ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ರಸ್ತೆ ಕಾಮಗಾರಿಯೇ ಹೀಗಾದರೇ...?

ಟೆಂಡರ್‌ ಶ್ಯೂರ್‌ ಯೋಜನೆಯಡಿ ಎರಡು ವರ್ಷದ ಹಿಂದಷ್ಟೇ ಅಭಿವೃದ್ಧಿ
Last Updated 24 ಮಾರ್ಚ್ 2017, 20:59 IST
ಅಕ್ಷರ ಗಾತ್ರ

ಬೆಂಗಳೂರು: ಈ ಪಾದಚಾರಿ ಮಾರ್ಗದ ಇಂಟರ್‌ಲಾಕ್‌ಗಳು ಕಿತ್ತು ಹೋಗಿವೆ, ದ್ವಿಚಕ್ರವಾಹನಗಳು ಸಂಚರಿಸದಂತೆ ನಿರ್ಮಿಸಲಾಗಿದ್ದ ಪುಟ್ಟ ಕಲ್ಲಿನ ಕಂಬಗಳು ಮುರಿದು ಬಿದ್ದಿವೆ, ದುರಸ್ತಿ ಕೆಲಸಕ್ಕೆ ಮಾರ್ಗ ಮತ್ತೆ ಅಗೆಯಲಾಗಿದೆ.

ಟೆಂಡರ್‌ ಶ್ಯೂರ್‌ ಯೋಜನೆಯಡಿ ಎರಡು ವರ್ಷದ ಹಿಂದಷ್ಟೇ ಅಭಿವೃದ್ಧಿ ಪಡಿಸಿದ ನಗರದ ಸೇಂಟ್‌ ಮಾರ್ಕ್ಸ್ ರಸ್ತೆಯ ದುಃಸ್ಥಿತಿ ಇದು.
ಟೆಂಡರ್‌ ಶ್ಯೂರ್‌ ರಸ್ತೆಗಳನ್ನು  ಅಗೆಯಲು 30 ವರ್ಷದವರೆಗೆ ಅವಕಾಶ ಕಲ್ಪಿಸುವುದಿಲ್ಲ. ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಈ ರಸ್ತೆಗಳನ್ನು ನಿರ್ಮಿಸಲಾಗುತ್ತದೆ ಎಂದು ಸರ್ಕಾರ   ಹೇಳಿಕೊಂಡಿತ್ತು. 

‘ಈ ಯೋಜನೆಗೆ ಜನರ ತೆರಿಗೆ ಹಣ ಬಳಸಲಾಗುತ್ತಿದೆ. ಆದರೆ, ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸದೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಲ್ಲಿ ಪಾರದರ್ಶಕತೆ ಇಲ್ಲ. ಪಾದಚಾರಿ ಮಾರ್ಗಗಳು ಬಹಳ ಅಗಲವಾಗಿವೆ. ಇದಕ್ಕೆ ಪೂರಕವೆಂಬಂತೆ ಕಾಮಗಾರಿಯೂ ಸರಿಯಿಲ್ಲ. ಗುತ್ತಿಗೆದಾರರು ಮನ ಬಂದಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಪಾದಚಾರಿ ಅನುಪಮ ಶೆಣೈ ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್‌ ಇಲಾಖೆ ಸೇರಿದಂತೆ ಎಲ್ಲ ಸೇವಾ ಸಂಸ್ಥೆಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆ ಟೆಂಡರ್‌ ಶ್ಯೂರ್‌ನಲ್ಲಿ ಇರುತ್ತದೆ. ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ), ಬೀದಿದೀಪ, ಸಿಗ್ನಲ್‌ ದೀಪ, ಸಿ.ಸಿ.ಟಿ.ವಿ ಕೇಬಲ್‌, ಅನಿಲ ಸಂಪರ್ಕ ಜಾಲಗಳಿಗೆ  ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್‌ (ಸೇವಾ ಸಂಪರ್ಕ ಜಾಲದ ನೆಲದಡಿ ಮಾರ್ಗ) ವ್ಯವಸ್ಥೆ ರೂಪಿಸಲಾಗಿದೆ.

ಯಾವುದೇ ಮಾರ್ಗದ ದುರಸ್ತಿ ಇದ್ದರೂ ರಸ್ತೆ ಅಗೆಯುವ ಪ್ರಮೇಯವೇ ಬರುವುದಿಲ್ಲ. ಸಮಸ್ಯೆ ಇದ್ದಲ್ಲಿ ಡಕ್ಟ್‌ಗಳನ್ನು ತೆರೆದು ದುರಸ್ತಿ ಕಾರ್ಯ ಕೈಗೊಳ್ಳಬಹುದು. ಆದರೂ,  ಎರಡು ವರ್ಷದಲ್ಲಿ ನಾಲ್ಕು ಬಾರಿ ಮಾರ್ಗವನ್ನು ಅಗೆಯಲಾಗಿದೆ.

ವಿಧಾನಸೌಧ ಮತ್ತು ನಮ್ಮ ಮೆಟ್ರೊಗೆ ವಿದ್ಯುತ್‌ ಸರಬರಾಜು ಮಾಡುವ 220 ಕಿಲೊ ವಾಟ್‌ ಮಾರ್ಗ ದುರಸ್ತಿಗಾಗಿ ಗುರುವಾರ ಬೆಸ್ಕಾಂ ಟೆಂಡರ್‌ ಶ್ಯೂರ್‌ ಮಾರ್ಗವನ್ನು ಅಗೆದಿದೆ. ಅಲ್ಲದೆ, ಕೆಲಸ ಪೂರ್ಣಗೊಂಡ ನಂತರ ಬೇಕಾಬಿಟ್ಟಿಯಾಗಿ ಕಲ್ಲಿನ ಬ್ಲಾಕ್‌ಗಳನ್ನು ಜೋಡಿಸಿ ಹೋಗಿದೆ.

ಸೇಂಟ್‌ ಮಾರ್ಕ್ಸ್‌ ರಸ್ತೆ ಈ ಯೋಜನೆಯಡಿ ಅಭಿವೃದ್ಧಿಗೊಂಡ ಮೊದಲ ರಸ್ತೆಯಾಗಿದೆ. ಕಾಮಗಾರಿ ಮುಗಿದ ಒಂದೇ ತಿಂಗಳಲ್ಲೇ (2015ರ ಮೇ) ಹಳೆಯ ಪೈಪ್‌ಲೈನ್‌ ಬದಲಿಸುವ ಕಾರಣಕ್ಕೆ ಮೊದಲ ಬಾರಿಗೆ ಮಾರ್ಗವನ್ನು ಜಲಮಂಡಳಿಯವರು ಅಗೆದಿದ್ದರು. ನಂತರ 2016ರ ಏಪ್ರಿಲ್‌ನಲ್ಲಿ ಕಾವೇರಿ ಕೊಳವೆಜಾಲದ ದುರಸ್ತಿ ಕಾಮಗಾರಿಗಾಗಿ ಎರಡನೇ ಬಾರಿ ಗುಂಡಿ ತೋಡಿತ್ತು.

‘ಜಲಮಂಡಳಿ ಇಂತಹ ಕೆಲಸ ಮಾಡುವುದು ಇದು ಮೊದಲಲ್ಲ. ಹೊಸದಾಗಿ  ಡಾಂಬರೀಕರಣಗೊಂಡ ರಸ್ತೆಗಳನ್ನು ಹಲವು ಬಾರಿ ಅಗೆದಿದೆ. ಈ ಮೂಲಕ ಹಣ ಪೋಲು ಮಾಡುತ್ತಿದೆ. ಸಮನ್ವಯದ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ತಪ್ಪುಗಳು ಪದೇ ಪದೇ ನಡೆಯುತ್ತಿವೆ’ ಎಂದು ಪಾದಚಾರಿ ವಿಶ್ವಾಸ್‌ ದೂರಿದರು.

18 ಪ್ರಮುಖ ರಸ್ತೆಗಳ ಅಭಿವೃದ್ಧಿ: ಟೆಂಡರ್‌ ಶ್ಯೂರ್‌ ಯೋಜನೆ ಅಡಿಯಲ್ಲಿ  18 ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಅವುಗಳನ್ನು ಮೂರು ಹಂತಗಳಲ್ಲಿ ವಿಭಾಗಿಸಲಾಗಿದೆ.

ಮೊದಲ ಹಂತದಲ್ಲಿ ರೆಸಿಡೆನ್ಸಿ ರಸ್ತೆ, ರಿಚ್ಮಂಡ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಮಲ್ಯ ರಸ್ತೆ, ಸೇಂಟ್‌ ಮಾರ್ಕ್ಸ್‌ ರಸ್ತೆ, ಕಮಿಷನರೇಟ್‌ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳು ಸೇರಿವೆ. ಒಟ್ಟು 10.2 ಕಿ.ಮೀ. ಉದ್ದದ ಈ ರಸ್ತೆಗಳ ಕಾಮಗಾರಿ ಮುಕ್ತಾಯವಾಗಿದೆ. 

ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಚರ್ಚ್‌ ಸ್ಟ್ರೀಟ್‌, ಕಮರ್ಷಿಯಲ್‌ ಸ್ಟ್ರೀಟ್‌, ರಾಜಭವನ ರಸ್ತೆ, ಕೆ.ಎಚ್‌. ರಸ್ತೆ, ಜೆ.ಸಿ. ರಸ್ತೆಗಳಲ್ಲಿ ಟೆಂಡರ್‌ ಶ್ಯೂರ್‌ ವ್ಯವಸ್ಥೆ ಬರಲಿದೆ. ಈ ಮಾರ್ಗಗಳ ಒಟ್ಟು ಉದ್ದ 7.4 ಕಿ.ಮೀ. ಇದ್ದು, ₹57.32 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಮೂರನೇ ಹಂತದಲ್ಲಿ ಮೋದಿ ಆಸ್ಪತ್ರೆ ರಸ್ತೆ, ಸಿದ್ದಯ್ಯ ಪುರಾಣಿಕ ರಸ್ತೆ, ಕೆ.ಜಿ. ರಸ್ತೆ, ನೃಪತುಂಗ ರಸ್ತೆ ಮತ್ತು ಜಯನಗರ 11ನೇ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.

ಟೆಂಡರ್‌ ಶ್ಯೂರ್‌ ರಸ್ತೆಯ ಸೌಕರ್ಯಗಳು
ಪಾದಚಾರಿಗಳಿಗೆ  ಸುಸಜ್ಜಿತ ಮಾರ್ಗ, ಸೈಕಲ್‌ಗಳಿಗೆ ಪ್ರತ್ಯೇಕ ಮಾರ್ಗ, ಭಾರಿ ವಾಹನಗಳು, ಮಧ್ಯಮ ಗಾತ್ರದ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳು, ಮಾರ್ಗ ಮಧ್ಯದಲ್ಲಿ ವಾಹನಗಳು ರಸ್ತೆಗೆ ನುಗ್ಗದಂತೆ ತಡೆ. ಪಾದಚಾರಿ ಮಾರ್ಗ ನೆಲಮಟ್ಟಕ್ಕಿಂತ ಎತ್ತರವಾಗಿದ್ದರೆ, ಸೈಕಲ್‌ ಮಾರ್ಗ ತುಸು ಕೆಳಗಿರುತ್ತದೆ. ಮಳೆನೀರು ಯಾವುದೇ ಅಡೆತಡೆ ಇಲ್ಲದಂತೆ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT