ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪಿಎಸ್‌ಗೆ ಲೈಟ್‌ ಕಂಬ, ಶಶಿಕಲಾ ಬಣಕ್ಕೆ ಟೋಪಿ

ಏಪ್ರಿಲ್‌ 12ರಂದು ಚುನಾವಣೆ
Last Updated 23 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಎಐಎಡಿಎಂಕೆಯ ಒ. ಪನ್ನೀರ್‌ಸೆಲ್ವಂ  (ಒಪಿಎಸ್‌) ಮತ್ತು ವಿ.ಕೆ. ಶಶಿಕಲಾ ನೇತೃತ್ವದ ಬಣಗಳು ತಮ್ಮ ಗುಂಪುಗಳಿಗೆ ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಆಯೋಗ ಅದನ್ನು ಒಪ್ಪಿಕೊಂಡಿದೆ.
 
ಎಐಎಡಿಎಂಕೆಯ ‘ಎರಡು ಎಲೆಗಳ’ ಚಿಹ್ನೆಯನ್ನು ಯಾವುದೇ ಬಣ ಬಳಸಬಾರದು ಎಂದು ಆಯೋಗ ಆದೇಶ ನೀಡಿದ ಕಾರಣ ಈ ಬಣಗಳು ಹೊಸ ಚಿಹ್ನೆ ಮತ್ತು ಹೆಸರುಗಳನ್ನು ಸಲ್ಲಿಸಿವೆ. 
 
ಪನ್ನೀರ್‌ಸೆಲ್ವಂ ಅವರ ಬಣ ಎಐಎಡಿಎಂಕೆ (ಪುರಚ್ಚಿ ತಲೈವಿ ಅಮ್ಮ)  ಎಂಬ ಹೆಸರಿನಿಂದ ಇನ್ನು ಮುಂದೆ ಗುರುತಿಸಿಕೊಳ್ಳಲಿದೆ. ವಿದ್ಯುತ್‌ ಕಂಬ ಈ ಬಣದ ಚುನಾವಣಾ ಚಿಹ್ನೆಯಾಗಿರಲಿದೆ. ಹಾಗೆಯೇ ಶಶಿಕಲಾ ಅವರ ಬಣ ಎಐಎಡಿಎಂಕೆ (ಅಮ್ಮ) ಎಂಬ ಹೆಸರಿನಿಂದ ಗುರುತಿಸಿಕೊಳ್ಳಲಿದ್ದು ‘ಟೋಪಿ’ ಅದರ ಚಿಹ್ನೆಯಾಗಿರಲಿದೆ.
 
ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ರಾಧಾಕೃಷ್ಣನಗರ (ಆರ್‌.ಕೆ ನಗರ) ಕ್ಷೇತ್ರದ ಉಪಚುನಾವಣೆಯಲ್ಲಿ ಈ ಎರಡೂ ಬಣಗಳು ಈ ಚಿಹ್ನೆಗಳನ್ನು ಇರಿಸಿಕೊಂಡು ಸ್ಪರ್ಧಿಸಲಿವೆ. 
 
ಪನ್ನೀರ್‌ಸೆಲ್ವಂ ಬಣದಿಂದ ಇ. ಮಧುಸೂದನನ್‌ ಮತ್ತು ಶಶಿಕಲಾ ಬಣದಿಂದ ಟಿ.ಟಿ.ವಿ. ದಿನಕರನ್‌  ಸ್ಪರ್ಧಿಸಲಿದ್ದಾರೆ. ಮರುತು ಗಣೇಶ್‌್ ಇಲ್ಲಿ ಡಿಎಂಕೆ ಅಭ್ಯರ್ಥಿ. ಜಯಲಲಿತಾ ಅವರ ಅಣ್ಣನ ಮಗಳು ದೀಪಾ ಜಯಕುಮಾರ್‌ ಅವರೂ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್‌ 12ರಂದು ಇಲ್ಲಿ ಚುನಾವಣೆ ನಡೆಯಲಿದೆ. 
 
ಸೋತ ಅವಿಶ್ವಾಸ: ತಮಿಳುನಾಡು ವಿಧಾನಸಭೆ ಸ್ಪೀಕರ್‌  ಪಿ. ಧನಪಾಲ್‌ ವಿರುದ್ಧ ಡಿಎಂಕೆ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಗೊತ್ತುವಳಿ ವಿರುದ್ಧ 122 ಮತಗಳು ಮತ್ತು ಪರ 97 ಮತಗಳು ಬಿದ್ದಿವೆ. 
 
ಯಾರಿಗೂ ಬೆಂಬಲವಿಲ್ಲ: ರಜನೀಕಾಂತ್‌
ಚೆನ್ನೈ:
‘ಆರ್‌.ಕೆ ನಗರ ಉಪಚುನಾವಣೆಯಲ್ಲಿ ನನ್ನ ಬೆಂಬಲ ಯಾರಿಗೂ ಇಲ್ಲ’ ಎಂದು ಚಿತ್ರನಟ ರಜನೀಕಾಂತ್‌ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಹಾಗೂ ಸಂಗೀತ ಸಂಯೋಜಕ ಗಂಗೈ ಅಮರಾನ್‌ ಅವರ ಪುತ್ರ ವೆಂಕಟ್‌ ಪ್ರಭು ಅವರು, ರಾಜಕೀಯದಲ್ಲಿ ತಮ್ಮ ತಂದೆಗೆ ಯಶಸ್ಸು ಸಿಗಲಿ ಎಂದು ರಜನೀಕಾಂತ್‌ ಹರಸಿರುವುದಾಗಿ ಟ್ವೀಟ್‌ಗೆ ಮಾಡಿದ್ದರು. ಇದಕ್ಕೆ  ರಜನೀಕಾಂತ್‌  ಈ ಹೇಳಿಕೆ ನೀಡಿದ್ದಾರೆ. ಗಂಗೈ ಅಮರಾನ್‌ ಅವರು ರಜನೀಕಾಂತ್‌ ಜೊತೆಗಿರುವ ಚಿತ್ರವನ್ನೂ ವೆಂಕಟ್‌ ಪೋಸ್ಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT