ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತು ಖರೀದಿಗೂ ಮುನ್ನ ಗುಣಮಟ್ಟ ಪರಿಶೀಲಿಸಿ

ವಿಶ್ವ ಗ್ರಾಹಕರ ದಿನಾಚರಣೆ: ಉಪ ವಿಭಾಗಾಧಿಕಾರಿ ಶಿವಕುಮಾರ ಸಲಹೆ
Last Updated 23 ಮಾರ್ಚ್ 2017, 7:19 IST
ಅಕ್ಷರ ಗಾತ್ರ

ಬೀದರ್‌: ಹಣ ಕೊಟ್ಟು ಖರೀದಿ ಮಾಡುವ ವಸ್ತುವಿನ ಗುಣಮಟ್ಟ ಪರಿಶೀಲಿಸುವುದು ಪ್ರತಿಯೊಬ್ಬ ಗ್ರಾಹಕನ ಹಕ್ಕು. ಖರೀದಿಸಿದ ವಸ್ತುವಿನ ಗುಣಮಟ್ಟ ಕಳಪೆಯಾಗಿದ್ದಲ್ಲಿ, ತೂಕ ಹಾಗೂ ಅಳತೆಯಲ್ಲಿ ಮೋಸ ಕಂಡು ಬಂದಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಅಡಿಯಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಔಷಧಿ, ನೀರಿನ ಬಾಟಲ್‌, ಹಾಲಿನ ಪಾಕೆಟ್‌ ಸೇರಿದಂತೆ  ಯಾವುದೇ ರೀತಿಯ ವಸ್ತುಗಳನ್ನು ಖರೀದಿಸುವಾಗ ಉತ್ಪಾದಿಸಿದ ದಿನಾಂಕ ಹಾಗೂ ಅದರ ಅವಧಿ ಕೊನೆಗೊಳ್ಳುವ ದಿನಾಂಕವನ್ನು ಗ್ರಾಹಕರು ಗಮನಿಸಬೇಕು. ಐಎಸ್‌ಐ ಗುರುತು ಇರುವ ಬಗೆಗೆ ಖಚಿತ ಪಡಿಸಿಕೊಳ್ಳಬೇಕು. ವಸ್ತು ಖರೀದಿಸಿದ ಬಳಿಕ ತಪ್ಪದೇ ರಸೀದಿ ಪಡೆಯಬೇಕು ಎಂದು ಹೇಳಿದರು.

ಗ್ರಾಹಕರ ಹಿತರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಗ್ರಾಹಕರ ವೇದಿಕೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕರ ಆಯೋಗ ಕಾರ್ಯ ನಿರ್ವಹಿಸುತ್ತಿವೆ. ಆದರೂ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಮೋಸ ಆಗುತ್ತಲೇ ಇದೆ ಎಂದು ಡಾ.ಪೃಥ್ವಿರಾಜ ಲಕ್ಕಿ ತಿಳಿಸಿದರು.

ಪ್ರತಿಯೊಬ್ಬರು ಗ್ರಾಹಕರ ಹಕ್ಕುಗಳ ಬಗೆಗೆ ಅರಿತುಕೊಳ್ಳಬೇಕು. ಉತ್ಪಾದಕರು ಹಾಗೂ ವ್ಯಾಪಾರಿಗಳಿಂದ ಮೋಸಕ್ಕೊಳಗಾದ ಗ್ರಾಹಕರು ರಸೀದಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಹೇಳಿದರು.

ಪ್ರತಿಯೊಬ್ಬ ಗ್ರಾಹಕ ತಾನು ಕೊಳ್ಳುವ ವಸ್ತುವಿನ ಬೆಲೆ, ಅದರ ಮಹತ್ವ ಹಾಗೂ ಉಪಯೋಗ ಕುರಿತು ಮಾಹಿತಿ ಪಡೆಯುವ ಹಕ್ಕು ಹೊಂದಿದ್ದಾನೆ. ಗ್ರಾಹಕರು ಮೊದಲು ತಮ್ಮ ಹಕ್ಕುಗಳ ಬಗೆಗೆ ಜಾಗೃತರಾಗಿರಬೇಕು. ಅಂದಾಗ ಮಾತ್ರ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಮೋಸ, ವಂಚನೆ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಷಣ್ಮುಖ ಕಾರ್ಯಕ್ರಮ ಉದ್ಘಾಟಿಸಿದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಎಚ್‌.ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸದಸ್ಯ ಬಸವರಾಜ ಪವಾರ ಇದ್ದರು.

*
ಮಾರುಕಟ್ಟೆಯಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವ ಮುಂಚೆ ಆ ವಸ್ತು ಉತ್ಪಾದಿಸಿದ ದಿನಾಂಕ ಹಾಗೂ ಅಂತಿಮ ದಿನಾಂಕ  ಗಮನಿಸುವುದು ಗ್ರಾಹಕರ ಜವಾಬ್ದಾರಿ.
–ಶಿವಕುಮಾರ ಶೀಲವಂತ,
ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT