ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾನೂನು ಹೋರಾಟ ಅನಿವಾರ್ಯ’

ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ: ವಿಚಾರಣೆ ಉದ್ದೇಶಪೂರ್ವಕ ವಿಳಂಬ– ಆರೋಪ
Last Updated 24 ಮಾರ್ಚ್ 2017, 7:09 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಮುಧೋಳ ತಾಲ್ಲೂಕು ತಿಮ್ಮಾಪುರದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರ ಕುರಿತಾದ ವಿಚಾರಣೆಯನ್ನು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ’ ಎಂದು ದೂರುದಾರ ವಿಶ್ವನಾಥ ಉದಗಟ್ಟಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ವಿಚಾರಣೆ ವಿಳಂಬದಿಂದಾಗಿ ಅಲ್ಲಿ ಅಕ್ರಮಗಳು ಮುಂದುವರೆದಿವೆ. ರೈತರೇ ಸೇರಿ ಕಷ್ಟಪಟ್ಟು ಕಟ್ಟಿದ್ದ ಕಾರ್ಖಾನೆ ಇಂದು ಅವನತಿಯ ಹಾದಿಯಲ್ಲಿದೆ. ಅಧಿಕಾರಿಗಳ ಈ ಧೋರಣೆ ವಿರುದ್ಧ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಕಾರ್ಖಾನೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಈ ಹಿಂದೆ ದಾಖಲೆ ಬಿಡುಗಡೆ ಮಾಡಿದ್ದೆನು. ಮಾಧ್ಯಮಗಳಲ್ಲಿ ಆ ಬಗ್ಗೆ ಬಂದ ವರದಿಗಳ ಆಧರಿಸಿ, ಸಕ್ಕರೆ ಆಯುಕ್ತರು ಸಹಕಾರ ಸಂಘಗಳ ಕಾಯ್ದೆ–1959ರ ಕಲಂ 64ರ ಅಡಿ ಕಳೆದ ಜುಲೈ 12ರಂದು ವಿಚಾರಣೆಗೆ ಆದೇಶಿಸಿದ್ದಾರೆ.

ವಿಚಾರಣಾ ಅಧಿಕಾರಿಯಾಗಿ ಹಿರಿಯ ಅಧಿಕಾರಿ ಎಸ್‌.ವಿ.ಶಿವಕುಲಕರ್ಣಿ ಅವರನ್ನು ನೇಮಿಸಲಾಗಿದೆ. ಆದರೆ ಆ ಅಧಿಕಾರಿ ಇಲ್ಲಿಯವರೆಗೂ ವಿಚಾರಣೆ ಪೂರ್ಣಗೊಳಿಸಿಲ್ಲ ಎಂದರು.

ನಿಯಮಾನುಸಾರ  90 ದಿನಗಳ ಒಳಗಾಗಿ ವಿಚಾರಣೆ ಪೂರ್ಣಗೊಂಡು ವರದಿಯನ್ನು ಸಂಬಂಧಪಟ್ಟವರಿಗೆ ದಾಖಲೆಗಳೊಂದಿಗೆ ಸಲ್ಲಿಸಬೇಕಿದೆ. ಆದರೆ ಈಗ 240 ದಿನಗಳು ಕಳೆದಿವೆ. ಕೇವಲ ನಾಲ್ಕು ಬಾರಿ ಮಾತ್ರ ವಿಚಾರಣೆ ನಡೆಸಲಾಗಿದೆ.

ಸಂಬಂಧವಿಲ್ಲದವರಿಗೂ ನೋಟಿಸ್ ನೀಡಿ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ವಿಚಾರಣೆ ಪ್ರಕ್ರಿಯೆಗೆ ನ್ಯಾಯಾಲಯದಿಂದ ತಡೆ ತರಲು ಪರೋಕ್ಷವಾಗಿ ಸಹಕರಿಸಿದಂತಾಗುತ್ತಿದೆ’ ಎಂದು ಹೇಳಿದರು.

ಖೊಟ್ಟಿ ಷೇರುದಾರರು: ‘ಕಾರ್ಖಾನೆಯ ಅಧ್ಯಕ್ಷರ ಗ್ರಾಮದಲ್ಲಿನ 409 ಅ ವರ್ಗದ ಶೇರುದಾರರ ಪೈಕಿ 46 ಮಂದಿ ಅಲ್ಲಿಯವರೇ ಅಲ್ಲ. ಅವರಿಗೆ ಸಂಬಂಧಿಸಿದ ಜಮೀನು ಅಲ್ಲಿ ಇಲ್ಲ ಎಂಬುದನ್ನು ಸ್ವತಃ ಮುಧೋಳ ತಹಶೀಲ್ದಾರ್ ದೃಢೀಕರಿಸಿದ್ದಾರೆ ಎಂದು ವರದಿಯ ಪ್ರತಿ ಪ್ರದರ್ಶಿಸಿದರು. ಕಾರ್ಖಾನೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಮುಧೋಳ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿದೆ.

ಆ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್ ಹಾಕಲು ನ್ಯಾಯಾಲಯ ಪೊಲೀಸ್ ಇಲಾಖೆಗೆ ಆದೇಶಿಸಿ 11 ತಿಂಗಳೂ ಕಳೆದರೂ ಇಲ್ಲಿಯವರೆಗೂ ಆ ಕೆಲಸ ನಡೆದಿಲ್ಲ’ ಎಂದರು.

ಇನ್ನೊಂದು ತಿಂಗಳಲ್ಲಿ ವರದಿ ಸಲ್ಲಿಕೆ..
‘ರನ್ನ ಸಕ್ಕರೆ ಕಾರ್ಖಾನೆ ಅವ್ಯವಹಾರಕ್ಕೆ ಸಂಬಂಧಿಸಿದ ವಿಚಾರಣೆ ಈಗಾಗಲೇ ಪೂರ್ಣಗೊಂಡಿದೆ. ವಿಚಾರಣಾ ವರದಿ ಸಿದ್ಧಗೊಳಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಸಕ್ಕರೆ ಆಯುಕ್ತರಿಗೆ ವರದಿ ಸಲ್ಲಿಕೆಯಾಗಲಿದೆ’ ಎಂದು ವಿಚಾರಣಾಧಿಕಾರಿ ಶಿವಕುಲಕರ್ಣಿ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

‘ವಿಚಾರಣೆಗೆ ಕಾಲಮಿತಿ 90 ದಿನಗಳು ಇದ್ದರೂ ನನಗೆ ಮೂರು ಸಕ್ಕರೆ ಕಾರ್ಖಾನೆಗಳ ಹೊಣೆ ಇರುವುದರಿಂದ ಕಾರ್ಯಭಾರದ ಒತ್ತಡದ ಪರಿಣಾಮ ವಿಳಂಬವಾಗಿದೆ. ಕಾಲ ಕಾಲಕ್ಕೆ ಸಕ್ಕರೆ ಆಯುಕ್ತರಿಂದ ಅನುಮತಿ ಪಡೆದು ಕಾಲಮಿತಿ ವಿಸ್ತರಿಸಿಕೊಳ್ಳಲಾಗಿದೆ.

ಕಾನೂನಿನಲ್ಲಿ ಅದಕ್ಕೆ ಅವಕಾಶವಿದೆ.  ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಲ್ಲ. ವಿಚಾರಣೆ ವೇಳೆ ಅನಗತ್ಯವಾಗಿ ಯಾರಿಗೂ ನೋಟಿಸ್ ನೀಡಿಲ್ಲ. ಅದೆಲ್ಲಾ ಸುಳ್ಳು ಆರೋಪ’ ಎಂದರು.

*
ರನ್ನ ಸಕ್ಕರೆ ಕಾರ್ಖಾನೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಕೆಯಲ್ಲಿನ ವಿಳಂಬಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಲಾಗುವುದು.
-ಸಿ.ಬಿ.ರಿಷ್ಯಂತ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT