸದಿಂದಲೋ, ಲಾಭದಿಂದಲೋ ಮಾಡುವ ಧನ–ಕನಕಗಳ ಸಂಗ್ರಹವೇ ಸುಖವೇ? ಆಯಕಟ್ಟಿನ ಅಧಿಕಾರಿಗಳು ಅಧಿಕಾರದ ದುರುಪಯೋಗಪಡಿಸಿಕೊಂಡು ಗಳಿಸಿದ ಆಸ್ತಿ ಅಂತಸ್ತುಗಳು ಸುಖ ನೀಡುವುದೇ? ಮಿತಿಯಲ್ಲಿರಬೇಕಾದ್ದು ಅತಿಯಾದಾಗ ನೆಮ್ಮದಿ ದೊರೆವುದೇ?

ಯಾವ ನಿಮಿಷಕ್ಕೆ ಏನೋ, ಯಾರು ಬಂದು ಬಡಿದು ಬಾಚಿಕೊಂಡು ದೋಚುತ್ತಾರೋ ಎಂಬ ಭಯವನ್ನು ಸದಾ ಹುಟ್ಟು ಹಾಕುವ ಅನೈತಿಕ ಸಂಪತ್ತು ಸುಖವನ್ನೀವುದೆ? ಅವರು ಕೊಂಡರೆಂದು ಇವರು, ಇವರು ಕೊಂಡರೆಂದು ಅವರು ಪೈಪೋಟಿಗಿಳಿದು ದಾರಿ ಯಾವುದಾದರೇನು ಎಂದು ಭಂಡತನದಿಂದ ಗಳಿಸುವುದು ಸುಖವೇ? ನೆಂಟರಿಸ್ಟರ ಮದುವೆ, ಮುಂಜಿ, ಸಮಾರಂಭಗಳಲ್ಲಿ ಗಳಿಗೆಗೊಮ್ಮೆ ಬದಲಿಸುವ ಒಡವೆ–ಬಟ್ಟೆಗಳು ಕ್ಷಣಿಕ ಸುಖವನ್ನಿತ್ತರೂ, ಕಂಡವರೆದುರಿಗಿನ ಪ್ರದರ್ಶನ ಮನೋವಿಕಾರವನ್ನಲ್ಲದೇ ಸುಖವನ್ನೀವುದೇ? ನಮ್ಮನ್ನು ನಾವು ಬೆದರು ಬೊಂಬೆಗಳಂತೆ ಪ್ರದರ್ಶಿಸಿಕೊಳ್ಳುವುದೇ ಸುಖವೇ? ಕಂಡವರ ಹೆಣ್ಣುಮಕ್ಕಳ ಸೆರಗು ಸರಿಸುವುದೇ ಸುಖವೇ? ಕಂಡವರ ಗಂಡನ ಮುಷ್ಟಿಯಲ್ಲಿಟ್ಟುಕೊಳ್ಳುವುದೇ ಸುಖವೇ? ಗಂಡು–ಹೆಣ್ಣಿನ ಸಾಂಗತ್ಯದಿಂದ ದೊರೆಯುವ ಕ್ಷಣಿಕ ಸುಖವೇ ಆತ್ಯಂತಿಕವೇ ಇವೆಲ್ಲವುಗಳಾಚೆಗೆ, ಇವೆಲ್ಲ ಭಾವಗಳನ್ನು ಮೀರಿದ ಭಾವವೊಂದು ಸ್ಫುರಿಸುವ ನೆಮ್ಮದಿ ಸುಖವಲ್ಲದೇ ಏನು? ನಮ್ಮೊಳಗೆ ನಾವಾಗುವುದೂ ಸುಖವೇ ಅಲ್ಲವೇ?

ದೇವರೆದುರು ಉರಿಯುವ ನಂದಾ ದೀಪದ ಕಾಂತಿ,  ಮಗುವಿನ ಮುಗ್ಧ ನಗೆ, ಸುತ್ತಲೂ ಪಸರಿಸಿದ ಹಸಿರು, ಮೆಲ್ಲನೆ ಬೀಸುವ ತಂಗಾಳಿ, ದೂರದ ದೇವಾಲಯದಲ್ಲಿ ಮೊಳಗಿದ ಘಂಟೆಯ ನಿನಾದ, ಜುಳುಜುಳು ಹರಿವ ನೀರು, ಹಕ್ಕಿಯ ಹಾಡು, ಅರಳಿದ ಹೂವು,  ದುಂಬಿಯ ಗಾನ, ಇವೆಲ್ಲವುಗಳನ್ನೂ ಸವಿವ ಮನ ಎಲ್ಲವೂ ಸುಖವೇ?

ಹಿಂದೊಮ್ಮೆ ವಾರಪತ್ರಿಕೆಯೊಂದರಲ್ಲಿ ಓದಿದ ನೆನಪು...
ಡಾ. ಶಿವರಾಮ ಕಾರಂತರನ್ನು ಸಂದರ್ಶಕರು ನಿಮ್ಮ ಪ್ರಕಾರ ನೀವು ಇಲ್ಲಿವರೆಗೂ ಅನುಭವಿಸಿದ ಅತ್ಯಂತ ದೊಡ್ಡ ‘ಸುಖ’ ಯಾವುದು ಎಂದಾಗ ಹೇಳುತ್ತಾರೆ ‘ನನ್ನ ಮೊಮ್ಮಗುವೊಂದು ನನ್ನ ಮೈ ಮೇಲೆ ಹತ್ತಿ ಕುಣಿಯುತ್ತ ನನ್ನ ಬೋಳು ತಲೆಯ ಕೇಶವನ್ನೆಳುವುದೇ ಅತ್ಯಂತ ಪರಮಸುಖ.’ ಎಂತಹ ಉದಾತ್ತ ವ್ಯಕ್ತಿ–ಉದಾತ್ತ ಭಾವ. ವಿಷಯ ಯಾವುದಿರಲಿ ಅದರ ಸಾರ್ಥಕತೆಯಿರುವುದು ಪರಿಭಾವಿಸುವುದರಲ್ಲಿ, ಅವರವರ ಭಾವದಲ್ಲಿ, ಅವರವರ ಭಕುತಿ,  ನಿನಗೆ ಆರಾಗಿ ಕಂಡಿದ್ದು, ನನಗೆ ಒಂಬತ್ತಾಗಿ ತೋರಿದರೆ ಅಚ್ಚರಿಯಿಲ್ಲ. ಎಲ್ಲವೂ ನಾವಂದುಕೊಂಡಂತೆ,  ಭಾವಿಸಿಕೊಂಡಂತೆ. ಒಟ್ಟಿನಲ್ಲಿ ಇದು ಹೀಗೇ, ಇಷ್ಟೇ ಎಂದು ಯಾರು ಎಂದಿಗೂ ಹೇಳಲಾರರು, ಒಮ್ಮತ ಮೂಡಲಾರದು. ಒಟ್ಟಿನಲ್ಲಿ ಅವರವರ ಭಾವ– ಅವರವರ ಭಕುತಿ, ಹಾಗೆಂದೇ ‘ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ಪರರ ತನ್ನಂತೆ ಬಗೆದೊಡೆ ಭಿನ್ನಾಣವಕ್ಕು ಸರ್ವಜ್ಞ’ ಎಂಬ ವಚನ ಪರೋಕ್ಷವಾಗಿ ಸುಖದ ಅರ್ಥವನ್ನು ಅರಹುತ್ತಿರಬಹುದೇ?

–ಎನ್‌.ಸಿ.ಎಚ್‌.ಎಲ್‌., ನಾಗೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT