ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಮ್ಮೆ ಮತ್ತು ಪ್ರಶ್ನೆ

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಪುತ್ರ ಸಾರ್ಥಿಕ್ ಎಂಬುವರು ಮನೆಯಿಂದ ಕಾಣೆಯಾಗಿದ್ದರಂತೆ. ಇದರಿಂದ ಗಾಬರಿಯಾದ ಅವರ ಪಾಲಕರು ಪೊಲೀಸರಿಗೆ ದೂರು ನೀಡಿದರಂತೆ- ಹುಡುಕಿಕೊಡಿ ಮಗನನ್ನು ಎಂದು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡ ರಚಿಸಿ, ಹುಡುಕಾಟ ಆರಂಭಿಸಿದರಂತೆ. ಬೆಂಗಳೂರು ನಗರದ ಪೊಲೀಸ್ ಆಯುಕ್ತರೂ ಹುಡುಕಾಟದಲ್ಲಿ ಭಾಗಿಯಾಗಿದ್ದರಂತೆ.
 
ಇದು ‘ಪ್ರಜಾವಾಣಿ’ಯಲ್ಲಿ ಮಾರ್ಚ್‌ 21ರಂದು ಪ್ರಕಟವಾದ ಸುದ್ದಿಯೊಂದರ ಸಾರ. ಇದನ್ನು ಓದಿದ ತಕ್ಷಣ ನಮ್ಮ ಪೊಲೀಸರ ಬಗ್ಗೆ ಹೆಮ್ಮೆ ಮೂಡಿತು. ತಕ್ಷಣ ಕೆಲವು ಪ್ರಶ್ನೆಗಳು ಹುಟ್ಟಿಕೊಂಡವು.
 
ನಾಪತ್ತೆಯಾದ ವ್ಯಕ್ತಿ ಮುಖ್ಯ ಕಾರ್ಯದರ್ಶಿಯ ಮಗ ಅಲ್ಲವಾಗಿದ್ದರೆ ಪೊಲೀಸರು ಇಷ್ಟೊಂದು ಮುತುವರ್ಜಿ ವಹಿಸುತ್ತಿದ್ದರೇ? ಪೊಲೀಸ್ ಆಯುಕ್ತರು ಖುದ್ದಾಗಿ ಹುಡುಕಾಟ ನಡೆಸುತ್ತಿದ್ದರೇ? ಹಾಗೆಲ್ಲ ಮಾಡಲು ಸಾಧ್ಯವಾಗಲಿಕ್ಕಿಲ್ಲ. ಏಕೆಂದರೆ ಎಲ್ಲರಿಗೂ ಅಷ್ಟೊಂದು ಪ್ರಾಮುಖ್ಯ ನೀಡಲು ಪೊಲೀಸರಿಗೆ ಎಲ್ಲಿ ಸಾಧ್ಯವಾಗುತ್ತದೆ?!
 
ಸಾರ್ಥಿಕ್ ಅವರು ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಪತ್ತೆಯಾದರಂತೆ. ಅಲ್ಲಿ ಏನು ಮಾಡುತ್ತಿದ್ದರು ಸಾರ್ಥಿಕ್ ಎಂದು ಮಾಧ್ಯಮದ ಪ್ರತಿನಿಧಿಗಳು ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದಾಗ, ‘ಅದು ವೈಯಕ್ತಿಕ ವಿಚಾರ’ ಎಂಬ ಅರ್ಥ ಬರುವ ಉತ್ತರವನ್ನು ನೀಡಿದ್ದಾರೆ.
 
ಇದು ಕೂಡ ಸಂತೋಷ ತರುವ ಉತ್ತರ. ಏಕೆಂದರೆ ಇನ್ನೊಬ್ಬರ ಖಾಸಗಿ ಜೀವನದ ಬಗ್ಗೆ ಪೊಲೀಸರಲ್ಲಿ ಗೌರವ ಮೂಡುವುದು ತೀರಾ ಅಪರೂಪದ ಸಂಗತಿಯಲ್ಲವೇ? ಆದರೆ, ಇಲ್ಲೂ ಒಂದು ಪ್ರಶ್ನೆ ಉದ್ಭವ ಆಗುತ್ತದೆ. ಪ್ರಕರಣವೊಂದರಲ್ಲಿ ಆರೋಪಿಯನ್ನು ಪತ್ತೆ ಮಾಡುವ ಪೊಲೀಸರು, ಆತನ ಮೇಲಿನ ಆರೋಪ ಸಾಬೀತಾಗುವ ಮುನ್ನವೇ ‘ಅಂವ ಇಂತಿಂಥ ಅಪರಾಧ ಎಸಗಿದ್ದಾನೆ, ಹೀಗೇ ಕೃತ್ಯ ಎಸಗಿದ್ದಾನೆ’ ಎಂಬ ವಿವರಣೆಗಳನ್ನು ನೀಡಿಬಿಡುತ್ತಾರೆ.

ಆಗ ಆ ಆರೋಪಿಯ ಖಾಸಗಿತನದ ಪ್ರಶ್ನೆ ಪೊಲೀಸರಲ್ಲಿ ಮೂಡುವುದಿಲ್ಲವೇ? ಅಥವಾ ಎಲ್ಲರೂ ಮುಖ್ಯ ಕಾರ್ಯದರ್ಶಿಯವರ ಮಗನಷ್ಟು ದೊಡ್ಡ ಮನುಷ್ಯರಾಗಿರುವುದಿಲ್ಲ ಎಂಬ ಸೂತ್ರವನ್ನು ಪೊಲೀಸರು ಪಾಲಿಸುತ್ತಾರಾ?!
ಮಹಾಬಲ ಶೆಟ್ಟಿ, ನೇರಳಕಟ್ಟೆ, ಕುಂದಾಪುರ ತಾಲ್ಲೂಕು
 
‘ಅವ್ವಂದಿರ’ ಬೇಡಿಕೆ:  ಸ್ಪಂದಿಸಿ
ನಮ್ಮ ಅಂಗನವಾಡಿ ಅವ್ವಂದಿರು ರೋಸಿ ಹೋಗಿ ಬೀದಿಗಿಳಿದಿದ್ದಾರೆ. ಮೂರು ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ. ಹೀಗೆ ಅವರು ಬೀದಿಗಿಳಿದದ್ದು ಇದೇ ಮೊದಲಲ್ಲ.

1.25 ಲಕ್ಷದಷ್ಟಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೇಳುತ್ತಿರುವುದು ವೈಭೋಗದ ಜೀವನ ನಡೆಸಲು ಬೇಕಾದ ವೇತನವನ್ನಲ್ಲ. ಕನಿಷ್ಠ ಜೀವನಯೋಗ್ಯ ವೇತನ ನೀಡುವಂತೆ 25 ವರ್ಷಗಳಿಂದ ಹೋರಾಡುತ್ತಿರುವ ಅವರ ಬೇಡಿಕೆ ಅತ್ಯಂತ ನ್ಯಾಯಯುತವಾದುದು. ಆದರೆ ಯಾವ ಸರ್ಕಾರವೂ ಈ ಅವ್ವಂದಿರ ಬೇಡಿಕೆಗೆ ಮಾನವೀಯವಾಗಿ ಸ್ಪಂದಿಸಿಲ್ಲ.
 
ಅಂಗನವಾಡಿಯ ಯೋಜನೆ ಜಾರಿಯಾಗಿರುವುದು ಕೇಂದ್ರ ಸರ್ಕಾರದಿಂದಲಾದರೂ ಅವರು ಕೆಲಸ ಮಾಡುತ್ತಿರುವುದು ರಾಜ್ಯದಲ್ಲಿ. ಅದರಲ್ಲೂ ಹಳ್ಳಿಗಾಡಿನ ಮಹಿಳೆ, ಮಕ್ಕಳ ಯೋಗಕ್ಷೇಮದ ಜವಾಬ್ದಾರಿ ಹೊತ್ತಿರುವ ಅವರ ಸೇವೆ ಅಮೂಲ್ಯವಾದುದೆಂದು ಸರ್ಕಾರ ಮರೆಯಬಾರದು.
 
ಜೊತೆಗೆ, ಅಂಗನವಾಡಿ ನೌಕರರ ಕೆಲಸದ ಸಮಯವನ್ನು ಸದ್ಯ ಬೆಳಗಿನಿಂದ ಸಂಜೆಯವರೆಗೂ ವಿಸ್ತರಿಸಿದ್ದು, ನಿಜವಾಗಿ ನೋಡಿದರೆ ಈಗ ಅವರಿಗೆ, ಸರ್ಕಾರದ ಸಿ ಮತ್ತು ಡಿ ದರ್ಜೆಯ ಸರ್ಕಾರಿ ನೌಕರರ ಸರಿಸಮವಾದ ವೇತನ ಮತ್ತಿತರ ಭತ್ಯೆಗಳನ್ನು ಘೋಷಿಸಬೇಕು. ಅದೂ ಇಲ್ಲವಾದರೆ, ಕರ್ನಾಟಕ ಸರ್ಕಾರದ ಕನಿಷ್ಠ ವೇತನ ದರದಂತೆ ವೇತನವನ್ನು ₹ 10,500ಕ್ಕೆ ಹೆಚ್ಚಿಸಿಯಾದರೂ ಆದೇಶ ಮಾಡಬೇಕು. 
 
ರಾಜ್ಯ ಸರ್ಕಾರವೇ ನಿಗದಿ ಮಾಡಿರುವ ಕನಿಷ್ಠ ವೇತನ ದರವನ್ನು ಈ ಅವ್ವಂದಿರಿಗೂ ಜಾರಿ ಮಾಡಲು ಸರ್ಕಾರಕ್ಕೆ ಯಾವ ತೊಂದರೆಯೂ ಆಗದೆಂದು ಭಾವಿಸುತ್ತೇವೆ. ಆದ್ದರಿಂದ ಸರ್ಕಾರ ತಕ್ಷಣವೇ ಮನಸ್ಸು ಮಾಡಿ ತನ್ನ ಘನತೆಯನ್ನು ತೋರಬೇಕು.
ರೂಪ ಹಾಸನ, ನಂದಿನಿ ಜಯರಾಂ, ಶಾರದಾ ಗೋಪಾಲ್, ಸ್ವರ್ಣ ಭಟ್, ಶೋಭಾ, ನಾಗಲಕ್ಷ್ಮಿ, ಚುಕ್ಕಿ ನಂಜುಂಡಸ್ವಾಮಿ, ಮಲ್ಲಿಗೆ ಸಿರಿಮನೆ, ಸಂಧ್ಯ, ರಶ್ಮಿ, ಗೀತಾ, ಸುನೀತಾ
ಜನಾಂದೋಲನಗಳ ಮಹಾಮೈತ್ರಿಯ ಮಹಿಳಾ ಸಮಿತಿ
 
ವಿಕಾಸ
‘ಮತ್ತೆ ಮತ್ತೆ ಓದಬೇಕು ಅನಿಸುವ ಮಹಾಭಾರತ’ (ಪದ್ಮರಾಜ ದಂಡಾವತಿಯವರ ‘ನಾಲ್ಕನೇ ಆಯಾಮ’, ಮಾರ್ಚ್‌ 12). ‘ಜಯ’ ಎಂಬುದು ಮಹಾಭಾರತದ ಆಮೇಲಿನ ಹೆಸರಲ್ಲ; ವಸ್ತುತಃ ಮೂಲನಾಮವೆ ಅದು! (‘ತತೋ ಜಯಮುದೀರಯೇತ್‌=ಬಳಿಕ ಪೇಳ್ವುದು ಜಯವ’). ಕ್ರಮೇಣ ‘ಭಾರತ’ವಾಗಿ ಬೆಳೆದು, ಕಡೆಗೆ ‘ಮಹಾಭಾರತ’ವಾಗಿ ಪರಿಣಮಿಸಿತು. ಈ ನಾಮವಿಕಾಸ ಕಾವ್ಯ ವಿಕಾಸವನ್ನೂ ಸೂಚಿಸುತ್ತದೆ! (ರಾಮಾಯಣ, ಮಹಾಭಾರತಗಳು ‘ವಿಕಾಸಶೀಲ’ ಮಹಾಕಾವ್ಯಗಳು).
ಸಿ.ಪಿ.ಕೆ., ಮೈಸೂರು
 
ಪ್ರತಿಜ್ಞೆ ಮಾಡೋಣ
ಈ ಬೇಸಿಗೆ ಕರಾಳ ಬೇಸಿಗೆಯಾಗುವ ಲಕ್ಷಣಗಳಿವೆ. ಈ ಸಂದರ್ಭದಲ್ಲಿ ನಾಗರಿಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಾಗಿದೆ. ನೀರು ಅತ್ಯಮೂಲ್ಯವಾಗಿರುವ ಈ ಸಮಯದಲ್ಲಿ ವಾಹನಗಳನ್ನು ತೊಳೆಯಲು, ಮನೆಯ ಅಂಗಳ ಮತ್ತು ಮುಂಭಾಗವನ್ನು ತೊಳೆಯಲು ಕುಡಿಯುವ ನೀರನ್ನು ಬಳಸದಿರಲು ಪ್ರತಿಜ್ಞೆ ಸ್ವೀಕರಿಸಬೇಕು.
 
ದಿನ ಬಿಟ್ಟು ದಿನ ಸ್ನಾನ ಮಾಡಿದರೆ ಆಕಾಶವೇನೂ ಕಳಚಿಬೀಳುವುದಿಲ್ಲ. ಎಷ್ಟೋ ಜನರಿಗೆ ದಿನಕ್ಕೆ ಒಂದೆರಡು ಬಿಂದಿಗೆ ನೀರೂ ದೊರೆಯದಿರುವಾಗ ನೀರು ಲಭ್ಯವಿರುವ ಜನರು ಅದನ್ನು ಪೋಲು ಮಾಡುವುದು ನ್ಯಾಯವೇ?

ನಾವು ಉಳಿಸಿದ ಒಂದು ಬಕೆಟ್‌ ನೀರು, ಅಗತ್ಯವಿರುವ ಇನ್ನೊಬ್ಬರಿಗೆ ಸಿಗುತ್ತದೆಯೆಂಬ ಎಚ್ಚರ ನಮಗೆ ಇರಬೇಕು. ಕೈತೋಟ ಹೊಂದಿರುವವರು ಸಂಜೆ ವೇಳೆ ಗಿಡಗಳಿಗೆ ನೀರುಣಿಸಿದರೆ ಮತ್ತು  ಅದಕ್ಕೆ ಅಕ್ಕಿ– ತರಕಾರಿ ತೊಳೆದ ನೀರನ್ನು ಬಳಸಿಕೊಂಡರೆ ನೀರು ಉಳಿತಾಯ ಮಾಡಬಹುದು.
 
ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅಪಾರ ನೀರು ಅಗತ್ಯವಿರುವುದರಿಂದ ಈ ಬೇಸಿಗೆ ಕಳೆಯುವವರೆಗೆ ನಿರ್ಮಾಣ ಕಾಮಗಾರಿಗಳನ್ನು ಮತ್ತು ಸಿಮೆಂಟ್‌ ಮಾರಾಟವನ್ನು ನಿರ್ಬಂಧಿಸುವ ಬಗ್ಗೆ ಯೋಚಿಸಬಹುದು. ಈ ಬಗ್ಗೆ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳುವುದು ಒಳಿತು.
ಬಿ.ಆರ್‌. ರಮೇಶ್‌, ಹೊಳೇನರಸೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT