ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೂರಿಕಟ್ಟೆ’ ಎಂಬ ಜುಗಾರಿಕ್ರಾಸ್

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮರಗಳ ಕಳ್ಳಸಾಗಣೆ ಇಂದು ನೆನ್ನೆಯದಲ್ಲ. ಒಂದು ಕಾಲದಲ್ಲಿ ಎಲ್ಲೆಲ್ಲೂ ಕಾಣುತ್ತಿದ್ದ ಗಂಧದ ಮರಗಳನ್ನು ನೋಡಿಯೋ ಏನೋ ಕನ್ನಡನಾಡನ್ನು ಹಿರಿಯರು ‘ಗಂಧದ ಗುಡಿ’ ಎಂದು ವರ್ಣಿಸಿದ್ದನ್ನು ನೆನೆಯಬಹುದು. ಈ ಗಂಧದ ಘಮದ ಪ್ರಸ್ತಾಪಕ್ಕೆ ಕಾರಣ ‘ಚೂರಿಕಟ್ಟೆ’ ಎಂಬ ಸಿನಿಮಾ. ಮರಗಳ ಕಳ್ಳಸಾಗಣೆ ಸುತ್ತ ಹೆಣೆದಿರುವ ಈ ಥ್ರಿಲ್ಲರ್ ಕಥೆಯ ನಿರ್ದೇಶಕ ರಾಘು ಶಿವಮೊಗ್ಗ. ಅಂದಹಾಗೆ, ಚಿತ್ರದ ಶೀರ್ಷಿಕೆ ಕಲ್ಪನೆಯ ಪದವಲ್ಲ. ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಸಮೀಪ ‘ಚೂರಿಕಟ್ಟೆ’ ಎಂಬ ಪ್ರದೇಶವೇ ಇದೆ.

‘ಚೌಕಾಬಾರ’ ಎಂಬ ಕಿರುಚಿತ್ರದ ಮೂಲಕ ಗಮನ ಸೆಳೆದಿದ್ದ ರಾಘು, ಈಗ ಪೂರ್ಣ ಪ್ರಮಾಣದ ಚಿತ್ರಕ್ಕೆ ಕೈ ಹಾಕಿದ್ದಾರೆ. ತಮ್ಮ ಮೊದಲ ಚಿತ್ರದ ಶೀರ್ಷಿಕೆಗೆ ‘ಗಂಧದಗುಡಿ ಸರಹದ್ದು’ ಎಂದು ಅಡಿಬರಹ ಹಾಕಿಕೊಂಡಿರುವ ನಿರ್ದೇಶಕರು, ಮರಗಳ ಕಳ್ಳಸಾಗಣೆಯ ಲೋಕವನ್ನು ತೆರೆ ಮೇಲೆ ತೆರೆದಿಡಲು ಮುಂದಾಗಿದ್ದಾರೆ.

‘ಚಿತ್ರದ ಬಹುತೇಕ ಶೂಟಿಂಗ್ ಹಚ್ಚಹಸುರಿನ ಮಲೆನಾಡಿನ ಕಾಡುಗಳಲ್ಲಿ ನಡೆಯಲಿದೆ. ಹೊಸನಗರ, ಶಿವಮೊಗ್ಗ ಹಾಗೂ ಸಾವನದುರ್ಗದಲ್ಲಿ ಕ್ಲೈಮ್ಯಾಕ್ಸನ್ನು ಮೂರು ಹಂತದಲ್ಲಿ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ರಾಘು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಖಡಕ್ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸು ಹೊತ್ತ ಕಾಲೇಜು ಹುಡುಗನ ಪಾತ್ರದಲ್ಲಿ ಪ್ರವೀಣ್ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ನಟಿ ಪ್ರೇರಣಾ ಈ ಚಿತ್ರದ ನಾಯಕಿನಟಿಯಾಗಿ ಹಿರಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಮಂಜುನಾಥ ಹೆಗಡೆ, ಅಚ್ಯುತಕುಮಾರ್, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ನಟರ ದಂಡೇ ಚಿತ್ರದಲ್ಲಿದೆ.

ಅದ್ವೈತ ಗುರುಮೂರ್ತಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಕೆ. ಕಲ್ಯಾಣ್, ಗೌಸ್‌ಫೀರ್ ಹಾಗೂ ಕವಿರಾಜ್  ಸಾಹಿತ್ಯಕ್ಕೆ  ‘ರಾಮಾ ರಾಮಾ ರೇ..’ ಖ್ಯಾತಿಯ ಯುವ ನಿರ್ದೇಶಕ ವಾಸುಕಿ ವೈಭವ್ ಚಿತ್ರದ ಸಂಗೀತ ಸಂಯೋಜಿಸುತ್ತಿದ್ದಾರೆ.

ನಿರ್ದೇಶಕನಾಗಬೇಕೆಂದು ಕನಸು ಕಂಡಿದ್ದ ಎಸ್. ನಯಾಜುದ್ದೀನ್ ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಈ ತಿಂಗಳಾಂತ್ಯದಿಂದ ಚಿತ್ರೀಕರಣ ಆರಂಭಿಸಲು ತಂಡ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT