ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೀರ್ಣ ನರರೋಗಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಅತ್ಯಂತ ಸಂಕೀರ್ಣವಾದ ಮೊಯಮೊಯ ನರರೋಗಕ್ಕೆ ತುತ್ತಾದ ವ್ಯಕ್ತಿಗೆ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ  ನಡೆಸಿದ್ದಾರೆ.

‘ಪ್ರದೀಪ್‌ (26) ಎಂಬುವವರು ಮೊಯಮೊಯ ತೊಂದರೆಯಿಂದ ಬಳಲುತ್ತಿದ್ದರು. ಇದರಿಂದ ಅವರ ದೇಹದ ಬಲ ಭಾಗ ನಿಶ್ಯಕ್ತಿಯಾಗಿತ್ತು. ಅಲ್ಲದೆ, ಮಾತನಾಡಲು ಸಹ ಕಷ್ಟವಾಗುತ್ತಿತ್ತು. ಫೆಬ್ರುವರಿಯಲ್ಲಿ ಪ್ರದೀಪ್‌ ಅವರಿಗೆ ವ್ಯಾಸ್ಕುಲರ್ ಬೈಪಾಸ್ ಸರ್ಜರಿ ನಡೆಸಲಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ’  ಎಂದು ವೈದ್ಯರು ತಿಳಿಸಿದರು.


ಬಿಜಿಎಸ್ ಗ್ಲೆನ್‌ಈಗಲ್ಸ್ ಗ್ಲೋಬಲ್ ಆಸ್ಪತ್ರೆಯ  ಮುಖ್ಯ ನರರೋಗ ತಜ್ಞ ಡಾ.ಎಚ್.ವಿ. ಮಧುಸೂದನ್, ‘ಎಡ ಮೆದುಳಿಗೆ ಪೂರೈಕೆ ಆಗುತ್ತಿದ್ದ ರಕ್ತದಲ್ಲಿ ಕೊರತೆ ಕಾಣಿಸಿಕೊಂಡು ಪಾರ್ಶ್ವವಾಯು ಉಂಟಾಗಿತ್ತು.

ಮೆದುಳಿಗೆ ರಕ್ತ ಪೂರೈಕೆ ಮಾಡುವ ಪ್ರಮುಖ ರಕ್ತನಾಳಗಳಿಗೆ ಆಂಜಿಯೋಗ್ರಾಮ್ ಮಾಡಿ ಹೊಸ ರಕ್ತನಾಳಗಳನ್ನು ಜೋಡಿಸಿ ನಿರಂತರವಾಗಿ ರಕ್ತ ಪೂರೈಕೆ ಆಗುವಂತೆ ಮಾಡಲಾಯಿತು’ ಎಂದು ವಿವರಿಸಿದರು.

****
ನವಜಾತ ಶಿಶುವಿಗೆ ಎಕ್ಮೊ ಚಿಕಿತ್ಸೆ
ಬೆಂಗಳೂರು:
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವಿಗೆ ನಾರಾಯಣ ಹೆಲ್ತ್‌ಸಿಟಿಯ ವೈದ್ಯರು   ಎಕ್ಸ್ಟ್ರಾಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜನೇಷನ್‌ (ಇಸಿಎಂಒ) ಉಪಕರಣ ಬಳಸಿ ಚಿಕಿತ್ಸೆ ನೀಡಿದ್ದಾರೆ.

‘ಚೆನ್ನೈನ ಆಸ್ಪತ್ರೆಯಲ್ಲಿ ಜಯಲಲಿತಾ ಅವರಿಗೆ ಇಸಿಎಂಒ ಉಪಕರಣ ಬಳಸಿ ಕೃತಕ ರಕ್ತನಾಳದ ಮೂಲಕ ಆಮ್ಲಜನಕ ಪೂರೈಸಲಾಗಿತ್ತು. ಅದೇ ಚಿಕಿತ್ಸೆಯನ್ನು 3.2 ಕೆ.ಜಿ. ತೂಕವಿದ್ದ ನವಜಾತ ಶಿಶುವಿಗೆ ನೀಡಲಾಗಿದೆ. ಇದು ರಾಜ್ಯದಲ್ಲೇ ಮೊದಲ ಪ್ರಕರಣ’ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ. ರಿಯಾನ್ ಶೆಟ್ಟಿ ತಿಳಿಸಿದರು.

‘ವ್ಯಕ್ತಿ  ಬದುಕುಳಿಯಲು ಬೇಕಾದಷ್ಟು ಆಮ್ಲಜನಕವನ್ನು ಶ್ವಾಸಕೋಶ ಪೂರೈಸಲು ಸಾಧ್ಯವಾಗದೇ ಇದ್ದಾಗ ಇಸಿಎಂಒ ಸಾಧನದ ಸಹಾಯದಿಂದ ಕೃತಕ ಉಸಿರಾಟ ನೀಡಲಾಗುತ್ತದೆ. ಈ ಶಿಶು ಗರ್ಭದಲ್ಲಿದ್ದಾಗಲೇ ಮಲ ವಿಸರ್ಜನೆ ಮಾಡಿತ್ತು. ಅದು ಶ್ವಾಸಕೋಶವನ್ನು ಸೇರಿದ್ದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆಯನ್ನು ಮೆಕೊನಿಯಂ ಆಸ್ಪಿರೇಷನ್ ಸಿಂಡ್ರೊಮ್ (ಎಂಎಎಸ್) ಎಂದು ಕರೆಯಲಾಗುತ್ತದೆ’ ಎಂದು ಹೇಳಿದರು.

ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ಅಗರವಾಲ್ ಮಾತನಾಡಿ, ‘ಇಸಿಎಂಒ ಚಿಕಿತ್ಸೆ ದುಬಾರಿಯಾಗಿದ್ದು, ಈ ಶಿಶುವಿಗೆ ರಿಯಾಯಿತಿ ನೀಡಲಾಗಿದೆ. ಮಗುವಿನ ಕತ್ತಿನ ಬಳಿ ಸಣ್ಣ ರಂಧ್ರ ಕೊರೆದು ಇಸಿಎಂಒ ಮೂಲಕ ರಕ್ತವನ್ನು ಶುದ್ಧೀಕರಿಸಿ ಮತ್ತೆ ಪೂರೈಕೆ ಮಾಡಲಾಗಿತ್ತು. ಮಗು ಐದು ದಿನಗಳಲ್ಲಿ ಚೇತರಿಸಿಕೊಂಡಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT