ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗೆ ಕಿವಿಗೊಡಿ

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ  ಮೂರು ದಿನಗಳಿಂದ   ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮುಖ್ಯಮಂತ್ರಿ ನೀಡಿದ ಭರವಸೆಗೂ  ಅವರು ಜಗ್ಗಿಲ್ಲ. ಗೌರವಧನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ.  

ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿ ರಾಜ್ಯದಾದ್ಯಂತ  1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು  65,911 ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ 1975ರಲ್ಲಿ ಐಸಿಡಿಎಸ್ ಯೋಜನೆ  ರಾಷ್ಟ್ರದಾದ್ಯಂತ ಆರಂಭವಾದಾಗಲಿಂದಲೂ ಅಂಗನವಾಡಿ ಕಾರ್ಯಕರ್ತರ ಗೌರವಧನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿಲ್ಲ ಎಂಬುದು ಶೋಚನೀಯ.  

ಈ ಯೋಜನೆಯ ವೆಚ್ಚವನ್ನು  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮವಾಗಿ 90:10 ಅನುಪಾತದಲ್ಲಿ ಈ ಹಿಂದೆ ಹೊರುತ್ತಿದ್ದವು. 2015–16ರಿಂದ ಈ ಅನುಪಾತ 60:40 ಆಗಿದೆ.  ಇದರಿಂದಾಗಿ ತನ್ನ  ಮೇಲೆ ₹ 98 ಕೋಟಿ ಹೆಚ್ಚುವರಿ ಹೊರೆ ಬಿದ್ದಿದೆ ಎಂಬುದು ರಾಜ್ಯ ಸರ್ಕಾರದ ವಾದ.
 
‘ಹೀಗಿದ್ದೂ  ಮೊನ್ನೆ ಮಂಡಿಸಲಾದ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ₹ 1000 ಹಾಗೂ ಸಹಾಯಕರ ಗೌರವಧನವನ್ನು 
₹ 500 ಹೆಚ್ಚಿಸಲಾಗಿದೆ. ಇದರಿಂದ  ಕಾರ್ಯಕರ್ತೆಯರಿಗೆ ₹ 7000 ಹಾಗೂ ಸಹಾಯಕರಿಗೆ ₹ 3500 ಗೌರವಧನ ಏಪ್ರಿಲ್ 1ರಿಂದ ಲಭ್ಯವಾಗಲಿದೆ’ ಎಂಬಂಥ ಸಮರ್ಥನೆಯನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.  ಆದರೆ ಈ ಗೌರವಧನ ಹೆಚ್ಚಳ, ರಾಷ್ಟ್ರದಲ್ಲಿ ಜಾರಿಯಲ್ಲಿರುವ ಕನಿಷ್ಠ ವೇತನದ ಹತ್ತಿರವೂ ಬರುವುದಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕು.
 
ಇತ್ತೀಚಿನ  ತಿದ್ದುಪಡಿ ಪ್ರಕಾರ, ಕೌಶಲರಹಿತ ಕಾರ್ಮಿಕರಿಗೆ ನೀಡುವ ಕನಿಷ್ಠ ವೇತನವನ್ನೂ  ದಿನಕ್ಕೆ ₹ 350ಕ್ಕೆ ಏರಿಸಲಾಗಿದೆ.  ಕನಿಷ್ಠ ವೇತನ ಕಾಯಿದೆ ಪ್ರಕಾರ ತಿಂಗಳಿಗೆ ₹ 10 ಸಾವಿರ ಕನಿಷ್ಠ ವೇತನ ಸಿಗುವುದು ಕಡ್ಡಾಯ.  ಆದರೆ ಪೂರ್ಣಾವಧಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತರಿಗೆ  ಮಾತ್ರ ಇಂತಹ ಅಲ್ಪ ಮೊತ್ತದ ವೇತನವೂ ಸಿಗುತ್ತಿಲ್ಲ ಎಂಬುದು ಕಡೆಗಣಿಸುವಂತಹ ವಿಚಾರವಲ್ಲ.  
 
ಇದು ನಾಗರಿಕ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ. ಅಂಗನವಾಡಿ ಕಾರ್ಯಕರ್ತರ ಬೇಡಿಕೆ ಈಡೇರಿಸಿದಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 
₹ 612 ಕೋಟಿ ಹೊರೆ ಬೀಳುತ್ತದೆ ಎಂಬುದು ಸರ್ಕಾರದ ಪ್ರತಿಪಾದನೆ. ಆದರೆ ಈಗಾಗಲೇ ನೆರೆಯ ಗೋವಾ, ಕೇರಳ, ಪುದುಚೇರಿ ಹಾಗೂ ತಮಿಳುನಾಡುಗಳಲ್ಲಿ  ಅಂಗನವಾಡಿ ಕಾರ್ಯಕರ್ತೆಯರಿಗೆ ₹10 ಸಾವಿರದಿಂದ ₹14 ಸಾವಿರದವರೆಗೆ ಗೌರವಧನ ಸಿಗುತ್ತಿದೆ ಎಂಬುದನ್ನು  ಗಮನಿಸಬೇಕು.
 
ಅಷ್ಟೇ ಅಲ್ಲ,  ಕಳೆದ ತಿಂಗಳಷ್ಟೇ ತೆಲಂಗಾಣದಲ್ಲೂ  ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ₹10,500ಕ್ಕೆ ಏರಿಸಲಾಗಿದೆ. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಸ್ಥಾನಮಾನವನ್ನು ಹೆಚ್ಚಿಸಲು ಅವರನ್ನು ಅಂಗನವಾಡಿ ಶಿಕ್ಷಕಿಯರೆಂದು ಕರೆಯಬೇಕೆಂದು  ಅಧಿಕಾರಿಗಳಿಗೆ ಅಲ್ಲಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಸೂಚನೆ ನೀಡಿದ್ದಾರೆ.
 
ಬೇರೆ ರಾಜ್ಯಗಳ ಈ ಮಾದರಿಗಳನ್ನು ನಮ್ಮ ಸರ್ಕಾರವೂ ಅಧ್ಯಯನ ಮಾಡಬೇಕು.ಸರ್ಕಾರದ ಹಲವು ಯೋಜನೆಗಳು ಹಾಗೂ ಸೌಲಭ್ಯಗಳನ್ನು  ಬೇರು ಮಟ್ಟದ ಜನರ ಬಳಿಗೆ ಒಯ್ಯುವವರು ಈ ಅಂಗನವಾಡಿ ಕಾರ್ಯಕರ್ತೆಯರು. ಸರ್ಕಾರ ಹಾಗೂ ಸರ್ಕಾರದ ಯೋಜನೆಗಳ ಫಲಾನುಭವಿಗಳ ಮಧ್ಯೆ  ಅವರು ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಾರೆ.
 
ಮಾಹಿತಿ ಸಂಗ್ರಹಿಸುವ ಅಥವಾ ವಿತರಿಸುವಂತಹ ಕಾರ್ಯವನ್ನು ಈ ಮಹಿಳೆಯರು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ. ಹೀಗಿದ್ದೂ ದಿನನಿತ್ಯದ ಘನತೆಯ ಬದುಕಿಗೆ ಅಗತ್ಯವಾದ ಗೌರವಧನ ಅವರಿಗೆ ಸಿಗದಿರುವುದು ಸರಿಯಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT