ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧದ ಸೋಪುಗಳ ಪರಿಮಳ, ರೇಷ್ಮೆ ಸೀರೆಗಳು ಪಳಪಳ

ಮಾರ್ಚ್‌ 30ರ ವರೆಗೆ ‘ಚಿಕ್ಕಬಳ್ಳಾಪುರ ಸಂತೆ’, ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ
Last Updated 25 ಮಾರ್ಚ್ 2017, 5:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಲ್ಲಿ ಮೇಲಿನ ಮಹಡಿಯಿಂದ ತೂರಿ ಬರುತ್ತಿದ್ದ ಗಂಧದ ಪರಿಮಳ ದಾರಿ ಹೋಕರನ್ನು ಕ್ಷಣಕಾಲ ಮೂಗರಳಿಸಿ ಆಘ್ರಾಣಿಸುವಂತೆ ಪ್ರಚೋದಿಸುತ್ತಿತ್ತು. ಆ ಸ್ಥಳದಲ್ಲಿ ನಿಂತು ಕಣ್ಣು ಹೊರಳಿಸಿದವರ ದೃಷ್ಟಿಗೆ ನೆಲ ಮಹಡಿಯೊಳಗಿದ್ದ ಪಳಪಳ ಹೊಳೆಯುವ ರೇಷ್ಮೆ ಸೀರೆಗಳು ಹಬ್ಬವನ್ನುಂಟು ಮಾಡುತ್ತಿದ್ದವು.

‘ಯುಗಾದಿ’ ಹಬ್ಬದ ಪ್ರಯುಕ್ತ ನಗರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿರುವ ಸರ್ಕಾರದ ವಿವಿಧ ನಿಗಮ, ಮಂಡಳಿಗಳ ಉತ್ಪನ್ನಗಳ ಮಾರಾಟ ಮೇಳ ‘ಚಿಕ್ಕಬಳ್ಳಾಪುರ ಸಂತೆ’ಯ ಬಳಿ ಹೋದವರಿಗೆ ದಕ್ಕುವ ಅನುಭೂತಿ ಇದು. ಮೇಳಕ್ಕೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ಚಾಲನೆ ನೀಡಿದರು. ಈ ಮೇಳ ಮಾ. 30ರ ವರೆಗೆ ನಡೆಯಲಿದೆ.

ಸೋಪ್‌ ಮೇಳ: ಭವನದ ಮೊದಲ ಮಹಡಿಯಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ವತಿಯಿಂದ ಆಯೋಜಿಸಿರುವ ‘ಸೋಪ್‌ ಮೇಳ’ದಲ್ಲಿ 55 ಉತ್ಪನ್ನಗಳ ಪ್ರದರ್ಶನವಿದೆ.

ಇದರಲ್ಲಿ ಮೈಸೂರು ಸ್ಯಾಂಡಲ್‌ ಸೋಪ್‌, ಮೈಸೂರು ಸ್ಯಾಂಡಲ್‌ ಗೋಲ್ಡ್‌, ಹರ್ಬಲ್‌ ಸೋಪ್, ಬೇಬಿ ಸೋಪ್‌ ಮತ್ತು ಪೌಡರ್,  ಹ್ಯಾಂಡ್‌ವಾಷ್‌, ಕ್ಲಿನ್‌ ಆಯಿಲ್‌, ಉದಬತ್ತಿ ಮತ್ತು ಧೂಪ, ಸರ್ವ ಋತು ಸೋಪುಗಳ ಗಿಫ್ಟ್‌ ಪ್ಯಾಕ್‌, ಬಟ್ಟೆ ತೊಳೆಯುವ ಸೋಪ್ ಮತ್ತು ಪೌಡರ್‌, ಶ್ರೀಗಂಧದ ಎಣ್ಣೆ ಮಾರಾಟಕ್ಕೆ ಇಡಲಾಗಿದೆ.

‘ಜನಸಾಮಾನ್ಯರು ಬಳಸುವ ಮೈಸೂರು ಸ್ಯಾಂಡಲ್‌ ಸೋಪ್‌ನಿಂದ ವಿದೇಶಕ್ಕೆ ರಫ್ತು ಮಾಡುವ ಗರಿಷ್ಠ ಬೆಲೆಯ (₹ 810) ಮಿಲೇನಿಯಂ ಸೋಪ್‌ವರೆಗೆ ನಮ್ಮಲ್ಲಿ ಬಗೆ ಬಗೆಯ ಸೋಪ್‌ಗಳು ಲಭ್ಯ ಇವೆ.  ಶೇ 20ರಿಂದ 30ರ ವರೆಗೆ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದ್ದೇವೆ’ ಎಂದು ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿ ತಿಳಿಸಿದರು.

ಭವನದ ನೆಲ ಮಹಡಿಯಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವತಿಯಿಂದ ಮೈಸೂರು ರೇಷ್ಮೆ ಸೀರೆಗಳು, ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ಚರ್ಮದ ಉತ್ಪನ್ನಗಳು ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಕೈಮಗ್ಗದ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪರಿಶುದ್ಧವಾದ ರೇಷ್ಮೆಯ ಜರಿ ಹೊಂದಿರುವ ಮನಮೋಹಕ ಬಣ್ಣಗಳ ಸೀರೆಗಳು ನೋಡುಗರ ಮನಸೆಳೆಯುತ್ತವೆ. ಕನಿಷ್ಠ 13 ಸಾವಿರದಿಂದ ಗರಿಷ್ಠ ₹ 1.10 ಲಕ್ಷ ಬೆಲೆಯ ಸೀರೆಗಳು ಈ ಮಾರಾಟ ಮೇಳದಲ್ಲಿ ಲಭ್ಯ ಇವೆ. ಜತೆಗೆ ರೇಷ್ಮೆ  ಶರ್ಟ್‌, ಧೋತಿ, ಪಂಚೆಗಳು ಕೂಡ ದೊರೆಯುತ್ತವೆ. ಶೇ15 ರಿಂದ 25ರಷ್ಟು ರಿಯಾಯಿತಿ ದರದಲ್ಲಿ ಸೀರೆಗಳನ್ನು ಖರೀದಿಸಬಹುದು.

ಕಂತುಗಳಲ್ಲಿ ಕೂಡ ಖರೀದಿಸಬಹುದು!: ‘ಸರ್ಕಾರಿ ನೌಕರರು ಮೈಸೂರು ರೇಷ್ಮೆ ಸೀರೆಗಳನ್ನು 10 ಕಂತುಗಳ ಸಾಲ ಸೌಲಭ್ಯದಲ್ಲಿ ಖರೀದಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಖರೀದಿಸುವ ಸಮಯದಲ್ಲಿ ಒಂದು ಕಂತಿನ ಹಣ ಪಾವತಿಸಿದರೆ ಸಾಕು’ ಎಂದು ಮಾರುಕಟ್ಟೆ ಪ್ರತಿನಿಧಿ ರಾಮಚಂದ್ರ ತಿಳಿಸಿದರು.

ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ತೆರೆದಿರುವ ಮಳಿಗೆಯಲ್ಲಿ ಚರ್ಮದ ಬ್ಯಾಗ್, ಚಪ್ಪಲಿ, ಶೂ, ಬೆಲ್ಟ್, ಪರ್ಸ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಕೈಮಗ್ಗದ ಉತ್ಪನ್ನಗಳು ಕೂಡ ಲಭ್ಯ ಇವೆ. ಖರೀದಿಯ ಮೇಲೆ ಶೇ 20ರ ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಈ ಮೇಳವು ಪ್ರತಿ ದಿನ ಬೆಳಿಗ್ಗೆ10 ರಿಂದ ರಾತ್ರಿ 8ರ ವರೆಗೆ ನಡೆಯಲಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕೈಮಗ್ಗ ಇಲಾಖೆಯ ಅಧಿಕಾರಿ ಜಗದೀಶ್ ಮತ್ತು ಮುಖಂಡ ಆನಂದ್‌ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

*
ಈ ಮೇಳದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಜನಸಾಮಾನ್ಯರು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ನಾಗರಿಕರು ಮೇಳದ ಸದುಪಯೋಗಪಡಿಸಿಕೊಳ್ಳಬೇಕು.
-ದೀಪ್ತಿ ಕಾನಡೆ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT