ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿದಿಲ್ಲ ಬನಶಂಕರಿ ಮುಖ್ಯರಸ್ತೆ ಬವಣೆ

ಅಂಕುಡೊಂಕು ರಸ್ತೆಯಲ್ಲಿ ಸಂಚಾರ, ನಲವತ್ತು ವರ್ಷದಿಂದ ಅಭಿವೃದ್ಧಿಯಾಗದ ಬಡಾವಣೆ ರಸ್ತೆ
Last Updated 24 ಮಾರ್ಚ್ 2017, 4:52 IST
ಅಕ್ಷರ ಗಾತ್ರ

ತುಮಕೂರು: ದಶಕಗಳಿಂದ ಮುಖ್ಯರಸ್ತೆ ಅಭಿವೃದ್ಧಿ ಕಾಣದೇ ಸೊರಗಿರುವ ಬನಶಂಕರಿ ಬಡಾವಣೆಯಲ್ಲಿ ಈಗ ರಸ್ತೆ ವಿಸ್ತರಣೆ ಸಮಸ್ಯೆ ಹೆಮ್ಮರವಾಗಿ ಬೆಳೆದಿದೆ.

40 ವರ್ಷದಿಂದ ಕಿಷ್ಕಿಂಧೆಯಂತಹ ರಸ್ತೆಯಲ್ಲಿ ಇಲ್ಲಿನ ಜನ, ವಾಹನಗಳು ಸಂಚರಿಸಬೇಕಾಗಿದೆ. ಭಾರಿ ವಾಹನ ಬಂದಾಗ ದಿಢೀರ್‌ ದಟ್ಟಣೆ ಉಂಟಾಗುತ್ತಿದೆ. ವಾಹನಗಳ ಓಡಾಟದಿಂದ ಮೇಲೇಳುವ ದೂಳು, ಹೊರಸೂಸುವ ಇಂಗಾಲ ಅನಿಲ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಸಮಸ್ಯೆಯಿಂದ ಎಚ್ಚೆತ್ತುಕೊಂಡ ಕೆಲ ಸ್ಥಳೀಯರು ತಾವಾಗೇ ರಸ್ತೆ ವಿಸ್ತರಣೆಗೆ ಸಹಕರಿಸುತ್ತಿದ್ದು, ಪಾಲಿಕೆ ಗುರುತು ಹಾಕಿದಷ್ಟು ಮನೆ, ಅಂಗಡಿಗಳನ್ನು ಕೆಡವಿದ್ದಾರೆ. ಅದರಂತೆ ಅಧಿಕಾರಿಗಳು ಬನಶಂಕರಿ ವೃತ್ತದಿಂದ ಹಳೆಯ ಸಿದ್ಧಾರ್ಥ ಹಾಸ್ಟೆಲ್‌ವರೆಗೆ ಎರಡೂ ಬದಿ ಚರಂಡಿ ನಿರ್ಮಿಸಿದ್ದಾರೆ.

‘ಪಾಲಿಕೆಯು ರಸ್ತೆ ವಿಸ್ತರಣೆಗೆ ಸಿದ್ಧವಿದೆ. ಆದರೆ, ಇಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಕುಟುಂಬ ಸೇರಿ ಐದು ಕುಟುಂಬಗಳು ರಸ್ತೆ ವಿಸ್ತರಣೆಗೆ ಅವಕಾಶ ನೀಡಿಲ್ಲ’ ಎಂದು ಸ್ಥಳೀಯರಾದ ರವಿಕುಮಾರ್‌, ವಿರೂಪಾಕ್ಷ, ಮಂಜು ಆರೋಪಿಸಿದರು.

‘ಬನಶಂಕರಿ ಮುಖ್ಯರಸ್ತೆಯನ್ನು 60 ಅಡಿ ವಿಸ್ತರಿಸಲು ಈ ಹಿಂದೆ ನಕ್ಷೆ ಸಿದ್ಧಪಡಿಸಲಾಗಿತ್ತು. ಆದರೆ ಸ್ಥಳೀಯರು, ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ 40 ಅಡಿ ರಸ್ತೆ ನಿರ್ಮಿಸುವುದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ₹ 42 ಕೋಟಿಯ ವಿಶೇಷ ಅನುದಾನದಲ್ಲಿ ಮುಖ್ಯರಸ್ತೆ ಅಭಿವೃದ್ಧಿಗೆ ₹75 ಲಕ್ಷ ಮೀಸಲಿಡಲಾಗಿತ್ತು. ಅದರ ಜತೆಗೆ ಹೆಚ್ಚುವರಿಯಾಗಿ ₹40 ಲಕ್ಷ ಅನುದಾನ ನೀಡಲು ಪಾಲಿಕೆ ಒಪ್ಪಿಗೆ ಸೂಚಿಸಿದೆ’ ಎಂದು ಪಾಲಿಕೆ ಸದಸ್ಯೆ ಗೀತಾ ರುದ್ರೇಶ್‌ ತಿಳಿಸಿದರು.

‘ರಸ್ತೆ ವಿಸ್ತರಣೆ ಹಾಗೂ ಡಾಂಬರು ಹಾಕಲು ಅನುದಾನ ಒದಗಿಸುವುದಾಗಿ ಶಾಸಕರೂ ಕೂಡ ಒಪ್ಪಿಕೊಂಡಿದ್ದಾರೆ. ಇಷ್ಟಾದರೂ ಕೆಲವರು ವೃಥಾ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ. ತಕ್ಷಣ ಜನಪ್ರತಿನಿಧಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸದಿದ್ದರೆ ಕನ್ನಡ ಸೇನೆ ಹಾಗೂ ಸಂಗೊಳ್ಳಿ ರಾಯಣ್ಣ ವೇದಿಕೆ ವತಿಯಿಂದ ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಸ್ಥಳೀಯರು ಎಚ್ಚರಿಸಿದರು.

‘ರಸ್ತೆ ವಿಸ್ತರಣೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಮುಖ್ಯರಸ್ತೆಯ ಸರ್ವೇ ನಕ್ಷೆ ನೀಡುವಂತೆ ನ್ಯಾಯಾಲಯ ಕೇಳಿದೆ. ಅಂತೆಯೇ ಎರಡು ಮೂರು ದಿನದಲ್ಲಿ ಹೊಸದಾಗಿ ಸರ್ವೇ ನಡೆಸಿ ವರದಿ ಸಲ್ಲಿಸಲಾಗುವುದು’ ಎಂದು ಪಾಲಿಕೆ ಎಂಜಿನಿಯರ್‌ ವಿನೋದ್‌ ತಿಳಿಸಿದರು.

ಶಾಸಕರ ಮಾತಿಗೂ ಕಿಮ್ಮತ್ತಿಲ್ಲ
‘ಮುಖ್ಯರಸ್ತೆ ವಿಸ್ತರಣೆಗೆ ಸಹಕರಿಸುವಂತೆ ಶಾಸಕ ರಫೀಕ್‌ ಅಹಮದ್ ಅವರು ಪ್ರಭಾವಿ ಕುಟುಂಬಕ್ಕೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ.
ಮನೆಯಲ್ಲಿ ಮಂಗಳ ಕಾರ್ಯವಿದೆ. ಅದು ಮುಗಿದ ನಂತರ ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದವರು ಕೋರ್ಟ್‌ನಿಂದ ತಡೆಯಾಜ್ಞೆ ತಂದು ಕೊಟ್ಟರು. ಆ ಕುಟುಂಬ ಅನುಸರಿಸಿದ ಹಾದಿಯನ್ನೇ ಇತರ ನಾಲ್ಕು ಕುಟುಂಬಗಳು ಅನುಸರಿಸಿದವು’ ಎಂದು ಸ್ಥಳೀಯ ನಿವಾಸಿ ಮಂಜು ಹೇಳಿದರು.

ಪರಿಹಾರಕ್ಕೆ ಪಟ್ಟು
‘ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಪರಿಹಾರ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ಐದು ಕುಟುಂಬಗಳು ಕಾಮಗಾರಿಗೆ ತಡೆಯಾಜ್ಞೆ ತಂದಿವೆ. ಆದರೆ, ಮೂಲನಕ್ಷೆಯ ಪ್ರಕಾರ ರಸ್ತೆಯ ಜಾಗ ಕಂದಾಯ ಭೂಮಿಯಾಗಿದೆ. ಕಂದಾಯ ಭೂಮಿಗೆ ಪರಿಹಾರ ಕೊಡಲು ಅವಕಾಶವಿಲ್ಲ’ ಎಂದು ಪಾಲಿಕೆ ಕಿರಿಯ ಎಂಜಿನಿಯರ್‌ ವಿನೋದ್‌ ಹೇಳಿದರು.

ಜನರಿಗೆ ಸಂಕಷ್ಟ
ಶಾಂತಿನಗರ ರೈಲ್ವೆ ಗೇಟ್‌ ಮುಚ್ಚಿರುವ ಕಾರಣ ಬನಶಂಕರಿ ಬಡಾವಣೆ ಜನರು ಕುಣಿಗಲ್‌ ರಸ್ತೆಯನ್ನೇ ಆಶ್ರಯಿಸಬೇಕಾಗಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಅಪಘಾತಗಳು ಘಟಿಸುತ್ತಲೇ ಇವೆ. ಬನಶಂಕರಿ ಮುಖ್ಯರಸ್ತೆಗೆ ಯಾವುದೇ ಬಸ್‌ ಸೌಲಭ್ಯವಿಲ್ಲ. ಆಟೊಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ. ಎಲ್ಲ ಬಡಾವಣೆಗಳು ಸುಧಾರಿಸಿವೆ. ಆದರೆ, ಬನಶಂಕರಿ ಮುಖ್ಯರಸ್ತೆ ಮಾತ್ರ ಸುಧಾರಿಸಿಲ್ಲ. ನಿತ್ಯ ದೂಳಿನಲ್ಲೇ ಜೀವನ ಸಾಗಿಸುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

*
‘ಬನಶಂಕರಿ ತುಂಬಾ ಹಳೆಯ ಬಡಾವಣೆ. ರಸ್ತೆ ವಿಸ್ತರಣೆ ಕಾಮಗಾರಿ ಜರೂರಾಗಿ ಆಗಬೇಕಿದೆ. ರಸ್ತೆ ವಿಸ್ತರಣೆಗಾಗಿ ಭೂಮಿ ಕಳೆದುಕೊಂಡವರಿಗೆ ಕಾನೂನಿನಲ್ಲಿ ಅವಕಾಶವಿದ್ದರೆ ಸೂಕ್ತ ಪರಿಹಾರ ನೀಡಬೇಕು’.
-ಗೀತಾ ರುದ್ರೇಶ್‌, 17ನೇ ವಾರ್ಡ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT