ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಉಷ್ಣಾಂಶ: ತತ್ತರಿಸಿದ ಜನ

ಹಗಲಿನಲ್ಲಿ ಬಿರು ಬಿಸಿಲು; ರಾತ್ರಿ ಸೆಕೆ ತಾಳಲಾರದೆ ಮನೆ ಹೊರಗೆ ನಿದ್ರಿಸಬೇಕಾದ ಅನಿವಾರ್ಯತೆ
Last Updated 24 ಮಾರ್ಚ್ 2017, 6:30 IST
ಅಕ್ಷರ ಗಾತ್ರ

ಗದಗ: ನಗರದಲ್ಲಿ ಬಿಸಿಲು ದಿನೇ ದಿನೇ ತನ್ನ ಉಗ್ರ ಸ್ವರೂಪ ತೋರಿಸುತ್ತಿದ್ದು. ಈ ಬಾರಿಯ ಉಷ್ಣಾಂಶವು ಮಾರ್ಚ್‌ ತಿಂಗಳ ಸಾರ್ವಕಾಲಿಕ ದಾಖಲೆಯನ್ನು (39.4 ಡಿಗ್ರಿ ಸೆ.) ಸಮೀಪಿಸುತ್ತಿದೆ. ನಗರದಲ್ಲಿ ಗುರುವಾರ 36.5 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ನಗರದ ಮಾರ್ಚ್‌ ತಿಂಗಳ ಉಷ್ಣಾಂ ಶಕ್ಕೆ ಸಂಬಂಧಪಟ್ಟಂತೆ ಭಾರತೀಯ ಹವಾಮಾನ ಇಲಾಖೆಯ 10 ವರ್ಷಗಳ  ಅಂಕಿ–ಅಂಶಗಳನ್ನು ಅವಲೋಕಿಸಿದಾಗ, 10 ವರ್ಷಗಳಲ್ಲೂ (2007ರಿಂದ 2016) ನಗರದ  ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆ. ಗಡಿ ದಾಟಿದೆ.

ನಗರದಲ್ಲಿ 1953ರ  ಮಾರ್ಚ್ 20ರಂದು ದಾಖಲಾದ (40. ಡಿಗ್ರಿ ಸೆ.) ಉಷ್ಣಾಂಶವೇ ಈವರೆಗಿನ ಸಾರ್ವಕಾಲಿಕ ದಾಖಲೆ. ಅದನ್ನು ಹೊರತುಪಡಿಸಿದಂತೆ ನಗರದಲ್ಲಿ ಕಳೆದ ವರ್ಷ ಅಂದರೆ 2016ರ ಮಾ.21ರಂದು 39.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. 2015ರಲ್ಲಿ 36 ಡಿಗ್ರಿ ಸೆಲ್ಸಿಯಸ್‌ ಅದರ ಹಿಂದಿನ ಮೂರು ವರ್ಷಗಳಲ್ಲಿ ಅಂದರೆ  2011ರಿಂದ 2014ರವರೆಗೆ ಗರಿಷ್ಠ ಉಷ್ಣಾಂಶ 38ರ ಗಡಿ ದಾಟಿದೆ.

ಗದಗ ಜಿಲ್ಲೆ ಒಣ ಭೂಮಿಯಿಂದ ಕೂಡಿದ ಭೂ ಪ್ರದೇಶವಾಗಿದ್ದು, ಸತತ 4 ವರ್ಷಗಳಿಂದ ಸರಿಯಾದ ಪ್ರಮಾಣದಲ್ಲಿ ಮಳೆಯೂ ಆಗದೇ ತೇವಾಂಶವೂ ಇಲ್ಲದ ಕಾರಣ ಉಷ್ಣಾಂಶದಲ್ಲಿ ಏರಿಕೆ ಆಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಇನ್ನೂ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ಇಲಾಖೆಯ ಅಧಿಕಾರಿ ರಾಜು ರೋಖಡೆ. 

ನಗರದಲ್ಲಿ ಜಲಮೂಲಗಳು ಕಣ್ಮರೆ ಆಗಿರುವ ಕಾರಣ ತೇವಾಂಶ ಉತ್ಪತ್ತಿ ಆಗುವ ವಿದ್ಯಮಾನ ಕಡಿಮೆ. ಹೀಗಾಗಿ ನಗರದಲ್ಲಿ ಬಿಸಿಲ ಧಗೆಯ ಜತೆಗೆ ಒಣ ಹವೆ ಕೂಡ ಹೆಚ್ಚಿದೆ ಎನ್ನುತ್ತಾರೆ ಅವರು. 

ವಿಪರೀತ ಸೆಕೆ; ರಾತ್ರಿ ಮನೆ ಹೊರಗೆ ನಿದ್ರೆ
36 ಡಿಗ್ರಿ ಸೆಲ್ಸಿಯಸ್‌ ಮಾರ್ಚ್‌ ತಿಂಗ ಳಲ್ಲಿ ಗದುಗಿನ ವಾಡಿಕೆ ಗರಿಷ್ಠ ಉಷ್ಣಾಂಶ. ಆದರೆ, ನಗರದಲ್ಲಿ ಬಿಸಿಲ ಧಗೆಯ ಜತೆಗೆ ಒಣ ಹವೆ ಇರುವುದರಿಂದ ರಾತ್ರಿ ವಿಪ ರೀತ ಸೆಕೆಯ ಅನುಭವಾಗುತ್ತಿದೆ. ವಿವೇ ಕಾನಂದ ಬಡಾವಣೆ, ಎಸ್‌.ಎಂ.ಕೃಷ್ಣಾ ನಗರ, ರಾಜೀವ್‌ಗಾಂಧಿ ನಗರ, ಶಹಾ ಪುರ ಪೇಟೆ, ಬೆಟಗೇರಿ, ಖಾನತೋಟ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಸೆಕೆ ತಾಳಲಾರದೆ, ರಾತ್ರಿ ವೇಳೆ ಮನೆಯಂಗಳದಲ್ಲಿ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗಲು ಆರಂಭಿಸಿದ್ದಾರೆ.

ನಡುವೆ ವಿದ್ಯುತ್‌ ವ್ಯತ್ಯಯವೂ ಆಗುತ್ತಿರುವುದರಿಂದ ಜನ ಪರದಾಡುತ್ತಿ ದ್ದಾರೆ. ರಾತ್ರಿ 11ಗಂಟೆ ನಂತರ ನಗರ ದಲ್ಲಿ ಒಂದು ಸುತ್ತು ಹಾಕಿದರೆ ಮನೆಯ ಎದುರಿಗೆ, ಟೇರಸ್‌ ಮೇಲೆ ಮಲಗಿದವರ ಸಾಲನ್ನು ನೋಡಬಹುದು.

ಬೇಸಿಗೆಯಲ್ಲಿ ತಗಡಿನ ಶೀಟ್‌ನ ಮನೆ ಗಳಲ್ಲಿ ಮಲಗಲು ಸಾಧ್ಯವೇ ಇಲ್ಲ. ಫ್ಯಾನ್‌ ಕೂಡ ಬಿಸಿಗಾಳಿ ಉಗುಳುತ್ತಿರುತ್ತದೆ. ವಿದ್ಯುತ್‌ ಇಲ್ಲದಿದ್ದರೆ ಮುಗಿಯಿತು. ಸೆಕೆ ಯಿಂದಾಗಿ ಮೂರು ತಿಂಗಳು ರಾತ್ರಿ ವೇಳೆ  ಮನೆ ಹೊರಗಡೆಯೇ ಮಲಗುತ್ತೇವೆ. ಸೊಳ್ಳೆ ಕಾಟ ಇರುವುದರಿಂದ ಸೊಳ್ಳೆ ಪರದೆ ಕಟ್ಟಿಕೊಳ್ಳುತ್ತೇವೆ ಎನ್ನುತ್ತಾರೆ ಬಟ ಗೇರಿ ನಿವಾಸಿ ಬಸವರಾಜ ಅಂಗಡಿ.

ಸೆಕೆಯಿಂದ ಈಚೆಗೆ ಮನೆಯ ಒಳಗೆ ಮಲಗಲು ಸಾಧ್ಯವಾಗುತ್ತಿಲ್ಲ. ಮಲಗುವ ಮುನ್ನ ತಣ್ಣನೆಯ ನೀರಿನಿಂದ ನೆಲವನ್ನು ಎರಡೆರಡು ಬಾರಿ ಒರಸುತ್ತೇವೆ. ನಂತರ ಹಾಸಿಗೆ ಹಾಸಿಕೊಳ್ಳದೆ, ಕಲ್ಲಿನ ಮೇಲೆ ಮಲಗುತ್ತೇವೆ. ರಾತ್ರಿ ನಡು ನಡುವೆ ವಿದ್ಯುತ್‌ ಕೈ ಕೊಡುತ್ತಿರುವುದರಿಂದ ಒದ್ದಾಡುವಂತಾಗಿದೆ ಎನ್ನುತ್ತಾರೆ ವಿವೇಕಾ ನಂದ ಬಡಾವಣೆಯ ಗೃಹಿಣಿ ಶೋಭಾ ಮಲ್ಲಿಕಾರ್ಜುನ. 

ಉಷ್ಣಾಂಶದಲ್ಲಿ ತುಂಬ ಏರಿಕೆ ಆಗು ತ್ತಿರುವುದರಿಂದ ಜನರು ಬಿಸಿಲಿನ ಝಳ ತಾಳಲಾರದೆ ತೊಂದರೆ ಅನುಭವಿಸುತ್ತಿ ದ್ದಾರೆ. ಇನ್ನೊಂದೆಡೆ ನಗರದಲ್ಲಿ ಕುಡಿ ಯುವ ನೀರಿಗಾಗಿ ಪರದಾಡಬೇಕಿದೆ.

ತಂಪು ಪಾನೀಯಕ್ಕೆ ಮೊರೆ: ಬಿಸಿಲಿನ ತಾಪಕ್ಕೆ ಬೇಸತ್ತ ಜನ ತಂಪು ಪಾನೀಯ ಹಾಗೂ ಹಣ್ಣುಗಳಿಗೆ ಮೊರೆ ಹೋಗುತ್ತಿ ದ್ದಾರೆ. ನಗರದ ಟಾಂಗಾಕೂಟ, ಮುಂಳ ಗುಂದ ನಾಕಾ, ಬೆಟಗೇರಿ ಬಸ್‌ ನಿಲ್ದಾಣ, ಹಾತಲಗೇರಿ ನಾಕಾ, ಸರಾಫ್ ಬಜಾರ್, ಜನತಾ ಬಜಾರ್‌, ಚವಡಿ ಕೂಟ ಸೇರಿ ವಿವಿಧ ಸ್ಥಳದಲ್ಲಿ ಕಲ್ಲಂಗಡಿ, ಕರ್ಬೂಜ, ಅನಾನಸು, ಕಬ್ಬಿನ ಹಾಲು, ಎಳೆನೀರು ಹಾಗೂ ಮಜ್ಜಿಗೆ, ಐಸ್‌ಕ್ರೀಂ ವ್ಯಾಪಾರ ಜೋರಾಗಿದೆ. ಕೆ.ಜಿಗೆ ₹ 20 ಇದ್ದ ಕಲ್ಲಂಗಡಿ ಹಣ್ಣಿನ ಬೆಲೆ ₹ 30ಕ್ಕೆ ಏರಿದೆ.

ನೀರು ಪೂರೈಕೆಯಲ್ಲಿ ವ್ಯತ್ಯಯ
ಗದಗ:
ನಗರಕ್ಕೆ ನೀರು ಪೂರೈಸುವ ಕೊರ್ಲಹಳ್ಳಿಯ ಹತ್ತಿರದ ತುಂಗಭದ್ರಾ ನದಿ ಪಾತ್ರದಲ್ಲಿ ಮತ್ತೆ ನೀರು ಖಾಲಿಯಾಗಿರುವುದರಿಂದ ನೀರೆತ್ತುವ ಕಾರ್ಯ ಸ್ಥಗಿತಗೊಂಡಿದೆ. ಇದರಿಂದ ಮಾರ್ಚ್ 24 ಮತ್ತು 25ರಂದು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹಮ್ಮಿಗಿ ಬ್ಯಾರೇಜ್‌ನಿಂದ ತುಂಗಭದ್ರಾ ನದಿಗೆ ಬಿಟ್ಟಿರುವ ನೀರು ಮಾರ್ಚ್ 24ರಂದು ಮಧ್ಯಾಹ್ನ ಕೊರ್ಲಹಳ್ಳಿ ಜಾಕ್‌ವೆಲ್‌ಗೆ ತಲುಪುವ ನೀರಿಕ್ಷೆ ಇದೆ.

ಹಮ್ಮಿಗಿ ಬ್ಯಾರೇಜ್‌ಯಿಂದ ಬಿಡುವ ನೀರು ಕೊರ್ಲಹಳ್ಳಿ ಜಾಕ್‌ವೆಲ್ ತಲುಪಿದ ನಂತರ ನೀರೆತ್ತುವ ಕಾರ್ಯ ಆರಂಭ ಆಗುತ್ತದೆ. ನಂತರ ಪಾಪನಾಶಿಯ ಜಲ ಸಂಗ್ರಹಾಗಾರದಲ್ಲಿ ನೀರು ಸಂಗ್ರಹವಾದಲ್ಲಿ ನಗರಕ್ಕೆ ನೀರು ಪೂರೈಸಲಾಗುವುದು ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

ಹೆಚ್ಚಲಿದೆ ಸೆಕೆ!
ನಗರದಲ್ಲಿ ಜಲಮೂಲಗಳು ಕಣ್ಮರೆ ಆಗಿರುವ ಕಾರಣ ವಾತಾವರಣದಲ್ಲಿ ತೇವಾಂಶ ಪ್ರಮಾಣ ಕಡಿಮೆ. ಇದರಿಂದ ಒಣ ಹವೆ ಮುಂದುವರಿದಿದೆ. ಏಪ್ರಿಲ್, ಮೇ ತಿಂಗಳಲ್ಲಿ ಉಷ್ಣಾಂಶ ಇನ್ನಷ್ಟು ಏರಿಕೆಯಾಗಬಹುದು ಎಂದು ಜಿಲ್ಲಾ ಹವಾಮಾನ ಇಲಾಖೆ ಅಧಿಕಾರಿ ರಾಜು ರೋಖಡೆ ತಿಳಿಸಿದರು.

ನಿದ್ರೆಗೂ ಭಂಗ
ಸೆಕೆಯಿಂದ ಇತ್ತೀಚೆಗೆ ಮನೆಯ ಒಳಗೆ ಮಲಗಲು ಸಾಧ್ಯವಾಗುತ್ತಿಲ್ಲ. ಬಿಸಿಲ ಧಗೆಯ ಜತೆ ಒಣ ಹವೆ ಕೂಡ ಹೆಚ್ಚುತ್ತಿದೆ. ಹೀಗಾಗಿ, ರಾತ್ರಿ ಸೊಳ್ಳೆ ಪರದೆ ಕಟ್ಟಿಕೊಂಡು ಟೇರಸ್‌ ಮೇಲೆ ಮಲಗುತ್ತೇವೆ. ಇದರಿಂದ ಸ್ವಲ್ಪ ಮಟ್ಟಿಗಾದರೂ ಗಾಳಿ ಬರುತ್ತದೆ ಎಂದು ಹಾತಲಗೇರಿ ನಿವಾಸಿ ಮಂಜುನಾಥ ಕಾಳೆ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT