ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂತರನ್ನು ಸಾಯಿಸಿ, ಕಸಾಯಿಖಾನೆ ಆರಂಭಿಸಿ’

Last Updated 24 ಮಾರ್ಚ್ 2017, 20:55 IST
ಅಕ್ಷರ ಗಾತ್ರ

ಬೆಂಗಳೂರು: ‘ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಕಸಾಯಿಖಾನೆ ನಿರ್ಮಿಸಲು ಬಿಬಿಎಂಪಿ ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಇದೇ ವೇಳೆ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ‘ಮೊದಲು ನಾಡಿನ ಸಂತರನ್ನು ಸಾಯಿಸಿ. ಬಳಿಕ ಗೋವಧಾಸ್ಥಾನ (ಕಸಾಯಿಖಾನೆ) ಆರಂಭಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗೋಮಾತೆಯ ರಕ್ತ ಹರಿಯುವ ಮುನ್ನ ಗೋಭಕ್ತರ ರಕ್ತ ಹರಿಯಲಿ. ಕಸಾಯಿಖಾನೆ ಆರಂಭಿಸಲು ನಾವು ಬಿಡುವುದಿಲ್ಲ. ಹಾರೋಹಳ್ಳಿಯ ಜನರ ಭಾವನೆಗಳಿಗೆ ವಿರುದ್ಧವಾಗಿ ಕಸಾಯಿಖಾನೆ ನಿರ್ಮಿಸಲು ಮುಂದಾದರೆ ಗಂಭೀರ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಕಾಂಗ್ರೆಸ್ ಸರ್ಕಾರಕ್ಕೆ ಐದು ವರ್ಷ ಅಧಿಕಾರ ಪೂರೈಸುವ ಇಚ್ಛೆ ಇದ್ದರೆ ಕಸಾಯಿಖಾನೆ ನಿರ್ಮಾಣದ ನಿರ್ಧಾರವನ್ನು ಹಿಂಪಡೆಯಬೇಕು. ಹಠ ಮಾಡಿ ಕಸಾಯಿಖಾನೆ ನಿರ್ಮಾಣಕ್ಕೆ ಮುಂದಾದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ‘ರೈತ ದೇಶದ ಬೆನ್ನೆಲುಬು. ಹಸು ರೈತನ ಬೆನ್ನೆಲುಬು. ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರೂ ಗಾಂಧಿ ಅವರ ಗೋಹತ್ಯೆ ನಿಷೇಧದ ಆಶಯಕ್ಕೆ ಬದ್ಧರಾಗಬೇಕು.  ಜೀವಾಮೃತ ನೀಡುವ ತಾಯಿಯನ್ನೇ ಹತ್ಯೆ ಮಾಡುವುದು ಸರ್ಕಾರದ ವಿಕೃತ ಮನೋಭಾವವನ್ನು ತೋರಿಸುತ್ತದೆ’ ಎಂದರು.

ಮುಸ್ಲಿಂ ಮುಖಂಡ ಅಜೀಜ್ ಮಾತನಾಡಿ, ‘ಗ್ರಾಮಸ್ಥರು ಒಕ್ಕೊರಲಿನಿಂದ ಕಸಾಯಿಖಾನೆಯನ್ನು ವಿರೋಧಿಸುತ್ತಿದ್ದಾರೆ. ಅನ್ಯೋನ್ಯತೆಯೇ ಈ ಗ್ರಾಮದ ಜೀವಾಳ. ಕಸಾಯಿಖಾನೆ ಮೂಲಕ ಅದನ್ನು ಕೆಡಿಸುವ ಪ್ರಯತ್ನ ಮಾಡಬಾರದು’  ಎಂದು ಮನವಿ ಮಾಡಿದರು.

ರಸ್ತೆ ತಡೆದು ಪ್ರತಿಭಟನೆ: ಬಹಿರಂಗ ಸಭೆಗೂ ಮುನ್ನ ಹಾರೋಹಳ್ಳಿಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಸ್ ನಿಲ್ದಾಣ ಬಳಿ 15 ನಿಮಿಷ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಕಸಾಯಿಖಾನೆ ಹಾಗೂ ಗೋಹತ್ಯೆ ನಿಷೇಧಿಸುವಂತೆ ಒತ್ತಾಯಿಸಿ ಸ್ಥಳೀಯರ ಸಹಿ ಸಂಗ್ರಹಿಸಲಾಯಿತು. ಪ್ರತಿಭಟನೆ ಕೊನೆಯಲ್ಲಿ ಅದರ ಪತ್ರವನ್ನು ರಾಘವೇಶ್ವರ ಭಾರತೀ ಸ್ವಾಮೀಜಿಗೆ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT