ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಹೀಗಿರಲಿ ಸಾಕುಪ್ರಾಣಿಗಳ ಆರೈಕೆ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸುಡುಸುಡು ಬೇಸಿಗೆ ಮನುಷ್ಯರ ಮೇಲಷ್ಟೇ ಅಲ್ಲ ಸಾಕುಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತದೆ. ಬಿಸಿಗಾಳಿ, ಬಿಸಿಲಿನ ತಾಪದಿಂದ ಸಾಕುಪ್ರಾಣಿಗಳು ಅನೇಕ ರೀತಿಯ ತೊಂದರೆಗಳಿಗೆ ಒಳಗಾಗುವುದುಂಟು. ಈ ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಆರೈಕೆ ಹೇಗಿರಬೇಕೆಂಬುದಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ.

ಬೇಸಿಗೆಯಲ್ಲಿ ಮನುಷ್ಯ ತನ್ನ ದೇಹದ ತಾಪವನ್ನು ಬೆವರಿನ ಮೂಲಕ ಹೊರಸೂಸುತ್ತಾನೆ. ಆದರೆ, ಪ್ರಾಣಿಗಳ ಮೈಮೇಲೆ ಚರ್ಮದ ಹೊದಿಕೆ ದಪ್ಪ ಇರುವುದರಿಂದ ಮತ್ತು ಕೂದಲು ಆವರಿಸಿರುವುದರಿಂದ ಅವು ಮನುಷ್ಯನಂತೆ ಬೆವರುವುದಿಲ್ಲ.

ಬಿಸಿಲಿನ ತಾಪಕ್ಕೆ ಸಿಲುಕಿದ ಸಾಕುಪ್ರಾಣಿಗಳು ನಾಲಗೆಯನ್ನು ಹೊರಗೆ ಚಾಚಿ ತೇಗುತ್ತವೆ. ಇದು ಪ್ರಾಣಿಗಳು ಆಯಾಸದಿಂದ ಬಳಲುತ್ತಿರುವ ಸೂಚನೆ ಎನ್ನುತ್ತಾರೆ ಪಶುವೈದ್ಯ ಡಾ.ರಮೇಶ್ ಬಿ.ಕೆ.

ಮನುಷ್ಯರು ಹೇಗೆ ಬೇಸಿಗೆಯಲ್ಲಿ ಸುರಕ್ಷತೆ ಹೊಂದಲು ಬಯಸುತ್ತಾರೋ ನಾಯಿ, ಬೆಕ್ಕು ಸೇರಿದಂತೆ ಇತರ ಸಾಕು ಪ್ರಾಣಿಗಳು ಕೂಡಾ ಸುರಕ್ಷಿತವಾಗಿರಲು ಬಯಸುತ್ತವೆ. ಬಿಸಿಲಿನ ತಾಪ ತಡೆಯಲಾರದೆ ನಾಯಿಗಳು ಕಾರಿನ ಕೆಳಗೋ, ನೆರಳು ಇರುವ ಅಥವಾ ತಂಪಿನ ಜಾಗದಲ್ಲೋ ಮಲಗಿರುವುದು ಸಾಮಾನ್ಯ.

ಬೇಸಿಗೆಯಲ್ಲಿ ಸಾಕುಪ್ರಾಣಿಗಳಿಗೆ ಜಾಸ್ತಿ ಒಣ ಆಹಾರವನ್ನು ಕೊಡಬಾರದು. ಕೊಟ್ಟರೂ ಆಹಾರದ ಮೂರು ಪಟ್ಟಿನಷ್ಟು ಹೆಚ್ಚು ನೀರು ಕೊಡಬೇಕು. ಶುದ್ಧವಾದ ಕುಡಿಯುವ ನೀರನ್ನು ಒಂದೇ ಬಾರಿ ನೀಡದೆ ಆಗಾಗ ಕೊಡಬೇಕು. ಬಿಸಿಲಿನ ತಾಪ ಹೆಚ್ಚಿದ್ದರೆ, ಐಸ್ ಕ್ಯೂಬ್  ಹಾಕಿದ ನೀರು ಕೊಡಬಹುದು. ಆದರೆ, ಅದು ತುಂಬಾ ತಂಪಾಗಿರಬಹುದು.

ಪ್ರಾಣಿಗಳು ಊಟ ಮಾಡುವ ಬೌಲ್‌, ತಟ್ಟೆ ಇತ್ಯಾದಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಬಿಸಿಲಿನಲ್ಲಿ  ಪ್ರಾಣಿಗಳು ಹೆಚ್ಚು ತಿರುಗಾಡದಂತೆ ನಿಗಾ ವಹಿಸಬೇಕು. ಕೆಲ ಪ್ರಾಣಿಗಳು ಬಿಸಿಲಿನ ತಾಪ ತಾಳಲಾರದೇ ಸ್ಟ್ರೋಕ್‌ಗೆ ಒಳಗಾಗುವ ಸಾಧ್ಯತೆ ಇರುತ್ತದೆ.

ಬೇಸಿಗೆಯಲ್ಲಿ ನಾಯಿಗಳಿಗೆ ಸ್ನಾನ  ಮಾಡಿಸುವಾಗ ಸೋಪು ಮತ್ತು ಶ್ಯಾಂಪು ಬಳಸದಿರುವುದು ಒಳಿತು. ಕೆಲವೊಮ್ಮೆ ಸೋಪು, ಶ್ಯಾಂಪು ಬಳಕೆಯಿಂದ ದೇಹಕ್ಕೆ ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ. ಹದಿನೈದು ದಿನಗಳಿಗೊಮ್ಮೆ ಬರೀ ನೀರಿನಲ್ಲಿ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸಿದ ಬಳಿಕ ಪ್ರಾಣಿಗಳ ದೇಹವನ್ನು ಸರಿಯಾಗಿ ಒಣಗಿಸಬೇಕು. ಕೂದಲು ಹಸಿಯಾಗಿ ಇರದಂತೆ ನೋಡಿಕೊಳ್ಳಬೇಕು.

ಮೈತುಂಬಾ ಕೂದಲಿರುವ ನಾಯಿಗಳಿಗೆ ಕೂದಲು ಟ್ರಿಮ್ ಮಾಡಿಸುವುದು ಅಥವಾ ಕತ್ತರಿಸುವುದು ಒಳಿತು. ಇದರಿಂದ ಅವುಗಳಿಗೆ ಹೆಚ್ಚು ಸೆಕೆಯಾಗದಂತೆ ತಡೆಯಬಹುದು. ಕೂದಲನ್ನು ಆಗಾಗ ಬಾಚಬಹುದು.  ಪ್ರಾಣಿಗಳ ವಾಸಸ್ಥಳದಲ್ಲಿ ಗಾಳಿ–ಬೆಳಕು ಧಾರಾಳವಾಗಿರಬೇಕು. ವಯಸ್ಸಾದ ಇಲ್ಲವೇ ಕಾಯಿಲೆಪೀಡಿತ ಪ್ರಾಣಿಗಳಿಗೆ ಜೀರ್ಣವಾಗುವಂಥ ಆಹಾರ ನೀಡಬೇಕು. ಧಾರಾಳವಾಗಿ ನೀರು ಕೊಡಬೇಕು.

ಬೇಸಿಗೆಯಲ್ಲಿ ಪ್ರಾಣಿಗಳಿಗೆ ಕಾಡುವ ಮತ್ತೊಂದು ಸಮಸ್ಯೆಯೆಂದರೆ ಉಣ್ಣೆ, ಚಿಗಟದ ಹಾವಳಿ. ಪ್ರಾಣಿಗಳು ವಾಸಿಸುವ, ಮಲಗುವ ಸ್ಥಳ ಸ್ವಚ್ಛವಾಗಿಲ್ಲದಿದ್ದಲ್ಲಿ ಹಾಗೂ ಪ್ರಾಣಿಗಳ ದೇಹದಲ್ಲಿ ಸ್ವಚ್ಛತೆ ಕಾಪಾಡದಿದ್ದಲ್ಲಿ ಉಣ್ಣೆ ಮತ್ತು ಚಿಗಟದ ಹಾವಳಿ ಉಂಟಾಗುತ್ತದೆ.

ಕಾರಿನ ಕೆಳಭಾಗದಲ್ಲಿ ಸಾಕುಪ್ರಾಣಿಗಳು ಮಲಗಿದಾಗ   ಆ್ಯಂಟಿಫ್ರೀಜರ್‌ನ್ನು ತಿನ್ನದಂತೆ  ಎಚ್ಚರಿಕೆ ವಹಿಸಬೇಕು. ರುಚಿಯಲ್ಲಿ ಸಿಹಿಯಾಗಿರುವ  ಆ್ಯಂಟಿ ಫ್ರೀಜರ್ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT