ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ ಜಪ್ತಿ ಕಾಯ್ದೆ: ಒತ್ತಾಯ

ಸರ್ಕಾರಗಳು ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ : ಶಾಸಕ ಪುಟ್ಟಣ್ಣಯ್ಯ ಅಸಮಾಧಾನ
Last Updated 24 ಮಾರ್ಚ್ 2017, 5:36 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದೇಶದಲ್ಲಿ ಸ್ವೇಚ್ಛಾಚಾರದ ರಾಜಕಾರಣ ನಡೆಯುತ್ತಿದೆ. ಕೃಷಿ ಕ್ಷೇತ್ರದ ಪತನನ್ನು ಪ್ರಧಾನಿ ಮತ್ತು ಮುಖ್ಯ ಮಂತ್ರಿ ಗಂಭೀರವಾಗಿ ಪರಿಗಣಿಸಿಲ್ಲ’  ಎಂದು ಶಾಸಕ ಪುಟ್ಟಣ್ಣಯ್ಯ ದೂರಿದರು.

ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಷ್ಟ್ರ ಮತ್ತು ರಾಜ್ಯಗಳ ಅಭಿವೃದ್ಧಿಗೆ ವ್ಯವಸಾಯವೇ ಮೂಲ. ಇಂಥ  ಕ್ಷೇತ್ರದಲ್ಲಿ ತೊಡಗಿರುವ ರೈತ ಸಮುದಾಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿವೆ’  ಎಂದರು.

‘ರಾಜ್ಯದಲ್ಲಿ 2,000ದಿಂದ ಈಚೆಗೆ 17 ವರ್ಷದಲ್ಲಿ ಸತತ 16 ವರ್ಷ ಬರಕ್ಕೆ ತುತ್ತಾಗಿದ್ದೇವೆ. ಸಮರ್ಪಕವಾಗಿ ಮಳೆ ಇಲ್ಲ, ಬಹುತೇಕ ಕಡೆಗಳಲ್ಲಿ ರೈತರಿಗೆ ನೀರಾ ವರಿ ಸೌಲಭ್ಯವಿಲ್ಲ. ಇದಕ್ಕೆಲ್ಲಾ ಯಾರು ಹೊಣೆ?’ ಎಂದು ಪ್ರಶ್ನಿಸಿದರು.

ಬಜೆಟ್‌ನಲ್ಲಿ ರೈತರ ರಕ್ಷಣೆ ಪ್ರಸ್ತಾಪವಿಲ್ಲ: ‘ರಾಜ್ಯ ಸರ್ಕಾರ ಕೃಷಿ ಆಯೋಗ ರಚಿಸಿ ನಾಲ್ಕು ವರ್ಷವಾಗಿವೆ. ಆದರೆ, ಯಾವ ಬದಲಾವಣೆಯೂ ಆಗಿಲ್ಲ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ರೈತರ ರಕ್ಷಣೆ ಬಗ್ಗೆ ಯಾವುದೇ ಘೋಷಣೆ ಬಜೆಟ್‌ನಲ್ಲಿ ಆಗಿಲ್ಲ. ನಮ್ಮ ರೈತ ಸಂಘದ ಚಳವಳಿಗಳು ನಿಂತ ನೀರಾಗಿವೆ. ಎಲ್ಲೋ ಒಂದು ಕಡೆ ನಾವು ಸರಿಯಾಗಿ ಕೆಲಸ ಮಾಡಿಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗಿಲ್ಲ ಎನಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಧಾನಿ ₹ 500, ₹ 1,000 ಮುಖಬೆಲೆಯ ನೋಟು ಅಮಾನ್ಯೀ ಕರಣಗೊಳಿಸಿದ ನಂತರ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹಣ ಸಿಗುತ್ತಿದೆ. ದೇಶದ ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಕಾಯುತ್ತಿದ್ದೇವು. ಅದೂ ಆಗಲಿಲ್ಲ. ದೇಶದಲ್ಲಿ ಶೇ 80ರಷ್ಟು ನಗದು ವ್ಯವಹಾರ ಇರಲೇಬೇಕು. ಇಲ್ಲದಿದ್ದರೆ ಬದುಕು ದುಸ್ತರವಾಗಲಿದೆ’ ಎಂದು ಹೇಳಿದರು.

‘ನಿತ್ಯ ಭ್ರಷ್ಟಾಚಾರ ಪ್ರಕರಣ ನೋಡುತ್ತಿದ್ದೇವೆ. ಐಟಿ, ಎಸಿಬಿ ದಾಳಿ ನಿರಂತರವಾಗಿ ಆಗುತ್ತಿವೆ. ಯಾಕೆ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ತರಬಾರದು’  ಎಂದ ಅವರು, ‘ಭ್ರಷ್ಟರು, ಕಾಳಧನಿಕರ ವಿರುದ್ಧ ಸಮರ ಸಾರಿದ್ದೇನೆ ಎಂಬುದಾಗಿ ಹೇಳುವ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಲೋಕಪಾಲ ಮಸೂದೆ ಜಾರಿಗೊಳಿಸಲು ಮುಂದಾಗುತ್ತಿಲ್ಲ ಏಕೆ?’ ಎಂದು ಪ್ರಶ್ನಿಸಿದರು.

ಸರ್ಕಾರಿ ನೌಕರರ ವೇತನ ಆಯೋಗದಂತೆ ರೈತರಿಗೂ ಆಯೋಗ ರಚನೆ ಆಗಬೇಕು ಎಂಬುದಾಗಿ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‌ ಅವರಿಗೆ ಒತ್ತಾಯಿಸಿದೆ. ಅವರಿಂದ ಇದಕ್ಕೆ ಪ್ರತಿಕ್ರಿಯೆಯೇ ಬರಲಿಲ್ಲ. ಹಿಂದೆ ಬ್ರಿಟಿಷರು ಗುಲಾಮರಂತೆ ಶೋಷಣೆ ಮಾಡಿದರೆ ಈಗ ನಮ್ಮ ಸರ್ಕಾರಗಳೇ ಆ ಕೆಲಸ ಮಾಡುತ್ತಿವೆ’ ಎಂದು ದೂರಿದರು. ರೈತ ಮುಖಂಡರಾದ ಟಿ.ನುಲೇ ನೂರು ಶಂಕರಪ್ಪ, ಸುರೇಶ್‌ಬಾಬು, ಕೆ.ಪಿ.ಭೂತಯ್ಯ  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಾಳೆ ಪಕ್ಷಗಳ ಸಮ್ಮಿಲನ
ಹಿಂದೆ ನೀಗ್ರೊಗಳನ್ನು ಹರಾಜು ಹಾಕುತ್ತಿದ್ದರಂತೆ. ಅದೇ ಮಾದರಿಯಲ್ಲಿ ನಂಜನಗೂಡಿನ ಉಪಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲೂ ಹರಾಜು ಕೂಗುತ್ತಿದ್ದಾರೆ. ಚುನಾವಣಾ ಆಯೋಗ ಎಷ್ಟು ಜನರ ಮೇಲೆ ದೂರು ದಾಖಲಿಸಿದೆ ಎಂದು ಶಾಸಕ ಪುಟ್ಟಣ್ಣಯ್ಯ ಪ್ರಶ್ನಿಸಿದರು.

ರಾಜಕೀಯ ಕ್ಷೇತ್ರಕ್ಕೆ ದೇಶದ ಜನತೆಗೆ ಕನಿಷ್ಠ ಮೂಲಸೌಕರ್ಯ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಸುಧಾರಿತ ರಾಜಕಾರಣದ ಅವಶ್ಯಕತೆ ಇದೆ. ಅದಕ್ಕಾಗಿ ಮಾ. 25ರಂದು ಬೆಳಿಗ್ಗೆ 11 ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರ್ವೋದಯ ಕರ್ನಾಟಕ ಹಾಗೂ ಸ್ವರಾಜ್ ಇಂಡಿಯಾ ಪಕ್ಷಗಳ ಸಮ್ಮಿಲನ ಕಾರ್ಯ ಕ್ರಮ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT