ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳಿರುವೆಗೆ ಕೊಕ್ಕರೆ ಪುಷ್ಪದ ಹನಿ ಕುಡಿಯುವಾಸೆ...

Last Updated 26 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹಕ್ಕಿಗಳ ಪ್ಯಾರಡೈಸ್’ ಎಂಬ Strelitzia reginae ಎಂದು ಬೊಟಾನಿಕಲ್ ಹೆಸರಿರುವ ಈ ಆಕರ್ಷಕ ಹೂವು ಮೂಲತಃ  ದಕ್ಷಿಣ ಆಫ್ರಿಕಾದ್ದು. ಈಗ ಪುಷ್ಪಾಲಂಕಾರಕ್ಕೆ ಅತ್ಯಂತ ಬೇಡಿಕೆಯುಳ್ಳದ್ದಾಗಿದೆ. ಅಷ್ಟೇ ಆಗಿದ್ದರೆ ಈ ಅಂಕಣದಲ್ಲಿ ಅದಕ್ಕೇನು ಕೆಲಸ ಎಂದು ಹುಬ್ಬೇರಿಸುತ್ತಿದ್ದಿರಿ. 

ಶಸ್ತ್ರ ಚಿಕಿತ್ಸೆಯ ಹೊಲಿಗೆಗೆ ಅವಶ್ಯಕವಾದ ಹೀಲಿಂಗ್ ಗುಣವುಳ್ಳ ದ್ರವ ತಯಾರಿಸುವಲ್ಲಿ ಆಸ್ಟ್ರೇಲಿಯಾದಲ್ಲಿ Bull Ants (Myrmecia Ants) ಎಂಬ ಇರುವೆ ತಳಿಯ ಬಾಯಿಂದ ಚುಚ್ಚುವ ವಿಷ ಬೇಕಂತೆ! ಈ ‘ಗೂಳಿ ಇರುವೆ’ಗೆ ಪರಿಮಳದ ನೀರ ಹನಿಗಳು ಪ್ರಿಯ. 

ನಮ್ಮ ಲಾಲ್‌ಬಾಗ್‌ನಲ್ಲಿ  ಇತ್ತೀಚೆಗೆ ಸೂಕ್ಷ್ಮ ಜಂತುಗಳ  ಶೂಟಿಂಗ್‌ಗಾಗಿ ಮುಂಜಾನೆ ಸುತ್ತುತ್ತಿದ್ದಾಗ ಇವೆರಡನ್ನೂ ಒಟ್ಟಿಗೇ ಗುರುತಿಸಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ, ಪರಿಚಿತ ಛಾಯಾಚಿತ್ರಕಾರ ಎಚ್.ಸತೀಶ್.

ಈ ಹೂವಿನ ಬಣ್ಣಬಣ್ಣದ ಎಸಳುಗಳ ಮೇಲೆ ಬಿದ್ದು, ಹೂವಿನ ಮೋಹಕ ಪರಿಮಳದ ಕಂಪನ್ನು ಪಡೆದ ಮುಂಜಾನೆಯ ಮಂಜಿನ ಹನಿಗಳನ್ನು ಸವಿಯಲು ಈ  Bull Ants ಹಸಿರು ಗಿಡವೇರಿ ಹೂವಿನ ಬುಡಕ್ಕೆ ಧಾವಿಸಿ ಮುತ್ತಿಕ್ಕುತ್ತವೆ ಎಂದು ಸತೀಶ್ ಬಲ್ಲವರಾಗಿದ್ದರು.

ಅಂತೆಯೇ  ಆ ಸುಸಮಯಕ್ಕಾಗಿ ಸೂರ್ಯನ ಎದುರು ಬೆಳಕಲ್ಲಿ, ಬಿಳಿ ಕರವಸ್ತ್ರವನ್ನೇ Reflector ತರಹ ಕರಿ ಇರುವೆ ಬರುವಲ್ಲಿಗೆ  ಬೆಳಕನ್ನು ಪ್ರತಿಫಲಿಸಿ, ಟ್ರೈಪಾಡ್ ಮೇಲೆ  ಕ್ಯಾಮೆರಾ ರೆಡಿ ಮಾಡಿ ಕಾದಿದ್ದಕ್ಕೆ ಸಿಕ್ಕಿತ್ತು ಈ ಅಪರೂಪದ ಛಾಯಾಬಿಂಬ!

ಆ ಪುಟ್ಟ ಇರುವೆಗಂತೂ ಸುಂದರವಾಗಿ ಬದುಕಲು, ಲಾಲ್‌ಬಾಗ್ ಬೇಕು ಎಂಬ ಸತ್ಯವನ್ನು ಈ ಛಾಯಾಚಿತ್ರ ಸಾಬೀತುಪಡಿಸಿದೆ.  ಅವರು ಬಳಸಿರುವ ಕ್ಯಾಮೆರಾ, ಕೆನಾನ್  7D, ಲೆನ್ಸ್ ಟೆಮರಾನ್ 90 ಎಂಎಂ. ಮ್ಯಾಕ್ರೊ, ಎಕ್ಸ್‌ಪೋಶರ್ಅಪರ್ಚರ್ f 8,  ಷಟರ್ ವೇಗ  1/250 ಸೆಕೆಂಡ್, ಐ.ಎಸ್.ಒ. 400, ದಿನದ ಬೆಳಕಿನ (ಡೇ ಲೈಟ್‌) ವೈಟ್ ಬ್ಯಾಲೆನ್ಸ್.

ಈ ಛಾಯಾಚಿತ್ರದೊಂದಿಗೆ ತಾಂತ್ರಿಕ ಹಾಗೂ ಕಲಾತ್ಮಕ ವಿಶ್ಲೇಷಣೆ ಇಂತಿವೆ: ಅಪರ್ಚರ್ ಪ್ರಯಾರಿಟಿಯಲ್ಲಿ ಸೆರೆಹಿಡಿದ ಈ ಚಿತ್ರದ ಎಲ್ಲಾ ತಾಂತ್ರಿಕ ಅಂಶಗಳೂ ಸಮರ್ಪಕವಾಗಿವೆ. ಹೊಸಬರಿಗೆ ಈ ಮಾಹಿತಿಗಳು ಮಾರ್ಗದರ್ಶಿ ಕೂಡಾ.

ಮ್ಯಾಕ್ರೊ ಲೆನ್ಸ್  ಬಳಸಿದಾಗ ವಸ್ತುವಿನ ಫೋಕಸ್  ಮತ್ತು  ಫೋಕಸ್‌ನ ವಲಯ (ಡೆಪ್ತ್ ಆಫ್ ಫೀಲ್ಡ್) ಎರಡರಲ್ಲಿಯೂ ಹಿಡಿತ ಸಾಧಿಸುವುದು ಸುಲಭವಲ್ಲ. ಇಲ್ಲಿ ಹೂವಿನ ಎಲ್ಲ ಪಕಳೆಗಳೂ (ಪೆಟಲ್ಸ್) ಮತ್ತು, ಅಲ್ಲಿ ನೀರಹನಿ ಸವಿಯುತ್ತಿರುವ ಗೂಳಿರುವೆಯ ಮೈ ಭಾಗಗಳು ಎಲ್ಲವೂ ಫೋಕಸ್ ಆಗಿ, ಹಸಿರು ಹಿನ್ನೆಲೆ ಮಂದವಾಗಿ ಚಿತ್ರದ ಮೆರುಗನ್ನು ಹೆಚ್ಚಿಸಿವೆ.

ಅಪರ್ಚರ್ 8ರ  ಬದಲು,   5.6 ಅಥವಾ  4 ಆಗಿ, ಇರುವೆಯ ಮುಖಕ್ಕೆ ಫೋಕಸ್ ಮಾಡಿದ್ದರೆ,  ಇತರ ಭಾಗಗಳು ಮಂದವಾಗಿ (ಔಟ್ ಆಫ್ ಫೋಕಸ್), ಹೂವಿನ ಎಲ್ಲ ಪದರುಗಳೂ ಈಗಿನಂತೆ ಸ್ಫುಟವಾಗಿ ಕಾಣಿಸುತ್ತಿರಲಿಲ್ಲ.

ಮಧ್ಯಮ ಹಂತದ ಐ.ಎಸ್.ಒ. 400,  ಛಾಯಾಚಿತ್ರದ  ಪಿಕ್ಸೆಲ್ ಗುಣಮಟ್ಟವನ್ನು ಉತ್ತಮವಾಗಿ ಕಾಯ್ದುಕೊಂಡಿದೆ. ಇದಕ್ಕಿಂತ ಕಡಿಮೆ ಅಂದರೆ 100, 200 ಇಟ್ಟರೆ, ಷಟರ್ ವೇಗ  ಈಗ ಇರುವುದಕ್ಕಿಂತ ಬಹಳ ಕಡಿಮೆ ಮಾಡಬೇಕಿತ್ತು. ಆಗ ಚಲನೆಯಲ್ಲಿರುವ ಗೂಳಿರುವೆ ಶೇಕ್ ಆಗಿ ಬಿಡಬಹುದಾಗಿತ್ತು.  ಅಥವಾ, ಐ.ಎಸ್.ಒ  ಮತ್ತೂ ಹೆಚ್ಚಿದ್ದರೆ, ಅದಕ್ಕೆ ಸಮನಾಗಿ ಷಟರ್ ವೇಗವೇನೋ ಇನ್ನೂ ಹೆಚ್ಚಿರುತ್ತಿತ್ತು (1/500; 1/1000), ಆದರೆ ದೊಡ್ಡ ಅಳತೆಯ ಮುದ್ರಣದಲ್ಲಿ ನಾಯ್ಸ್  ಮತ್ತು  ಪಿಕ್ಸೆಲ್ಸ್‌ ಅಲ್ಲಲ್ಲಿ ಕಂಡು,  ಚಿತ್ರದ ಅಂದ ಕೆಡುತ್ತಿತ್ತು.

ಕಲಾತ್ಮಕವಾಗಿ ಇದೊಂದು ‘ಸ್ನ್ಯಾಪ್ ಶಾಟ್’ ಅಲ್ಲ.  ಅನುಭವಿಯೊಬ್ಬ ಪೂರ್ವ ತಯಾರಿಯಿಂದ ಈ ಬಗೆಯ ದೃಶ್ಯವೊಂದನ್ನು ಕ್ಲಿಕ್ಕಿಸಿದಾಗ  ಚೌಕಟ್ಟಿನಲ್ಲಿ ಕಾಣುವ ಎಲ್ಲ ವಸ್ತುಗಳೂ, ಬಣ್ಣಗಳೂ ಮತ್ತು ಪೂರಕವಾದ ಭಾವಪೂರ್ಣತೆಯೂ ಒಂದಕ್ಕೊಂದು ಪೂರಕವಾಗಿ ಸೇರಿ, ಇಡೀ ಚಿತ್ರವನ್ನು ಕಾವ್ಯಮಯವಾಗಿಸಿಬಿಡುತ್ತದೆ. ಇಲ್ಲಿ ಛಾಯಾಚಿತ್ರಕಾರನ ಪರಿಣತಿ ಒಳ್ಳೆಯ ‘ಕಲಾಕೃತಿ’ಯನ್ನೇ ಮೈದಳೆಯುವಂತೆ ಮಾಡಿದೆ.

ಎಲ್ಲ ಕಲಾಮಾಧ್ಯಮದಲ್ಲೂ ಸಂಯೋಜನೆಗೆ ಹೆಚ್ಚಿನ ಮೌಲ್ಯವಿರುವುದು ಸರಿಯಷ್ಟೇ. ಇಲ್ಲಿ ಇಡೀ ಪುಷ್ಪವನ್ನೇ ಚಿತ್ರದ  ಚೌಕಟ್ಟಿನಲ್ಲಿ ಸೆರೆ  ಹಿಡಿಯದೇ, ಅದರ ಹಳದಿ, ನೇರಳೆ ಮತ್ತು ಕೆಂಪು ಬಣ್ಣದ ಎಸಳುಗಳ ಮಾಟವನ್ನಷ್ಟೇ  ಬಳಸಿ ಚೌಕಟ್ಟಿಗೆ ‘ಕ್ರಾಪ್’ ಮಾಡಿರುವುದು ಸತೀಶ್ ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ.

ಅದರ ದೆಸೆಯಿಂದ, ಕಾರ್ಯನಿರತ ಗೂಳಿರುವೆಯ ಚಲನಶೀಲತೆಗೆ (ಆ್ಯಕ್ಷನ್) ಅನುಗುಣವಾಗಿ ಕೆಳ ಮೂಲೆಯಿಂದ ಎದುರು ಎತ್ತರದ ಮೂಲೆಯೆಡೆಗೆ  ನೇರಳೆ ಬಣ್ಣದ ಎಸಳು ಚಿಮ್ಮಿದಂತೆನಿಸುವುದು ಇಡೀ ತಟಸ್ಥ (Static scene) ದೃಶ್ಯಕ್ಕೇ ಜೀವ ತುಂಬಿ, ಚೈತನ್ಯಶೀಲವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT