ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೇ ಬಾಯಾರಿಕೆಯಾದರೆ...

ಸಭಿಕರನ್ನು ಜಿಜ್ಞಾಸೆಯ ಕಡಲಿಗೆ ನೂಕಿದ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತುಗಳು
Last Updated 27 ಮಾರ್ಚ್ 2017, 7:18 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ‘ನಮಗೆ ದಾಹವಾದರೆ ನೀರನ್ನು ಆಶ್ರಯಿಸುತ್ತೇವೆ. ಆದರೆ ಅದೇ ನೀರಿಗೆ ಬಾಯಾರಿಕೆಯಾದರೆ? ಅಂತಹದೊಂದು ಸಂದರ್ಭದಲ್ಲಿ ಇವತ್ತು ಜಿಲ್ಲೆ ಮತ್ತು ಬಯಲು ಸೀಮೆ ಜನರಿದ್ದಾರೆ. ಆದರೂ ನಮ್ಮಲ್ಲಿ ಭವಿಷ್ಯದ ಕರಾಳತೆಯ ತಲ್ಲಣಗಳು ಕಾಣುತ್ತಿಲ್ಲ’ ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಕಳವಳ ವ್ಯಕ್ತಪಡಿಸಿದರು.  
 
ಗೌರಿಬಿದನೂರಿನಲ್ಲಿ ನಡೆದ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ನಡೆದ ‘ನಮ್ಮ ಪರಂಪರೆ’ ಎಂಬ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
 
‘ನಾವು ಇಂದಿಗೂ ತಾತ, ಮುತ್ತಾತನ ಕಾಲದ ಕೆರೆ, ಕುಂಟೆಗಳ ಕಥೆ ಕೇಳುವುದರಲ್ಲಿಯೇ ಆನಂದ ಅನುಭವಿಸುತ್ತಿದ್ದೇವೆ. ಅವುಗಳ ನೆನಪಿನಲ್ಲಿಯೇ ಜೀವನ ಮಾಡುತ್ತಿದ್ದೇವೆ. ನಾಳೆಗಳನ್ನು ನೆನಪಿಸಿಕೊಂಡರೆ ಭಯವಾಗುವ ದುರಂತ ನಮ್ಮೆದುರಿದೆ. ಆದರೂ ನಾವು ಮಳೆ ನೀರು ಸಂಗ್ರಹಿಸಲು ಮುಂದಾಗುತ್ತಿಲ್ಲ. ಮನುಷ್ಯ ಇವತ್ತು ಸಮಾಜವನ್ನು ತಾತ್ಸಾರ ಮನೋಭಾವದಿಂದ ನೋಡುತ್ತಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದರು. 
 
‘ಏಷ್ಯಾ ಖಂಡದಲ್ಲಿ ಎಲ್ಲಿಯೂ ಇಲ್ಲದಷ್ಟು ಕೆರೆಗಳ ತವರು ನಮ್ಮ ಜಿಲ್ಲೆ. ಹಿರಿದಾದ ನಾಗರಿಕತೆ ಹೊಂದಿದವರು ನಾವು. ನಾಗರಿಕತೆ ಬಂದ ಬಳಿಕ ನಮಗೆ 1,500 ಅಡಿ ಆಳಕ್ಕೆ ಅಂತರ್ಜಲ ಕುಸಿದರೂ ನಮಗೆ ಭಯವಾಗುತ್ತಿಲ್ಲ. ಪ್ಲೋರೈಡ್‌ ಸಮಸ್ಯೆ ಕೂಡ ಏನೂ ಅನಿಸುತ್ತಿಲ್ಲ. ಏನೇನೂ ಅನಿಸದ ಸ್ಥಿತಿಗೆ ನಮ್ಮನ್ನು ನಾವು ಕರೆದುಕೊಂಡು ಹೋಗಿದ್ದೇವೆ. ಇನ್ನೇನು ಉಳಿಸಿಕೊಳ್ಳುತ್ತೇವೆ’ ಎಂದು ಪ್ರಶ್ನಿಸಿದರು. 
 
‘ಜನಪದ ಎಂಬುದು ಜೀವಪದ. ಸತ್ಯಗಳನ್ನು ಕಟ್ಟುವ ಪ್ರಕ್ರಿಯೆ. ಅದನ್ನು ನಾವು ಮೂಲ ಸ್ವರೂಪದಲ್ಲಿಯೇ ಉಳಿಸಿಕೊಂಡು ಹೋಗುವ ಪ್ರಯತ್ನಗಳನ್ನು ಮಾಡಬೇಕಿತ್ತು. ಮಾಡಲಿಲ್ಲ. ನಮ್ಮ ಪರಂಪರೆಯ ಜನರ ನಡೆನುಡಿ ಒಂದೇ ಆಗಿತ್ತು.
 
ಆದರೆ ಅವು ನಮ್ಮಲ್ಲಿ ಬೇರೆ ಬೇರೆಯಾಗಿವೆ. ಧರ್ಮವೇ ಅಸಮಾನತೆಯ ಆತ್ಮ ಆಗಿರುವಾಗ ನಾವು ಯಾವ ಪಂಚಾಂಗ ಇಟ್ಟುಕೊಳ್ಳುವುದು? ಧರ್ಮದೊಳಗಿನ ದಾಹಗಳನ್ನು ನಾವು ಇವತ್ತು ನಿವಾರಿಸಿಕೊಳ್ಳಬೇಕಿದೆ’ ಎಂದು ಮಾರ್ಮಿಕವಾಗಿ ಹೇಳಿದರು.
 
‘ಕಲೆಯಲ್ಲದ ಕಲೆಗಳು ಇವತ್ತು ಇಡೀ ಜಗತ್ತನ್ನು ಕೊಲೆ ಮಾಡಲು ಹೊರಟಿವೆ. ಸಂಸ್ಕೃತಿಯನ್ನು ಹಾಳು ಮಾಡುವ ದೊಡ್ಡ ತಂತ್ರಗಾರಿಕೆ ಮಾಧ್ಯಮಗಳಿಂದ ಆಗುತ್ತಿದೆ. ಸಾಂಸ್ಕೃತಿಕ ರಾಜಕಾರಣದಿಂದ ಮನಸುಗಳಲ್ಲಿ ಮಲೀನ ತುಂಬಿ ಸಾಮಾಜಿಕ ಪ್ರಜ್ಞೆ ದೂರ ಮಾಡುವ ಮತ್ತು ಸಲ್ಲದ ವಿಚಾರಗಳನ್ನು ಮಾನಸಿಕವಾಗಿ ತುಂಬುವ ದೊಡ್ಡ ಪ್ರಕ್ರಿಯೆ ಈ ದೇಶದಲ್ಲಿ ನಡೆಯುತ್ತಿದೆ. ಪ್ರಜ್ಞಾವಂತರು ಎನಿಸಿಕೊಂಡ ಜನರೇ ಪರಂಪರೆ ಹಾಳು ಮಾಡುತ್ತಿದ್ದಾರೆ’ ಎಂದು ತಿಳಿಸಿದರು. 
 
‘ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆ –ನಮ್ಮ ಹೆಮ್ಮೆ’ ಎಂಬ ವಿಷಯ ಕುರಿತು ಮಾತನಾಡಿದ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು, ‘ಅನೇಕ ಪುರಾಣ ಸ್ಥಳಗಳನ್ನು ಹೊಂದಿರುವ ಅವಿಭಜಿತ ಕೋಲಾರ ಜಿಲ್ಲೆಯಿಂದ ಸಿಂಧೂ ಬಯಲಿನ ನಾಗರಿಕತೆಗೆ ಕಂಬಳಿ ಮತ್ತು ಚಿನ್ನವನ್ನು ರಫ್ತು ಮಾಡಲಾಗುತ್ತಿತ್ತು.
 
ಮೌರ್ಯ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಬರುವವರೆಗೂ 22 ರಾಜ ಮನೆತನಗಳು ಈ ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿವೆ. ಭವ್ಯವಾದ ಪರಂಪರೆ ಹೊಂದಿರುವ ನಾಡಿನಲ್ಲಿ ನಾವೆಲ್ಲರೂ ಇರುವುದು ಹೆಮ್ಮೆ ವಿಷಯ’ ಎಂದರು. 
 
‘ಜನಪದ ಪರಂಪರೆ ಮತ್ತು ಅದರ ಉಳಿವು’ ಎಂಬ ವಿಷಯದ ಬಗ್ಗೆ ಮಾತನಾಡಿದ ಚಿಕ್ಕಬಳ್ಳಾಪುರದ ಜಾನಪದ ಸಂಶೋಧಕ ಜಿ.ಶ್ರೀನಿವಾಸಯ್ಯ, ‘ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆಗಾಗ ಜನಪದ ಅಳಿಸಿ ಹೋಗುತ್ತಿದೆ.

ಹಾಳಾಗುತ್ತಿದೆ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಜನಪದ ಎಂದಿಗೂ ಹಾಳಾಗದ ಅವಿನಾಶಿನಿ ಪ್ರಕಾರ. ಅದು ನಿರಂತರ ಪರಿವರ್ತನಾಶೀಲವಾದ್ದದ್ದು. ಅದಕ್ಕೆ ತಕ್ಕ ಹಾಗೇ ಜನಪದರು ಪರಿವರ್ತನೆ ಹೊಂದುತ್ತಿರುತ್ತಾರೆ. ಸಂಸ್ಕೃತಿಯೂ ಹೊಸ ರೂಪು ಪಡೆಯುತ್ತಿರುತ್ತದೆ’ ಎಂದು ಹೇಳಿದರು. 
 
‘ವಿಶ್ವವಿದ್ಯಾಲಯ, ಪ್ರಾಧ್ಯಾಪಕರಿಂದ ಜನಪದ ಉಳಿಸಲು ಸಾಧ್ಯವಿಲ್ಲ. ಅದು ಹಳ್ಳಿಯ ಅನಕ್ಷರಸ್ಥರಲ್ಲಿ ಮಾತ್ರ ಆ ಶಕ್ತಿ ಇದೆ. ನಾವು ಜನಪದವನ್ನು ವಿಕೃತಿ ಮಾಡುತ್ತಿದ್ದೇವೆ ಹೊರತು ಸಂಸ್ಕೃತಿ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಜನಪದ ಕಲಾಪ್ರಕಾರಗಳು ಕುರಿತು ಬೆರಳೆಣಿಕೆ ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಕೂಡ ಅವರನ್ನು ಗುರುತಿಸುತ್ತಿಲ್ಲ. ಆ ಪ್ರಯತ್ನ ನಡೆದರೆ ಜಿಲ್ಲೆಯಲ್ಲಿ ಜನಪದ ಉಳಿಯುತ್ತದೆ’ ಎಂದು ತಿಳಿಸಿದರು. 
 
‘ಕನ್ನಡ ಸಾಹಿತ್ಯ ಪರಂಪರೆ’ ಎಂಬ ವಿಷಯ ಕುರಿತು ಮಾತನಾಡಿದ ಬೆಂಗಳೂರಿನ ಲೇಖಕ ಸಂತೋಷ್ ಹಾನಗಲ್, ‘ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ವಲಯದಲ್ಲಿ ಪ್ರಾಂತ್ಯ, ಭಾಷೆ, ಮತ, ಒಳಪಂಗಡಗಳ ಸಾಹಿತ್ಯ ರಚನೆ ಆಧಾರದಲ್ಲಿ ವಿಘಟನೆ ಹೆಚ್ಚುತ್ತಿದೆ. ಎಲ್ಲಿ ಸತ್ಯ ಇರುತ್ತದೆ ಅಲ್ಲಿ ನಾವು ತಲೆ ಭಾಗಬೇಕು. ಅಂದಾಗ ಮಾತ್ರ ಪರಂಪರೆ ಉಳಿಯಲು ಸಾಧ್ಯವಾಗುತ್ತದೆ’ ಎಂದರು. 
 
ಸಮ್ಮೇಳನಾಧ್ಯಕ್ಷ ಪ್ರೊ.ಬಿ.ಗಂಗಾಧರಮೂರ್ತಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ವಿ.ರವೀಂದ್ರನಾಥ್, ಸಾಹಿತಿ ಸುಭಾನ್ ಪ್ರಿಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
 
ನಾವು ಯಾವ ಕಡೆ ಸಾಗುತ್ತಿದ್ದೇವೆ? ಏನು ಮಾಡುತ್ತಿದ್ದೇವೆ? ಎನ್ನುವ ವಿಚಾರದಲ್ಲಿ ಹೊತ್ತಿಗಾಗಲೇ ಸಮಾಜಕ್ಕೆ ಭಯವಾಗಬೇಕಿತ್ತು. ಅದು ಬರಲೇ ಇಲ್ಲ. ಕಾರಣ ನಮ್ಮ ನಡೆ ನುಡಿ ಒಂದಾಗಿಲ್ಲ.
ಗೊಲ್ಲಹಳ್ಳಿ ಶಿವಪ್ರಸಾದ್,  ಸಾಹಿತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT