ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಲಾಭಕ್ಕಾಗಿ ವರದಿಗೆ ವಿರೋಧ: ಆರೋಪ

‘ಕಸ್ತೂರಿರಂಗನ್ ವರದಿಯಿಂದ ತೊಂದರೆಯಿಲ್ಲ’
Last Updated 24 ಮಾರ್ಚ್ 2017, 5:48 IST
ಅಕ್ಷರ ಗಾತ್ರ

ಸಾಗರ: ‘ಜನರ ಹಿತದೃಷ್ಟಿಯಿಂದ ಜಾರಿಗೊಳ್ಳಲು ಯೋಗ್ಯವಾಗಿದ್ದರೂ ಕಸ್ತೂರಿರಂಗನ್ ವರದಿಗೆ ವಿವಿಧ ಪಕ್ಷಗಳ ಮುಖಂಡರು ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸ್ವಾನ್‌ ಆ್ಯಂಡ್ ಮ್ಯಾನ್‌ ಸಂಸ್ಥೆಯ ಪರಿಸರ ಕಾರ್ಯಕರ್ತ ಅಖಿಲೇಶ್‌ ಚಿಪ್ಳಿ ಆರೋಪಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಸ್ತೂರಿರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶ ಎಂದು ಘೋಷಣೆಯಾಗುವ ಪ್ರದೇಶದ ಜನರನ್ನು ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪವಿಲ್ಲ. ಪಶ್ಚಿಮಘಟ್ಟದ ರಕ್ಷಣೆಗೆ ಪೂರಕವಾಗಿರುವ ಅಂಶಗಳು ವರದಿಯಲ್ಲಿವೆ.

ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಜಾರಿಗೊಳ್ಳಲೇಬೇಕಾದ ವರದಿಗೆ ರಾಜಕಾರಣಿಗಳು ಇಲ್ಲಸಲ್ಲದ ತಕರಾರು ತೆಗೆದು ಮೂಲೆಗುಂಪು ಮಾಡುವ ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.

‘ಕಸ್ತೂರಿರಂಗನ್‌ ವರದಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಗಣಿಗಾರಿಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ, ಈಗ ಕೆಲವು ರಾಜಕಾರಣಿಗಳು ಹಬ್ಬಿಸುತ್ತಿರುವಂತೆ ಮನೆಗಾಗಿ ಪಾಯ ತೆಗೆಯುವುದಕ್ಕೆ, ಸ್ಥಳೀಯವಾಗಿ ಲಭ್ಯವಿರುವ ಜಂಬಿಟ್ಟಿಗೆ ಬಳಸುವುದಕ್ಕೆ ಅಡ್ಡಿ ಇರುವುದಿಲ್ಲ. ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಮರ ಕಡಿಯಲು ಅವಕಾಶ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಕಸ್ತೂರಿರಂಗನ್‌ ವರದಿಯಲ್ಲಿ ಹೊಸ ಸಾಮಿಲ್‌ಗಳಿಗೆ ಅನುಮತಿ ನೀಡುವುದನ್ನು ನಿಷೇಧಿಸಬೇಕು ಎಂಬ ಅಂಶವಿದೆ. ಹೋಟೆಲ್‌, ವಸತಿಗೃಹದಂತಹ ಲಾಭ
ದಾಯಕ ಉದ್ಯಮಗಳಿಗೆ ಮರಮುಟ್ಟುಗಳನ್ನು ಬಳಸುವಂತಿಲ್ಲ. ವ್ಯಾಪಾರಕ್ಕಾಗಿ ಕೊಳವೆಬಾವಿ ಕೊರೆಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರಗಳಿಗೆ ವರದಿಯಲ್ಲಿ ನಿರ್ಬಂಧ ಹೇರಿಲ್ಲ’ ಎಂದರು.

‘ಈ ವರದಿಯು ಹಸಿರು ತಂತ್ರಜ್ಞಾನಕ್ಕೆ ರಾಜಮಾರ್ಗದಂತಿದೆ. ಘನತ್ಯಾಜ್ಯ, ಮಾಲಿನ್ಯಗೊಂಡ ನೀರು ಇತ್ಯಾದಿಗಳನ್ನು ನೆಲಕ್ಕಾಗಲಿ, ನದಿಗಾಗಲಿ ಬಿಡುವುದನ್ನು ನಿಷೇಧಿಸಲಾಗಿದೆ. ವಾಹನಗಳ ಮಾಲಿನ್ಯ ಹೆಚ್ಚುವಿಕೆಗೆ ನಿಯಂತ್ರಣ ಹೇರಲಾಗಿದೆ. ಅಂಗಡಿಗಳಲ್ಲಿ ಬಳಸುವ ಪ್ಲಾಸ್ಟಿಕ್‌ ಚೀಲಗಳ ಮೇಲೂ ನಿಯಂತ್ರಣ ಹೇರಲಾಗಿದೆ. ಹೀಗೆ ಪರಿಸರಕ್ಕೆ ಪೂರಕವಾದ ಅಂಶಗಳೇ ಇರುವ ವರದಿಯನ್ನು ಯಾವ ಕಾರಣಕ್ಕೆ ತಿರಸ್ಕರಿಸಬೇಕು’ ಎಂದು ಅವರು ಪ್ರಶ್ನಿಸಿದರು.

ಈಗಾಗಲೇ ಮಲೆನಾಡು ಪ್ರದೇಶದಲ್ಲಿ ವ್ಯಾಪಕವಾಗಿ ಅರಣ್ಯ ನಾಶವಾಗುತ್ತಿರುವ ಪರಿಣಾಮ ಸತತವಾಗಿ ಬರಗಾಲ ಎದುರಿಸುವಂತಾಗಿದೆ. ಕುಡಿಯುವ ನೀರಿನ ಮೂಲಗಳು ನಾಶಗೊಳ್ಳುತ್ತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ ಶೇ 21ರಷ್ಟು ಮಾತ್ರ ಕಾಡು ಉಳಿದಿದೆ. ಆದರೆ, ನಿಜವಾಗಿ ಅದರ ಪ್ರಮಾಣ ಶೇ 8ರಷ್ಟು ಮಾತ್ರ ಎಂದು ಹೇಳಿದರು.

ಸ್ಥಳೀಯವಾದ ಜಲಸಂಪನ್ಮೂಲಗಳನ್ನು ಉಳಿಸಿಕೊಳ್ಳುವಲ್ಲಿ ನಿರಾಸಕ್ತಿ ತೋರಿದ ಪರಿಣಾಮ ಕೆರೆಕಟ್ಟೆಗಳು ಬರಿದಾಗಿವೆ. ಜಲಪೂರಣ ಮಾಡುವ ಬದಲು ದೊಡ್ಡ ದೊಡ್ಡ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಸ್ತೂರಿರಂಗನ್‌ ವರದಿ ಜಾರಿಯಾದರೆ ಇಂತಹ ದೃಷ್ಟಿಕೋನದ ಅಭಿವೃದ್ಧಿ ಮಾದರಿಗೆ ಅವಕಾಶ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕೃಷಿಯಲ್ಲಿ ರಾಸಾಯನಿಕಗಳ ಬಳಕೆಗೆ ಕಸ್ತೂರಿರಂಗನ್‌ ವರದಿಯಲ್ಲಿ ನಿರ್ಬಂಧ ಹೇರಿರುವ ಕುರಿತು ಕೇಳಲಾದ ಪ್ರಶ್ನೆಗೆ ಉಪನ್ಯಾಸಕ ಸುರೇಶ್ ಶಿಕಾರಿಪುರ ಉತ್ತರಿಸಿ, ಹಸಿರುಕ್ರಾಂತಿಯ ನಂತರವಷ್ಟೆ ನಮ್ಮಲ್ಲಿ ರಾಸಾಯನಿಕಗಳ ಬಳಕೆ ಆರಂಭವಾಗಿರುವುದು. ಇಷ್ಟಕ್ಕೂ ಕೃಷಿಗೆ ರಾಸಾಯನಿಕಗಳ ಬಳಕೆ ಅನಿವಾರ್ಯವಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT