ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭಾವನೆ ಒಬ್ಬರಿಗೆ, ನೋಟಿಸ್‌ ಇನ್ನೊಬ್ಬರಿಗೆ!

ಕಾನೂನುಬಾಹಿರವಾಗಿ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಂಡು ‘ಅಕ್ರಮ’ ಎಸಗುತ್ತಿರುವ ಶಿಕ್ಷಕರು
Last Updated 23 ಮಾರ್ಚ್ 2017, 4:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಬನ್ನಿಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಚುನಾವಣಾಧಿ ಕಾರಿ ಯಾಗಿದ್ದ ಶಿಕ್ಷಕ, ಚುನಾವಣಾ ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳದೇ ಇರುವ ಮೂವರು ಶಿಕ್ಷಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಹಕಾರ ಸಂಘದಿಂದ ಸಂಭಾವನೆ ಪಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

2016ರ ಏಪ್ರಿಲ್‌ 17 ರಂದು ನಡೆದ ಬನ್ನಿಕುಪ್ಪೆ ಸಂಘದ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ವ್ಯಕ್ತಿಯೊಬ್ಬರು ‘ಮಾಹಿತಿ ಹಕ್ಕು ಕಾಯ್ದೆ’ ಅಡಿ ಪಡೆದುಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ ಬಳಿಕ ಜಿಲ್ಲೆಯಲ್ಲಿ ಸದ್ದಿಲ್ಲದಂತೆ ಶಿಕ್ಷಕರು ನಡೆಸುತ್ತಿರುವ ಕಾನೂನುಬಾಹಿರ ಕೃತ್ಯಗಳು ಆಚೆಗೆ ಬರುತ್ತಿವೆ.

ಇಲಾಖೆಯ ಅನುಮತಿ ಪಡೆಯದೆ ಬನ್ನಿಕುಪ್ಪೆಯಲ್ಲಿ ಚುನಾವಣಾ ಕೆಲಸ ನಿರ್ವಹಿಸಿದ ಆರೋಪದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎನ್‌.ಶ್ರೀಕಂಠ ಅವರು 10  ಶಿಕ್ಷಕರಿಗೆ ಜನವರಿ 27 ರಂದು ನೋಟಿಸ್‌ ನೀಡಿದ್ದರು.

ನೋಟಿಸ್‌ ಪಡೆದವರ ಪೈಕಿ ಮರುಳುಕುಂಟೆ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್‌.ಶ್ರೀನಿವಾಸ್, ಹುನೇಗಲ್ಲು ಶಾಲೆಯ ಬಿ.ನರಸಿಂಹಪ್ಪ ಮತ್ತು ಬಚ್ಚಹಳ್ಳಿ ಶಾಲೆಯ ವಿ.ವೆಂಕಟೇಶ್‌ ಅವರು ಆಘಾತಗೊಂಡಿದ್ದರು. ಏಕೆಂದರೆ ಈ ಮೂವರು ಶಿಕ್ಷಕರು ಆ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ.

ಮಾಡದ ತಪ್ಪಿಗೆ ನೋಟಿಸ್‌ ಪಡೆದು ನೊಂದುಕೊಂಡ ಶಿಕ್ಷಕರು ಬಿಇಒ ಅವರಿಗೆ ತಾವು ಆ ಚುನಾವಣೆಯಲ್ಲಿ ಭಾಗವಹಿಸಿಲ್ಲ ಎಂದು ಪತ್ರ ಬರೆದು ಸಮಜಾಯಿಷಿ ನೀಡಿದ್ದಾರೆ. ಆ ಬಳಿಕವಷ್ಟೇ  ಶಿಕ್ಷಕನೊಬ್ಬ ನಕಲಿ ಸಹಿ ಮಾಡಿ ಸಂಘಕ್ಕೆ ವಂಚಿಸಿದ ಪ್ರಕರಣ ಬಯಲಿಗೆ ಬಂದಿದೆ.

ಯಾರಿಂದ ವಂಚನೆ?
ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸಹಕಾರ ಸಂಘಗಳ ಉಪ ನಿಬಂಧಕರು 2016ರ ಏಪ್ರಿಲ್‌ 13 ರಂದು ಬನ್ನಿಕುಪ್ಪೆ ಚುನಾವಣೆಗಾಗಿ 5 ಸಿಬ್ಬಂದಿ ನೇಮಕ ಮಾಡಿ, ಅದರ ಪ್ರತಿಯನ್ನು ಚುನಾವಣಾಧಿಕಾರಿಯಾಗಿದ್ದ ತಾಲ್ಲೂಕಿನ ಅಣಕನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರರಾವ್ ಅವರಿಗೆ ನೀಡಿದ್ದರು ಎಂದು ತಿಳಿದು ಬಂದಿದೆ.

ಆ ನೇಮಕಾತಿ ಪ್ರತಿಯಲ್ಲಿ ಮುದ್ರಿತ ವಾಗಿದ್ದ ಸಿಬ್ಬಂದಿ ಹೆಸರಿನ ಪಟ್ಟಿಯ ಕೆಳಗೆ ರಾಘವೇಂದ್ರರಾವ್ ಅವರು ಪೆನ್ನಿನಿಂದ ಶಿಕ್ಷಕರಾದ ಎನ್‌.ಶ್ರೀನಿವಾಸ್, ಬಿ.ನರಸಿಂಹಪ್ಪ ಮತ್ತು ವಿ.ವೆಂಕಟೇಶ್‌ ಅವರ ಹೆಸರನ್ನು ಸೇರಿಸುವ ಜತೆಗೆ ಆ ಮೂರು ಶಿಕ್ಷಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಂಘದವರಿಂದ ಸಿಬ್ಬಂದಿಯ ಸಂಭಾವನೆ ಎಂದು ತಲಾ ₹1,500 ರಂತೆ ಒಟ್ಟು ₹ 4,500 ಪಡೆದಿದ್ದಾರೆ’ ಎಂದು ಬನ್ನಿಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ವೆಂಕಟಶಾಮಪ್ಪ ಆರೋಪಿಸುತ್ತಾರೆ. ಇದಕ್ಕೆ  ಸಂಬಂಧಿಸಿದ ದಾಖಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ದುಂಡಾವರ್ತನೆ ವಿರುದ್ಧ ತಿಂಗಳಾದರೂ ಕ್ರಮವಿಲ್ಲ
ಚುನಾವಣೆಯಲ್ಲಿ ಭಾಗವಹಿಸಿದ ಶಿಕ್ಷಕರಿಗೆ ಬಿಇಒ ನೋಟಿಸ್‌ ನೀಡಿದ್ದನ್ನು ಪ್ರಶ್ನಿಸಿ ಕೆಲ ಶಿಕ್ಷಕರು ಶಿಕ್ಷಕ ಸಂಘಗಳ ಪದಾಧಿಕಾರಿಗಳನ್ನು ಕರೆದು ಕೊಂಡು ಬಿಇಒ ಕಚೇರಿಗೆ ಹೋಗಿ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಬಿಇಒ ಅವರು  ‘ಗೂಂಡಾಗಿರಿ’ ಪ್ರದರ್ಶಿಸಿದ ಶಿಕ್ಷಕರಿಗೆ ಮತ್ತೊಂದು ನೋಟಿಸ್ ನೀಡಿ, ಈ ಕುರಿತು ಗ್ರಾಮಾಂತರ ಠಾಣೆಗೆ ಫೆಬ್ರುವರಿ 27ರಂದು ದೂರು ಸಲ್ಲಿಸಿದ್ದಾರೆ. ಆದರೆ ಪೊಲೀಸರು ಈವರೆಗೆ ಪ್ರಕರಣ ದಾಖಲಿಸಿಕೊಂಡಿಲ್ಲ!

‘ಶಿಕ್ಷಕರು ನಮ್ಮ ಕಚೇರಿಗೆ ಬಂದು ದಾಂಧಲೆ ಮಾಡಿರುವ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹ ಣಾಧಿಕಾರಿ, ಸಹಕಾರ ಸಂಘಗಳ ನಿಬಂಧಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಉಪ ನಿರ್ದೇಶಕರಿಗೆ ಪತ್ರ ಬರೆದು ಗಮನಕ್ಕೆ ತಂದಿರುವೆ’ ಎನ್ನುತ್ತಾರೆ ಬಿಇಒ ಎನ್‌.ಶ್ರೀಕಂಠ. ಆದರೆ ‘ಬಿಇಒ ಕಚೇರಿಯಲ್ಲಿ ಶಿಕ್ಷಕರು ಗಲಾಟೆ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಶ್ವತ್ಥರೆಡ್ಡಿ ತಿಳಿಸಿದರು.

ಕುಸಿಯುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಶಿಕ್ಷಣ ಇಲಾಖೆ ನಾನಾ ರೀತಿಯ ಕಸರತ್ತು ನಡೆಸುತ್ತಿರುವ ನಡುವೆಯೇ  ಜಿಲ್ಲೆಯಲ್ಲಿ ಶಿಕ್ಷಕರು ಮಾಡುತ್ತಿರುವ ‘ಅಕ್ರಮ’ ಕೆಲಸಗಳನ್ನು ಕಂಡರೂ ಇಲಾಖೆಯ ಹಿರಿಯ ಅಧಿಕಾರಿಗಳು ಈವರೆಗೆ ಶಿಸ್ತುಕ್ರಮ ಜರುಗಿಸದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ.

ಬರದೆ ಇರುವವರನ್ನೂ ಬಂದಿದ್ದಾರೆ ಎಂದರು!
ತಮ್ಮ ವಿರುದ್ಧದ ಆರೋಪಗಳ ಕುರಿತಂತೆ ರಾಘವೆಂದ್ರ ರಾವ್ ಅವರನ್ನು ಪ್ರಶ್ನಿಸಿದರೆ, ‘ಉಪ ನಿಬಂಧಕರೇ ಚುನಾವಣೆಗೆ ನೇಮಕ ಮಾಡಿ ನನಗೆ ಆದೇಶ ಪತ್ರ ಕಳುಹಿಸಿದ್ದರು. ಹೀಗಾಗಿ ಚುನಾವಣೆ ಕರ್ತವ್ಯದಲ್ಲಿ ಭಾಗವಹಿಸಿದ್ದೆ. ಉಪ ನಿಬಂಧಕರ ಅನುಮತಿ ಪಡೆದೆ ಮೂರು ಶಿಕ್ಷಕರ ಹೆಸರು ಸೇರಿಸಿರುವೆ’ ಎಂದರು.

ಬಚ್ಚಹಳ್ಳಿ, ಹುನೇಗಲ್ಲು, ಮರಳುಕುಂಟೆ ಶಾಲೆಯ ಮೂರು ಶಿಕ್ಷಕರು ಕರ್ತವ್ಯಕ್ಕೆ ಬರದೆ ಇದ್ದರೂ ಸಂಭಾವನೆ ಹೇಗೆ ಪಡೆಯುತ್ತಾರೆ ಎಂದು ಪ್ರಶ್ನಿಸಿದಾಗ, ‘ಯಾರು ಹೇಳಿದ್ದು ನಿಮಗೆ? ಅವರೂ ಚುನಾವಣೆಗೆ ಬಂದಿದ್ದಾರೆ. ಅವರೇ ಬರೆದುಕೊಟ್ಟಿದ್ದಾರೆ. ಬಂದವರು ಬಂದಿಲ್ಲಾ ಎಂದರೆ ಇನ್ನೇನು ಮಾಡುವುದು ಹೇಳಿ?’ ಎಂದು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆಯುತ್ತಾರೆ.

ಆದರೆ ಮೂರು ಶಿಕ್ಷಕರು ನಾವು ಬನ್ನಿಕುಪ್ಪೆ ಚುನಾವಣೆ ಕರ್ತವ್ಯಕ್ಕೆ ಹೋಗಿಯೇ ಇಲ್ಲ ಎಂದು ಬಿಇಒ ಅವರಿಗೆ ಸಮಜಾಯಿಷಿ ಪತ್ರದ ಮೂಲಕ ತಿಳಿಸಿರುವುದಾಗಿ ಹೇಳುತ್ತಾರೆ. ಈ ವಿಚಾರದಲ್ಲಿ ಯಾರದು ಸತ್ಯ, ಯಾರದು ಸುಳ್ಳು ಎನ್ನುವುದು ಇಲಾಖಾ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.

ಲಕ್ಷಗಟ್ಟಲೇ ವಸೂಲಿ ಆರೋಪ!
ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗೆ ₹ 30–₹35 ಸಾವಿರ ಖರ್ಚು ಮಾಡಬಹುದು ಎನ್ನುತ್ತಾರೆ ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕ ಕೆ.ವಿ.ನಾಗರಾಜ್. ಆದರೆ ವಿದ್ಯಾರ್ಥಿಗಳಿಗೆ ಸತ್ಯ, ನೈತಿಕತೆಯ ಪಾಠ ಮಾಡುವ ಶಿಕ್ಷಕರೇ ಕೆಲ ಸಂಘಗಳ ಚುನಾವಣೆಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ಆಮಿಷ ಮತ್ತು ಸುಳ್ಳು ಲೆಕ್ಕಗಳನ್ನು ತೋರಿಸಿ ತಲಾ ₹5 ರಿಂದ ₹10 ಸಾವಿರದಂತೆ ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸುಲಭದಲ್ಲಿ ದುಡ್ಡು ಮಾಡಬಹುದಾದ ಹಾದಿ ಕಂಡುಕೊಂಡಿರುವ ಶಿಕ್ಷಕರ ಗುಂಪೊಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಿಂತಲೂ ಹೆಚ್ಚಾಗಿ ಜಿಲ್ಲಾಡಳಿತ ಭವನದಲ್ಲಿರುವ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಬಳಿಯೇ ಸುತ್ತುತ್ತಿರುತ್ತಾರೆ ಎಂದು ತಿಳಿದು ಬಂದಿದೆ.

*
ಚುನಾವಣೆ ಕರ್ತವ್ಯಕ್ಕೆ ಹೋಗದಿದ್ದರೂ ನನಗೆ ನೋಟಿಸ್‌ ಬಂದಿದೆ. ನಕಲಿ ಸಹಿ ಮಾಡಿ ನನ್ನ ಹೆಸರಿನಲ್ಲಿ ₹1,500 ಸಂಭಾವನೆ ಪಡೆಯಲಾಗಿದೆ. ಮನಸ್ಸಿಗೆ ತುಂಬಾ ನೋವಾಗಿದೆ.
–ವಿ.ವೆಂಕಟೇಶ್, ಶಿಕ್ಷಕ  ಬಚ್ಚಹಳ್ಳಿ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT