ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ!

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘18 ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ’ – ಇದು ‘ರತ್ನಾವತಿ’ ಚಿತ್ರದ ಶೀರ್ಷಿಕೆಯ ಅಡಿಟಿಪ್ಪಣಿ. ಹದಿನೆಂಟು ವರ್ಷ ಮೇಲ್ಪಟ್ಟ ಪ್ರೇಕ್ಷಕಪ್ರಭುವಿಗೆ ಚಿತ್ರಮಂದಿರಕ್ಕೆ ಪ್ರವೇಶವಿಲ್ಲ ಎನ್ನುವುದು ಈ ಅಡಿಟಿಪ್ಪಣಿಯ ಅರ್ಥವಲ್ಲ. ಹದಿನೆಂಟು ವರ್ಷ ದಾಟಿದ ವ್ಯಕ್ತಿಯಿಂದ ಚಿತ್ರದಲ್ಲಿ ಸಮಸ್ಯೆಗಳು ಸೃಷ್ಟಿಯಾಗುವ ಕಾರಣಕ್ಕೆ ಅಂಥದ್ದೊಂದು ಅಡಿಟಿಪ್ಪಣಿಯಂತೆ. ‘ರತ್ನಾವತಿ’ ಅಪರಾಜಿತ್ ನಿರ್ದೇಶಿಸುತ್ತಿರುವ ಸಿನಿಮಾ.

‘ಕನ್ನಡ ಚಿತ್ರರಂಗಕ್ಕೆ ಹೊಸಬರು ಬರಬೇಕು’, ‘ನಮ್ಮದು ಹೊಸಬರ ತಂಡ’, ‘ಡಿಫರೆಂಟ್ ಪ್ರಯತ್ನ ಮಾಡೋಕೆ ಹೊರಟಿದೀವಿ’, ‘ನಮಗೆ ವೇದಿಕೆ ಮೇಲೆ ಮಾತಾಡೋಕೆ ಬರೋದಿಲ್ಲ’, ‘ನೀವೆಲ್ಲ ನಮ್ಮನ್ನು ಪ್ರೋತ್ಸಾಹಿಸಬೇಕು’–ವೇದಿಕೆ ಮೇಲಿದ್ದವರೆಲ್ಲ ತಮ್ಮದೇ ಶೈಲಿಯಲ್ಲಿ ಅದದೇ ಡೈಲಾಗುಗಳನ್ನು ಪುನರುಚ್ಚರಿಸುತ್ತಿದ್ದರು. ಅದು ಹೊಸ ಚಿತ್ರ ‘ರತ್ನಾವತಿ’ಯ ಶೀರ್ಷಿಕೆ ಮತ್ತು ಮೋಷನ್ ಪೋಸ್ಟರ್ ಅನಾವರಣದ ಸುದ್ದಿಗೋಷ್ಠಿ.

ನಿರ್ದೇಶಕ ಅಪರಾಜಿತ್, ಹೊಸ ರೀತಿಯ ಸಿನಿಮಾ ಕೊಟ್ಟು ಕನ್ನಡ ಚಿತ್ರರಂಗವನ್ನೇ ಮೇಲೆತ್ತುವ ಹುರುಪಿನಲ್ಲಿ ಇದ್ದಂತೆ ಕಾಣುತ್ತಿತ್ತು. ಹೊಸತನದ ಮಂತ್ರ ಜಪಿಸಿದ ಅವರು ತಾವೇನು ಮಾಡಲು ಹೊರಟಿದ್ದೇವೆ ಎಂಬ ಮಾಹಿತಿ ಬಿಚ್ಚಿಡಲಿಲ್ಲ. ಬದಲಾಗಿ, ತಮ್ಮ ಬೆನ್ನು ತಟ್ಟಿದ ಎಲ್ಲರನ್ನೂ ವೇದಿಕೆಗೆ ಕರೆದು ಧನ್ಯವಾದ ಹೇಳಲು ಮಾತುಗಳನ್ನು ಖರ್ಚು ಮಾಡಿದರು.

(ಭರತ್, ಶಿಲ್ಪಾ, ಅಪರಾಜಿತ್)

ಚಿತ್ರದ ಬಹುತೇಕ ಕಲಾವಿದರು ಹೊಸಬರು. ಒಂದು ಹಂತದ ಚಿತ್ರೀಕರಣ ಮುಗಿದಿದ್ದರೂ ಹೆಚ್ಚಿನವರಿಗೆ ತಮ್ಮ ಪಾತ್ರದ ಸ್ಪಷ್ಟ ಕಲ್ಪನೆಯೇ ಇಲ್ಲ. ಅಷ್ಟರ ಮಟ್ಟಿಗೆ ನಿರ್ದೇಶಕರು ಕಥೆಯ ಜೊತೆಗೆ ಪಾತ್ರಧಾರಿಗಳಿಂದಲೂ ಅವರ ಪಾತ್ರವನ್ನು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ!

‘ಸ್ವಚ್ಛ ಭಾರತ್’ ಕಿರುಚಿತ್ರ ಮಾಡಿದ್ದ ಮಂಜ ಅಲಿಯಾಸ್ ಅಪರಾಜಿತ್‌ಗೆ ‘ರತ್ನಾವತಿ’ ಮೊದಲ ಸಿನಿಮಾ. ಇನ್ನೂರು ವರ್ಷಗಳ ಹಿಂದಿನ ಸಮಸ್ಯೆ ಪ್ರಸ್ತುತ ಎದುರಾದಾಗ ಅದನ್ನು ಹೇಗೆ ಎದುರಿಸುತ್ತಾರೆ ಎಂಬುದು ಕಥೆ. ಸಮಸ್ಯೆ ಯಾವುದು ಎಂದರೆ ‘ಪ್ರೇಮ’. ಇನ್ನೂರು ವರ್ಷಗಳ ಹಿಂದೆ ರತ್ನಾವತಿಗೆ ಯಾರ ಮೇಲೋ ಪ್ರೀತಿ ಆಗಿರುತ್ತದೆ. ಅದು ಇಂದಿಗೆ ಯಾರ ಮೇಲೆ, ಹೇಗೆ ಪರಿಣಾಮ ಬೀರುತ್ತದೆ ಎಂದು ‘ರತ್ನಾವತಿ’ ಹೇಳುತ್ತದೆ.

ಎರಡನೇ ಹಂತದ ಚಿತ್ರೀಕರಣಕ್ಕೆ ಹಳ್ಳಿಯ ಸೆಟ್ ಹಾಕುವುದು ತಂಡದ ಉದ್ದೇಶ. ಚಿತ್ರದಲ್ಲಿ ನಲವತ್ತು ಭಾಗ ಗ್ರಾಫಿಕ್ಸ್ ಇರಲಿದೆ. ನೈಜ ಘಟನೆಯಿಂದ ಪ್ರೇರಣೆ ಪಡೆದು ಕಥೆ ರಚಿಸಿದ್ದಾಗಿ ಹೇಳಿಕೊಳ್ಳುವ ಅಪರಾಜಿತ್, ಚಿತ್ರವನ್ನು ಸಸ್ಪೆನ್ಸ್ ಥ್ರಿಲ್ಲರ್ ವರ್ಗಕ್ಕೆ ಸೇರಿಸುತ್ತಾರೆ. ಭರತ್, ಪವನ್, ರಶ್ಮಿ, ರವಿರಾಜ್, ಕೃಷ್ಣ, ಸುನಿಲ್ ರಾಣಾ, ಶಿಲ್ಪಾ, ದರ್ಶನ್ ಗೌಡ ತಾರಾಗಣದಲ್ಲಿದ್ದಾರೆ. ನಿರ್ಮಲ್ ಛಾಯಾಗ್ರಹಣ, ಟೈಟಸ್ ಸಂಗೀತವಿದೆ. ವಿ. ಮನೋಹರ್ ಮತ್ತು ‘ವರ್ಧನ’ ಚಿತ್ರದ ನಾಯಕ ಹರ್ಷ ಶೀರ್ಷಿಕೆಯನ್ನು ಅನಾವರಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT