ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ನೀರು ಸಂರಕ್ಷಣೆಗೆ ಮಾದರಿ ಕೋಚಿಮುಲ್‌

ವ್ಯರ್ಥವಾಗಿ ಚರಂಡಿಗೆ ಹೋಗುತ್ತಿದ್ದ ನೀರನ್ನು ಹಲವು ಹಂತಗಳಲ್ಲಿ ಸಂಸ್ಕರಿಸಿ ಮರು ಬಳಕೆ
Last Updated 25 ಮಾರ್ಚ್ 2017, 5:31 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಲು ಶೀತಲೀಕರಣ ಕೇಂದ್ರದಲ್ಲಿ ವ್ಯರ್ಥವಾಗಿ ಚರಂಡಿಗೆ ಹೋಗುತ್ತಿದ್ದ ನೀರನ್ನು ಹಲವು ಹಂತಗಳಲ್ಲಿ ಸಂಸ್ಕರಿಸಿ ಮರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಂತಹ  ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹನಿ ನೀರು ವ್ಯರ್ಥವಾಗದಂತೆ ಎಚ್ಚರ ವಹಿಸಿರುವುದು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ.

ನೀರಿನ ಶುದ್ಧೀಕರಣ ಮಾಡಿ ಮರುಬಳಕೆ ಮಾಡಿಕೊಳ್ಳುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಏಕೈಕ ಶೀತಲೀಕರಣ ಕೇಂದ್ರವಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ.

ಶೀತಲೀಕರಣ ಘಟಕದಲ್ಲಿ ನಿತ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ 1.10ಲಕ್ಷ ಲೀಟರ್‌ ಹಾಲನ್ನು ಪಡೆದು ಶೀತಲೀಕರಣ ಮಾಡಿ ಬೇರೆ ಕಡೆ ಕಳುಹಿಸಲಾಗುತ್ತದೆ. ಸಂಗ್ರಹಣೆ, ಶೀತಲೀಕರಣ ಹಾಗೂ ಸ್ವಚ್ಛತೆಗಾಗಿ ನಿತ್ಯ  40 ಸಾವಿರ ಲೀಟರ್‌ ನೀರಿನ ಅಗತ್ಯವಿದೆ.

ಪ್ರತಿದಿನ ಕ್ಯಾನ್‌ಗಳನ್ನು ತೊಳೆದು ಸ್ವಚ್ಛಗೊಳಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಬಳಕೆ ಮಾಡಲಾಗುತ್ತದೆ. ಹಾಲಿಗೆ ಒಂದು ಹನಿ ನೀರು ಬೆರಕೆ ಮಾಡದೆ ಹಾಲು ಮತ್ತು ನೀರನ್ನು ಪ್ರತ್ಯೇಕ ಕೊಳವೆಗಳ ಮೂಲಕ ಸಮಾನಾಂತರವಾಗಿ ಹರಿಸಲಾಗುತ್ತದೆ. ಒಂದು ಬದಿಯ ಕೊಳವೆಗಳಲ್ಲಿ ಬಿಸಿ ಮತ್ತು ತಂಪು ನೀರು ಹರಿಸಿ ಮತ್ತೊಂದು ಬದಿ ಹಾಲು ಬಿಸಿ ಹಾಗೂ ತಂಪಾಗಿಸುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತವೆ.

ಹಾಲಿನ ಸಂಗ್ರಹಣೆ, ಶೀತಲೀಕರಣ ಪ್ರಕ್ರಿಯೆ ಮುಗಿದ ತಕ್ಷಣ ಇಡೀ ಘಟಕವನ್ನು ನೀರಿನಿಂದ ಸ್ವಚ್ಛಗೊಳಿಸಲಾಗುತ್ತದೆ. ಹಳೆಯ ಹಾಲಿನ ಅಂಶ ಒಂದು ಚೂರು ಉಳಿದುಕೊಳ್ಳದಂತೆ ಸ್ವಚ್ಛಗೊಳಿಸಬೇಕು. ಹಳೆಯದು ಉಳಿದುಕೊಂಡರೆ ಹಾಲು ಕೆಡುತ್ತದೆ.

ಹಾಲಿನ ಕ್ಯಾನ್‌ಗಳು, ದೊಡ್ಡ ದೊಡ್ಡ ಹಾಲಿನ ಟ್ಯಾಂಕರ್‌ಗಳು, ತೊಟ್ಟಿಗಳು, ಕೊಳವೆಗಳು, ಯಂತ್ರಗಳು, ನೆಲಹಾಸು ಸೇರಿದಂತೆ ಎಲ್ಲವನ್ನೂ ಸ್ವಚ್ಛಗೊಳಿಸಬೇಕಾಗುತ್ತದೆ.  ಹೀಗೆ ಬಳಸುತ್ತಿದ್ದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಜತೆಗೆ ಹೊರಗಡೆಯ ಜನರಿಗೆ ದುರ್ವಾಸನೆ ಬಡಿಯುತ್ತಿತ್ತು.

ಹೀಗೆ ವ್ಯರ್ಥವಾಗುತ್ತಿದ್ದ ನೀರನ್ನು ದೊಡ್ಡ ತೊಟ್ಟಿಯಲ್ಲಿ ಸಂಗ್ರಹಿಸಿ ವಿವಿಧ ಹಂತಗಳಲ್ಲಿ ಸಂಸ್ಕರಿಸಿ ಮತ್ತೆ ಕೊಳವೆಗಳಿಗೆ ಹರಿಸುವ ಮೂಲಕ ಮರುಬಳಕೆ ಮಾಡಲಾಗುತ್ತದೆ. ನೀರು ತಂಪಾಗಿಸುವ  ವಿಭಾಗದಲ್ಲಿ ಕಾರ್ಯನಿರ್ವಹಿಸುವ ಯಂತ್ರಗಳ ತಾಪಮಾನವನ್ನು ನಿಯಂತ್ರಣದಲ್ಲಿ ಇಡಲು ಕೊಳವೆಗಳ ಮೂಲಕ ತಂಪು ನೀರನ್ನು ಹರಿಸಲಾಗುತ್ತದೆ. ಹೀಗೆ ಹರಿಸಿದ ನೀರನ್ನು ಸಹ ಪ್ರತ್ಯೇಕ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಮರುಬಳಕೆ ಮಾಡಲಾಗುತ್ತಿದೆ.

ನಿತ್ಯ ಉಪಯೋಗಿಸಿದ ಸುಮಾರು 25ರಿಂದ 30 ಸಾವಿರ ಲೀಟರ್‌ ನೀರನ್ನು ಸಂಸ್ಕರಣ ಘಟಕ (ಇಟಿಪಿ) ಘಟಕಕ್ಕೆ ಹರಿಸಲಾಗುತ್ತದೆ. ಅಲ್ಲಿ ಯಂತ್ರದ ಮೂಲಕ ಗಾಳಿಯನ್ನು ಹರಿಸಿ 4 ಗಂಟೆಗಳ ಕಾಲ ಸಂಸ್ಕರಿಸಲಾಗುತ್ತದೆ. ನಂತರ ಎರಡನೇ ಹಂತದ ಘಟಕಕ್ಕೆ ಹರಿಸಲಾಗುತ್ತದೆ. ಅಲ್ಲಿ ಆಲಮ್‌ ಹಾಗೂ ರಾಸಾಯನಿಕ ಹಾಕಿ ಸಂಸ್ಕರಿಸಲಾಗುತ್ತದೆ. ಅಲ್ಲಿಂದ 3ನೇ ಘಟಕಕ್ಕೆ ಹರಿಸಿ ಸಂಸ್ಕರಿಸಲಾಗುತ್ತದೆ.

ಆಮ್ಲಜನಕ (ಒ3) ಹರಿಸಿ ಒಂದರ ನಂತರ ಒಂದರಂತೆ 2 ನೀರು ಶುದ್ಧೀಕರಣ ಯಂತ್ರಗಳ ಮೂಲಕ ಅಂತಿಮವಾಗಿ ಸಂಸ್ಕರಣೆ ಮಾಡಿ ಉಪಯೋಗಿಸಿಕೊಳ್ಳಲಾಗುತ್ತದೆ. ಸಂಸ್ಕರಣೆಯ ನಂತರ ಕೊನೆಯ ಹಂತದಲ್ಲಿ ಜಲ್ಲಿಮರಳಿನ ತೊಟ್ಟಿಗೆ ಹರಿಸಲಾಗುತ್ತದೆ. ನೀರು ಇಂಗಿಸಿ ಮತ್ತೆ ಶುದ್ಧೀಕರಣ ಘಟಕಕ್ಕೆ ಹರಿಸಲಾಗುತ್ತದೆ. ಮೇಲೆ ಉಳಿದ ಕಲ್ಮಶವನ್ನು ಒಣಗಿಸಿ ಗಿಡಗಳಿಗೆ ಗೊಬ್ಬರವಾಗಿ ಬಳಸಲಾಗುತ್ತದೆ.

ಸಂಸ್ಕರಿಸಿದ ನೀರನ್ನು ಕ್ಯಾನ್‌ಗಳನ್ನು ತೊಳೆಯಲು, ರೆಫ್ರಿಜಿರೇಟರ್‌, ಶೀಥಲೀಕರಣಕ್ಕೆ, ಬಾಯ್ಲರ್‌ಗೆ, ನೆಲಹಾಸನ್ನು ತೊಳೆಯಲು, ಶೌಚಾಲಯಗಳಿಗೆ, ಘಟಕದ ಆವರಣದಲ್ಲಿನ ಹುಲ್ಲು ಹಾಸು, ಹೂವಿನ ಗಿಡಗಳಿಗೆ ಬಳಸಲಾಗುತ್ತದೆ. ನೀರಿನ ಮರುಬಳಕೆಯಿಂದ ದಿನಕ್ಕೆ 15 ರಿಂದ 20ಸಾವಿರ ಲೀಟರ್‌ ನೀರು ಉಳಿತಾಯವಾಗುತ್ತದೆ ಎಂದು ಶೀಥಲೀಕರಣದ ವ್ಯವಸ್ಥಾಪಕ ಅಶ್ವತ್ಥನಾರಾಯಣ ಹೇಳುತ್ತಾರೆ.
– ಎಂ.ರಾಮಕೃಷ್ಣಪ್ಪ

*
ಉಪಯೋಗಿಸಿದ ನೀರನ್ನು ಮರುಬಳಕೆ ಮಾಡಿಕೊಳ್ಳುವುದು ನೀರಿನ ಮಿತಬಳಕೆಗೆ ಅತ್ಯಂತ ಉಪಯುಕ್ತವಾಗಿದೆ. ಸರ್ಕಾರಿ ಸಂಸ್ಥೆಗಳು ಸೇರಿದಂತೆ ದೊಡ್ಡ ದೊಡ್ಡ ಸಂಸ್ಥೆಗಳು ನೀರಿನ ಸಂಸ್ಕರಣ ಘಟಕಗಳನ್ನು  ಸ್ಥಾಪಿಸಿಕೊಳ್ಳುವುದು ಕಡ್ಡಾಯವಾಗಬೇಕು.
-ಅಶ್ವತ್ಥನಾರಾಯಣಬಾಬು,
ನಿರ್ದೇಶಕ, ಕೋಚಿಮುಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT