ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗುತ್ತಿದೆ ಸೂಳೆಕೆರೆಯ ಒಡಲು

ಅಂತರ್ಜಲ ಕುಸಿತ: ತೋಟ ಉಳಿಸಿಕೊಳ್ಳಲು ರೈತರ ಪರದಾಟ; ದಶಕಗಳ ಬಳಿಕ ಜಲಕ್ಷಾಮ
Last Updated 24 ಮಾರ್ಚ್ 2017, 6:03 IST
ಅಕ್ಷರ ಗಾತ್ರ

ಚನ್ನಗಿರಿ:  ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಕೆರೆ ಎಂಬ ಹಿರಿಮೆಯ ಸೂಳೆಕೆರೆಯ (ಶಾಂತಿಸಾಗರ) ಒಡಲು ಬರಿದಾಗುವ ಆತಂಕ ಎದುರಾಗಿದ್ದು, ತಾಲ್ಲೂಕಿನ ಬೆಳೆಗಾರರಲ್ಲಿ ದಿಗಿಲು ಹುಟ್ಟಿಸಿದೆ.

ತಾಲ್ಲೂಕಿನಲ್ಲಿ ದಶಕಗಳ ಬಳಿಕ ಜಲಕ್ಷಾಮ ತಲೆದೋರಿದ್ದು, ಬೆಳೆ ಉಳಿಸಿಕೊಲ್ಳಲು ರೈತರು ಸೂಳೆಕೆರೆಯ ಒಡಲಲ್ಲಿರುವ ಅಲ್ಪ ಪ್ರಮಾಣದ ನೀರನ್ನು ಒಂದು ತಿಂಗಳಿನಿಂದ ಸತತವಾಗಿ ಟ್ಯಾಂಕರ್ ಮೂಲಕ ಕೊಂಡೊಯ್ಯುತ್ತಿದ್ದಾರೆ.

ಚನ್ನಗಿರಿ ತಾಲ್ಲೂಕು ಅರೆ ಮಲೆನಾಡು ಭಾಗ. ಒಂದಷ್ಟು ಪ್ರದೇಶ ನೀರಾವರಿಯಾದರೆ, ಮತ್ತೊಂದಿಷ್ಟು ಬಯಲು ಪ್ರದೇಶದಿಂದ ಕೂಡಿರುವ ಭೌಗೋಳಿಕ ಪ್ರದೇಶವಾಗಿದೆ. ಇಡೀ ಜಿಲ್ಲೆಯಲ್ಲಿಯೇ 61 ಗ್ರಾಮ ಪಂಚಾಯ್ತಿ ಗಳನ್ನು ಹೊಂದಿರುವ ಏಕೈಕ ದೊಡ್ಡ ತಾಲ್ಲೂಕು ಎಂಬ ಹೆಗ್ಗಳಿಕೆ ಇದೆ. ಹಾಗೆಯೇ ‘ಅಡಿಕೆ’ ನಾಡು ಎಂಬ ಹಣೆಪಟ್ಟಿ ಪಡೆದು ಪ್ರಸಿದ್ಧಿ ಹೊಂದಿದ್ದು, ಸುಮಾರು 50 ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ.

ಇಂತಹ ವಿಭಿನ್ನ ಭೌಗೋಳಿಕ ಅಂಶವಿರುವ ತಾಲ್ಲೂಕಿನಲ್ಲಿ ಎರಡು ದಶಕಗಳ ಬಳಿಕ ಮತ್ತೆ ಭೀಕರ ಬರ ಆವ ರಿಸಿದೆ. ಜಲಕ್ಷಾಮದಿಂದಾಗಿ ಅಡಿಕೆ ಬೆಳೆ ಗಾರರು ಅಡಿಕೆ ತೋಟಗಳನ್ನು ಉಳಿಸಿ ಕೊಳ್ಳಲು ಹರಸಾಹಸ ಪಡುವಂತಾಗಿದೆ.

ತಾಲ್ಲೂಕಿನಲ್ಲಿ ಸಂತೇಬೆನ್ನೂರು 1 ಮತ್ತು 2ನೇ ಹೋಬಳಿ, ಬಸವಾಪಟ್ಟಣ, ಕಸಬಾ ಹಾಗೂ ಉಬ್ರಾಣಿ ಹೋಬಳಿಗಳು ಸೇರಿ ಒಟ್ಟು ಐದು ಹೋಬಳಿಗಳಿವೆ. ಇವುಗಳಲ್ಲಿ ಕಸಬಾ ಮತ್ತು ಸಂತೇಬೆನ್ನೂರು ಹೋಬಳಿಗಳು ಎರಡು ವರ್ಷಗಳಿಂದ ನಿರಂತರ ಬರಕ್ಕೆ ತುತ್ತಾಗಿವೆ.

ಉಬ್ರಾಣಿ ಹೋಬಳಿಯ 80 ಕೆರೆಗಳಿಗೆ ಉಬ್ರಾಣಿ ಏತ ನೀರಾವರಿ ಯೋಜನೆ ಮೂಲಕ ಭದ್ರಾ ನದಿಯ ನೀರನ್ನು ತುಂಬಿಸುತ್ತಿರುವುದರಿಂದ ಈ ಭಾಗದ ರೈತರು ಸ್ವಲ್ಪ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕಸಬಾ ಮತ್ತು ಸಂತೇಬೆನ್ನೂರು ಹೋಬಳಿಗಳ ಅಡಿಕೆ ಬೆಳೆಗಾರರು ತೋಟ ಉಳಿಸಿಕೊಳ್ಳಲು ಒಂದೂವರೆ ತಿಂಗಳಿಂದ ಸೂಳೆಕೆರೆ ಯಿಂದ ಪೆಟ್ರೋಲ್‌  ಟ್ಯಾಂಕರ್‌ ಹಾಗೂ ಟ್ರ್ಯಾಕ್ಟರ್ ಟ್ಯಾಂಕರ್‌ಗಳ ಮೂಲಕ ನೀರನ್ನು ಕೊಂಡೊಯ್ಯುತ್ತಿದ್ದಾರೆ.

ಸೂಳೆಕೆರೆಯ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 27 ಅಡಿಗಳಿದ್ದು, ಪ್ರಸ್ತುತ 10 ಅಡಿ ಮಾತ್ರ ನೀರಿದೆ. 64 ಕಿ.ಮೀ ವಿಸ್ತೀರ್ಣದ ಈ ಕೆರೆಯ ಅಚ್ಚುಕಟ್ಟು ಪ್ರದೇಶ 2,281 ಹೆಕ್ಟೇರ್. ಈ ಕೆರೆಯಿಂದ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಸೇರಿದಂತೆ 50 ಹಳ್ಳಿಗಳಿಗೆ, ನೆರೆಯ ಚಿತ್ರದುರ್ಗ ನಗರ, ಹೊಳಲ್ಕೆರೆ, ಜಗಳೂರು, ಮಲ್ಲಾಡಿಹಳ್ಳಿ ಪಟ್ಟಣಗಳಿಗೆ ಕುಡಿಯುವ ನೀರನ್ನು ಕೂಡ ಪೂರೈಸಲಾಗುತ್ತಿದೆ.

ಪ್ರಸ್ತುತ ತಾಲ್ಲೂಕಿನ ಕಸಬಾ, ಸಂತೇಬೆನ್ನೂರು ಹೋಬಳಿಯ 5 ಸಾವಿರ ಎಕರೆ ಅಡಿಕೆ ತೋಟಗಳಿಗೆ ಸೂಳೆಕೆರೆಯಿಂದ ಪ್ರತಿ ದಿನ 200 ಲಾರಿ ಟ್ಯಾಂಕರ್‌ ಹಾಗೂ 600 ಟ್ರ್ಯಾಕ್ಟರ್ ಟ್ಯಾಂಕರ್‌ಗಳಲ್ಲಿ ನೀರನ್ನು ಕೊಂಡೊಯ್ಯಲಾಗುತ್ತಿದೆ.

1 ಲಾರಿ ಟ್ಯಾಂಕರ್‌ ನೀರಿಗೆ ₹ 2 ಸಾವಿರದಿಂದ ₹ 2,700 ಬೆಲೆ ಇದೆ. ಪ್ರತಿ ಟ್ರ್ಯಾಕ್ಟರ್‌ ಟ್ಯಾಂಕರ್‌ಗೆ ₹ 600 ದರ ಇದೆ. ಅಂದಾಜಿನ ಪ್ರಕಾರನ ದಿನಕ್ಕೆ ₹ 10 ಲಕ್ಷ ನೀರಿನ ವಹಿವಾಟು ಸೂಳೆಕೆರೆಯ ಒಡಲಲ್ಲಿ ನಡೆಯುತ್ತಿದೆ ಎನ್ನುತ್ತಾರೆ ರೈತರು.

500ರಿಂದ 800 ಅಡಿ ಕೊಳವೆ ಬಾವಿ ಕೊರೆಸಿದರೂ ಹನಿ ನೀರು ಸಿಗುತ್ತಿಲ್ಲ. ಅಡಿಕೆ ತೋಟ ಉಳಿಸಿಕೊ ಳ್ಳಲು ಅನಿವಾರ್ಯವಾಗಿ ಟ್ಯಾಂಕರ್‌ಗಳ ಮೊರೆ ಹೋಗಬೇಕಾಗಿದೆ. ಇನ್ನೊಂದು ತಿಂಗಳು ಅಡಿಕೆ ತೋಟ ಉಳಿಸಿ ಕೊಂಡರೆ ಮಳೆಗಾಲ ಆರಂಭವಾಗು ತ್ತದೆ. ಅಲ್ಲಿಯವರೆಗೆ ನಮಗೆ ಸೂಳೆ ಕೆರೆಯ ನೀರೇ ಆಧಾರ ಎನ್ನುತ್ತಾರೆ ದೇವರ ಹಳ್ಳಿ ಗ್ರಾಮದ ಪರಶುರಾಮ, ಲಕ್ಷ್ಮಣಪ್ಪ.

ಸೂಳೆಕೆರೆ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈಗಿರುವ ನೀರು ಇನ್ನೊಂದು ತಿಂಗಳಿಗೆ ಸಾಕಾಗುವಷ್ಟು ಇದೆ. ಈ ವಾರ ಭದ್ರಾ ಕಾಲುವೆಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಕೆರೆಗೆ ಎರಡು ಮೂರು ದಿನ ನೀರು ಬಿಡಲಾಗುತ್ತದೆ. ಇಲ್ಲದಿದ್ದರೆ ಈ ತಿಂಗಳ ಲ್ಲಿಯೇ ಕೆರೆ ಬರಿದಾಗುವ ಆತಂಕ ಎದುರಾಗಿದೆ.
–ಎಚ್.ವಿ. ನಟರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT