ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ: ಹನಿ ನೀರಿಗೂ ತತ್ವಾರ

ಕೋಟೆಗೇರಹಳ್ಳಿ: ಬಿಸಿಯೂಟದಿಂದ ದೂರ ಉಳಿದ ವಿದ್ಯಾರ್ಥಿಗಳು
Last Updated 24 ಮಾರ್ಚ್ 2017, 9:18 IST
ಅಕ್ಷರ ಗಾತ್ರ

ಯಾದಗಿರಿ: ಬಿಸಿಯೂಟ ತಯಾರಿಸಲೂ ನೀರಿಲ್ಲ. ಅವರಿವರ ಕಾಡಿಬೇಡಿ ತಂದ ನೀರಿಂದ ತಯಾರಾದ ಬಿಸಿಯೂಟ ಉಣ್ಣಲೂ ವಿದ್ಯಾರ್ಥಿಗಳು ಸಿದ್ಧರಿಲ್ಲ. ಏಕೆಂದರೆ ಈ ಸುಡುಬೇಗೆಯಲ್ಲಿ ಬಿಸಿಯೂಟ ಗಂಟಲಲ್ಲಿ ಸಿಲುಕಿದರೆ ಸಮಾಧಾನಿಸಿಕೊಳ್ಳಲೂ ಅಲ್ಲಿ ಹನಿ ನೀರು ಸಿಗುವುದಿಲ್ಲ. ಹಾಗಾಗಿ, ಆ ಮಕ್ಕಳು ಬಿಸಿಯೂಟದಿಂದ ದೂರ ಉಳಿದಿದ್ದಾರೆ. ಹಾಗಾಂತ ಶಿಕ್ಷಕರು ಬಿಸಿಯೂಟ ನಿಂತಿಲ್ಲ. ಎಲ್ಲ ಮಕ್ಕಳಿಗೂ ಸೇರಿಸಿ ಬಿಸಿಯೂಟ ತಯಾರಿಸುತ್ತಾರೆ.

ಕೆಲವೊಂದು ಮಕ್ಕಳು ಬಿಸಿಯೂಟ ತೆಗೆದುಕೊಂಡು ಹೋಗಿ ಮನೆಯಲ್ಲಿ ತಿಂದು ಬರುತ್ತಾರೆ. ವರ್ಷಪೂರ್ತಿ ಅವರಿವರನ್ನು ಕಾಡಿಬೇಡಿ ನೀರುತಂದು ಬಿಸಿಯೂಟ ನಿರ್ವಹಿಸುವ ಮುಖ್ಯೋ ಪಾಧ್ಯಾಯರಿಗೆ ಬೇಸಿಗೆಯಲ್ಲೂ 38 ದಿನ ಬಿಸಿಯೂಟ ಮುಂದುವರಿಸುವಂತೆ ಇಲಾಖೆ ಆದೇಶಿಸಿರುವುದು ಮಾತ್ರ ನುಂಗಲಾರದ ತುತ್ತಾಗಿ ಪರಿಣಮಿಸಿದೆ...

ಜಿಲ್ಲಾಕೇಂದ್ರದಿಂದ 20 ಕಿಲೊ ಮೀಟರ್ ದೂರದ ಕೋಟೆಗೇರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ಇದು. ಮೋಟ್ನಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಗೆ ಸೇರುವ ಕೊಟಗೇರ ಹಳ್ಳಿಯ ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ ಒಟ್ಟು 400 ವಿದ್ಯಾರ್ಥಿಗಳಿ ದ್ದಾರೆ. ಶೇ 90ರಷ್ಟು ಹಾಜರಾತಿ ಇದೆ.

ಆದರೆ, ಇಲ್ಲಿನ ಯಾವ ಮಕ್ಕಳೂ ಸಹ ಬಿಸಿಯೂಟ ಮುಟ್ಟವುದಿಲ್ಲ! ಕಾರಣ ನೀರಿನ ಅಭಾವ. ಬಿಸಿಅನ್ನ ಗಂಟಲಲ್ಲಿ ಸಿಲುಕಿ ಅವಸ್ಥೆಪಟ್ಟಿರುವ ಇಲ್ಲಿನ ವಿದ್ಯಾ ರ್ಥಿಗಳು ಬಿಸಿಯೂಟದ ಸಹವಾಸವೇ ಬೇಡ ಎಂಬುದಾಗಿ ನಿರ್ಧರಿಸಿದ್ದಾರೆ.

ಸರ್ಕಾರಿ ಆದೇಶದಂತೆ ಶಿಕ್ಷಕರು 400 ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸುತ್ತಾರೆ. ಆದರೆ, ಕುಡಿಯಲು ಹನಿ ನೀರೂ ಇಲ್ಲದ ಕಾರಣ ಮಕ್ಕಳು ಬಿಸಿಯೂಟದಿಂದ ದೂರ ಉಳಿದಿದ್ದಾರೆ. ಕೆಲವೊಂದು ಸಲ ಅಡುಗೆಸಿಬ್ಬಂದಿಯೇ ಅನಿವಾರ್ಯವಾಗಿ ಬಿಸಿಯೂಟ ತೆಗೆದು ಕೊಂಡು ಹೋಗುತ್ತಾರೆ ಎಂದು ಕೋಟೆಗೇರಹಳ್ಳಿ ನಿವಾಸಿ ಭೀಮರಾಯ ಹೇಳುತ್ತಾರೆ.

ಕಾಡಿಬೇಡಿ ನೀರು ತರುತ್ತೇನೆ: ಪಂಪ್‌ಸೆಟ್‌ ಮೋಟರ್ ದುರಸ್ತಿ ಮಾಡಲು ಕನಿಷ್ಠ ₹10ರಿಂದ ₹ 15 ಸಾವಿರ ಬೇಕಾಗುತ್ತದೆ. ಒಂದು ವರ್ಷಕ್ಕೆ ಶಾಲೆ ನಿರ್ವಹಣಾ ವೆಚ್ಚ, ಅನುದಾನ ವೆಚ್ಚ ಅಂತ ಶಿಕ್ಷಣ ಇಲಾಖೆ ₹10 ಸಾವಿರ ನೀಡುತ್ತದೆ. ಈ ಅಲ್ಪಮೊತ್ತ  ಶಾಲೆಯ ಲ್ಲಿನ ಸಣ್ಣಪುಟ್ಟ ದುರಸ್ತಿಗೆ ಸಾಲುವುದಿಲ್ಲ. ಒಮ್ಮೆ ಇದೇ ಪಂಪ್‌ಸೆಟ್‌ ಸುಟ್ಟಾಗ ಶಾಲೆ ಅನುದಾನದಿಂದ ದುರಸ್ತಿ ಮಾಡಿಸಿದ್ದೇನೆ.

ಬಿಸಿಯೂಟ ನಿಲ್ಲಿಸಬಾರದು ಎಂಬ ಕಾರಣಕ್ಕೆ ಪಕ್ಕದ ಹೊಲದ ರೈತರೊಬ್ಬರನ್ನು ಕಾಡಿಬೇಡಿ ನೀರು ತರುತ್ತೇನೆ. ಒಂದೆರಡು ಡ್ರಮ್ ನೀರು ಸಂಗ್ರಹಿಸಿಟ್ಟುಕೊಂಡು ಬಿಸಿಯೂಟ ತಯಾರಿಸಲಾಗುತ್ತದೆ. ಈ ಸಂದರ್ಭದಲ್ಲಿ ಒಂದೆರಡು ಬಿಂದಿಗೆ ಕುಡಿಯಲು ನೀರು ಸಂಗ್ರಹಿಸಲಾಗುವುದು ಎಂದು ಶಾಲೆಯ ಮುಖ್ಯೋಪಾಧ್ಯಾಯ ಸೂರ್ಯಕಾಂತ ತೆರದಳ್ಳಿ ‘ಪ್ರಜಾವಾಣಿ’ ಗೆ ಮಾಹಿತಿ ನೀಡಿದರು.

ಇಲಾಖೆಯಲ್ಲಿ ಅನುದಾನ ಇಲ್ಲ: ಶಾಲೆಗಳಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಲ್ಲಿನ ಗ್ರಾಮ ಪಂಚಾಯಿತಿಯೇ ಮಾಡಬೇಕು. ಶಿಕ್ಷಣ ಇಲಾಖೆಯಿಂದ ಯಾವುದೇ ಅನುದಾನ ಇಲ್ಲ. ಮೊದಲು ಸರ್ವಶಿಕ್ಷಾ ಅಭಿಯಾನ ಯೋಜನೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗ ಆ ಯೋಜನೆ ರದ್ದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕಣ್ಣನ್ ತಿಳಿಸಿದರು.

ಎಸ್‌ಡಿಎಂಸಿ ಇಲ್ಲ: ಶಾಲೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸ ಲಿಕ್ಕಾಗಿಯೇ ಎಸ್‌ಡಿಎಂಸಿ ರಚನೆ ಮಾಡಲಾಗುತ್ತದೆ. ಆದರೆ, ಕೋಟೆಗೇರ ಹಳ್ಳಿ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆಯಾಗಿಲ್ಲ. ಎಸ್‌ಡಿ ಎಂಸಿ ನೇಮಕ ವಿಚಾರದಲ್ಲಿ ಗ್ರಾಮಸ್ಥ ರಲ್ಲಿ ಪೈಪೋಟಿ ನಡೆದು ಪ್ರಕರಣ ಕೂಡ ದಾಖಲಾಗಿದೆ ಎನ್ನುತ್ತಾರೆ ಶಿಕ್ಷಕರು.

*
ಮಕ್ಕಳ ಸಹಾಯವಾಣಿ ಕಾರ್ಯಕ್ರಮದ ಸಂದರ್ಭದಲ್ಲಿ ನೀರಿನ ಬವಣೆ ಬಗ್ಗೆ ಶಾಲಾ ಶಿಕ್ಷಕರು ಗಮನಕ್ಕೆ ತಂದಿದ್ದಾರೆ. ಪಂಪ್‌ಸೆಟ್‌ ತೆಗೆದುಕೊಂಡು ಯಾದಗಿರಿಯಲ್ಲಿ ದುರಸ್ತಿಗೆ ನೀಡಲಾಗಿದೆ.
-ಸೂರ್ಯಕಾಂತ ಪಿಡಿಒ, ಮೋಟ್ನಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT