ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಣಿ ಉದ್ಯಮಿಯಿಂದ ಬಿಜೆಪಿಗೆ ₹500 ಕೋಟಿ’

Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ‘ಕಳಂಕಿತ ಗಣಿ ಉದ್ಯಮಿಯೊಬ್ಬರಿಂದ ಬಿಜೆಪಿಯು ₹500 ಕೋಟಿ ಪಡೆದು ಅವರ ಮೇಲಿನ ಎಲ್ಲ ಪ್ರಕರಣಗಳನ್ನು ಕೈಬಿಡಲು ಮುಂದಾಗಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.
 
ಜೆಡಿಎಸ್‌ ಗುರುವಾರ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ  ಜೆ.ಪಿ ಭವನ ಉದ್ಘಾಟನೆ ಮತ್ತು ಸ್ವಾಭಿಮಾನಿ ಸಮಾನತೆ ಸಮಾವೇಶದಲ್ಲಿ ಅವರು ಮಾತನಾಡಿ,  ‘ಗಣಿ ಉದ್ಯಮಿಯಿಂದ  ₹ 500 ಕೋಟಿ  ಪಡೆದು, ಮುಂದಿನ ವಿಧಾನಸಭಾ ಚುನಾವಣೆಗೆ ಬಳಸಲು ಬಿಜೆಪಿ ಮುಂದಾಗಿದೆ’ ಎಂದು ಆರೋಪ ಮಾಡಿದರು.
 
‘ಅಕ್ರಮ ಗಣಿಗಾರಿಕೆಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿರುವ ಗಣಿ ಉದ್ಯಮಿ ಈ ಹಿಂದೆ ವಿಧಾನಪರಿಷತ್‌ನಲ್ಲಿ ನನ್ನ ಹಣೆ ಬರಹ ಬದಲಿಸುತ್ತೇನೆ ಎಂದು ಶಪಥ ಮಾಡಿದ್ದರು.  ಆ ನಂತರ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇ.ಡಿ) ಮುಟ್ಟುಗೋಲು ಹಾಕಿಕೊಂಡಿತ್ತು.
 
ಆದರೆ, ಈಗ ಎಲ್ಲ ಆಸ್ತಿಯನ್ನು ವಾಪಸ್‌ ನೀಡುವ ತೀರ್ಮಾನ ಮಾಡಲಾಗಿದೆ’ ಎಂದು ಅವರು ದೂರಿದರು.‘ಯಾವ ಕಾರಣಕ್ಕೆ ಆಸ್ತಿ ವಾಪಸ್‌ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿಲ್ಲ’ ಎಂದರು.

ಬೇಲೆಕೇರಿಯಲ್ಲಿ ಕಬ್ಬಿಣದ ಅದಿರು ಕಳ್ಳ ಸಾಗಣೆ ಆಗುತ್ತಿದ್ದ ಬಗ್ಗೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ನೀಡಿದ್ದ ವರದಿಗೆ ರಾಜ್ಯ ಸರ್ಕಾರ ಎಳ್ಳುನೀರು ಬಿಡುತ್ತಿದೆ. ಎಲ್ಲ ಪ್ರಕರಣಗಳಲ್ಲಿ ಬಿ ರಿಪೋರ್ಟ್‌ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು.
 
ಮೋದಿ ಮತ್ತು ಜೋಗಪ್ಪ: ಮೋದಿ ಜನರನ್ನು ಮರುಳು ಮಾಡುತ್ತಿರುವುದನ್ನು ನೋಡಿದರೆ  ಗ್ರಾಮೀಣ ಜನಪದರು ಹಾಡುವ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಎಂಬ ಪದ್ಯ ನೆನಪಿಗೆ ಬರುತ್ತಿದೆ.
 
ಜೋಗಿಯ ಬಳಿ ಅರಮನೆ ಇದೆ ಎಂದು ಭಾವಿಸಿಕೊಂಡು ಗಂಡ, ಮನೆ, ಆಸ್ತಿ ಎಲ್ಲವನ್ನು ಬಿಟ್ಟು ಹೋಗುವ ಮಹಿಳೆಗೆ ನಂತರ ತನ್ನ ತಪ್ಪಿನ ಅರಿವಾಗುತ್ತದೆ. ಮೋದಿಯನ್ನು ಕನಸುಗಾರ ಎಂದು ನಂಬಿ ದೇಶದ ಜನ ಮರಳಾಗುತ್ತಿದ್ದಾರೆ.  ಜೋಗಿಯ ಹಿಂದೆ ಹೋದ ಮಹಿಳೆಗೆ ಆದ ಗತಿಯೇ ಮುಂದಿನ ದಿನಗಳಲ್ಲಿ ಮೋದಿ ಅವರನ್ನು ನಂಬಿದವರಿಗೂ ಬರಲಿದೆ’ ಎಂದರು.
 
ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ಸನ್ಯಾಸಿಯನ್ನು ಮುಖ್ಯಮಂತ್ರಿ ಮಾಡಲಾಗಿದೆ. ಮುಂದೆ ಇನ್ನೂ ಏನೇನು ಕಾದಿದೆಯೋ ಗೊತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.
 
ಜೂನ್‌ನಲ್ಲಿ ಪಾದಯಾತ್ರೆ: ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಜೂನ್‌ನಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
 
3 ಸಾವಿರ ಹೊಸ ಬಸ್‌ಗಳ ಖರೀದಿ ನಿರ್ಧಾರ ಕೈ ಬಿಟ್ಟು ₹ 5 ಸಾವಿರ ಕೋಟಿ ಸಾಲ ಮನ್ನಾ ಮಾಡುವಂತೆ  ಒತ್ತಡ ಹೇರಲಾಗಿದೆ. ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಸಾಲ ಮನ್ನಾ ನಿರ್ಧಾರ ಪ್ರಕಟಿಸದಿದ್ದರೆ ಪಾದಯಾತ್ರೆ ನಡೆಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT