ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಸಾವಿರ ಜನಸಂಖ್ಯೆಗೆ ಒಬ್ಬರೇ ವೈದ್ಯರು!

ಗೋಣಿಬೀಡು: ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಅಮಿತಾ ಮುತ್ತಪ್ಪ ಭೇಟಿ
Last Updated 23 ಮಾರ್ಚ್ 2017, 5:40 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಕ್ಷಣವೇ ವೈದ್ಯರನ್ನು ನೇಮಿಸಿ, ಮೂಲ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಅಮಿತಾಮುತ್ತಪ್ಪ ಜಿಲ್ಲಾ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ್‌ ಅವರನ್ನು ಒತ್ತಾಯಿಸಿದರು.

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸೋಮವಾರ ಗೋಣಿ ಬೀಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿದ ಅಮಿತಾ ಮುತ್ತಪ್ಪ, ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಕಿಡಿಕಾರಿದರು.

25 ಸಾವಿರ ಜನಸಂಖ್ಯೆ ವ್ಯಾಪ್ತಿಯನ್ನು ಹೊಂದಿರುವ ಹೋಬಳಿ ಕೇಂದ್ರದ ಆಸ್ಪತ್ರೆಗೆ ಒಬ್ಬ ವೈದ್ಯರನ್ನು ನಿಯೋಜಿಸಿದ್ದು, ಅವರನ್ನೂ ಬೇರೆ ಕಾರ್ಯಗಳಿಗೆ ನಿಯೋಜನೆ ಮಾಡಲಾಗುತ್ತಿದೆ.

ಇದರಿಂದ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾ ಡುವಂತಾಗಿದೆ ಎಂದು ಸಾರ್ವಜನಿಕರು ದೂರಿದರು. ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್‌ ಅವರಿಗೆ ಸ್ಥಳಕ್ಕೆ ಬರುವಂತೆ ಸೂಚಿಸಿದ ಅವಿತಾಮುತ್ತಪ್ಪ, ಆಸ್ಪತ್ರೆಗೆ ಬಂದ ಅಧಿಕಾರಿಗಳ ತಂಡದೊಂದಿಗೆ ಸಭೆ ನಡೆಸಿದರು.

ಹೋಬಳಿ ಕೇಂದ್ರದ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದ್ದರೂ, ಸಂಜೆ 5 ರ ನಂತರ ಬೀಗ ಹಾಕಲಾಗುತ್ತಿದೆ. ಹೋಬಳಿಯಲ್ಲಿ ರಾತ್ರಿ ಅವಘಡಗಳು ಸಂಭವಿಸಿದರೂ, ಮೂಡಿಗೆರೆ ಅಥವಾ ಬೇಲೂರು ತಾಲ್ಲೂಕು ಆಸ್ಪತ್ರೆಗೆ ತೆರಳುವ ಸ್ಥಿತಿಯಿದೆ.

ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು, ಆಸ್ಪತ್ರೆಯ ಆವರಣವೇ ಅಶುಚಿತ್ವದಿಂದ ಕೂಡಿದೆ. ಆಸ್ಪತ್ರೆಯ ಅವ್ಯವಸ್ಥೆಯಿಂದ ಜನಪ್ರತಿನಿಧಿಗಳು ಜನರಿಗೆ ಉತ್ತರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕು ಎಂದರು.

ನವಕರ್ನಾಟಕ ಯುವ ಶಕ್ತಿ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಮಾತನಾಡಿ, ಆಸ್ಪತ್ರೆ ಸಮಸ್ಯೆ ಬಗೆಹರಿಸಲು ಹಿಂದೆ ಪ್ರತಿಭಟನೆ ನಡೆಸಿದ್ದು, ಇದೀಗ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಜಿಲ್ಲಾ ವೈದ್ಯಾಧಿಕಾರಿ ಡಾ. ಮಲ್ಲಿ ಕಾರ್ಜುನ್‌ ಮಾತನಾಡಿ, ತಕ್ಷಣದಿಂದಲೇ ಶಶ್ರೂಷಕಿಯರನ್ನು ನಿಯೋಜಿಸಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸು ವಂತೆ ಕ್ರಮ ಕೈಗೊಳ್ಳಬೇಕು. ಶಿಥಿಲ ಗೊಂಡಿರುವ ಕಟ್ಟಡದ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗೋಣಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿಪ್ರಕಾಶ್‌, ಸದಸ್ಯರಾದ ಜೆ.ಎಸ್‌. ಸುಧೀರ್‌, ವರದೇಗೌಡ, ಜೆ.ಎಸ್‌. ರಘು,  ವಿಜೇಂದ್ರ, ಗಂಗಾಧರ್‌ ಮುಂತಾದವರಿದ್ದರು.

*
ಲಕ್ಷಾಂತರ ವೆಚ್ಚ ಮಾಡಿ ಆಸ್ಪತ್ರೆ ನಿರ್ಮಿಸಿದ್ದರೂ, ವೈದ್ಯರಿಲ್ಲದೇ ರೋಗಿಗಳ ಬಳಕೆಯಿಂದ ಹೊರಗುಳಿದಿವೆ. ಆಸ್ಪತ್ರೆಗಳಿಗೆ ಸವಲತ್ತು ಕಲ್ಪಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ.
-ಅಮಿತಾಮುತ್ತಪ್ಪ,
ಜಿಲ್ಲಾ ಪಂಚಾಯಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT