ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯ ಮಜಾದೊಂದಿಗಿರಲಿ ಅಧ್ಯಯನ

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಕ್ಕಳೇ, ಇನ್ನೇನು ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆ ರಜಾ ಆರಂಭವಾಗುತ್ತದೆ.  ಎರಡು ತಿಂಗಳ ರಜಾದಲ್ಲಿ ಹೋಂವರ್ಕ್, ಟ್ಯೂಷನ್‌ಗಳ ಚಿಂತೆಯಿಲ್ಲ. ಬೆಳಿಗ್ಗೆ ಬೇಗ ಎದ್ದು ಶಾಲೆಗೆ ಹೊರಡುವ ಅವರಸವಿಲ್ಲ. ಎದ್ದು ತಿಂಡಿ ತಿಂದು ಹೊರಟರೆ ಸಂಜೆ ಮನೆ ತಲುಪಿದರೂ ಕೇಳುವವರಿಲ್ಲ. ಅಲ್ಲವೆ? ಇಷ್ಟು ದಿನಗಳ ಪರೀಕ್ಷಾ ಒತ್ತಡವನ್ನು ನಿವಾರಿಸಲು ಒಂದಿಷ್ಟು ವಿರಾಮದ ಅವಶ್ಯಕತೆ ಇದೆ ಎಂದೆನಿಸುತ್ತದೆ.

ಇಂದಿನ ಶಿಕ್ಷಣಪದ್ಧತಿ ನಮ್ಮನ್ನು ಒತ್ತಡದಲ್ಲಿ ಸಿಲುಕುವಂತೆ ಮಾಡಿದೆ. ಆದರೆ ಈ ಸಮಯವನ್ನು ಬರೀ ರಜೆಯ ಮಜಾ ಅನುಭವಿಸಲಷ್ಟೇ ಮೀಸಲಿಡಬಾರದು. ಸಮಯದ ಸದುಪಯೋಗ ಆಗಬೇಕು ಗೆಳೆಯರೆ! ವಿರಾಮದ ಜೀವನ ನಮ್ಮನ್ನು ನಮಗೇ ಗೊತ್ತಿಲ್ಲದಂತೆ ಸೋಮಾರಿಗಳನ್ನಾಗಿಸಿಬಿಡುತ್ತದೆ. ನಮ್ಮ ಮುಂದೆ ಬಹುದೊಡ್ಡ ಗುರಿ ಇದೆ.

ರಜೆಯ ನಡುವೆ ನಮ್ಮ ಅಮೂಲ್ಯ ಸಮಯವನ್ನು ಹಾಳುಮಾಡಬಾರದು. ನಮ್ಮ ಮುಂದೆ ದೇಶದ ಭವಿಷ್ಯವಿದೆ. ನಮಗಾಗಿ ಕಷ್ಟಪಡುವ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವ ಹೊಣೆ ನಮ್ಮ ಮೇಲಿದೆ.   ಹಾಗಾಗಿ ನಮ್ಮ ಭವಿಷ್ಯದತ್ತ ದೃಷ್ಟಿ ಹರಿಸುವುದು ಅಷ್ಟೇ ಮುಖ್ಯ.

ಬೇಸಿಗೆ ರಜೆ ಆರಂಭವಾಯಿತೆಂದರೆ ಸಾಕು ಶಿಬಿರಗಳು ಆರಂಭವಾಗುತ್ತವೆ. ಅನೇಕರು ಬೇಸಿಗೆ ಶಿಬಿರಗಳಿಗೆ ಹೋಗುತ್ತಾರೆ.  ಇದು ಒಳ್ಳೆಯದೇ. ಆದರೆ, ಇಂತಹ ಶಿಬಿರಗಳು ತಮ್ಮ ಮೂಲ ಉದ್ದೇಶವನ್ನು ಮರೆತು ಹಣ ಮಾಡುವ ದಂಧೆಗೆ ಇಳಿದಿವೆ. ಹಾಗಾಗಿ, ತುಂಬ ಜಾಗರೂಕರಾಗಿ ನಾವು ಹೋಗಬೇಕಾದ ಶಿಬಿರವನ್ನು ಆಯ್ಕೆ ಮಾಡಿಕೊಳ್ಳಬೇಕು.

ಶಿಬಿರದ ಆಯೋಜಕರು ಯಾರು? ಅವರ ವಿದ್ಯಾರ್ಹತೆ, ಅನುಭವ ಎಷ್ಟು? ಶಿಬಿರದಲ್ಲಿನ ಸಂಪನ್ಮೂಲ ವ್ಯಕ್ತಿಗಳು ಯಾರು ಯಾರು? ಕಾರ್ಯಕ್ರಮಗಳೇನು? ಎಂಬ ಪೂರ್ತಿ ವಿವರಗಳನ್ನು ತಿಳಿದು ಹೋಗುವುದು ಒಳ್ಳೆಯದು. ನೀವು ಶಾಲೆಗಳಲ್ಲಿ ಕಲಿಯುವ ವಿಷಯಗಳ ಶಿಬಿರಕ್ಕಿಂತ ವಿಭಿನ್ನವಾದ ಕಲಾಶಿಬಿರಗಳೋ, ನಾಟಕ, ನೃತ್ಯ, ಅಭಿನಯ ಇಂತಹವನ್ನು ಆರಿಸಿಕೊಳ್ಳಿ ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಸದೊಂದು ಆಯಾಮವನ್ನು ನೀಡುತ್ತದೆ.

ಯಾರಿಗೆ ಗೊತ್ತು ಮುಂದೆ ಅದೇ ನಿಮ್ಮ ವೃತ್ತಿಯೋ ಪ್ರವೃತ್ತಿಯೋ ಆಗಿಬಿಡಬಹುದು. ನಿಮಗೇನಾದರೂ ಅಜ್ಜಿಮನೆಗೆ ಹೋಗುವಂತಹ ಅವಕಾಶವಿದ್ದರೆ ಖಂಡಿತ ಬಿಡಬೇಡಿ. ನಿಮ್ಮ ಭಾವಕೋಶ ಬೆಳವಣಿಗೆಗೆ ಅದೊಂದು ಅಪೂರ್ವ ಅವಕಾಶ.

ಇವೆಲ್ಲದರ ಜೊತೆಗೆ ಇನ್ನೂ ಕೆಲವು ಕುತೂಹಲಕಾರಿ ಕೆಲಸಗಳಲ್ಲಿ ತೊಡಗಬಹುದು. ಅಂಥವುಗಳಲ್ಲಿ ಅತಿ ಕುತೂಹಲಕಾರಿಯಾದ ಕೆಲಸವೆಂದರೆ ಕನಸುಗಳನ್ನು ಕಟ್ಟಿಕೊಳ್ಳುವುದು. ಹೌದು! ನೀವು ದೃಢ ಮನಸ್ಸಿನಿಂದ ಕನಸುಗಳನ್ನು ಕಟ್ಟಿಕೊಂಡರೆ ಅವನ್ನು ನನಸಾಗಿಸುವ ರೆಕ್ಕೆಗಳು ತಾನೇ ತಾನಾಗಿ ಮೂಡುತ್ತವೆ. ಕನಸುಗಳ ಪಟ್ಟಿ ಮಾಡಿ ಅವನ್ನು ನನಸು ಮಾಡಿಕೊಂಡ ಸಾವಿರಾರು ಜನ ನಮ್ಮೊಂದಿಗಿದ್ದಾರೆ.

ಹಾಗೆಯೇ, ನೀವು ಪ್ರೌಢಶಾಲೆ ಅಥವಾ ಪದವಿಪೂರ್ವ ವಿದ್ಯಾರ್ಥಿಗಳಾಗಿದ್ದರೆ ನಿಮ್ಮ ಜೀವನದ ಗುರಿಯ ಕುರಿತು ಚೆನ್ನಾಗಿ ಯೋಚಿಸಿ ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲ. ಮುಂದೆ ನಿಮ್ಮ ಕಣ್ಣ ಮುಂದೆ ನಿಮ್ಮ ಗುರಿಯಲ್ಲದೆ ಬೇರೇನು ಕಾಣದು. ಆಗ ನಿಮ್ಮ ಕಣ್ಣಿಗೆ ಕಾಣಿಸುವುದೆಲ್ಲವೂ ನಿಮ್ಮ ಗುರಿಸಾಧನೆಯ ಸಾಧಕವಾಗಿ  ಕಾಣುತ್ತದೆ.

ಕನಸು, ಗುರಿಗಳನ್ನು ನಿರ್ಧರಿಸಿಕೊಂಡ ಖುಷಿಯನ್ನು ಅನುಭವಿಸುತ್ತಲೇ ನೀವು ಇನ್ನೊಂದು ಕೆಲಸವನ್ನು ಮಾಡಬೇಕು. ಅದೆಂದರೆ ಆ ಕನಸನ್ನು ನನಸಾಗಿಸುವ ಪರಿಯ ಕುರಿತ ಚಿಂತನೆ.  ನಾವು ಕಂಡ ಕನಸೆಲ್ಲವೂ ನನಸಾಗಬೇಕೆಂದೇನು ಇಲ್ಲ. ಕನಸನ್ನು ನನಸಾಗಿಸಿಕೊಳ್ಳಲು ಸೂಕ್ತ ತಯಾರಿಯೂ ನಡೆಸಬೇಕು. ಯೋಜಿತ ರೀತಿಯಲ್ಲಿ ಕೆಲಸ ಮಾಡುವುದನ್ನು ಕಲಿಯಬೇಕು.

ದಿನದಲ್ಲಿ ನಿರಂತರವಾಗಿ ನಾಲ್ಕರಿಂದ ಹತ್ತು ಗಂಟೆ ಕೆಲಸ ಮಾಡುವ ಕ್ಷಮತೆ ನಮಗೆ ಬೇಕು. ಹಾಗೆಯೇ ಯಾವಾಗ ಯಾವ ಕೆಲಸ ಮಾಡಬೇಕೆಂಬ ವಿಚಕ್ಷಣೆ ಬಹಳ ಮುಖ್ಯ. ಇವನ್ನು ತಿಳಿಸಿಕೊಡುವ ಅನೇಕ ಪುಸ್ತಕಗಳಿವೆ. ಸ್ಟೀಫನ್ ಕೋವೆಯವರ ‘ದಿ ಸೆವೆನ್‍ ಹ್ಯಾಬಿಟ್ಸ್ ಆಫ್ ಹೈಲಿ ಎಫೆಕ್ಟಿವ್‍ ಪೀಪಲ್’ ಎಂಬ  ಪುಸ್ತಕ ಇದನ್ನು ನಿಷ್ಠೆಯಿಂದ ನಿಯಮಿತವಾಗಿ ಪೂರ್ತಿಯಾಗಿ ಓದಿರಿ.

ಆ ಪುಸ್ತಕ ನಿಮ್ಮಲ್ಲಿ ಹೊಸದೊಂದು ಜಗತ್ತು ತೆರೆದುಕೊಳ್ಳುವಂತೆ ಮಾಡುತ್ತದೆ. ಹಾಗೆಯೇ ರಾಮಕೃಷ್ಣಾಶ್ರಮ ಹಾಗೂ ಇತರ  ಪ್ರಖ್ಯಾತರು ಬರೆದಿರುವ ವ್ಯಕ್ತಿತ್ವವಿಕಸನದ ಪುಸ್ತಕಗಳನ್ನು ಓದಿರಿ. ಅರೆ! ಯಶಸ್ವಿಯಾಗುವುದು ಇಷ್ಟು ಸುಲಭವೇ ಎನಿಸುತ್ತದೆ. ಆದರೆ ಕೋಟಿಗಟ್ಟಲೆ ಪ್ರತಿಗಳು ಖರ್ಚಾಗಿದ್ದರೂ ಆ ಸಂಖ್ಯೆಯಲ್ಲಿ ಯಶಸ್ವಿ ಮಂದಿ ಸಿಗುವುದು ಕಡಿಮೆ.

ಕಾರಣ ಇಷ್ಟೇ. ಓದಿಲ್ಲ, ಇಲ್ಲವೇ ಓದಿದ್ದಾರೆ, ಅನುಷ್ಠಾನ ನಾಸ್ತಿ ಅಷ್ಟೆ! ನೀವು ಹಾಗಾಗಬಾರದು. ಆ ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡು ನಮಗೆ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಿ.

ಒಂದು ಟೈಂ ಟೇಬಲ್‍ ತಯಾರಿಸಿ ಹಾಗೆಯೇ ಶುರುಮಾಡಿ ಬಿಡಿ. ಸಣ್ಣಪುಟ್ಟ ತೊಂದರೆ ಅಲ್ಲ, ಎಂಥ ದೊಡ್ಡ ತೊಂದರೆ ಬಂದರು ಅಲ್ಲಾಡುವವನು ನಾನಲ್ಲ ಎಂದು ತೋರಿಸಿ, ಅಷ್ಟು ಸಾಕು. ಯಶಸ್ವೀ ಜೀವನ ನಿಮ್ಮದಾಗುತ್ತದೆ. ನಿರಂತರ ಅಧ್ಯಯನ, ಯೋಜನೆ ಅನುಷ್ಠಾನ ಇದೇ ಯಶಸ್ಸಿನ ನೀಲಿನಕ್ಷೆ. ಮಾಡದೇ ಇದ್ದರೆ ಗೊತ್ತಿದ್ದು ಏನು ಪ್ರಯೋಜನ. ‘ಶಿವಕೊಟ್ಟ ಜೋಳಿಗೆ ಎಂದು ಗೋಡೆಗೆ ತೂಗುಹಾಕಿದರೆ ಧಾನ್ಯ ಬಂದು ಬೀಳುವುದೇ’.

ಈ ರಜೆಯ ಸದುಪಯೋಗವನ್ನು ನೀವೂ ಹೀಗೂ ಮಾಡಬಹುದು. ನಿಮ್ಮೂರಿನಲ್ಲಿ  ಗ್ರಂಥಾಲಯವಿದ್ದರೇ ನೀವು ದಿನದಲ್ಲಿ ಒಂದು ಗಂಟೆ ಗ್ರಂಥಾಲಯದಲ್ಲಿ ಕಳೆಯಿರಿ. ಸರ್ಕಾರದ ಗ್ರಂಥಾಲಯ ಕೆಲಸಕ್ಕೆ ಬಾರದು ಎಂಬ ಮಾತುಗಳಿಗೆ ತಲೆಕೊಡಬೇಡಿ. ಗ್ರಂಥಾಲಯದಲ್ಲಿ ಏನೆಲ್ಲಾ ಪುಸ್ತಕಗಳಿವೆ ನೋಡಿರಿ. ಆ ಪುಸ್ತಕಗಳಲ್ಲಿ ನಿಮಗೆ ಬೇಕಾದ ಪುಸ್ತಕ ಯಾವುದು ನೋಡಿ. ತೀರಾ ಬೇಕೆನಿಸಿದರೆ ಟಿಪ್ಪಣಿ ಮಾಡಿಕೊಳ್ಳಿ.

ನಮ್ಮ ಗ್ರಂಥಾಲಯಗಳು ಅತಿ ಶ್ರೇಷ್ಠವಲ್ಲದಿದ್ದರೂ ಸಾಕಷ್ಟು ಚೆನ್ನಾಗಿವೆ. ಅಲ್ಲಿ ನಾವು ನೋಡದಿರುವ ಅನೇಕಾನೇಕ ನಿಯತಕಾಲಿಕಗಳಿರುತ್ತವೆ. ಸಂಶೋಧನಾ ಗ್ರಂಥಗಳು, ಸಾಮಾನ್ಯಜ್ಞಾನದ ಪುಸ್ತಕಗಳು ಇರುತ್ತವೆ. ಅಲ್ಲಿನ ಗ್ರಂಥಪಾಲಕರ ಪರಿಚಯ ಮಾಡಿಕೊಳ್ಳಿ. ನಿಮ್ಮ ಕನಸು-ಗುರಿ ಹೇಳಿಕೊಳ್ಳಿ.

ಅವರಿಂದ ನಿಮಗೆ ಮಾರ್ಗದರ್ಶನ ಸಿಗುತ್ತದೆ. ವಿನಯ-ಗೌರವಗಳಿಂದ ಮಾತನಾಡಿರಿ. ಇದರಿಂದ ಅವರು ನಿಮ್ಮನ್ನು ಪ್ರೀತಿಯಿಂದ ನೋಡುತ್ತಾರೆ. ಸಂಪರ್ಕ ಬೆಳೆಸಿಕೊಳ್ಳಿ. ನಮ್ಮ ಗ್ರಂಥಾಲಯಗಳಲ್ಲಿ ವಿಶ್ವದ ಯುದ್ಧಗಳು, ತಂತ್ರಜ್ಞಾನ, ಗಣಿತ ವಿಜ್ಞಾನ ಕುರಿತ ಅಪೂರ್ವ ಪುಸ್ತಕಗಳಿವೆ.

ಅವು ನಿಮ್ಮನ್ನು ಅಧ್ಯಯನಶೀಲರನ್ನಾಗಿಸುತ್ತದೆ. ಆದರೊಂದಿಗೆ ಒಂದಷ್ಟು ಜನರ ಆತ್ಮಕಥೆಗಳನ್ನು ಓದಿ. ಇದರಿಂದ ಸಾವಿರಾರು ವರ್ಷಗಳ ಅನುಭವ ದಕ್ಕುತ್ತದೆ.

ನೀವು ಈಗಾಗಲೇ ಅನೇಕ ಸಾಹಿತಿಗಳನ್ನು ಕುರಿತು ಓದಿರುತ್ತೀರಿ. ವಿವೇಕಾನಂದರಂಥಹ ವ್ಯಕ್ತಿಗಳ ಕುರಿತು ಓದಿರುತ್ತೀರಿ. ಅವರ ಸಮಗ್ರ ಸಾಹಿತ್ಯ ಓದುವ ಕನಸ್ಸನ್ನೇಕೆ ಕಟ್ಟಿಕೊಳ್ಳಬಾರದು. ಕುವೆಂಪು, ಅಂಬೇಡ್ಕರ್, ಮಾಸ್ತಿ, ಅನಕೃ, ಕಂಬಾರ ಹಾಗೆಯೇ ಇಂಗ್ಲಿಷ್‍ ಲೇಖಕರ ಸಮಗ್ರ ಸಾಹಿತ್ಯ ಓದುವ ಪಣ ತೊಡಿ.  ಇದಕ್ಕೆ ನಿಮಗೆ ಐದು ವರ್ಷಗಳಾದರೂ ಪರವಾಗಿಲ್ಲ, ಕೊನೆಗೆ ನೀವು ಬೇರೆಯೇ ವ್ಯಕ್ತಿಗಳಾಗುತ್ತೀರಿ. ಅದರ ಆರಂಭ ಈ ಬೇಸಿಗೆ ರಜೆಯಲ್ಲಾಗಲಿ.

ನೀವು ವಯಸ್ಸಿನಲ್ಲಿ ಚಿಕ್ಕವರೇ ಆದರು ಇತರರು ನಿಮ್ಮನ್ನು ಕುರಿತು ಗೌರವಭಾವ ಬೆಳೆಸಿಕೊಳ್ಳುವಂತೆ ನಿಮ್ಮ ನಡವಳಿಕೆಯಿರಬೇಕು. ‘ಇವನನ್ನು ನಂಬಬಹುದು’ ಎಂಬ  ಭಾವನೆ ಅವರಲ್ಲಿ ಮೂಡುವಂತೆ ನಿಮ್ಮ ನಡವಳಿಕೆಯಿರಬೇಕು. ಇದೇ ಒಂದಕ್ಕೆ ಒಂದು ಸೇರಿದರೆ ಎರಡರ ಬದಲು ಹನ್ನೊಂದಾಗುವ ಲೆಕ್ಕದ ತಂತ್ರ.

ಹಾಗೆಯೇ, ನೀವು ನಿಮ್ಮ ಊರಿನ ಬಗ್ಗೆ ಅರಿಯುವ ಪ್ರಯತ್ನ ಮಾಡಿ. ಗ್ರಂಥಾಲಯ, ಅಂತರ್ಜಾಲ ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮೂರಿನ ಇತಿಹಾಸ, ಕಲೆ, ಸಂಸ್ಕೃತಿಯನ್ನು ತಿಳಿಯಿರಿ. ಸರ್ಕಾರದ ಗೆಜೆಟಿಯರ್‍ ಇಲಾಖೆ ಎಲ್ಲಾ ಜಿಲ್ಲೆಗಳ ಕುರಿತ  ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳನ್ನು ನೋಡಿ ಪಟ್ಟಿಮಾಡಿಕೊಳ್ಳಿರಿ. ನಿಮ್ಮಲ್ಲಿ ಸಂಗ್ರಹಾಲಯಗಳಿದ್ದರೆ ಭೇಟಿ ಮಾಡಿ ಅಧ್ಯಯನ ಮಾಡಿ ಟಿಪ್ಪಣಿ ಮಾಡಿಕೊಳ್ಳಿ.

ನಿಮ್ಮೂರಿನ ಇತಿಹಾಸದ ಮೂಲವನ್ನು ಹುಡುಕುವ ಪ್ರಯತ್ನ ಮಾಡಿರಿ. ನೆಲ ಪರಿಸರ ಪ್ರೇಕ್ಷಣೀಯ ಸ್ಥಳಗಳು ಇವುಗಳನ್ನು  ಕುರಿತಾಗಿ ತಿಳಿಯಿರಿ. ಹೆಮ್ಮೆ ಬೆಳೆಸಿಕೊಳ್ಳಿರಿ. ಅವುಗಳನ್ನು ಸಂರಕ್ಷಿಸುವ ಹಾಗೂ ಆ ಕುರಿತು ಬರೆಯುವ ಪ್ರಯತ್ನ ಮಾಡಿರಿ.

ಇವೆಲ್ಲವೂ ಸ್ವ–ಅಧ್ಯಯನಕ್ಕೆ ಇಂಬುಕೊಡುವಂಥವು. ನಾವೇ ಅಧ್ಯಯನ ಮಾಡುವುದನ್ನು ಸ್ವಾಧ್ಯಾಯ ಎನ್ನುತ್ತಾರೆ. ಇದರಲ್ಲಿ ನೀವೆಷ್ಟು ಪರಿಣತಿಯನ್ನು ಸಾಧಿಸುತ್ತೀರೋ ಅಷ್ಟು ಬೆಳೆಯುತ್ತೀರಿ. ಇದರ ಮಹತ್ವ ನಿಮಗೆ ಈಗ ತಿಳಿಯದಿರಬಹುದು, ಆದರೆ ಈ ಅಭ್ಯಾಸ ಮಾಡಿಕೊಂಡಿದ್ದಕ್ಕೆ ನಿಮಗೆ ನಿಮ್ಮ ಬಗ್ಗೆಯೇ ಹೆಮ್ಮೆಯೆನಿಸುತ್ತದೆ. ಯಾವ ಕಾಲದಲ್ಲಿಯೂ ನಮ್ಮ ಬಗ್ಗೆ ನಮಗೆ ಹೆಮ್ಮೆ ಮೂಡಿದರೇ ಅದೇ ಸಾರ್ಥಕ ಜೀವನ. ಅಂಥ ಸಾರ್ಥಕ ಜೀವನ ಶಿಲ್ಪಕ್ಕೆ ಈ ಬೇಸಿಗೆ ರಜೆ ಬುನಾದಿಯಾಗಲಿ. 

ಹೀಗೆಲ್ಲಾ ಕನಸು ಕಾಣಿ
* ಜಗತ್ತಿನ ನೂರು ದೇಶಗಳನ್ನು ನಾನು ನೋಡಿಬರುತ್ತೇನೆ.
* ಎಲ್ಲ ಸಾಗರಗಳನ್ನು ನೋಡುತ್ತೇನೆ, ಅವುಗಳ ಮೇಲೆ ಸಂಚರಿಸುತ್ತೇನೆ.
* ಜಗತ್ತಿನ ಅತಿದೊಡ್ಡ ದೊಡ್ಡ ಸರೋವರಗಳನ್ನು ಈಜುತ್ತೇನೆ.
* ದೊಡ್ಡ ವ್ಯಕ್ತಿಗಳನ್ನು ಭೇಟಿ ಮಾಡುತ್ತೇನೆ.
* ಹತ್ತಾರು ಭಾಷೆ – ಸಂಸ್ಕೃತಿಯ ಜನರನ್ನು ನೋಡುತ್ತೇನೆ.
* ಅತಿದೊಡ್ಡ ಬೆಟ್ಟಗಳನ್ನು ಹತ್ತುತ್ತೇನೆ. 
* ಒಲಂಪಿಕ್ಸ್‌ನಲ್ಲಿ ಭಾಗವಹಿಸಿ ಗೆಲ್ಲುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT